ETV Bharat / state

ಮೀಸಲಾತಿ ವಿಚಾರವಾಗಿ ಸಿಎಂ ಆಣೆ ಮಾಡಿದ್ದಾರೆ: ಯತ್ನಾಳ್​

author img

By

Published : Dec 25, 2022, 5:01 PM IST

Updated : Dec 25, 2022, 7:20 PM IST

ಮುಖ್ಯಮಂತ್ರಿಗಳು ಮೀಸಲಾತಿ ನೀಡುತ್ತಾರೆ ಎಂಬ ಭರವಸೆ ಇದೆ-ಕೆಲವರು ಬಂದ ಮೇಲೆ ನಮಗೆ ತೊಂದರೆಯಾಗಿದೆ- ಸ್ವಪಕ್ಷದ ಸಚಿವರ ವಿರುದ್ಧ ಗುಡುಗಿದ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್

cm-took-oath-on-reservation-issue-yatnal
ಮೀಸಲಾತಿ ವಿಚಾರವಾಗಿ ಸಿಎಂ ಆಣೆ ಮಾಡಿದ್ದಾರೆ: ಯತ್ನಾಳ್​

ಮೀಸಲಾತಿ ವಿಚಾರವಾಗಿ ಸಿಎಂ ಆಣೆ ಮಾಡಿದ್ದಾರೆ: ಯತ್ನಾಳ್​

ವಿಜಯಪುರ: ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ನೂತನ ಪಕ್ಷ ವಿಚಾರವಾಗಿ ವಿಜಯಪುರ ನಗರದಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್​ ಪ್ರತಿಕ್ರಿಯೆ ನೀಡಿದ್ದಾರೆ. ನಮಗೆ ನಮ್ಮ ಪಕ್ಷ ಮುಂದಿನ ಚುನಾವಣೆಯಲ್ಲಿ ಬಹುಮತ ಪಡೆಯಬೇಕು ಎಂಬುದಷ್ಟೇ ಮುಂದಿನ ಗುರಿ, ಯಾರು ಪಕ್ಷ ಮಾಡಿದರು, ಯಾರು ಪಕ್ಷ ಬಿಟ್ಟರು? ಎಂಬುದರ ಬಗ್ಗೆ ಚಿಂತಿಸುವುದಿಲ್ಲ ಎಂದು ಹೇಳಿದರು.

ಇನ್ನು, ಕೆಲವು ನಾಯಕರುಗಳು ಪಕ್ಷ ಬಿಟ್ಟು ಹೋಗುವವರೂ ಇದ್ದಾರೆ, ಹೊಸದಾಗಿ ಪಕ್ಷಕ್ಕೆ ಬರುವವರು ಇದ್ದಾರೆ. ಕೆಲವೊಂದಿಷ್ಟು ಮಂದಿ ಪ್ರಾಣ ಹೋದರು ಸೋನಿಯಾಗಾಂಧಿ ಅವರನ್ನು ಬಿಟ್ಟು ಬೇರೆ ಪಕ್ಷ ಸೇರೋದಿಲ್ಲ ಎಂದು ನಾಟಕ ಮಾಡುತ್ತಾರೆ. ಅಲ್ಲಿ ದೆಹಲಿಗೆ ಹೋಗಿ ನಾವು ಬಿಜೆಪಿ ಸೇರ್ತಿವಿ ಎಂದು ಇಲ್ಲಿಯವರೇ ಒಂದಿಬ್ಬರು ಓಡಾಡ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕರು ಬಿಜೆಪಿ ಸೇರುವ ಸುಳಿವು ನೀಡಿದ್ದಾರೆ ಎಂದು ತಿಳಿಸಿದರು.

ಮೀಸಲಾತಿ ಭರವಸೆ ನೀಡಿದ್ದಾರೆ: 2ಎ ಮೀಸಲಾತಿಯಲ್ಲಿ ಬರುವ 102 ಸಮಾಜಗಳಿಗೆ ಯಾವುದೇ ರೀತಿ ತೊಂದರೆ ಆಗದ ಹಾಗೇ ಹೊಸ ಸೂತ್ರವನ್ನು ರಚಿಸಿ ನಮ್ಮ ಪಂಚಮಸಾಲಿ ಸಮಾಜ, ಕೂಡು ಒಕ್ಕಲಿಗ, ಆದಿಬಣಜಿಗ ಸಮಾಜಗಳು 2ಎ ಮೀಸಲಾತಿ ಕೊಡುವಂತಹದ್ದು. ಕೇಂದ್ರದಲ್ಲಿ ನರೇಂದ್ರ ಮೋದಿ ಸರ್ಕಾರದ ಶೇ10ರಷ್ಟು ಒಬಿಸಿ ಮೀಸಲಾತಿಯಲ್ಲಿ ಇಡೀ ವೀರಶೈವ ಲಿಂಗಾಯತ ಸಮುದಾಯವನ್ನು ಮೀಸಲಾತಿಗೆ ಶಿಪಾರಸು ಮಾಡುತ್ತೇವೆ ಎಂದು ಭರವಸೆ ಕೊಟ್ಟಿದ್ದಾರೆ ಎಂದು ಹೇಳಿದರು.

