ETV Bharat / state

ಭಟ್ಕಳ: ಬುಲೆಟ್ ಬೈಕ್ ಕದ್ದ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾದ ಪೊಲೀಸರು

author img

By

Published : Apr 8, 2023, 5:44 PM IST

ಮನೆ ಮುಂದೆ ನಿಲ್ಲಿಸಿದ್ದ ಬೈಕ್​ ಕದ್ದು ಮಂಗಳೂರಿಗೆ ಪರಾರಿಯಾಗಿದ್ದ ಕಳ್ಳರನ್ನು ಭಟ್ಕಳ ನಗರ ಠಾಣೆಯ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

the-bhatkal-police-arrest-the-accused-who-stole-the-bullet-bike
ಭಟ್ಕಳ: ಬುಲೆಟ್ ಬೈಕ್ ಕದ್ದ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾದ ಪೊಲೀಸರು

ಭಟ್ಕಳ (ಉತ್ತರ ಕನ್ನಡ): ಮನೆ ಮುಂದೆ ನಿಲ್ಲಿಸಿದ್ದ ಬುಲೆಟ್ ಬೈಕ್ ಕಳ್ಳತನ ಮಾಡಿಕೊಂಡು ಹೋಗಿದ್ದ ಇಬ್ಬರು ಆರೋಪಿಗಳನ್ನು ಭಟ್ಕಳ ನಗರ ಠಾಣೆ ಪೊಲೀಸರು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಕಳ್ಳತನದ ಆರೋಪಿಯನ್ನು ಉಡುಪಿ ಮೂಲದ ಕುಂಜೆಬೆಟ್ಟ ನಿವಾಸಿ ಇಮ್ರಾಜ್ ಉಸ್ಮಾನ್ ಸಾಹೇಬ್ ಹಾಗೂ ಬಂಟ್ವಾಳ ಫರಂಗಿಪೇಟೆ ಮೂಲದ ಮಹ್ಮದ ನೌಪಾಲ್ ಎಂದು ತಿಳಿದು ಬಂದಿದೆ.

ಮಾರ್ಚ್ 14ರ ನಸುಕಿನ ವೇಳೆ ಬಂದರ ರೋಡ್ 2ನೇ ಕ್ರಾಸ್​ನಲ್ಲಿರುವ ನೀಲಾವರ ಅಪಾರ್ಟ್​ಮೆಂಟ್ ಎದುರು ನಿಲ್ಲಿಸಿದ್ದ ಶಝೀಬ್ ಹಶಿಮ್ ಎಂಬುವರ ಬುಲೆಟ್ ಬೈಕ್ ಕಳ್ಳತನವಾಗಿತ್ತು. ಬಳಿಕ ಈ ಕುರಿತು ಶಝೀಬ್ ಹಶಿಮ್ ಸಹೋದರ ಭಟ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡ ಭಟ್ಕಳ ನಗರ ಠಾಣೆಯ ಪೊಲೀಸರು ತನಿಖೆ ಕೈಗೊಂಡ ವೇಳೆ ಬೈಕ್ ಕಳ್ಳತನ ಮಾಡಿದ ಕಳ್ಳರು ಕಳ್ಳತನವಾದ ಬೆಳಗ್ಗೆ 7.18ರ ಸುಮಾರಿಗೆ ಶಿರೂರು ಟೋಲ್ ಗೇಟ್ ಬಳಿ ಕಾರೊಂದಕ್ಕೆ ಕಳ್ಳತನ ಮಾಡಿದ ಬುಲೆಟ್ ಬೈಕ್​ ಅನ್ನು ಕಟ್ಟಿಕೊಂಡು ಹೋಗುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಕಳ್ಳರ ಜಾಡು ಹಿಡಿದ ಪೊಲೀಸರು ಬೈಕ್​ ಕದ್ದ ಆರೋಪಿಗಳನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ಬೈಕ್ ಕಳ್ಳತನವಾಗಿರುವ ಬಗ್ಗೆ ಭಟ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಆಸಿಫ್ ಹಾಸಿಮ್ ಶೇಖ್ ಮಾತನಾಡಿ ‘‘ಬೈಕ್ ಕಳ್ಳತನ ಮಾಡಿಕೊಂಡು ಮಂಗಳೂರಿಗೆ ಹೋದ ಕಳ್ಳರು ಮಾರ್ಚ್ 17 ರಂದು ಬೈಕ್ ಚಲಾಯಿಸುತ್ತಿದ್ದ ವೇಳೆ ಅಲ್ಲಿನ ಸಂಚಾರಿ ಪೊಲೀಸರು ದಾಖಲೆ ಇಲ್ಲದೆ ಬೈಕ್ ಚಲಾಯಿಸುತ್ತಿರುವ ಹಿನ್ನೆಲೆ ಬೈಕ್ ವಶಕ್ಕೆ ಪಡೆದು ಕದ್ರಿ ಪೊಲೀಸ್ ಠಾಣೆಯಲ್ಲಿ ಇಡಲಾಗಿತ್ತು. ಬಳಿಕ ಮತ್ತೆ ಮಾರ್ಚ್ 18 ರಂದು ಕಳ್ಳರು ಅಲ್ಲಿಂದ ಬೈಕ್ ಕಳ್ಳತನ ಮಾಡಿದ್ದಾರೆ. ನಂತರ ಬೈಕ್ ಮಾಲೀಕನ ಆರ್​​ಸಿ (ನೋಂದಣಿ ಪ್ರಮಾಣಪತ್ರದ ಪ್ರತಿ) ಪರಿಶೀಲಿಸಿದಾಗ ಭಟ್ಕಳದಲ್ಲಿ ಬೈಕ್ ಕಳ್ಳತನವಾಗಿ ಬಗ್ಗೆ ಮಾಹಿತಿ ಪಡೆದು ಆರೋಪಿಗಳನ್ನು ಬಂಧಿಸಿದ್ದಾರೆ’’ ಎಂದು ಮಾಹಿತಿ ನೀಡಿದ್ದಾರೆ.

