ETV Bharat / state

ಪುನೀತ್​​​ ಸಮಾಧಿ ದರ್ಶನಕ್ಕೆ ವಿಶೇಷ ಪಾದಯಾತ್ರೆ ಆರಂಭಿಸಿದ ಅಪ್ಪು ಅಭಿಮಾನಿ ಕುಟುಂಬ

author img

By

Published : Mar 14, 2022, 3:46 PM IST

ಪುನೀತ್ ಹುಟ್ಟುಹಬ್ಬ ಹಾಗೂ ಜೇಮ್ಸ್ ಚಿತ್ರ ಬಿಡುಗಡೆಗೆ ಜಿಲ್ಲೆಯ ಧರೆಪ್ಪ ಅರ್ಧಾವೂರ ಎಂಬ ಅಭಿಮಾನಿ ತಮ್ಮ ಕುಟುಂಬ ಸಮೇತ ಸಾಕ್ಷಿಯಾಗಲಿದ್ದಾರೆ. ವಿಜಯಪುರ ಜಿಲ್ಲೆಯ ಪುನೀತ್ ಅಭಿಮಾನಿಯ ಪಾದಯಾತ್ರೆ ಹಾಗೂ ಜಾಗೃತಿ ಕಾರ್ಯ ಪುನೀತ್ ಅಭಿಮಾನಿಗಳಲ್ಲಿ ಹರ್ಷವನ್ನು ಮೂಡಿಸಿದೆ.

Dhareppa Family Offering Special Campaign
Dhareppa Family Offering Special Campaign

ವಿಜಯಪುರ: ನಟ ಪುನೀತ್ ಸಮಾಧಿಗೆ ನಿತ್ಯ ಸಾವಿರಾರು ಅಭಿಮಾನಿಗಳು ಭೇಟಿ ನೀಡಿ ದರ್ಶನ ಪಡೆಯುತ್ತಿದ್ದಾರೆ. ಅದೇ ರೀತಿ ಜಿಲ್ಲೆಯ ಧರೆಪ್ಪ ಅರ್ಧಾವೂರ ಎಂಬ ಅಭಿಮಾನಿ ತಮ್ಮ ಕುಟುಂಬ ಸಮೇತವಾಗಿ ಪಾದಯಾತ್ರೆ ಜೊತೆಗೆ ಜನರಲ್ಲಿ ಜಾಗೃತಿ ಮೂಡಿಸುತ್ತಾ ವಿಶೇಷವಾದ ರೀತಿಯಲ್ಲಿ ಅವರ ಸಮಾಧಿಗೆ ಭೇಟಿ ನೀಡಲು ಮುಂದಾಗಿದ್ದಾನೆ.

A Special Campaign From Appu Fan
ಅಪ್ಪು ಅಭಿಮಾನಿ ಕುಟುಂಬದ ಪಾದಯಾತ್ರೆ

ಯಾರಾರು? ಎಷ್ಟು ಜನರಿದ್ದಾರೆ?: ವಿಜಯಪುರ ಜಿಲ್ಲೆಯಿಂದ ಬೆಂಗಳೂರಿಗೆ ಒಟ್ಟು 535 ಕಿ.ಮೀ ಪಾದಯಾತ್ರೆ ಮಾಡುತ್ತಾ ತೆರಳುತ್ತಿರುವುದು ಈ ಅಭಿಮಾನಿಯ ವಿಶೇಷವಾಗಿದೆ. ಧರೆಪ್ಪ ಪತ್ನಿ ವಿದ್ಯಾರಾಣಿ, ಇವರ ಮಕ್ಕಳಾದ ಸೋನಾಲಿ, ಸಮರ್ಥ, ಸೌಜನ್ಯ, ಶ್ರಾವಣಿಮ, ಸಿದ್ದಾರ್ಥ ಹಾಗೂ ಧರೆಪ್ಪನ ಕಿರಿಯ ಸಹೋದರನ ಇಬ್ಬರು ಮಕ್ಕಳಾದ ಲಕ್ಷ್ಮೀಕಾಂತ, ಲಕ್ಷ್ಮೀವಿನಾಯಕ, ಬಾವ ಶಶಿಕುಮಾರ ಮತ್ತು ಆತನ ಸ್ನೇಹಿತ ಆಕಾಶ ಕಾರಿಕೋಳ. ಇವರೆಲ್ಲರೂ ವಿಜಯಪುರದಿಂದ ಕಳೆದ ಮೂರು ದಿನಗಳಿಂದ ಪಾದಯಾತ್ರೆಯನ್ನು ಬೆಳೆಸಿದ್ದಾರೆ.

