ವಿಜಯಪುರ : ಕಾಂಗ್ರೆಸ್ ಮುಖಂಡರಿಗೆ ಮಾಡಲು ಕೆಲಸವಿಲ್ಲದೆ ಏನಾದರೊಂದು ಸುದ್ದಿ ಹಬ್ಬಿಸುವ ಕೆಲಸ ಮಾಡುತ್ತಿದ್ದಾರೆ. ಮೊನ್ನೆ ಸಿಎಂ ಬೊಮ್ಮಾಯಿ ಬದಲಾವಣೆ ಸುದ್ದಿ ಹರಡಿಸಿದ್ದಾರೆ. ಅಂಥ ಚರ್ಚೆ ನಮ್ಮ ಪಕ್ಷದಲ್ಲಿಯೇ ನಡೆದಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಉಮೇಶ ಕತ್ತಿ ಸ್ಪಷ್ಟಪಡಿಸಿದ್ದಾರೆ.
ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮೊದಲು ಅವರ ಪಕ್ಷದ ಕಚ್ಚಾಟ ಸರಿಪಡಿಸಿಕೊಳ್ಳಲಿ. ಸಿಎಂ ಅಭ್ಯರ್ಥಿಯಾಗಿ ಡಿ.ಕೆ. ಶಿವಕುಮಾರ್ ಅಥವಾ ಸಿದ್ದರಾಮಯ್ಯ ಅವರಾ ಎನ್ನುವುದನ್ನು ಖಚಿತಪಡಿಸಿಕೊಳ್ಳಲಿ. ಅದು ಬಿಟ್ಟು ಜನರಲ್ಲಿ ಗೊಂದಲ ಮೂಡಿಸುವ ಹೇಳಿಕೆ ನೀಡುವುದು ಸರಿಯಲ್ಲ. ಕಾಂಗ್ರೆಸ್ ಮುಖಂಡರಿಗೆ ಯಾರ ನೇತೃತ್ವದಲ್ಲಿ ಚುನಾವಣೆ ಎದುರಿಸಬೇಕು ಎನ್ನುವ ಗೊಂದಲಗಳು ಇವೆ. ಸ್ವತಃ ಕಾರ್ಯಕರ್ತರಲ್ಲಿಯೂ ಗೊಂದಲ ಮೂಡಿದೆ. ಅದನ್ನು ಮೊದಲು ಸರಿಪಡಿಸಿಕೊಳ್ಳಲಿ ಎಂದು ಕಾಂಗ್ರೆಸ್ ಮುಖಂಡರಿಗೆ ತಿವಿದರು.
ನಾವು ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಮುಂದಿನ ಚುನಾವಣೆ ಎದುರಿಸುತ್ತೇವೆ. ಇದು ಕೇವಲ ನಾನು ಹೇಳುತ್ತಿರುವುದಲ್ಲ, ಮಾಜಿ ಸಿಎಂ ಯಡಿಯೂರಪ್ಪ, ರಾಷ್ಟ್ರೀಯ ನಾಯಕರು ಘೋಷಣೆ ಮಾಡಿದ್ದಾರೆ. ಮತ್ತೊಮ್ಮೆ ಬಿಜೆಪಿಯನ್ನು ಅಧಿಕಾರಕ್ಕೆ ತಂದ ಮೇಲೆ ಸಿಎಂ ಆಯ್ಕೆ ಪ್ರಕ್ರಿಯೆ ನಡೆಯಲಿದೆ ಎಂದು ಸ್ಪಷ್ಟಪಡಿಸಿದರು.
ಅಕ್ಕಿ ನೀಡುವ ವಿಚಾರದಲ್ಲಿಯೂ ಸಹ ಸಿದ್ದರಾಮಯ್ಯ ಗೊಂದಲ ನೀತಿ ಅನುಸರಿಸುತ್ತಿದ್ದಾರೆ. 10 ಕೆಜಿ ಅಕ್ಕಿ ನೀಡುತ್ತೇವೆ ಎಂದು ಹೇಳುತ್ತಾರೆ. ಆದರೆ ಪಡಿತರ ಅಂಗಡಿಯಲ್ಲಿ 7.5 ಕೆ.ಜಿ ಅಕ್ಕಿ ನೀಡಲಾಗುತ್ತಿದೆ. ಕೇವಲ ಸುಳ್ಳು ಹೇಳುತ್ತಲೇ ಜನರನ್ನು ತಪ್ಪು ದಾರಿಗೆ ಎಳೆಯುತ್ತಿದ್ದಾರೆ ಎಂದು ಸಚಿವ ಕತ್ತಿ ಕಿಡಿಕಾರಿದರು.
