ಸ್ನೇಹ ಬೇರೆ ರಾಜಕೀಯ ಬೇರೆ.. ಮುಂದಿನ ಚುನಾವಣೆಯಲ್ಲಿ ಶಾಸಕ ಯತ್ನಾಳ್ಗೆ ಸೋಲು ಗ್ಯಾರಂಟಿ: ಎಂ.ಬಿ.ಪಾಟೀಲ

ಸ್ನೇಹ ಬೇರೆ ರಾಜಕೀಯ ಬೇರೆ.. ಮುಂದಿನ ಚುನಾವಣೆಯಲ್ಲಿ ಶಾಸಕ ಯತ್ನಾಳ್ಗೆ ಸೋಲು ಗ್ಯಾರಂಟಿ: ಎಂ.ಬಿ.ಪಾಟೀಲ
ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಈ ಬಾರಿ ಸೋಲುತ್ತಾರೆ. ವಿಜಯಪುರದಲ್ಲಿ ಈ ಬಾರಿ ಮುಸ್ಲಿಮರಿಗೆ ಟಿಕೆಟ್ ನೀಡಲಾಗುವುದು. ಶಾಸಕ ಯತ್ನಾಳ ಸೋಲುವುದು ಗ್ಯಾರಂಟಿ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ ಹೇಳಿದರು.
ವಿಜಯಪುರ : ಮಹಾರಾಷ್ಟ್ರ ಮತ್ತು ಕರ್ನಾಟಕ ಗಡಿ ವಿವಾದವು ಒಂದು ಮುಗಿದ ಅಧ್ಯಾಯ. ಅನಾವಶ್ಯಕವಾಗಿ ಪ್ರಹ್ಲಾದ ಜೋಷಿಯವರು ಹೇಳಿಕೆ ನೀಡುತ್ತಿದ್ದಾರೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ ಹೇಳಿದರು.
ನಗರದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ವಿರುದ್ಧ ವಾಗ್ದಾಳಿ ನಡೆಸಿದರು. ಮಹಾರಾಷ್ಟ್ರದಲ್ಲಿ ಅವರದೇ ಶಿವಸೇನೆ ಬಿಜೆಪಿ ಸರ್ಕಾರವಿದೆ.ನಾವು ಗಡಿ ವಿವಾದ ಪ್ರಾರಂಭ ಮಾಡಿದ್ದೇವಾ.ಬಿಜೆಪಿಯವರು ಗಡಿ ವಿವಾದ ಮಾಡುತ್ತಿದ್ದಾರೆ. ಈ ಬಗ್ಗೆ ಪ್ರಹ್ಲಾದ್ ಜೋಷಿಯವರು ಮಹಾರಾಷ್ಟ್ರದವರಿಗೆ ಹೇಳಬೇಕಿತ್ತಲ್ಲ ಎಂದು ಹೇಳಿದರು. ಕ್ಯಾತೆ ತೆಗೆದಿದ್ದು ಅವರ ಸರ್ಕಾರ, ಯಾರಿಗೆ ಬುದ್ಧಿವಾದ ಹೇಳುತ್ತಿದ್ದಾರೆ. ಯಾರು ರಾಜಕಾರಣ ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದರು.
ಯತ್ನಾಳ ಸೋಲುತ್ತಾರೆ : ಬಿಜೆಪಿ ಶಾಸಕ ಬಸನಗೌಡ ಪಾಟೀಲ ಅವರು ಈ ಬಾರಿ ಸೋಲುತ್ತಾರೆ. ವಿಜಯಪುರದಲ್ಲಿ ಈ ಬಾರಿ ಮುಸ್ಲಿಮರಿಗೆ ಟಿಕೆಟ್ ನೀಡಲಾಗುವುದು. ಶಾಸಕ ಯತ್ನಾಳ ಸೋಲುವುದು ಗ್ಯಾರಂಟಿ. ಅನಾವಶ್ಯಕವಾಗಿ ಸಮಸ್ಯೆ ಉದ್ಘವಿಸುವುದು ಬೇಡ ಎಂದರು.
ಮತದಾರರ ಮಾಹಿತಿ ಸೋರಿಕೆ ಪ್ರಕರಣ: ಮತದಾರರ ಮಾಹಿತಿ ಸೋರಿಕೆ ಪ್ರಕರಣದ ಕುರಿತು ಪ್ರತಿಕ್ರಿಯಿಸಿದ ಅವರು, ಬೆಂಗಳೂರಿನಲ್ಲಿ ನಡೆದಿರುವ ಮತದಾರರ ಮಾಹಿತಿ ಸೋರಿಕೆ ಪ್ರಕರಣ ಬಹಳ ಗಂಭೀರ ಪ್ರಕರಣವಾಗಿದೆ. ಸಿಎಂ ಬೊಮ್ಮಾಯಿ ಅವರು ಇದರ ಬಗ್ಗೆ ತನಿಖೆ ನಡೆಸಲಿ. ಅನಾವಶ್ಯಕವಾಗಿ ಕಾಂಗ್ರೆಸ್ ಮೇಲೆ ಗೂಬೆ ಕೂರಿಸುವುದು ಬೇಡ.
