ETV Bharat / state

ಈ ಚುನಾವಣೆಯಲ್ಲಿ ಮೋದಿ ಮೋಡಿ, ಮೋದಿ ಮ್ಯಾಜಿಕ್ ನಡೆದಿಲ್ಲ: ಎಂ. ಬಿ. ಪಾಟೀಲ್​​

author img

By

Published : May 11, 2023, 4:05 PM IST

ಕಾಂಗ್ರೆಸ್​​ ನಾಯಕ ಎಂ.ಬಿ ಪಾಟೀಲ್​ ಅವರು ರಿಲ್ಯಾಕ್ಸ್​​ ಮೂಡ್​​ನಲ್ಲಿದ್ದು, ಮತದಾನ ಕುರಿತು ಪಕ್ಷದ ಕಾರ್ಯಕರ್ತರ ಜೊತೆ ಸಭೆ ನಡೆಸಿದರು.

congress-leader-mb-patil-is-in-relax-mode-after-the-election
ವಿಜಯಪುರ ಜಿಲ್ಲೆಯಲ್ಲಿ ಒಟ್ಟು ಶೇ71.34ರಷ್ಟು ಮತದಾನ, ರಿಲ್ಯಾಕ್ಸ್​​ ಮೂಡ್​​ನಲ್ಲಿರುವ ಅಭ್ಯರ್ಥಿಗಳು

ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್​​ ಸುದ್ದಿಗಾರರೊಂದಿಗೆ ಮಾತನಾಡಿದರು

ವಿಜಯಪುರ: ನಿನ್ನೆಯಷ್ಟೇ ರಾಜ್ಯ ವಿಧಾನಸಭೆ ಚುನಾವಣೆಗೆ ಮತದಾನ ಪ್ರಕ್ರಿಯೆ ಮುಗಿದಿದ್ದು, ಇಷ್ಟು ದಿನ ಅಭ್ಯರ್ಥಿಗಳು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಓಡಾಡಿ ಮತಬೇಟೆ ನಡೆಸಿದ್ದರು. ಈಗ ಚುನಾವಣೆ ಮುಗಿದಿದ್ದು, ಮೇ 13 (ಶನಿವಾರ) ಫಲಿತಾಂಶ ಹೊರಬೀಳಲಿದೆ. ಅಭ್ಯರ್ಥಿಗಳು ತಮ್ಮ ರಾಜಕೀಯ ಭವಿಷ್ಯ ಏನಾಗುತ್ತದೆ ಎನ್ನುವ ಆತಂಕದಲ್ಲಿಯೇ ತಮ್ಮ ತಮ್ಮ ನಿವಾಸದಲ್ಲಿ ರಿಲ್ಯಾಕ್ಸ್​​​​ ಮೂಡಿಗೆ ಜಾರಿದ್ದಾರೆ.

ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ್​​ ಸಹ ತಮ್ಮ ನಿವಾಸದಲ್ಲಿ ಪತ್ನಿ ಜತೆ ಚಹಾ ಕುಡಿಯುತ್ತ ರಿಲ್ಯಾಕ್ಸ್​​​​ ಮಾಡ್​ನಲ್ಲಿದ್ದರು. ಮತದಾನ ಕುರಿತು ಕಾರ್ಯಕರ್ತರು ಹಾಗೂ ಬೆಂಬಲಿಗರ ಜತೆ ನಿನ್ನೆ ರಾತ್ರಿ ಸಭೆ ನಡೆಸಿ ಎಲ್ಲೆಲ್ಲಿ ಹೇಗೆಲ್ಲಾ ಮತದಾನ ಆಗಿದೆ ಎಂದು ಮಾಹಿತಿ ಕಲೆ ಹಾಕಿದರು. ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾನು ಬಬಲೇಶ್ವರ ಕ್ಚೇತ್ರದಲ್ಲಿ ಒಳ್ಳೆ ಲೀಡ್​​ನಲ್ಲಿ ಆಯ್ಕೆಯಾಗುವೆ. ದೊಡ್ಡ ಅಂತರದಿಂದ ಗೆಲ್ಲುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕಾಂಗ್ರೆಸ್ ಪಕ್ಷ 120 ರಿಂದ 140 ಸ್ಥಾನಗಳಲ್ಲಿ ಗೆಲ್ಲಲಿದೆ. ಸಿದ್ದರಾಮಯ್ಯ, ಡಿ ಕೆ ಶಿವಕುಮಾರ್​​ ಅವರು ಸಹ ಹೆಚ್ಚು ಸ್ಥಾನ ಗೆಲ್ಲೋದಾಗಿ ಹೇಳಿದ್ದಾರೆ. ಎಲ್ಲ ಸಮೀಕ್ಷೆಗಳು ನಮ್ಮ ಪರವಾಗಿಯೇ ಇದೆ, ಜನರು ನೀಡಿದ ತೀರ್ಪಿನ ಆಧಾರದ‌ ಮೇಲೆ ಸಮೀಕ್ಷೆ ನಡೆಯುವ ಕಾರಣ, ಈ ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. 2013-18 ರಲ್ಲಿ ನಮ್ಮ ಸರ್ಕಾರ ಹಾಗೂ ಈಗಿನ ಸರ್ಕಾರ ಹೇಗೆ ಕೆಲಸ ಮಾಡಿದೆ ಎಂಬುದು ಜನರಿಗೆ ಗೊತ್ತಾಗಿದೆ, ಹಲವಾರು ಭಾಗ್ಯ, ರೈತರಿಗೆ ಯೋಜನೆ, ಯುವ ಜನರಿಗೆ ಯೋಜನೆ ನೀಡಿದ್ದೇವೆ. ಈಗಾಗಲೇ ಜನ ತೀರ್ಮಾನ ಮಾಡಿದ್ದಾರೆ ಎಂದರು.

