ETV Bharat / state

ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಕಮಿಷನ್​ ಆರೋಪ: ಪ್ರಧಾನಿ ಮೋದಿ ಮೌನ ಪ್ರಶ್ನಿಸಿದ ಎಂ ಬಿ ಪಾಟೀಲ್​

author img

By

Published : Dec 25, 2022, 7:18 PM IST

Updated : Dec 25, 2022, 8:15 PM IST

ಬಿಜೆಪಿ ವಿರುದ್ಧ ಕೆಂಪಣ್ಣ ಕಮಿಷನ್​ ಆರೋಪ- ಮೋದಿ ಈ ವಿಚಾರವಾಗಿ ಸುಮ್ಮನಿರುವುದು ಯಾಕಾಗಿ?- ಪ್ರಧಾನಿ ಉತ್ತರ ನೀಡಬೇಕೆಂದು ಮಾಜಿ ಸಚಿವ ಎಂ ಬಿ ಪಾಟೀಲ ಆಗ್ರಹ

mb patil
ಎಂ.ಬಿ ಪಾಟೀಲ

ಮಾಜಿ ಸಚಿವ ಎಂ ಬಿ ಪಾಟೀಲ ಮಾತನಾಡುತ್ತಿರುವುದು

ವಿಜಯಪುರ: ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ ಕೆಂಪಣ್ಣ ಅವರು ರಾಜ್ಯ ಸರ್ಕಾರ ಮತ್ತು ತೋಟಗಾರಿಕಾ ಸಚಿವ ಮುನಿರತ್ನ ವಿರುದ್ಧ ಮಾಡಿದ್ದ 40 ಪರ್ಸೆಂಟ್​ ಕಮಿಷನ್​ ಆರೋಪದ ಕುರಿತು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮೌನ ವಹಿಸಿರುವುದಾದರೂ ಏಕೆ? ಎಂದು ಮಾಜಿ ಸಚಿವ ಮತ್ತು ಕೆಪಿಸಿಸಿ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ ಪಾಟೀಲ ಪ್ರಶ್ನಿಸಿದ್ದಾರೆ.

ವಿಜಯಪುರ ನಗರದಲ್ಲಿರುವ ತಮ್ಮ ನಿವಾಸದಲ್ಲಿ ಇಂದು ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಚಿವರು, ಕಮಿಷನ್​ ವಿಚಾರವಾಗಿ ಗುತ್ತಿಗೆದಾರರ ಅಸೋಸಿಯೇಷನ್ 2021ರ ಜುಲೈನಲ್ಲಿ​ ಪ್ರಧಾನಿ ಮೋದಿಗೆ ಪತ್ರ ಬರೆದಿತ್ತು. ಆದರೆ ಪ್ರಧಾನಿ ನರೇಂದ್ರ ಮೋದಿಯವರು ಇನ್ನೂ ಈ ವಿಚಾರವಾಗಿ ಮೌನ ವಹಿಸಿರುವುದು ಯಾಕಾಗಿ ಎಂಬ ಪ್ರಶ್ನೆ ಕಾಡುತ್ತಿದೆ ಎಂದರು.

ಸುಮಾರು ಒಂದು ವರ್ಷದ ಹಿಂದೆ ಗುತ್ತಿಗೆದಾರರ ಅಸೋಸಿಯೇಷನ್ ಕಮಿಷನ್​ ವಿಚಾರವಾಗಿ​ ಪ್ರಧಾನಿಗೆ ಪತ್ರ ಬರೆದಿದೆ. ಆದರೆ ಇಲ್ಲಿಯವರೆಗೂ ಪ್ರಧಾನಿ ಕಾರ್ಯಾಲಯದಿಂದ ಯಾವುದೇ ಉತ್ತರ ಬಂದಿಲ್ಲ. ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ದೆಹಲಿಯಲ್ಲಿ ತನಿಖಾ ಸಂಸ್ಥೆಗಳು ದಾಳಿ ನಡೆಸುತ್ತಲೇ ಇವೆ. ಆದರೆ ಕರ್ನಾಟಕದಲ್ಲಿ ಇಷ್ಟು ದೊಡ್ಡ ಪ್ರಕರಣ ನಡೆದಿದ್ದರೂ ಯಾಕಾಗಿ ತನಿಖೆಯಾಗುತ್ತಿಲ್ಲ? ಅಲ್ಲದೇ ಈ ಪ್ರಕರಣ ರಾಷ್ಟ್ರಮಟ್ಟದಲ್ಲೇ ಸುದ್ದಿಯಾಗಿದೆ. ಯಾಕಾಗಿ ಐಟಿ, ಇಡಿ, ಸಿಬಿಐಯಾಗಲಿ ರೇಡ್​ ಮಾಡ್ತಿಲ್ಲ? ಎಂದು ಪ್ರಶ್ನಿಸಿದರು.

