ETV Bharat / state

ನಿರಂತರ ಮಳೆ: ವಿಜಯಪುರ - ಬೆಳಗಾವಿ ರಸ್ತೆ ಬಂದ್ ಆಗುವ ಆತಂಕ

author img

By

Published : Aug 5, 2022, 10:04 AM IST

Updated : Aug 5, 2022, 1:26 PM IST

ವಿಜಯಪುರ ಬೆಳಗಾವಿ ಹೆದ್ದಾರಿಯನ್ನು ಡೋಣಿ ನದಿ ಸುತ್ತುವರೆದಿದ್ದು, ಸಾರವಾಡ ಗ್ರಾಮವೂ ಜಲಾವೃತಗೊಂಡಿದ್ದು, ಜನ ಆತಂಕದಲ್ಲಿ ದಿನ ದೂಡುತ್ತಿದ್ದಾರೆ.

Flood in Vijayapura
ವಿಜಯಪುರದಲ್ಲಿ ಪ್ರವಾಹ

ವಿಜಯಪುರ : ಜಿಲ್ಲೆಯಲ್ಲಿ ಕಳೆದ ಐದು ದಿನಗಳಿಂದ ಎಡೆಬಿಡದೇ ಸುರಿಯುತ್ತಿರುವ ವರುಣ ಆರ್ಭಟದಿಂದ ಬಹುತೇಕ ಕೆರೆ, ನಾಲೆ, ನದಿಗಳು ಭರ್ತಿಯಾಗಿವೆ. ಮಳೆಯಿಂದಾಗಿ ಡೋಣಿ ನದಿ ಪ್ರವಾಹಕ್ಕೆ ನದಿ ಪಾತ್ರದ ಜನರು ತತ್ತರಿಸಿದ್ದಾರೆ. ಪ್ರವಾಹದಿಂದಾಗಿ ವಿಜಯಪುರ ಬೆಳಗಾವಿ ಹೆದ್ದಾರಿ ಬಂದ್ ಆಗುವ ಆತಂಕ ಎದುರಾಗಿದೆ. ಹೆದ್ದಾರಿಯನ್ನು ಡೋಣಿ ನದಿ ನೀರು ಸುತ್ತುವರೆದಿದೆ. ಸಾರವಾಡ ಗ್ರಾಮವೂ ಜಲಾವೃತವಾಗಿದ್ದು, ಜನ ಆತಂಕದಲ್ಲಿ ದಿನ ದೂಡುತ್ತಿದ್ದಾರೆ.

ಮೊಸಳೆ ಪ್ರತ್ಯಕ್ಷ: ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಹೊನ್ನಳ್ಳಿ ಗ್ರಾಮದ ಶ್ರೀ ಸರಸ್ವತಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಪಕ್ಕದ ಕೆರೆಯಲ್ಲಿ ಮೊಸಳೆ ಪ್ರತ್ಯಕ್ಷವಾಗಿದೆ. ಬೆಳಗ್ಗೆ ಬಯಲು ಬಹಿರ್ದೆಸೆಗೆ ಎಂದು ಹೋಗಿದ್ದ ವಿದ್ಯಾರ್ಥಿ ಕಣ್ಣಿಗೆ ಮೊಸಳೆ ಕಂಡು ವಿದ್ಯಾರ್ಥಿ ಹಾಗೂ ಜನರಲ್ಲಿ ಆತಂಕ ಮೂಡಿಸಿದೆ. ಮೊಸಳೆ ಕಳೆದೊಂದು ವರ್ಷದಿಂದ ಕೆರೆಯಲ್ಲಿ ವಾಸ ಮಾಡುತ್ತಿದೆ ಎಂದು ಸಂಸ್ಥೆಯ ಸಂಚಾಲಕ ಮಲ್ಲಿಕಾರ್ಜುನ ಭಜಂತ್ರಿ ತಿಳಿಸಿದ್ದಾರೆ.

ವಿಜಯಪುರದಲ್ಲಿ ಪ್ರವಾಹ

ಬೃಹತ ಗಾತ್ರದ ಮೊಸಳೆ ಇದ್ದು, ಜನ ಜಂಗುಳಿ ಕಡಿಮೆ ಆದ ನಂತರ ಕೆರೆಯಿಂದ ಹೊರಗೆ ಬರುತ್ತದೆ. ಈ ಕೆರೆಯ ಸುತ್ತಮುತ್ತ ಪ್ರದೇಶದಲ್ಲಿ ಮಹಿಳೆಯರು ಬಟ್ಟೆ ತೊಳೆಯಲು ಹೋಗುತ್ತಾರೆ. ವಿದ್ಯಾರ್ಥಿಗಳು, ಪುರುಷರು ಬಯಲು ಬಹಿರ್ದೆಸೆಗೆ ಹೋಗುತ್ತಿದ್ದು, ಯಾವ ಸಮಯದಲ್ಲಾದರೂ ಮೊಸಳೆ ದಾಳಿ ಮಾಡಬಹುದು ಎಂಬ ಆತಂಕ ಜನರಲ್ಲಿ ಮೂಡಿದೆ.

ಇನ್ನಾದರೂ ಸಂಬಂಧಪಟ್ಟ ಅರಣ್ಯಾಧಿಕಾರಿಗಳು ಹಾಗೂ ಗ್ರಾಪಂ ಆಡಳಿತ ಮಂಡಳಿಯವರು ಕೆರೆಯ ಸುತ್ತ ಬೇಲಿಯನ್ನು ಹಾಕಿ ಮೊಸಳೆಯನ್ನು ಸೆರೆ ಹಿಡಿಯಬೇಕು ಎಂದು ಗ್ರಾಮದ ರೈತ ಮುಖಂಡರಾದ ಆನಂದ ಕೂಡಲಗಿ, ಸಂಗನಗೌಡ ಪಾಟೀಲ, ಮಶ್ಯಾಖ ನೀರಲಗಿ, ಮಲಕು ಚಲವಾದಿ ಸೇರಿದಂತೆ ಮತ್ತಿತ್ತರರು ಒತ್ತಾಯಿಸಿದ್ದಾರೆ.

ಈ ಘಟನೆ ಸಂಬಂಧ ಮುಖ್ಯ ಅರಣ್ಯಾಧಿಕಾರಿ, ಮುಖ್ಯ ಅಭಿಯಂತರರು ಜಲ ಸರಬರಾಜು ಮಂಡಳಿ, ಗ್ರಾಂಪಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಜನ ದೂರಿದ್ದಾರೆ.

ಇದನ್ನೂ ಓದಿ : ಮಳೆಗೆ ದ್ವೀಪದಂತಾದ ಚಾಮರಾಜನಗರ ಜಿಲ್ಲಾಡಳಿತ ಭವನ.. ಮಾದಪ್ಪನ ಬೆಟ್ಟದ ಮಜ್ಜನ ಬಾವಿ ಮುಳುಗಡೆ

Last Updated : Aug 5, 2022, 1:26 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.