ETV Bharat / state

ವಿಜಯಪುರದಲ್ಲಿ ದ್ರಾಕ್ಷಿ ಬೆಳೆಗೆ ತಗುಲಿದ ರೋಗ: ಸಂಕಷ್ಟದಲ್ಲಿ ರೈತ

author img

By

Published : Sep 9, 2020, 12:32 PM IST

Updated : Sep 9, 2020, 5:07 PM IST

ದ್ರಾಕ್ಷಿ ಕಣಜ ವಿಜಯಪುರ ಜಿಲ್ಲೆಯಲ್ಲಿ ಈ ಬಾರಿ ದ್ರಾಕ್ಷಿಗೆ ಡವಣಿ ಹಾಗೂ ಎಲೆ ಉದುರು ರೋಗ ತಗುಲಿದೆ. ಈ ಹಿನ್ನೆಲೆಯಲ್ಲಿ ದ್ರಾಕ್ಷಿ ಬೆಳೆಗಾರ ಸಂಕಷ್ಟಕ್ಕೆ ತುತ್ತಾಗಿದ್ದಾನೆ.

ದ್ರಾಕ್ಷಿ ಬೆಳೆಗೆ ತಗುಲಿದ ರೋಗ
ದ್ರಾಕ್ಷಿ ಬೆಳೆಗೆ ತಗುಲಿದ ರೋಗ

ವಿಜಯಪುರ: ವಿವಿಧ ರಾಜ್ಯ, ವಿದೇಶಿಗಳಿಗೆ ಉತ್ತಮ ಗುಣಮಟ್ಟದ ದ್ರಾಕ್ಷಿ ಬೆಳೆ ಸರಬರಾಜು ಮಾಡುವ ದ್ರಾಕ್ಷಿ ಕಣಜ ವಿಜಯಪುರ ಜಿಲ್ಲೆಯಲ್ಲಿ ಈ ಬಾರಿ ದ್ರಾಕ್ಷಿಗೆ ಡವಣಿ ಹಾಗೂ ಎಲೆ ಉದುರು ರೋಗ ತಗುಲಿದೆ. ಕೊರೊನಾದಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ದ್ರಾಕ್ಷಿ ಬೆಳೆಗಾರ ಮತ್ತೊಮ್ಮೆ ದ್ರಾಕ್ಷಿಗೆ ತಗುಲಿದ ರೋಗದಿಂದ ಸಂದಿಗ್ಧ ಪರಿಸ್ಥಿತಿ ಎದುರಿಸುವಂತಾಗಿದೆ.

ದ್ರಾಕ್ಷಿ ಬೆಳೆಗೆ ತಗುಲಿದ ರೋಗ

ಐತಿಹಾಸಿಕ ಪ್ರವಾಸಿಗರ ತಾಣ ವಿಜಯಪುರ ಜಿಲ್ಲೆ ಬರದ ನಾಡು ಆಗಿದ್ದರೂ ಸಹ ತೋಟಗಾರಿಕೆ ಬೆಳೆಗೆ ಪ್ರಸಿದ್ಧಿ ಪಡೆದುಕೊಂಡಿದೆ. ರಾಜ್ಯದಲ್ಲಿ ಅತಿ ಹೆಚ್ಚು ದ್ರಾಕ್ಷಿ ಬೆಳೆ ಬೆಳೆಯುವ ಕ್ಷೇತ್ರವಾಗಿದೆ. ಪ್ರಸಕ್ತ ವರ್ಷ 14,800 ಹೆಕ್ಟೇರ್​ ಪ್ರದೇಶದಲ್ಲಿ ದ್ರಾಕ್ಷಿ ಬೆಳೆಯಲಾಗಿದೆ. ಮಾರ್ಚ್ ತಿಂಗಳಿನಲ್ಲಿ ದ್ರಾಕ್ಷಿ ಬೆಳೆ ಹಾಕಲಾಗಿದೆ. ಜಿಲ್ಲೆಯಲ್ಲಿ ಉತ್ತಮ ಮಳೆ ಜತೆಗೆ ತಂಪು ವಾತಾವರಣ ಸೃಷ್ಟಿಯಾದ ಕಾರಣ ದ್ರಾಕ್ಷಿ ಗಿಡದಲ್ಲಿ ಬೆಳೆದಿರುವ ಎಲೆಗೆ ಡವಣಿ ಹಾಗೂ ಕಪ್ಪು ರೋಗ ಬಾಧಿಸಿದೆ. ಇದರ ಪರಿಣಾಮ ಎಲೆ ಕಪ್ಪಾಗಿ ಉದುರುತ್ತಿದ್ದು, ಹೂ ಬಿಡುವ ಲಕ್ಷಣಗಳು ಕಾಣುತ್ತಿಲ್ಲ. ಇದರಿಂದ ಕಂಗಾಲಾದ ರೈತ, ಕೀಟನಾಶಕ ಸಿಂಪಡಿಸಲು ಮುಂದಾಗಿದ್ದ. ಕೊರೊನಾದಿಂದ ಔಷಧಿ ಸರಿಯಾದ ಸಮಯಕ್ಕೆ ಸಿಗದೇ ದ್ರಾಕ್ಷಿ ಎಲೆಗಳು ಕಪ್ಪಾಗಿ ಉದುರುತ್ತಿವೆ. ಇಷ್ಟರೊಳಗೆ ಹೂ ಬಿಟ್ಟಿದ್ದರೆ ಬರುವ ಅಕ್ಟೋಬರ್​ನಲ್ಲಿ ಕಟಾವು ಮಾಡಿ ದ್ರಾಕ್ಷಿ ಹಣ್ಣು ಬೆಳೆಯಲು ತಯಾರು ಮಾಡಬೇಕಾಗಿತ್ತು. ಆದರೆ ಎಲೆ ಉದುರುತ್ತಿರುವ ಕಾರಣ ಹೂವು ಇಲ್ಲದೆ ದ್ರಾಕ್ಷಿ ಬೆಳೆ ಬೆಳೆಯುವುದಿಲ್ಲ ಎಂದು ಲಕ್ಷಾಂತರ ರೂ. ಖರ್ಚು ಮಾಡಿ ಕಟಾವು ಮಾಡುವುದನ್ನು ರೈತ ಕೈ ಬಿಟ್ಟಿದ್ದಾನೆ.

