ETV Bharat / state

ಸಿಎಂ ಸಿದ್ದರಾಮಯ್ಯಗೆ ಕೃಷಿ ಕಾಯ್ದೆ ವಾಪಸ್ ಪಡೆಯುವ ಧಮ್​ ಇದೆಯಾ?: ಕೋಡಿಹಳ್ಳಿ ಚಂದ್ರಶೇಖರ್​ ಚಾಲೆಂಜ್​

author img

By

Published : Jul 21, 2023, 8:57 PM IST

ಕೃಷಿ ಕಾಯ್ದೆ ವಾಪಸ್ ಪಡೆಯುವ ಬಗ್ಗೆ ಕಾಂಗ್ರೆಸ್ ಸರ್ಕಾರ ಬಂದು ಇಷ್ಟು ದಿನಗಳು ಕಳೆದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡುತ್ತಿಲ್ಲ ಎಂದು ಕೋಡಿಹಳ್ಳಿ ಚಂದ್ರಶೇಖರ್​ ಹೇಳಿದರು.

ರೈತ ಸಂಘ ಮತ್ತು ರಾಜ್ಯ ಹಸಿರುಸೇನೆ ಮುಖ್ಯಸ್ಥ ಕೋಡಿಹಳ್ಳಿ ಚಂದ್ರಶೇಖರ್
ರೈತ ಸಂಘ ಮತ್ತು ರಾಜ್ಯ ಹಸಿರುಸೇನೆ ಮುಖ್ಯಸ್ಥ ಕೋಡಿಹಳ್ಳಿ ಚಂದ್ರಶೇಖರ್

ಕೋಡಿಹಳ್ಳಿ ಚಂದ್ರಶೇಖರ್ ಚಾಲೆಂಜ್​

ಶಿರಸಿ (ಉತ್ತರ ಕನ್ನಡ) : ಕೃಷಿ ಕಾಯ್ದೆಯನ್ನು ಕೇಂದ್ರ ಸರ್ಕಾರವೇ ವಾಪಸ್ ಪಡೆದಿದ್ದು, ರಾಜ್ಯದಲ್ಲಿ ಕೃಷಿ ಕಾಯ್ದೆಯನ್ನು ವಾಪಸ್ ಪಡೆಯುವ ಧಮ್​ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಇದೆಯಾ ಎಂದು ರೈತ ಸಂಘ ಮತ್ತು ರಾಜ್ಯ ಹಸಿರುಸೇನೆ ಮುಖ್ಯಸ್ಥ ಕೋಡಿಹಳ್ಳಿ ಚಂದ್ರಶೇಖರ್ ಚಾಲೆಂಜ್​ ಮಾಡಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಸುದ್ದಿಗಾರರೊಂದಿಗೆ ಕೃಷಿ ಕಾಯ್ದೆ ಸಂಬಂಧವಾಗಿ ಮಾತನಾಡಿದರು.

ಹಿಂದೆ ಬಿ.ಎಸ್​ ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದ ವೇಳೆ ಸುಗ್ರಿವಾಜ್ಞೆ ಮೂಲಕ ರಾಜ್ಯದಲ್ಲಿ ಈ ಕಾಯ್ದೆ ಅನುಷ್ಠಾನಗೊಳಿಸಲಾಗಿತ್ತು. ಬಳಿಕ ಕೇಂದ್ರ ಸರ್ಕಾರ ವಾಪಸ್ ಪಡೆದರೂ ರಾಜ್ಯ ಸರ್ಕಾರ ಕಾಯ್ದೆಯನ್ನು ಪಾಸ್ ಪಡೆದಿರಲಿಲ್ಲ. ಅಂದು ವಿರೋಧ ಪಕ್ಷದ ನಾಯಕನಾಗಿದ್ದ ಸಿದ್ದರಾಮಯ್ಯ ನಮ್ಮನ್ನು ಕರೆಸಿ ಸುದೀರ್ಘವಾಗಿ ಚರ್ಚೆ ಮಾಡಿದ್ದರ ಪರಿಣಾಮವಾಗಿ ನಮ್ಮ ಕಾರ್ಯಕರ್ತರು ಕಾಂಗ್ರೆಸ್​ ಪಕ್ಷದ ಭಾವುಟ ಹಿಡಿಯದೇ, ಕಾಂಗ್ರೆಸ್​ಗೆ ಮತ ನೀಡಿದ್ದಾರೆ. ಕಾರಣ ಸಿದ್ದರಾಮಯ್ಯ ಕೊಟ್ಟ ಮಾತು. ಆದರೆ, ಕಾಂಗ್ರೆಸ್ ಸರ್ಕಾರ ಬಂದು ಇಷ್ಟು ದಿನಗಳು ಕಳೆದರೂ ಕಾಯ್ದೆ ವಾಪಸ್ ಪಡೆಯುವ ಬಗ್ಗೆ ಸಿದ್ದರಾಮಯ್ಯ ಮಾತನಾಡುತ್ತಿಲ್ಲ. ಅನಗತ್ಯ ಕಾಲಹರಣ ಮಾಡುವ ಮುಖ್ಯಮಂತ್ರಿ ಅಂದು ನೀಡಿದ್ದ ಭರವಸೆ ಈಡೇರಿಸುವ ಧಮ್ ಇದೆಯಾ ಎಂದರು.