ಪ್ರತಿ ಜಿಲ್ಲೆಯಲ್ಲಿ ಪ್ರಾಣಿ ಸಂಗ್ರಹಾಲಯ: ವಿಜಯಪುರ, ಬಾಗಲಕೋಟೆ ಜಿಲ್ಲೆ ಮಧ್ಯದಲ್ಲಿ ಒಂದು ಪ್ರಾಣಿ ಸಂಗ್ರಹಾಲಯ ಸ್ಥಾಪಿಸಬೇಕು ಎನ್ನುವ ಉದ್ದೇಶ ನಮ್ಮ ಇಲಾಖೆಯಲ್ಲಿದೆ. ಇದರ ಜತೆ ಪ್ರತಿ ಜಿಲ್ಲೆಯಲ್ಲಿಯೂ ಒಂದು ಪ್ರಾಣಿ ಸಂಗ್ರಹಾಲಯ ಸ್ಥಾಪನೆ ಮಾಡಲು ಚಿಂತನೆ ನಡೆದಿದೆ. ಪ್ರವಾಸಿಗರನ್ನು ಆಕರ್ಷಿಸುವ ಜತೆ ಪ್ರಾಣಿ ಸಂತತಿ ಉಳಿಯಲು ಪ್ರತಿ ಜಿಲ್ಲೆಯಲ್ಲಿ ಪ್ರಾಣಿ ಸಂಗ್ರಹಾಲಯ ಅವಶ್ಯ ಇದೆ. ಈ ಬಗ್ಗೆ ಸಿಎಂ ಜತೆ ಚರ್ಚೆ ನಡೆಸುವುದಾಗಿ ಅರಣ್ಯ ಇಲಾಖೆ ಸಚಿವ ಉಮೇಶ ಕತ್ತಿ ಹೇಳಿದರು.
ಸ್ವಾತಂತ್ರ್ಯ ದಿನಾಚರಣೆ ಧ್ವಜಾರೋಹಣ: ನಗರದ ಡಾ ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ ಆಯೋಜಿಸಿದ್ದ 75ನೇ ಸ್ವಾತಂತ್ರ್ಯ ದಿನದ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಉಮೇಶ ಕತ್ತಿ ಧ್ವಜಾರೋಹಣ ನೇರವೇರಿಸಿದರು. ನಂತರ ಧ್ವಜ ವಂದನೆ ಸ್ವೀಕರಿಸಿದರು. ವಿವಿಧ ಕವಾಯತುಗಳಿಂದ ನಡೆದ ಆಕರ್ಷಕ ಪಥ ಸಂಚಲನ ವೀಕ್ಷಿಸಿದರು. ಭಾಷಣದಲ್ಲಿ ಸ್ವಾತಂತ್ರ್ಯಕ್ಕಾಗಿ ಜಿಲ್ಲೆಯ ಕೊಡುಗೆಯನ್ನು ಸ್ಮರಿಸಿದರು. ಕೋವಿಡ್ನಲ್ಲಿ ಉತ್ತಮ ಕಾರ್ಯನಿರ್ವಹಿಸಿದ ಆರೋಗ್ಯ ಇಲಾಖೆ ಕಾರ್ಯವನ್ಜು ಶ್ಲಾಘಿಸಿದರು. ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ, ಸಂಸದ ರಮೇಶ ಜಿಗಜಿಣಗಿ, ಜಿಲ್ಲಾಧಿಕಾರಿ ವಿಜಯಮಹಾಂತೇಶ ದಾನಮ್ಮನವರ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ಶಾಲೆ ಮಕ್ಕಳು ಭಾಗವಹಿಸಿದ್ದರು.
ಇದನ್ನೂ ಓದಿ : ದೆಹಲಿಯಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ಸ್ಥಾಪನೆಗೆ ಕೇಂದ್ರಕ್ಕೆ ಪತ್ರ: ಸಿಎಂ ಬಸವರಾಜ ಬೊಮ್ಮಾಯಿ