ಮುಖ್ಯಮಂತ್ರಿಗಳು ಆಣೆ ಮಾಡಿದ್ದಾರೆ: ರಾಜ್ಯದಲ್ಲಿ ಮೀಸಲಾತಿ ಘೋಷಣೆ ಆಗುವ ಭರವಸೆ ಇದೆ ಎಂದು ಬಸವನಗೌಡ ಪಾಟೀಲ್​ ಯತ್ನಾಳ್ ವಿಶ್ವಾಸ ವ್ಯಕ್ತಪಡಿಸಿದರು. 2ಎ ಗೆ ಸಮಾನವಾದ ಮೀಸಲಾತಿ ಸಿಗುತ್ತದೆ, ಪಂಚಮಸಾಲಿ‌ 2ಎ ಮೀಸಲಾತಿ ಸಿಎಂ ಬಸವರಾಜ ಬೊಮ್ಮಾಯಿ ನೀಡುವುದಾಗಿ ಆಣೆ ಮಾಡಿದ್ದಾರೆ‌. ತಾಯಿ ಆಣೆ ಮಾಡಿದ ಮೇಲೆ ಕೊಡಲಿಲ್ಲ ಅಂದರೆ ಏನು ಆಗುತ್ತದೆ ನೋಡಿ ಎಂದರು. ಈಗಾಗಲೇ ಬೇರೆ ಸಮುದಾಯಗಳಿಗೆ ಮೀಸಲಾತಿಯನ್ನು ನೀಡಿದ್ದಾರೆ, ತಳವಾರ ಸಮುದಾಯಕ್ಕೆ ಎಸ್​ಟಿ ಮೀಸಲಾತಿ ಕೊಟ್ಟಿದ್ದಾರೆ, ಮುಖ್ಯಮಂತ್ರಿಗಳು ನಮ್ಮ ಸಮುದಾಯಕ್ಕೂ ಮೀಸಲಾತಿ ಕೊಡುತ್ತಾರೆ ಎಂಬ ಭರವಸೆ ಇದೆ ಎಂದು ಯತ್ನಾಳ್​ ತಿಳಿಸಿದರು.

ವಚನ ಭ್ರಷ್ಟತೆ ಇರುತ್ತದೆ, ಅದಕ್ಕಾಗಿ ಸಿಎಂ ಭರವಸೆ ಈಡೇರಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ನಾವು ಮೀಸಲಾತಿ ಕೇಳಿದ ನಂತರ ಬೇರೆ ಬೇರೆ ಸಮಾಜದವರು ಮೀಸಲಾತಿ ಕೇಳಬಹುದು ಎಂದರು.

ಸಚಿವ ಸಂಪುಟ ಚರ್ಚೆ ವಿಚಾರ: ನಾನು ಸಂಪುಟದ ವಿಸ್ತರಣೆ ವಿಚಾರದಲ್ಲಿ ಇಲ್ಲವೇ ಇಲ್ಲ, ಕೆ ಎಸ್​ ಈಶ್ವರಪ್ಪ, ರಮೇಶ ಜಾರಕಿಹೊಳಿ, ಸಿ ಪಿ ಯೊಗೇಶ್ವರ ಅವರು ಮಂತ್ರಿ ಸ್ಥಾನ ಕೊಡಬೇಕು ಎಂದು ಬೇಡಿಕೆ ಇಟ್ಟಿದ್ದಾರೆ. ಇದೇ ವಿಚಾರವಾಗಿ ಮಾಜಿ ಸಚಿವ ಕೆ.ಎಸ್​ ಈಶ್ವರಪ್ಪನವರು ಬೆಳಗಾವಿ ಸುವರ್ಣಸೌಧದಲ್ಲಿ ನಡೆದ ಚಳಿಗಾಲದ ಅಧಿವೇಶನಕ್ಕೆ ಗೈರಾಗಿ ಅಸಮಧಾನ ವ್ಯಕ್ತಪಡಿಸಿದ್ದರು.

ನಾನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಹೇಳಿದ್ದು ಇಷ್ಟೇ, ಮೀಸಲಾತಿ ಕೊಡಿ, ಕಥೆ ಹೇಳಬೇಡಿ. ಮೀಸಲಾತಿ ವಿಚಾರದಲ್ಲಿ ಸ್ಪಷ್ಟವಾಗಿ ಇದ್ದೇನೆ ಎಂದು ಹೇಳಿದರು. ನಮಗೇನು ಸಚಿವ ಸ್ಥಾನ ಬೇಕಾಗಿಲ್ಲ, ಮೂರು ತಿಂಗಳ ಅವಧಿಗೆ ಮಂತ್ರಿ ಆಗುವ ಅವಶ್ಯಕತೆ ನನಗೆ ಇಲ್ಲ. ಮಂತ್ರಿ ಸ್ಥಾನ ಬೇಕು ಎಂದು ನಾನು ಯಾವತ್ತೂ ಆಸೆ ಪಟ್ಟಿಲ್ಲ, ಸಂಪುಟ ವಿಸ್ತರಣೆ ವಿಚಾರವಾಗಿ ತಲೆ ಕೆಡಿಸಿಕೊಂಡಿಲ್ಲ ಎಂದು ಸ್ಪಷ್ಟಪಡಿಸಿದರು.

ನಿರಾಣಿ ವಿರುದ್ಧ ಪರೋಕ್ಷ ವಾಗ್ದಾಳಿ: ಸ್ವಪಕ್ಷದ ಸಚಿವ ಮುರುಗೇಶ ನಿರಾಣಿ ವಿರುದ್ಧ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು. ನಾನು ಯಾರ ಕಾಲು ಹಿಡಿಯಲು ಹೋಗಿಲ್ಲ. ದೆಹಲಿಗೆ ಬೇಟಿ ನೀಡಿದಾಗ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರನ್ನು ಭೇಟಿ ಮಾಡಿದ್ದೆ. ನೀವೇ ಕೇಳಿ ನೋಡಿ, ನಾನು ಅಟಲ್ ಬಿಹಾರಿ ವಾಜಪೇಯಿ ಮತ್ತು ಲಾಲ್​ ಕೃಷ್ಣ ಅಡ್ವಾನಿ ಅವರ ಕಾಲು ಮುಟ್ಟಿ ನಮಸ್ಕಾರ ಮಾಡಿದ್ದೇನೆ. ರಾಜಕೀಯಕ್ಕೆ ಬಂದ ಮೇಲೆ ನಮಗೆ ಬಹಳ ತೊಂದರೆಯಾಗಿದೆ. ಬೇರೆ ಯಾರ ಕಾಲು ಹಿಡಿಯುವ ಮಗ ನಾನಲ್ಲ, ಎಂದು ಆಕ್ರೋಶ ಹೊರ ಹಾಕಿದರು.‌ ತುಮಕೂರು ಸಿದ್ಧಗಂಗಾ, ಸಿದ್ಧೇಶ್ವರ ಶ್ರೀಗಳ ಕಾಲು ನಮಸ್ಕಾರ ಮಾಡಿದ್ದೇನೆ, ಆದ್ರೇ, ತಲೆ ಹಿಡುಕು ಸ್ವಾಮಿಗಳ ಕಾಲು ಮುಗಿಯಲ್ಲ ಎಂದು ಹೇಳಿದರು.

ಕೆಲವು ರಾಜಕಾರಣಿಗಳು ಸ್ವಾಮೀಜಿಗಳನ್ನು ಮನೆಗೆ ಕರೆದು ಸೀರೆ, ಬಂಗಾರ, ಲಕ್ಷಗಟ್ಟಲೇ ಹಣ ಕೊಡುವುದನ್ನು ಮಾಡುತ್ತಾರೆ. ಈ ದಂಧೆ ಯತ್ನಾಳಗೆ ಗೊತ್ತೂ ಇಲ್ಲ, ಅದನ್ನು ನಾನು ಮಾಡುವುದು ಇಲ್ಲ ಎಂದು ನಿರಾಣಿ ವಿರುದ್ಧ ಕಿಡಿಕಾರಿದರು. ಅವರಿಗೆ ಮೊನ್ನೆ ಬೆಳಗಾವಿಯಲ್ಲಿ ನಡೆದ ಪಂಚಮಸಾಲಿ ಹೋರಾಟ ನೋಡಿ ಹತಾಶೆ ಆಗಿದೆ ಎಂದು ಸಚಿವ ನಿರಾಣಿಗೆ ಯತ್ನಾಳ್​ ಟಾಂಗ್​ ಕೊಟ್ಟರು.

ಇದನ್ನೂ ಓದಿ: ಪಕ್ಷ ಬಿಡುವವರ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಹೆಚ್ಚಿದೆ ಚಿಂತೆ!

Last Updated : Dec 25, 2022, 7:20 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.