ETV Bharat / state

ತಾಳಿ, ಕಾಲುಂಗುರ ತೆಗಿಸಿದ್ದು ಖಂಡನೀಯ, ಕೋರ್ಟ್ ಮೊರೆ ಹೋಗಲು ನಿರ್ಧಾರ: ರೂಪಾಲಿ ನಾಯ್ಕ

author img

By ETV Bharat Karnataka Team

Published : Nov 7, 2023, 8:47 AM IST

ಕೆಪಿಎಸ್​ಸಿ ಪರೀಕ್ಷೆ ಬರೆಯಲು ಬಂದಿದ್ದ ಮಹಿಳೆಯರ ಮಂಗಳ ಸೂತ್ರ, ಕಿವಿಯೋಲೆ, ಕಾಲುಂಗುರ ತೆಗಿಸಿರುವುದು ಖಂಡನೀಯ. ಈ ಸಂಬಂಧ ನ್ಯಾಯಾಲಯ ಮೆಟ್ಟಿಲೇರುವುದಾಗಿ ಮಾಜಿ ಶಾಸಕಿ ರೂಪಾಲಿ ಎಸ್. ನಾಯ್ಕ್ ಹೇಳಿದ್ದಾರೆ.

removal-of-thali-and-anklets-at-kpsc-exam-center-is-condemnable-former-mla-rupali-nayka
ತಾಳಿ, ಕಾಲುಂಗುರ ತೆಗಿಸಿದ್ದು ಖಂಡನೀಯ.. ನ್ಯಾಯಾಲಯ ಮೆಟ್ಟಿಲೇರಲು ನಿರ್ಧಾರ : ಮಾಜಿ ಶಾಸಕಿ ರೂಪಾಲಿ ನಾಯ್ಕ

ಕಾರವಾರ(ಉತ್ತರಕನ್ನಡ): ಕಲಬುರಗಿಯಲ್ಲಿ ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ಪರೀಕ್ಷೆ ಬರೆಯಲು ಬಂದಿದ್ದ ಮಹಿಳೆಯರ ಮಂಗಲ ಸೂತ್ರ, ಕಿವಿಯೋಲೆ, ಕಾಲುಂಗರ ತೆಗಿಸುವ ಮೂಲಕ ಮಾನಸಿಕ ಹಿಂಸೆ ಹಾಗೂ ದೌರ್ಜನ್ಯ ನಡೆಸಲಾಗಿದೆ ಎಂದು ಕಾರವಾರ ಅಂಕೋಲಾ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕಿ ರೂಪಾಲಿ ಎಸ್.ನಾಯ್ಕ ಆಕ್ರೋಶ ಹೊರಹಾಕಿದ್ದಾರೆ. ಈ ಸಂಬಂಧ ನ್ಯಾಯಾಲಯದ ಮೆಟ್ಟಿಲೇರುವುದಾಗಿ ತಿಳಿಸಿದ್ದಾರೆ.

ನಮ್ಮ ಸಂಸ್ಕೃತಿ, ಸಂಪ್ರದಾಯದಲ್ಲಿ ಮಹಿಳೆಗೆ ತಾಳಿ, ಕಿವಿಯೋಲೆ, ಕಾಲುಂಗುರಕ್ಕೆ ತುಂಬಾ ಮಹತ್ವ ಇದೆ. ಪರೀಕ್ಷಾ ಕೇಂದ್ರ ಪ್ರವೇಶಿಸುವ ಮುನ್ನ ಇವುಗಳನ್ನು ತೆಗೆಯುವ ಮೂಲಕ ಮಹಿಳೆಯರನ್ನು ಮಾನಸಿಕವಾಗಿ ಕುಗ್ಗಿಸಲಾಗಿದೆ. ಕೇವಲ ದೈಹಿಕವಾಗಿ ಹಲ್ಲೆ ನಡೆಸುವುದಷ್ಟೇ ದೌರ್ಜನ್ಯ ಅಲ್ಲ. ತಾಳಿಯನ್ನು ತೆಗೆಸುವ ಮೂಲಕ ಮಹಿಳೆಯರ ಮೇಲೆ ಮಾನಸಿಕವಾಗಿ ದೌರ್ಜನ್ಯ ನಡೆಸಲಾಗಿದೆ. ಒಬ್ಬ ಮಹಿಳಾ ಮಾಜಿ ಜನಪ್ರತಿನಿಧಿಯಾಗಿ ನಾನು ಇದನ್ನು ತೀವ್ರವಾಗಿ ಖಂಡಿಸುವುದಾಗಿ ರೂಪಾಲಿ ಎಸ್.ನಾಯ್ಕ ಹೇಳಿದರು.

ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಮೇಲೆ ನಮ್ಮ ನಂಬಿಕೆ, ಆಚಾರ, ಸಂಪ್ರದಾಯಗಳ ಮೇಲೆ ನಿರಂತರ ದೌರ್ಜನ್ಯ ನಡೆಯುತ್ತಿದೆ. ಕಲಬುರಗಿಯ ಪರೀಕ್ಷಾ ಕೇಂದ್ರದಲ್ಲೂ ನಡೆದಿರುವುದು ಅದರ ಮುಂದುವರಿದ ಭಾಗ. ಈ ಬಗ್ಗೆ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಕೆಪಿಎಸ್​ಸಿ ಪರೀಕ್ಷಾ ನಿಯಮಾವಳಿಗಳಲ್ಲಿ ತಾಳಿ, ಕಿವಿಯೋಲೆ, ಕಾಲುಂಗುರಗಳನ್ನು ತೆಗೆಯಬೇಕೆಂದು ಎಲ್ಲೂ ಹೇಳಿಲ್ಲ. ಈ ಬಗ್ಗೆ ಪರೀಕ್ಷಾರ್ಥಿಗಳು ಪರೀಕ್ಷಾ ಕೇಂದ್ರದ ಅಧಿಕಾರಿಗಳ ಗಮನಕ್ಕೆ ತಂದಾಗಲೂ ಪಟ್ಟು ಬಿಡದೆ ತೆಗೆಸಿ ಪರೀಕ್ಷಾ ಕೇಂದ್ರಕ್ಕೆ ಕಳುಹಿಸಲಾಗಿದೆ. ಮಾನಸಿಕವಾಗಿ ಆಘಾತಗೊಂಡ ಮಹಿಳೆಯರು ಪರೀಕ್ಷೆ ಬರೆಯಲು ಹೇಗೆ ಸಾಧ್ಯವಾಗುತ್ತದೆ ಎಂದು ರೂಪಾಲಿ ನಾಯ್ಕ ಪ್ರಶ್ನಿಸಿದ್ದಾರೆ.

ಮಹಿಳೆಯರಿಗೆ ನೀಡುವ ಮಾನಸಿಕ, ದೈಹಿಕ ಹಿಂಸೆ, ದೌರ್ಜನ್ಯವನ್ನು ಯಾವುದೇ ಕಾರಣಕ್ಕೂ ಸಹಿಸಲು ಸಾಧ್ಯವಿಲ್ಲ. ಇನ್ನು ಮುಂದೆ ಇಂತಹ ಘಟನೆಗಳಿಗೆ ಅವಕಾಶ ನೀಡಬಾರದು. ಹೀಗಾಗಿ ನ್ಯಾಯಾಲಯದ ಮೆಟ್ಟಿಲೇರುವುದಾಗಿ ರೂಪಾಲಿ ನಾಯ್ಕ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಗಣಿ ಹಾಗೂ ಭೂ ವಿಜ್ಞಾನ ಇಲಾಖೆಯ ಅಧಿಕಾರಿ ಪ್ರತಿಮಾ ಅವರನ್ನು ಹತ್ಯೆ ಮಾಡಿದ ಘಟನೆ ಖಂಡನೀಯ. ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ಮಹಿಳಾ ಅಧಿಕಾರಿಗಳಿಗೂ ರಕ್ಷಣೆ ಇಲ್ಲ ಎಂಬಂತಾಗಿದೆ. ಹತ್ಯೆ ಮಾಡಿದ ಆರೋಪಿಗೆ ಕಠಿಣ ಶಿಕ್ಷೆಯಾಗುವಂತಾಗಬೇಕು. ಮಹಿಳೆಯರ ಹತ್ಯೆ, ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯ ನಿಲ್ಲಿಸಲು ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕು. ಮಹಿಳೆಯರಿಗೆ ಬದುಕಲು ಸುರಕ್ಷಿತ ವಾತಾವರಣ ನಿರ್ಮಿಸಬೇಕು ಎಂದು ರೂಪಾಲಿ ಎಸ್.ನಾಯ್ಕ ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಪಂಚ ಗ್ಯಾರಂಟಿ ಹೊರೆ, ಬರದ ಬರೆ ಮಧ್ಯೆ ಆರು ತಿಂಗಳ ರಾಜ್ಯದ ಆರ್ಥಿಕ ಸ್ಥಿತಿಗತಿ ಹೇಗಿದೆ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.