ETV Bharat / state

ಭಾರೀ ಮಳೆಗೆ ತುಂಬುತ್ತಿವೆ ಉ.ಕನ್ನಡದ ಜಲಾಶಯಗಳು: ಸಂಭವನೀಯ ನೆರೆ ನಿರ್ವಹಣೆಗೆ ಜಿಲ್ಲಾಡಳಿತ ಸಜ್ಜು

author img

By

Published : Jun 22, 2021, 12:08 PM IST

ಜಿಲ್ಲೆಯಲ್ಲಿ ಸಂಭವನೀಯ ನೆರೆ ನಿರ್ವಹಣೆಗೆ ಉತ್ತರಕನ್ನಡ ಜಿಲ್ಲಾಡಳಿತ ಸಜ್ಜಾಗಿದೆ. ಪ್ರವಾಹ ಸಂಭವಿಸಬಹುದಾದ 166 ಗ್ರಾಮಗಳ ಜೊತೆಗೆ 234 ಕಡೆಗಳಲ್ಲಿ ಕಾಳಜಿ ಕೇಂದ್ರಗಳನ್ನು ಸ್ಥಾಪಿಸಬಹುದಾದ ಸ್ಥಳಗಳನ್ನು ಗುರುತಿಸಲಾಗಿದೆ. ಕೋವಿಡ್​ ನಿಯಮಗಳೊಂದಿಗೆ 16,820 ಮಂದಿಗೆ ಆಶ್ರಯ ನೀಡಬಹುದೆಂದು ಅಂದಾಜಿಸಲಾಗಿದೆ.

uttara kannada Reservoir
ಉತ್ತರಕನ್ನಡದಲ್ಲಿ ಭಾರೀ ಮಳೆಗೆ ತುಂಬುತ್ತಿವೆ ಜಲಾಶಯಗಳು

ಕಾರವಾರ: ಕೊರೊನಾ ಪ್ರಕರಣಗಳಲ್ಲಿ ರಾಜ್ಯದಲ್ಲೇ ಮೊದಲ ಸ್ಥಾನದಲ್ಲಿದ್ದ ಉತ್ತರಕನ್ನಡ ಜಿಲ್ಲೆಯಲ್ಲಿ ಸದ್ಯ ಕೊರೊನಾ ನಿಯಂತ್ರಣಕ್ಕೇನೋ ಬರುತ್ತಿದೆ‌. ಸೋಂಕು ಅಟ್ಟಹಾಸ ಇನ್ನೇನು ಕಡಿಮೆಯಾಯಿತು ಎನ್ನುವಷ್ಟರಲ್ಲಿ ಇದೀಗ ವರುಣನ ಅಬ್ಬರ ಹೆಚ್ಚಾಗಿದೆ.

ಮಳೆಗಾಲದ ಆರಂಭದಲ್ಲೇ ಸುರಿದ ಧಾರಾಕಾರ ಮಳೆಗೆ ಜಿಲ್ಲೆಯ ಜಲಾಶಯಗಳು ಭರ್ತಿಯಾಗುವ ಹಂತ ತಲುಪಿವೆ. ಪರಿಣಾಮ, ಸಂಭವನೀಯ ನೆರೆ ನಿರ್ವಹಣೆಗೆ ಜಿಲ್ಲಾಡಳಿತ ಈಗಾಗಲೇ ಯೋಜನೆ ರೂಪಿಸಿದೆ.

ಸಂಭವನೀಯ ನೆರೆ ನಿರ್ವಹಣೆಗೆ ಜಿಲ್ಲಾಡಳಿತ ಸಜ್ಜು

ಕಳೆದೊಂದು ವಾರದಿಂದ ಉತ್ತರ ಕನ್ನಡದಲ್ಲಿ ಮಳೆಯ ಆರ್ಭಟ ಜೋರಾಗಿದೆ. ಕರಾವಳಿ ತಾಲೂಕುಗಳಲ್ಲಿ ಆರಂಭವಾಗಿದ್ದ ಮಳೆ ಇದೀಗ ಘಟ್ಟದ ಮೇಲಿನ ತಾಲೂಕುಗಳಲ್ಲೂ ಅಬ್ಬರಿಸುತ್ತಿದ್ದು, ಜಿಲ್ಲೆಯ ಜಲಾಶಯಗಳಿಗೆ ಭರಪೂರ ನೀರು ಹರಿದು ಬರುತ್ತಿದೆ. ಮಳೆಗಾಲದ ಆರಂಭದಲ್ಲೇ ಜಲಾಶಯಗಳು ತುಂಬಿಕೊಳ್ಳುತ್ತಿದ್ದು ಜಲಾಶಯಗಳಿಂದ ನೀರು ಹೊರಬಿಡಲಾಗುತ್ತಿದೆ. ಹೀಗಾಗಿ ನದಿ ಪಾತ್ರದ ನಿವಾಸಿಗಳಲ್ಲಿ ನೆರೆ ಆತಂಕ ಮನೆ ಮಾಡಿದೆ.