ಇದನ್ನೂ ಓದಿ:ಗುತ್ತಿಗೆದಾರರ ಸಂಘದ ಮೇಲೆ 50 ಕೋಟಿ ರೂ. ಮಾನನಷ್ಟ ಮೊಕದ್ದಮೆ ಹೂಡುವೆ: ಸಚಿವ ಮುನಿರತ್ನ

ಗುತ್ತಿಗೆದಾರರ ಸಂಘದಿಂದಲೇ ಈ ರೀತಿಯ ಆರೋಪ ಕೇಳಿಬಂದಿದೆ. ಆದರೂ ಸಚಿವರು ಮತ್ತು ಇಲಾಖೆ ಅಧಿಕಾರಿಗಳ ಮೇಲೆ ಇನ್ನೂ ದಾಳಿ ಮಾಡಿಲ್ಲ. ಬದಲಾಗಿ ಕೆಂಪಣ್ಣ ಅವರನ್ನು ಹತ್ತಿಕ್ಕಲಿಕ್ಕೆ ಪ್ರಯತ್ನಗಳು ನಡೆಯುತ್ತಿವೆ. ಇದು ಕಾನೂನು ಹೋರಾಟದ ಒಂದು ಭಾಗವಾಗಿದ್ದರೂ ಪ್ರಧಾನಿ ನರೇಂದ್ರ ಮೋದಿ ಅವರು ಮೌನ ವಹಿಸಿರುವುದು ಸರಿಯಲ್ಲ ಎಂದು ಎಂ ಬಿ ಪಾಟೀಲ್​ ಹೇಳಿದರು.

ರಾಜ್ಯ ವಿಧಾನಸಭಾ ಚುನಾವಣಾ ಪ್ರಚಾರಕ್ಕೆಂದು ಪ್ರಧಾನ ಮಂತ್ರಿಯವರು ಕರ್ನಾಟಕಕ್ಕೆ ಬಂದಾಗ ಕಾಂಗ್ರೆಸ್ ಪಕ್ಷ ಖಂಡಿತವಾಗಿಯೂ ಈ ಪ್ರಶ್ನೆಯನ್ನು ಎತ್ತಲಿದೆ. ಯಾವುದೇ ಕಾರಣಕ್ಕೂ ಶೇ.40 ರಷ್ಟು ಕಮೀಷನ್​ ಆರೋಪವನ್ನು ಕಾಂಗ್ರೆಸ್​ ಪಕ್ಷ ಹಗುರವಾಗಿ ಸ್ವೀಕರಿಸಲ್ಲ. ಪ್ರಧಾನಿ ಬಂದಾಗ ನಾವು ಖಂಡಿತಾ ಪ್ರಶ್ನೆ ಮಾಡುತ್ತೇವೆ. ಅವರು ಇದಕ್ಕೆ ತಕ್ಕ ಉತ್ತರ ನೀಡಲೇಬೇಕು ಎಂದು ಒತ್ತಾಯಿಸಿದರು.

ಏನಿದು ಕಮಿಷನ್ ಆರೋಪ?: ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ ಕೆಂಪಣ್ಣ ಅವರು ರಾಜ್ಯ ಸರ್ಕಾರದ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡಿದ್ದಲ್ಲದೆ ತೋಟಗಾರಿಕೆ ಸಚಿವ ಮುನಿರತ್ನ ವಿರುದ್ಧವೂ ಶೇ.40ರಷ್ಟು ಕಮಿಷನ್​ ಆರೋಪವನ್ನು ಮಾಡಿದ್ದರು. ಈ ಸಂಬಂಧ ಸಚಿವ ಮುನಿರತ್ನ ಕೋರ್ಟ್‌ನಲ್ಲಿ ಕ್ರಿಮಿನಲ್ ಮತ್ತು 50 ಕೋಟಿ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು.

ಈ ಪ್ರಕರಣದ ವಿಚಾರಣೆ ನಡೆಸಿದ ಕೋರ್ಟ್ ಆರೋಪಿಗಳಿಗೆ ನೋಟಿಸ್ ಕೊಟ್ಟು ಡಿ.22ರಂದು ವಿಚಾರಣೆಗೆ ಹಾಜರಾಗಲು ಸೂಚಿಸಿತ್ತು. ಆದರೆ, ಡಿ.22ರ ವಿಚಾರಣೆಗೆ ಆರೋಪಿಗಳು ಗೈರಾಗಿದ್ದರು. ಈ ಹಿನ್ನೆಲೆಯಲ್ಲಿ ನಗರದ 8ನೇ ಎಸಿಎಂಎಂ ಕೋರ್ಟ್ ಕೆಂಪಣ್ಣ ಸೇರಿ 19 ಮಂದಿ ವಿರುದ್ಧ ಜಾಮೀನು ರಹಿತ ವಾರೆಂಟ್ ಜಾರಿ ಮಾಡಿತ್ತು. ಈ ಬೆನ್ನಲ್ಲೇ ಅಧ್ಯಕ್ಷ ಕೆಂಪಣ್ಣ ಸೇರಿದಂತೆ ಗುತ್ತಿಗೆದಾರರ ಸಂಘದ ಕೃಷ್ಣಾರೆಡ್ಡಿ, ನಟರಾಜ್, ಗುರುಸಿದ್ದಪ್ಪ ಎಂಬವರನ್ನು ಕೇಂದ್ರ ವಿಭಾಗದ ವೈಯಾಲಿಕಾವಲ್​ ಠಾಣಾ ಪೊಲೀಸರು ಶನಿವಾರ ಬಂಧಿಸಿದ್ದಾರೆ.

ಇದನ್ನೂ ಓದಿ:40 ಪರ್ಸೆಂಟ್​ ಆರೋಪ ಮಾಡಿದ್ದ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಸೇರಿ ನಾಲ್ವರು ಅರೆಸ್ಟ್​

Last Updated : Dec 25, 2022, 8:15 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.