A Special Campaign From Appu Fan
ಅಪ್ಪು ಅಭಿಮಾನಿ ಕುಟುಂಬದ ಪಾದಯಾತ್ರೆ

ಗಮನ ಸೆಳೆದ ಜನಜಾಗೃತಿ: ಬರೀ ಪಾದಯಾತ್ರೆಯ ಮೂಲಕ ತೆರಳವುದಷ್ಟೇ ಅಲ್ಲ, ಮಾರ್ಗದುದ್ದಕ್ಕೂ ಜನರಲ್ಲಿ ಪುನೀತ್ ರಾಜಕುಮಾರ ಆಶಯಗಳ ಬಗ್ಗೆಯೂ ಜಾಗೃತಿ ಮೂಡಿಸುತ್ತಿದ್ದಾರೆ. ಪುನೀತ್ ರಾಜಕುಮಾರ ಬಯಕೆಯಂತೆ ಕನ್ನಡ ಶಾಲೆಗಳ ಅಭಿವೃದ್ಧಿ, ಅಂಗಾಂಗ ದಾನ ಹಾಗೂ ನೇತ್ರದಾನದ ಕುರಿತು ಧರೆಪ್ಪ ಹಾಗೂ ಇಡೀ ಕುಟುಂಬ ಜಾಗೃತಿ ಮೂಡಿಸುತ್ತಿದೆ. ಅವರ ಜೊತೆಗಿರುವ ಮಾರುತಿ ವ್ಯಾನ್​ಗೆ ಈ ಕುರಿತು ಸ್ಟಿಕ್ಕರ್ ಅಂಟಿಸಿ ಜನರಲ್ಲಿ ಪುನೀತ್ ಅವರ ಆಶಯಗಳ ಬಗ್ಗೆ ಜಾಗೃತಿ ಮೂಡಿಸುತ್ತ ಇವರೆಲ್ಲಾ ಬೆಂಗಳೂರಿನತ್ತ ಹೆಜ್ಜೆ ಹಾಕುತ್ತಿದ್ದಾರೆ.

A Special Campaign From Appu Fan
ಪುನೀತ್​​ ಅವರೊಂದಿಗೆ ಅಭಿಮಾನಿ ಧರೆಪ್ಪ ಹಾಗೂ ಸ್ನೇಹಿತರು

ನಿಕಟ ಸಂಪರ್ಕಹೊಂದಿದ್ದ ಧರೆಪ್ಪ: ಕಳೆದ 15 ವರ್ಷಗಳಿಂದ ಪುನೀತ್ ಅಭಿಮಾನಿಯಾಗಿ ಹಾಗೂ ಪುನೀತ್ ಅವರೊಂದಿಗೆ ನಿಕಟ ಸಂಪರ್ಕ ಹೊಂದಿದ್ದ ಧರೆಪ್ಪ ಪುನೀತ್ ಅವರು ಮೃತಪಟ್ಟಾಗ ಬಹಳ ನೊಂದಿದ್ದರು. ಪುನೀತ್ ಅವರ ನೆನಪು ಹಾಗೇ ಇರಲಿ ಎಂದು ಅಂತ್ಯಕ್ರಿಯೆಯಲ್ಲೂ ಭಾಗಿಯಾಗದೇ ಹಾಗೆಯೇ ನೋವು ನುಂಗಿದ್ದರು. ನಂತರ ಪುನೀತ್ ಅವರಿಗೆ ವಿಶೇಷ ಗೌರವ ಸಲ್ಲಿಸಲು ತೀರ್ಮಾನಿಸಿದ್ದರು. ಅದರಂತೆ ಇದೀಗ ಪುನೀತ್ ಅವರ ಸಮಾಧಿವರೆಗೂ ವಿಜಯಪುರದಿಂದ ಇಡೀ ಕುಟುಂಬದೊಂದಿಗೆ ಪಾದಯಾತ್ರೆ ಬೆಳೆಸಿದ್ದಾರೆ.

A Special Campaign From Appu Fan
ಪುನೀತ್​​ ಅವರೊಂದಿಗೆ ಅಭಿಮಾನಿ ಧರೆಪ್ಪ ಹಾಗೂ ಸ್ನೇಹಿತರು

ಮಾ. 17 ರಂದು ಜೇಮ್ಸ್ ತೆರೆಗೆ: ಧರೆಪ್ಪ ಹಾಗೂ ಅವರ ಕುಟುಂಬವು ಪುನೀತ್ ರಾಜಕುಮಾರ್​ ಅವರ ಜನ್ಮದಿನವಾದ ಮಾರ್ಚ್ 17 ರಂದು ಸಮಾಧಿಗೆ ಭೇಟಿ ನೀಡುವ ಯೋಜನೆ ಹಾಕಿಕೊಂಡಿದ್ದಾರೆ. ಹಾಗೆಯೇ ಪುನೀತ್ ಅಭಿನಯದ ಕೊನೆಯ ಚಿತ್ರ ಜೇಮ್ಸ್ ಮಾರ್ಚ್ 17 ರಂದು ತೆರೆಯ ಮೇಲೆ ಬರಲಿದ್ದು, ಜೇಮ್ಸ್ ಚಿತ್ರ ದಾಖಲೆ ಪ್ರಮಾಣದಲ್ಲಿ ಹಿಟ್ ಆಗಲಿ ಎಂಬುದು ಇವರ ಬಯಕೆಯಾಗಿದೆಯಂತೆ.

