ETV Bharat / state

ವಿಧಾನಪರಿಷತ್ ಚುನಾವಣೆ: ವಿಜಯಪುರದಲ್ಲಿ ಕಾಂಗ್ರೆಸ್-ಬಿಜೆಪಿ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ

author img

By

Published : Nov 23, 2021, 8:41 PM IST

Updated : Nov 23, 2021, 10:31 PM IST

ಇಂದು ಕೊನೆ ದಿನವಾದ ಕಾರಣ ಬಿಜೆಪಿ, ಕಾಂಗ್ರೆಸ್ ಹಾಗೂ ಮೂವರು ಪಕ್ಷೇತರ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ಜೆಡಿಎಸ್ ತಮ್ಮ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿಲ್ಲ. ಸದ್ಯ ನಾಮಪತ್ರ ವಾಪಸ್ ಪಡೆಯಲು ಅವಕಾಶವಿದ್ದು ಪಕ್ಷೇತರರು ನಾಮಪತ್ರ ಹಿಂದಕ್ಕೆ ಪಡೆದರೆ ಕಾಂಗ್ರೆಸ್ ಹಾಗೂ ಬಿಜೆಪಿ ಅಭ್ಯರ್ಥಿಗಳು ಅವಿರೋಧ ಆಯ್ಕೆ ಆಗುವ ಸಾಧ್ಯತೆಗಳು ಇವೆ.

BJP and Congress Candidates nomination filed in Vijayapura
ವಿಜಯಪುರದಲ್ಲಿ ಕಾಂಗ್ರೆಸ್-ಬಿಜೆಪಿ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ

ವಿಜಯಪುರ: ವಿಧಾನಪರಿಷತ್ ಚುನಾವಣೆಗೆ ಇಂದು ನಾಮಪತ್ರ ಸಲ್ಲಿಕೆ ಕೊನೆ ದಿನವಾದ ಕಾರಣ ಬಿಜೆಪಿ-ಕಾಂಗ್ರೆಸ್ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿಗೆ ಮೊದಲು ಬಿಜೆಪಿ ಅಭ್ಯರ್ಥಿ ಪಿ.ಎಚ್.ಪೂಜಾರ ಆಗಮಿಸಿದ್ದರು. ಈ ವೇಳೆ ಕಾಂಗ್ರೆಸ್ ಅಭ್ಯರ್ಥಿ ಸುನೀಲಗೌಡ ಪಾಟೀಲ ಸಹ ನಾಮಪತ್ರ ಸಲ್ಲಿಸಲು ಆಗಮಿಸಿದ್ದರು. ಈ ವೇಳೆ ಇಬ್ಬರೂ ಪರಸ್ಪರ ಕುಶಲೋಪರಿ ವಿಚಾರಿಸಿದರು.

ವಿಜಯಪುರದಲ್ಲಿ ಕಾಂಗ್ರೆಸ್-ಬಿಜೆಪಿ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ

ಬಿಜೆಪಿ ಅಭ್ಯರ್ಥಿ ಪಿ.ಎಚ್. ಪೂಜಾರ ಎರಡು ದಿನಗಳ ಹಿಂದೆ ಔಪಚಾರಿಕವಾಗಿ ನಾಮಪತ್ರ ಸಲ್ಲಿಸಿದ್ದರು. ಇಂದು ಮತ್ತೊಮ್ಮೆ ಎರಡು ಸೆಟ್​ಗಳಲ್ಲಿ ನಾಮಪತ್ರ ಸಲ್ಲಿಸಿದ್ದಾರೆ. ನಂತರ ಮಾತನಾಡಿದ ಅವರು, ನನ್ನ ಗೆಲುವು ನಿಶ್ಚಿತ. ರಾಜಕೀಯದಲ್ಲಿ ಸಾಕಷ್ಟು ಅನುಭವವಿದೆ. ಮೊನ್ನೆ ಮುಹೂರ್ತ ನೋಡಿಕೊಂಡು ನಾಮಪತ್ರ ಸಲ್ಲಿಸಿದ್ದೇನೆ. ಅಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಜನಸ್ವರಾಜ್ ಯಾತ್ರೆಗಾಗಿ ಬಾಗಲಕೋಟೆಯಲ್ಲಿದ್ದರು. ಹೀಗಾಗಿ ರಾಜಕೀಯ ಮುಖಂಡರು ಬಂದಿರಲಿಲ್ಲ. ಇಂದು ಸಹ ಎರಡು ಸೆಟ್​ನಲ್ಲಿ ನಾಮಪತ್ರ ಸಲ್ಲಿಸಿದ್ದು, ನಮ್ಮ ಪಕ್ಷದ ಎಲ್ಲ ಮುಖಂಡರು ನನಗೆ ಬೆಂಬಲಿಸಿದ್ದಾರೆ. ಹೀಗಾಗಿ ಗೆಲ್ಲುವ ವಿಶ್ವಾಸವಿದೆ ಎಂದರು.