ಕೃಷಿ ಕಾಯ್ದೆ ಕಾರ್ಪೊರೇಟರ್​ಗೆ ಪೂರಕವಾಗಿದ್ದು, ಕಾಯ್ದೆ ಮುಂದುವರಿದಲ್ಲಿ ಮುಂದಿನ 10 ವರ್ಷಗಳಲ್ಲಿ ಶೇ 75ರಷ್ಟು ರೈತರು ಕೃಷಿ ಬಿಡಬೇಕಾಗುತ್ತದೆ. ಕೃಷಿ, ಮಾರುಕಟ್ಟೆ, ಹೈನುಗಾರಿಕೆ ಕಾರ್ಪೊರೇಟ್ ವ್ಯಾಪ್ತಿಗೆ ಹೋಗಬಾರದು. ಈ ಹಿಂದೆ ಬಸವರಾಜ ಬೊಮ್ಮಾಯಿ ಸರ್ಕಾರ ವಾಪಸ್ ಪಡೆಯಲು ಅನಗತ್ಯ ಕಾಲಹರಣ ಮಾಡಿದೆ. ಈಗ ಶುರುವಾಗಿರುವ ಅಧಿವೇಶನದಲ್ಲೂ ಎಪಿಎಂಸಿ ಕಾಯ್ದೆ ಹೊರತಾಗಿ ಕೃಷಿ ಕಾಯ್ದೆ ಬಗ್ಗೆ ಮಾತನಾಡುತ್ತಿಲ್ಲ. ಪದೇ ಪದೆ ಈ ವಿಷಯ ಮುಂದೆ ಹಾಕುತ್ತಿದ್ದಾರೆ. ಸಿದ್ದರಾಮಯ್ಯನವರೇ, ನಿಮಗೂ ಬಿಜೆಪಿಗೂ ಹೊಂದಾಣಿಕೆ ಇದ್ಯಾ? ಎಂದು ಚಂದ್ರಶೇಖರ್​ ಪ್ರಶ್ನಿಸಿದ್ದಾರೆ.

ಇದೇ ವೇಳೆ ಗೋಹತ್ಯಾ ನಿಷೇಧ ಕಾನೂನು ಕುರಿತಂತೆ ಚಂದ್ರಶೇಖರ್​ ಮಾತನಾಡಿ ಗೋಹತ್ಯಾ ನಿಷೇಧ ಕಾನೂನನ್ನು ಭಾವನಾತ್ಮಕವಾಗಿ ನೋಡುವುದನ್ನು ಬಿಡಬೇಕು. ರೈತರ ಆರ್ಥಿಕ ಸ್ಥಿತಿಯ ಮೇಲೆ ಪರಿಣಾಮ ಬೀರಬಹುದಾದ ಯಾವುದೇ ಕಾನೂನು ಜಾರಿಗೊಳಿಸಬಾರದು. ಗೋಹತ್ಯೆ ನಿಷೇಧ ಕಾನೂನು ಪರವಾಗಿ ಸ್ವಾಮೀಜಿಗಳೂ ಮಾತನಾಡಲು ಆರಂಭಿಸಿದ್ದಾರೆ. ಇದು ರೈತರ ವಿಷಯ, ಸ್ವಾಮೀಜಿಗಳು ಹಾಗೂ ರಾಜಕೀಯ ನಾಯಕರು ಈ ವಿಷಯದಲ್ಲಿ ತಲೆಹಾಕಬೇಡಿ ಎಂದರು.

ಗೋ ಹತ್ಯೆ ನಿಷೇಧದ ಹೆಸರಿನಲ್ಲಿ ಹಸು ಸಾಗಾಟ ತಡೆಯಲಾಗುತ್ತಿದೆ. ನಿಜವಾಗಲೂ ಹತ್ಯೆಗಾಗಿ ಒಯ್ಯಲಾಗುತ್ತಿತ್ತಾ ಎಂಬ ಪರಿಶೀಲನೆ ಆಗುತ್ತಿಲ್ಲ. ಗೋಶಾಲೆಯ ಸ್ಥಿತಿ ಗತಿ ಬಗ್ಗೆ ಪರಿಶೀಲನೆ ಆಗುತ್ತಿಲ್ಲ. ಗೋಹತ್ಯಾ ನಿಷೇಧ ಕಾನೂನಿನ ವಿಷಯದಲ್ಲಿ ಸರ್ಕಾರ ಅಥವಾ ಸ್ವಾಮೀಜಿಗಳು ನಿರ್ಧರಿಸದೇ ಈ ವಿಷಯವನ್ನು ರೈತರಿಗೇ ಬಿಡಬೇಕು ಎಂದು ಆಗ್ರಹಿಸಿದರು. ಅಮೆರಿಕದಲ್ಲಿ 11 ವರ್ಷ ಭಾರತಕ್ಕೆ ಪೂರೈಸಬಹುದಾದಷ್ಟು ಹಾಲು ಉತ್ಪನ್ನ ಇದೆ. ಅವರಿಗೆ ಭಾರತ ಮಾರುಕಟ್ಟೆ ಅಗತ್ಯವಿದೆ. ಹೀಗಾಗಿ, ಇಲ್ಲಿಯ ಹೈನುಗಾರಿಕೆ ನಾಶ ಮಾಡುವ ಹುನ್ನಾರ ನಡೆದಿದೆ ಎಂದು ಚಂದ್ರಶೇಖರ್​ ಆರೋಪಿಸಿದರು.

ಇದನ್ನೂ ಓದಿ : ಸಿಎಂ ಸಿದ್ದರಾಮಯ್ಯನವರೇ ಪರಿಶೀಲನೆ ಪದ ಕೈಬಿಟ್ಟು, ರೈತ ವಿರೋಧಿ ಕಾಯ್ದೆಗಳನ್ನು ರದ್ದುಗೊಳಿಸಿ: ಕೋಡಿಹಳ್ಳಿ ಚಂದ್ರಶೇಖರ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.