A Special Campaign From Appu Fan
ಅಪ್ಪು ಅಭಿಮಾನಿ ಕುಟುಂಬದ ಪಾದಯಾತ್ರೆ

ನಿತ್ಯ 25 ರಿಂದ 30 ಕಿ.ಮೀ ಪ್ರಯಾಣ: ನಿತ್ಯ 25 ರಿಂದ 30 ಕಿ.ಮೀ ಮಾತ್ರ ಪ್ರಯಾಣ ಮಾಡುತ್ತಾರೆ. ಉಳಿದ ಸಮಯದಲ್ಲಿ ವಿಶ್ರಾಂತಿ ಪಡೆಯುತ್ತಾರೆ. ಇವರ ಮಕ್ಕಳಂತೂ ಬಲು ಹುರುಪಿನಿಂದಲೇ ರಸ್ತೆಯಲ್ಲಿ ಹೆಜ್ಜೆ ಹಾಕೋದು ಪುನೀತ್ ರಾಜಕುಮಾರ ಮೇಲಿನ ಅಭಿಮಾನಕ್ಕೆ ಸಾಕ್ಷಿಯಾಗಿದೆ. ಜೊತೆಗೆ ಅಗತ್ಯ ವಸ್ತುಗಳನ್ನು ಓಮ್ನಿ ವ್ಯಾನ್​​ನಲ್ಲಿ ಹಾಕಿಕೊಂಡು ಅದನ್ನು ತಮ್ಮ ಸಂಗಡ ಒಯ್ಯುತ್ತಿದ್ದಾರೆ.

A Special Campaign From Appu Fan
ಅಪ್ಪು ಅಭಿಮಾನಿ ಕುಟುಂಬದ ಪಾದಯಾತ್ರೆ

ಪಾದಯಾತ್ರೆಗೆ ಎಲ್ಲೆಡೆ ಮೆಚ್ಚುಗೆ: ಧರೆಪ್ಪ ಅರ್ಧಾವೂರ ಪಾದಯಾತ್ರೆಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ. ಧರೆಪ್ಪನ ಸ್ನೇಹಿತರು ಪಾದಯಾತ್ರೆಯಲ್ಲಿ ಪಾಲ್ಗೊಂಡು, ಪಾದಯಾತ್ರೆ ಯಶಸ್ವಿಯಾಗಲಿ ಎಂದು ಹಾರೈಸಿದ್ದಾರೆ. ಮಾರ್ಗದುದ್ದಕ್ಕೂ ಪುನೀತ್ ಅವರ ಅಭಿಮಾನಿಗಳು ಇವರಿಗೆ ಊಟೋಪಚಾರದ ವ್ಯವಸ್ಥೆ ಮಾಡುತ್ತಿದ್ದಾರೆ.

A Special Campaign From Appu Fan
ಪುನೀತ್​​ ಅವರೊಂದಿಗೆ ಅಭಿಮಾನಿ ಧರೆಪ್ಪ ಹಾಗೂ ಸ್ನೇಹಿತರು

ಯಾವ ಯಾವ ಮಾರ್ಗ? ಕಳೆದ ಮೂರು ದಿನಗಳಿಂದ ನಡೆಯುತ್ತಾ ಸಾಗಿರೋ ಧರೆಪ್ಪ ಹಾಗೂ ಕುಟುಂಬ ಇದೀಗ ವಿಜಯಪುರ ಜಿಲ್ಲೆಯ ಗಡಿ ದಾಟಿ ನೆರೆಯ ಬಾಗಲಕೋಟೆ ಜಿಲ್ಲೆಯನ್ನು ಪ್ರವೇಶಿಸಿದೆ. ಅಲ್ಲಿಂದ ಕೊಪ್ಪಳ ಜಿಲ್ಲೆ, ವಿಜಯನಗರ ಜಿಲ್ಲೆ, ಚಿತ್ರದುರ್ಗ, ತುಮಕೂರು ಜಿಲ್ಲೆ ಮೂಲಕ ಬೆಂಗಳೂರು ತಲುಪಲಿದ್ದಾರೆ.

ಇದನ್ನೂ ಓದಿ: 'ದಿ ಕಾಶ್ಮೀರ್​​ ಫೈಲ್ಸ್​​' ಸಿನಿಮಾ ವೀಕ್ಷಣೆಗೆ ಪೊಲೀಸರಿಗೆ ರಜೆ ನೀಡಿದ ಮಧ್ಯಪ್ರದೇಶ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.