ಬಿಜೆಪಿ ಅಭ್ಯರ್ಥಿ ನಾಮಪತ್ರ ಸಲ್ಲಿಸಿದ ನಂತರ ಕಾಂಗ್ರೆಸ್ ಅಭ್ಯರ್ಥಿ ಸುನೀಲಗೌಡ ಪಾಟೀಲ ನಾಮಪತ್ರ ಸಲ್ಲಿಸಿದರು.‌ ಅವರು ಸಹ ಎರಡು ಸೆಟ್​ನಲ್ಲಿ ನಾಮಪತ್ರ ಸಲ್ಲಿಸಿದರು. ನಂತರ ಮಾತನಾಡುತ್ತಾ, ಕಳೆದ ಬಾರಿ ರಾಜಕೀಯ ಅನುಭವ ಕಡಿಮೆ ಇತ್ತು. ಕಳೆದ ಮೂರು ವರ್ಷ ಪ್ರತಿ ಗ್ರಾಮ ಪಂಚಾಯಿತಿಗಳಿಗೆ ಭೇಟಿ ನೀಡಿ ಅವರ ಸಮಸ್ಯೆ ಆಲಿಸಿದ್ದೇನೆ. ಮುಖ್ಯವಾಗಿ ಅವರಿಗೆ ನೀಡುವ ಭತ್ಯೆ ಅತಿ‌ ಕಡಿಮೆ ಇದೆ. ಅದನ್ನು ಹೆಚ್ಚಿಸಲು ಅಧಿವೇಶನದಲ್ಲಿ ಮೂರು ಬಾರಿ ಧ್ವನಿ ಎತ್ತಿದ್ದೇನೆ. ಅದಕ್ಕೆ ಸರ್ಕಾರ ಸ್ಪಂದಿಸಿ, ಹೆಚ್ಚಿನ ಭತ್ಯೆ ನೀಡುತ್ತಿದೆ. ಮತ್ತೊಮ್ಮೆ ಆಯ್ಕೆಯಾದರೆ ಅವರ ಉಳಿದ ಸಮಸ್ಯೆ ಬಗೆಹರಿಸುವೆ ಎಂದು ಹೇಳಿದರು.

ಇಂದು ಕೊನೆ ದಿನವಾದ ಕಾರಣ ಬಿಜೆಪಿ, ಕಾಂಗ್ರೆಸ್ ಹಾಗೂ ಮೂವರು ಪಕ್ಷೇತರ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ಜೆಡಿಎಸ್ ತಮ್ಮ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿಲ್ಲ. ಸದ್ಯ ನಾಮಪತ್ರ ವಾಪಸ್ ಪಡೆಯಲು ಅವಕಾಶವಿದ್ದು ಪಕ್ಷೇತರರು ನಾಮಪತ್ರ ಹಿಂದಕ್ಕೆ ಪಡೆದರೆ ಕಾಂಗ್ರೆಸ್ ಹಾಗೂ ಬಿಜೆಪಿ ಅಭ್ಯರ್ಥಿಗಳು ಅವಿರೋಧ ಆಯ್ಕೆ ಆಗುವ ಸಾಧ್ಯತೆಗಳು ಇವೆ.

ಇದನ್ನೂ ಓದಿ: ಪುತ್ರನಿಗೆ ಕಾಂಗ್ರೆಸ್ ಟಿಕೆಟ್: ಎ.ಮಂಜು ಅವರಿಗೆ ಗೇಟ್‌ಪಾಸ್‌ ನೀಡಿದ ಬಿಜೆಪಿ

Last Updated : Nov 23, 2021, 10:31 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.