ಈ ಪ್ರಕರಣದ ರೂವಾರಿಯಾಗಿರುವ ಬೆಂಗಳೂರಿನ ಚಿಲುಮೆ ಎನ್ ಜಿಒಂಗೆ ನೀಡಿದ್ದು ಯಾರು ಎನ್ನುವುದನ್ನು ಬಿಜೆಪಿ ಅರ್ಥ ಮಾಡಿಕೊಳ್ಳಬೇಕು. ಐದು ವರ್ಷ ವಿರೋಧ ಪಕ್ಷದಲ್ಲಿ ಇದ್ದವರು ಒಂದೇ ಒಂದು ಹಗರಣ ಬಿಚ್ಚಿಡಲು ಆಗಲಿಲ್ಲ. ಈಗ ತಾವು ಮಾಡಿದ ತಪ್ಪನ್ನು ಮುಚ್ಚುವ ಪ್ರಯತ್ನ ಮಾಡುತ್ತಿದ್ದಾರೆ ಎಂದರು ಆರೋಪಿಸಿದರು.
ಸಿಎಂ ಅಭ್ಯರ್ಥಿಗಳು ತುಂಬಾ ಜನ ಇದ್ದಾರೆ: ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ 140 ಸೀಟ್ ಗಳಿಸುವ ಗುರಿ ಇಟ್ಟುಕೊಂಡಿದೆ. ಕಾಂಗ್ರೆಸ್ ಪಕ್ಷ ಬಹುಮತ ಸಾಧಿಸಿದ ಮೇಲೆ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸಲಿದೆ. ಸದ್ಯ ನಮ್ಮಲ್ಲಿ ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ಅವರನ್ನು ಒಳಗೊಂಡು ಒಟ್ಟು 21 ಮುಖಂಡರು ಸಿಎಂ ಅರ್ಹತೆ ಉಳ್ಳವರಿದ್ದಾರೆ. ಹೈ ಕಮಾಂಡ್ ಯಾರನ್ನು ಸೂಚಿಸುತ್ತಾರೆ ಅವರು ಸಿಎಂ ಆಗಲಿದ್ದಾರೆ ಎಂದು ಹೇಳಿದರು.
ಚುನಾವಣಾ ಪ್ರಚಾರಕ್ಕೆ ಎರಡು ಟೀಮ್ : ಮುಂದಿನ ವಿಧಾನಸಭೆ ಚುನಾವಣೆಗಾಗಿ ಕಾಂಗ್ರೆಸ್ ಪಕ್ಷ ಎರಡು ಟೀಮ್ಗಳಾಗಿ ಪ್ರಚಾರ ಮಾಡಲಿದೆ. ಒಂದು ಸಿದ್ದರಾಮಯ್ಯ ಮತ್ತೊಂದು ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಚುನಾವಣೆ ಪ್ರಚಾರ ನಡೆಯಲಿದೆ. ಚಳಿಗಾಲದ ಅಧಿವೇಶನ ಮುಗಿದ ಮೇಲೆ ಕೇವಲ 3 ತಿಂಗಳು ಕಾಲಾವಕಾಶ ಇರುವ ಕಾರಣ ಎರಡು ಟೀಮ್ಗಳಾಗಿ ಚುನಾವಣೆ ಪ್ರಚಾರ ಮಾಡಲಿದ್ದೇವೆ ಎಂದರು.
ಬಬಲೇಶ್ವರದಲ್ಲಿಯೇ ಸ್ಪರ್ಧಿಸುವೆ : ಶಾಸಕ ಶಿವಾನಂದ ಪಾಟೀಲ ಬಬಲೇಶ್ವರ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ ಎನ್ನುವ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಾನು ಮೊದಲು ತಿಕೋಟಾದಿಂದ ಗೆದ್ದಿದ್ದೆ. ಈಗ ಬಬಲೇಶ್ವರ ಕ್ಷೇತ್ರದ ಶಾಸಕನಾಗಿದ್ದೇನೆ. ಈ ಎರಡು ಕ್ಷೇತ್ರ ಬಿಟ್ಟು ಬೇರೆ ಕ್ಷೇತ್ರ ಆಯ್ದುಕೊಳ್ಳುವುದಿಲ್ಲ. ಮುಂದಿನ ಚುನಾವಣೆಯಲ್ಲಿ ಬಬಲೇಶ್ವರ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಸಾಧಿಸುವೆ ಎಂದರು.
ಇದನ್ನೂ ಓದಿ : ಸಚಿವ ಅಶ್ವತ್ಥ ನಾರಾಯಣ ವಿರುದ್ಧ ಕರ್ನಾಟಕ ವಿವಿ ವಿದ್ಯಾರ್ಥಿಗಳ ಪ್ರತಿಭಟನೆ