ಪ್ರಧಾನಿ ಮೋದಿ ಪ್ರಭಾವ ಇಲ್ಲ: ಜನ ಬೆಲೆ ಏರಿಕೆ ಬಗ್ಗೆ ಜಾಗೃತರಾಗಿದ್ದಾರೆ. ಕಳೆದ 9 ವರ್ಷದಲ್ಲಿ ಅವರೇ ಮಾತು ಕೊಟ್ಟಂತೆ 18 ಕೋಟಿ ಉದ್ಯೋಗ ಸೃಷ್ಟಿಯಾಗಬೇಕಿತ್ತು ಆದ್ರೆ ಅದು ಆಗಿಲ್ಲ, ನೋಟ್ ಬ್ಯಾನ್, ಉದ್ಯೋಗ ಕಡಿತ ಬೆಲೆ ಏರಿಕೆ, ರೈತರ ಆದಾಯ ದುಪ್ಪಟ್ಟಾಗಿಲ್ಲ, ರಸಗೊಬ್ಬರ ಔಷಧಿ ಬೆಲೆ ಹೆಚ್ಚಾಗಿದೆ ಎಂದು ವಾಗ್ದಾಳಿ ನಡೆಸಿದರು. ಹಿಂದೆ ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದಾಗ ಸುಮಾರು 72 ಸಾವಿರ ಕೋಟಿ ರೂಪಾಯಿ ರೈತರ ಸಾಲ ಮನ್ನಾ ಮಾಡಿದ್ದರು. ಆದರೆ ಮೋದಿ ಅವರು ಉದ್ದಿಮೆದಾರರ 20 ಲಕ್ಷ ಕೋಟಿ ಸಾಲಮನ್ನಾ ಮಾಡಿದ್ದಾರೆ. ಮೋದಿ ಮೋಡಿ, ಮೋದಿ ಮ್ಯಾಜಿಕ್​ ನಡೆದಿಲ್ಲ ಎಂದು ಎಂ ಬಿ ಪಾಟೀಲ್​ ಹೇಳಿದರು.

ಜಿಲ್ಲೆಯಲ್ಲಿ ಒಟ್ಟು ಶೇ71.34ರಷ್ಟು ಮತದಾನ: 8 ವಿಧಾನಸಭಾ ಕ್ಷೇತ್ರಗಳಲ್ಲಿ ನಿನ್ನೆ ಸುಸೂತ್ರವಾಗಿ ಮತದಾನ ನಡೆದಿದ್ದು, ಜಿಲ್ಲೆಯಾದ್ಯಂತ ಒಟ್ಟು ಶೇ.71.34ರಷ್ಟು ಮತದಾನ ಆಗಿದೆ. ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಡಾ. ವಿಜಯ ಮಹಾಂತೇಶ ದಾನಮ್ಮನವರ ನೇತೃತ್ವದಲ್ಲಿ ಎಲ್ಲ ಮತ ಕ್ಷೇತ್ರಗಳಿಂದ ಬಂದ ಇವಿಎಂ ಮತಯಂತ್ರಗಳನ್ನು ಸುರಕ್ಷಿತವಾಗಿ ವಿಜಯಪುರ ನಗರದ ಸೈನಿಕ ಶಾಲೆಯಲ್ಲಿ ಸ್ಥಾಪಿಸಲಾದ ಭದ್ರತಾ ಕೊಠಡಿಯಲ್ಲಿ ಇರಿಸಲಾಗಿದ್ದು, ಬಿಗಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿದೆ.

ಶೇಕಡವಾರು ಮತದಾನ: ಮುದ್ದೇಬಿಹಾಳ ಶೇ.70.91ರಷ್ಟು ಮತದಾನವಾಗಿದೆ. ದೇವರಹಿಪ್ಪರಗಿ ಶೇ.68.65, ಬಸವನಬಾಗೇವಾಡಿ ಶೇ.75.18, ಬಬಲೇಶ್ವರ ಶೇ.81.79, ವಿಜಯಪುರ ನಗರ ಶೇ.64.59ರಷ್ಟು, ನಾಗಠಾಣ (ಮೀಸಲು ಕ್ಷೇತ್ರ) ಶೇ.66.48ರಷ್ಟು. ಇಂಡಿ ಶೇ.73.62ರಷ್ಟು ಹಾಗೂ ಸಿಂದಗಿ ವಿಧಾನಸಭಾ ಕ್ಷೇತ್ರದಲ್ಲಿ ಶೇ.72.46ರಷ್ಟು ಮತದಾನವಾಗಿದೆ.

ಜಿಲ್ಲೆಯಲ್ಲಿ 9,66,535 ಪುರುಷ ಮತದಾರರು, 9,26,096 ಮಹಿಳಾ ಮತದಾರರು ಹಾಗೂ 221 ಇತರೆ ಮತದಾರರು ಸೇರಿದಂತೆ ಒಟ್ಟು 18,92,852 ಮತದಾರರಿದ್ದಾರೆ. ಈ ಪೈಕಿ 6,99,701 ಪುರುಷರು, 6,50,643 ಮಹಿಳೆಯರು, 26 ಇತರೆ ಮತದಾರರು ಸೇರಿದಂತೆ ಒಟ್ಟು 13,50,370 ಮತದಾರರು ಮತ ಚಲಾಯಿಸಿದ್ದಾರೆ.

ಇದನ್ನೂ ಓದಿ: ನಾಡಿದ್ದು ಚುನಾವಣಾ ತೀರ್ಪು.. ಸಿದ್ದರಾಮಯ್ಯ- ಸುರ್ಜೇವಾಲಾ ಮಹತ್ವದ ಮಾತುಕತೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.