ವಿಜಯಪುರ ಜಿಲ್ಲೆಯಲ್ಲಿ ಹೆಚ್ಚಾಗಿ ದ್ರಾಕ್ಷಿ ಬೆಳೆಯುವ ಕ್ಷೇತ್ರವಾಗಿರುವ ತಿಕೋಟಾ ಸುತ್ತಮುತ್ತಲಿನ ಬಾಬಾನಗರ, ಬಿಜ್ಜರಗಿ, ತಾಜಪುರ ಹೆಚ್ ಸೇರಿದಂತೆ ಬಹುತೇಕ ಗ್ರಾಮಗಳಲ್ಲಿ ದ್ರಾಕ್ಷಿ ಸಂಪೂರ್ಣ ನೆಲಕಚ್ಚಿದೆ. ಕೇವಲ ಶೇ. 10ರಷ್ಟು ದ್ರಾಕ್ಷಿ ಕೈಗೆ ಸಿಗಬಹುದಾಗಿದೆ. ತೋಟಗಾರಿಕೆ ಬೆಳೆಯಾಗಿರುವ ದ್ರಾಕ್ಷಿಗೆ ವಿಮೆ ಸೌಲಭ್ಯವಿದೆ. ಜಿಲ್ಲೆಯಲ್ಲಿ 3500 ರೈತರು ವಿಮೆ ಮಾಡಿಸಿಕೊಂಡಿದ್ದಾರೆ. ಕಳೆದ ವರ್ಷ ಉತ್ತಮ ಇಳುವರಿ ಇದ್ದರೂ ಕೊರೊನಾದಿಂದ ಸೂಕ್ತ ಬೆಲೆ ದೊರೆತಿಲ್ಲ. ಈ ವರ್ಷ ದ್ರಾಕ್ಷಿ ಎಲೆಗೆ ರೋಗ ತಗುಲಿದ ಕಾರಣ ದ್ರಾಕ್ಷಿ ಕೈ ಕೊಟ್ಟಿದೆ. ಸದ್ಯ ಬೆಳೆ ವಿಮೆ ಒಂದೇ ಸ್ವಲ್ಪ ಇವರನ್ನು ಬದುಕಿಸಬಹುದಾಗಿದೆ.

ಈ ವರ್ಷ ಜಿಲ್ಲೆಯಲ್ಲಿ ನಿರೀಕ್ಷೆ ಮೀರಿ ಮಳೆಯಾಗಿರುವ ಕಾರಣ ಒಣ ಬೇಸಾಯ ಬೆಳೆ ಬಂಪರ್ ಬರುವ ಸಾಧ್ಯತೆಗಳು ಹೆಚ್ಚಾಗಿವೆ. ನೀರನ್ನು ಅವಲಂಬಿಸಿರುವ ತೋಟಗಾರಿಕೆ ಬೆಳೆಗಳಾದ ಈರುಳ್ಳಿ, ದ್ರಾಕ್ಷಿ, ಲಿಂಬೆ, ದಾಳಿಂಬೆ ಬೆಳೆಗಳಿಗೆ ತಂಪಾದ ವಾತಾವರಣದಿಂದ ವಿವಿಧ ರೋಗ ತಗುಲಿ ಭಾರೀ ನಷ್ಡ ಅನುಭವಿಸುವಂತಾಗಿದೆ. ಸರ್ಕಾರ ಬೆಳೆಗಾರರ ರಕ್ಷಣೆಗೆ ಪರಿಹಾರದ ಪ್ಯಾಕೇಜ್ ಘೋಷಿಸಬೇಕು ಎನ್ನುವುದು ತೋಟಗಾರಿಕೆ ಬೆಳೆಗಾರರ ಬೇಡಿಕೆಯಾಗಿದೆ.

Last Updated :Sep 9, 2020, 5:07 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.