ಜಿಲ್ಲಾಧಿಕಾರಿ ಪ್ರತಿಕ್ರಿಯೆ

ಜಿಲ್ಲೆಯಲ್ಲಿ ಕಳೆದೆರಡು ವರ್ಷಗಳಿಂದ ಮಳೆಗಾಲದಲ್ಲಿ ನೆರೆಯ ಪರಿಸ್ಥಿತಿ ಎದುರಿಸಿದ್ದ ಜನರು, ಮತ್ತೆಲ್ಲಿ ನೆರೆ ಸೃಷ್ಟಿಯಾಗುವುದೋ ಎಂಬ ಆತಂಕಕ್ಕೊಳಗಾಗಿದ್ದರು. ಸದ್ಯ ಜಿಲ್ಲೆಯಲ್ಲಿ ಪ್ರವಾಹ ಸಂಭವಿಸಬಹುದಾದ 166 ಗ್ರಾಮಗಳ ಜೊತೆಗೆ 234 ಕಡೆಗಳಲ್ಲಿ ಕಾಳಜಿ ಕೇಂದ್ರಗಳನ್ನು ಸ್ಥಾಪಿಸಬಹುದಾದ ಸ್ಥಳಗಳನ್ನೂ ಗುರುತಿಸಲಾಗಿದೆ. ಈ ಕಾಳಜಿ ಕೇಂದ್ರಗಳಲ್ಲಿ ಕೊರೊನಾ ಮಾರ್ಗಸೂಚಿಗಳ ಪಾಲನೆಯೊಂದಿಗೆ ಒಟ್ಟು 16,820 ಮಂದಿಗೆ ಆಶ್ರಯ ನೀಡಬಹುದು ಎಂದು ಅಂದಾಜಿಸಲಾಗಿದೆ. ಅಲ್ಲದೇ ಈಗಾಗಲೇ ಜಲಾಶಯಗಳಲ್ಲಿ ನೀರಿನ ಭರ್ತಿ ಹಾಗೂ ನೀರು ಹೊರಬಿಡುವಿಕೆ ಕುರಿತಾಗಿಯೂ ತಂಡಗಳನ್ನು ರಚಿಸಿಕೊಳ್ಳಲಾಗಿದ್ದು, ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿರುವುದಾಗಿ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ತಿಳಿಸಿದ್ದಾರೆ.

ಕಳೆದ ಮೂರ್ನಾಲ್ಕು ದಿನಗಳಿಂದ ಸತತವಾಗಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಜಲಾಶಯಗಳಿಗೆ ಭಾರೀ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಕಾಳಿ ನದಿ ವ್ಯಾಪ್ತಿಯ ಕದ್ರಾ ಜಲಾಶಯ ಗರಿಷ್ಠ 34.50 ಮೀಟರ್ ಸಾಮರ್ಥ್ಯ ಹೊಂದಿದ್ದು, ಈಗಾಗಲೇ 31.32 ಮೀಟರ್ ನೀರು ಸಂಗ್ರಹವಾಗಿದೆ. ಹೀಗಾಗಿ ಕಳೆದ ಮೂರು ದಿನಗಳಿಂದ ಸತತವಾಗಿ ನಿಗದಿತ ಪ್ರಮಾಣದಲ್ಲಿ ನೀರನ್ನು ಹೊರಬಿಡಲಾಗುತ್ತಿದ್ದು, 32 ಮೀಟರ್‌ಗಿಂತ ಕೆಳಗೆ ಇರಿಸುವಂತೆ ಸೂಚನೆ ನೀಡಲಾಗಿದೆ.

ಇದನ್ನೂ ಓದಿ: ಮುಂಗಾರು ಶುರುವಾದ್ರೂ ಮುಗಿಯದ ಉಪ ಕಾಲುವೆಗಳ ಜೀರ್ಣೋದ್ಧಾರ ಕಾರ್ಯ

ಜಿಲ್ಲಾಡಳಿತದ ಕಾರ್ಯಕ್ಕೆ ಸಾರ್ವಜನಿಕರಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಜಲಾಶಯಗಳಲ್ಲಿ ನೀರು ತುಂಬಿದ ಮೇಲೆ ಒಮ್ಮೆಲೆ ಬಿಡುವ ಬದಲು ಹಂತ ಹಂತವಾಗಿ ಬಿಡಬೇಕು. ನೆರೆ ಪ್ರವಾಹ ನಿಯಂತ್ರಣಕ್ಕೆ ಈ ರೀತಿ ಹೆಚ್ಚು ಮುಂಜಾಗ್ರತೆ ಕ್ರಮಗಳನ್ನು ಕೈಗೊಂಡಿರುವುದು ಸಂಭವನೀಯ ಹಾನಿ ತಡೆಗಟ್ಟಲು ಸಹಕಾರಿಯಾಗಿದೆ ಎನ್ನುತ್ತಾರೆ ಸ್ಥಳೀಯ ನಿವಾಸಿ ದೇವರಾಜ ನಾಯ್ಕ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.