ಸಂಚಾರ ನಿಯಮ ಉಲ್ಲಂಘನೆ- ಚಾಕು ತೋರಿಸಿ ಬೆದರಿಕೆ: ವಾಹನ ಚಾಲನೆ ಮಾಡುತ್ತಿರುವ ವೇಳೆ ಫೋನ್‌ನಲ್ಲಿ ಮಾತನಾಡುತ್ತ ಸ್ಕೂಟರಿಗೆ ಡಿಕ್ಕಿ ಹೊಡೆದ ಟಾಟಾ ಏಸ್ ಚಾಲಕನೊಬ್ಬ, ಈ ಬಗ್ಗೆ ಪ್ರಶ್ನಿಸಿದ ದ್ವಿಚಕ್ರ ವಾಹನ ಸವಾರನಿಗೆ ಚಾಕು ತೋರಿಸಿ ಬೆದರಿಕೆ ಹಾಕಿರುವ ಘಟನೆ ನಿನ್ನೆ ಮದ್ಯಾಹ್ನ ಬೆಂಗಳೂರಿನ ರಾಮಮೂರ್ತಿ‌ನಗರದ ಬಳಿ ನಡೆದಿತ್ತು. ತಮ್ಮ ತಂದೆಯೊಂದಿಗೆ ತೆರಳುತ್ತಿದ್ದ ಪ್ರಕಾಶ್ ಎಂಬುವರ ಸ್ಕೂಟರಿನ ಬಲಭಾಗದಲ್ಲಿ ಸಾಗುತ್ತಿದ್ದ ಟಾಟಾ ಏಸ್ ಚಾಲಕ ಫೋನ್‌ನಲ್ಲಿ ಮಾತನಾಡುತ್ತ ಬಂದು ಡಿಕ್ಕಿ ಹೊಡೆದಿದ್ದಾನೆ.

ಇದನ್ನ ಪ್ರಶ್ನಿಸಿದ್ದಕ್ಕೆ ಸಿಟ್ಟಿಗೆದ್ದ ಆರೋಪಿ ಚಾಲಕ ತನ್ನ ವಾಹನದಿಂದ ಇಳಿದು ಚಾಕು ಹಿಡಿದು ಸಾರ್ವಜನಿಕರ ಎದುರೇ ಬೆದರಿಕೆ ಹಾಕಿದ್ದಾನೆ. ಘಟನೆ ಕುರಿತು ಪ್ರಕಾಶ್ ಟ್ವಿಟರ್​ನಲ್ಲಿ ಬರೆದುಕೊಂಡಿದ್ದು, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ರಾಮಮೂರ್ತಿನಗರ ಠಾಣಾ ಪೊಲೀಸರು ಆರೋಪಿಗಾಗಿ ಹುಡುಕಾಟ ಆರಂಭಿಸಿದ್ದಾರೆ‌.

ಇದನ್ನೂ ಓದಿ: 2 ವರ್ಷದ ಮಗುವಿನ ಮೇಲೆ ಹರಿದ ಬಸ್, ಮಗು ಸಾವು; ಗ್ರಾಮಸ್ಥರ ಆಕ್ರೋಶಕ್ಕೆ ಬಸ್ಸಿನ ಗಾಜು ಪುಡಿ ಪುಡಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.