ETV Bharat / state

ಟಿಕೆಟ್ ಹಂಚಿಕೆಯಲ್ಲಿ ಸಮುದಾಯಕ್ಕೆ ನಿರ್ಲಕ್ಷ್ಯ: ಸ್ವಾಮೀಜಿ ಆರೋಪಕ್ಕೆ ಬಿ ಕೆ ಹರಿಪ್ರಸಾದ್​ ತಿರುಗೇಟು

author img

By

Published : Apr 26, 2023, 11:07 PM IST

ಉತ್ತರ ಕನ್ನಡ ಜಿಲ್ಲೆಯ ಕರಾವಳಿಯಲ್ಲಿ ಒಂದು ಕ್ಷೇತ್ರಕ್ಕೂ ಈಡಿಗ ಸಮುದಾಯಕ್ಕೆ ಒಂದು ಸೀಟನ್ನೂ ನೀಡಿಲ್ಲ ಎಂಬ ಕಾರಣಕ್ಕೆ ವಿರೋಧ ವ್ಯಕ್ತವಾಗುತ್ತಿದೆ.

ಪ್ರಣವಾನಂದ ಸ್ವಾಮೀಜಿ ಹಾಗೂ ಬಿ ಕೆ ಹರಿಪ್ರಸಾದ್
ಪ್ರಣವಾನಂದ ಸ್ವಾಮೀಜಿ ಹಾಗೂ ಬಿ ಕೆ ಹರಿಪ್ರಸಾದ್

ಕಾಂಗ್ರೆಸ್​ ನಾಯಕ ಬಿ ಕೆ ಹರಿಪ್ರಸಾದ್

ಕಾರವಾರ (ಉತ್ತರ ಕನ್ನಡ) : ರಾಜ್ಯದಲ್ಲಿ ಚುನಾವಣಾ ಕಣ ರಂಗೇರಿದೆ. ಮೇ 10 ರಂದು ನಡೆಯಲಿರುವ ಚುನಾವಣೆ ಹಿನ್ನಲೆಯಲ್ಲಿ ಅಭ್ಯರ್ಥಿಗಳು ಅಬ್ಬರದ ಪ್ರಚಾರ ನಡೆಸುತ್ತಿದ್ದಾರೆ. ಇದರ ನಡುವೆ ಕೆಲ ಸಮುದಾಯಗಳಿಂದ ರಾಜಕೀಯ ಪಕ್ಷಗಳ ನಿರ್ಲಕ್ಷದ ಬಗ್ಗೆ ಸಹ ಹಲವೆಡೆ ಧ್ವನಿ ಎತ್ತಲಾಗುತ್ತಿದೆ. ಈ ಸಾಲಿನಲ್ಲಿ ಈಡಿಗ ಸಮುದಾಯಕ್ಕೆ ಕಾಂಗ್ರೆಸ್ ಪಕ್ಷದಿಂದ ಅನ್ಯಾಯ ಮಾಡಲಾಗಿದೆ ಎನ್ನುವ ಆರೋಪ ಸದ್ಯ ಕೇಳಿ ಬಂದಿದೆ.

ರಾಜ್ಯದಲ್ಲಿ ದೊಡ್ಡ ಸಂಖ್ಯೆಯಲ್ಲಿ ಈಡಿಗ ಸಮುದಾಯದವರಿದ್ದು, ಅದರಲ್ಲೂ ಕರಾವಳಿ ಜಿಲ್ಲೆಯಾದ ಕಾರವಾರ, ಉಡುಪಿ ಹಾಗೂ ಮಂಗಳೂರಿನ ಜೊತೆಗೆ ಶಿವಮೊಗ್ಗ ಜಿಲ್ಲೆಯಲ್ಲಿ ದೊಡ್ಡ ಸಂಖ್ಯೆಯಲ್ಲಿ ಸಮುದಾಯದ ಜನರು ಇದ್ದಾರೆ. ಆದರೆ ಟಿಕೆಟ್ ಹಂಚಿಕೆಯಲ್ಲಿ ಸಮುದಾಯವನ್ನ ನಿರ್ಲಕ್ಷಿಸಲಾಗಿದೆ. ಬೆರಳೆಣಿಕೆಯಷ್ಟು ಜನರಿಗೆ ಮಾತ್ರ ಟಿಕೆಟ್ ನೀಡುವ ಮೂಲಕ ಸಮುದಾಯವನ್ನ ಕಾಂಗ್ರೆಸ್ ಪಕ್ಷ ನಿರ್ಲಕ್ಷಿಸಿದೆ ಎನ್ನುವ ಆರೋಪ ಕೇಳಿ ಬರುತ್ತಿದೆ.

ಸಮಾಜವನ್ನು ಕಡೆಗಣನೆ ಮಾಡಿದೆ: ಈ ಬಗ್ಗೆ ಬಿಲ್ಲವ ಸಮುದಾಯದ ಪ್ರಣವಾನಂದ ಸ್ವಾಮೀಜಿ ಆಕ್ಷೇಪ ವ್ಯಕ್ತಪಡಿಸಿದ್ದು, ಜಿಲ್ಲೆಯ ಆರು ಕ್ಷೇತ್ರಗಳ ಪೈಕಿ ಕಾಂಗ್ರೆಸ್ ಪಕ್ಷ ಶಿರಸಿ-ಸಿದ್ದಾಪುರ ಒಂದು ಕ್ಷೇತ್ರದಲ್ಲಿ ಮಾತ್ರ ನಾಮದಾರಿ ಸಮಾಜದವರಿಗೆ ಟಿಕೆಟ್ ನೀಡುವ ಮೂಲಕ ಸಮಾಜವನ್ನು ಕಡೆಗಣನೆ ಮಾಡಿದೆ. ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದಿಂದ 12 ಮಂದಿ ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿದ್ದರು ಕೂಡ ಕೇವಲ ಒಂದು ಕ್ಷೇತ್ರಕ್ಕೆ ಮಾತ್ರ ಟಿಕೆಟ್ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಆಗಿರುವ ಅನ್ಯಾಯ ಸರಿಪಡಿಸದೆ ಇದ್ದಲ್ಲಿ ಕಾಂಗ್ರೆಸ್ ಸಮುದಾಯದ ವಿರೋಧ ಕಟ್ಟಿಕೊಳ್ಳಬೇಕಾಗುತ್ತದೆ ಎಂದರು.

ಪ್ರಣವಾನಂದ ಸ್ವಾಮೀಜಿ

ಟಿಕೆಟ್ ನೀಡುವಲ್ಲಿ ಕಾಂಗ್ರೆಸ್ ಪಕ್ಷದಿಂದ ಸಾಮಾಜಿಕ ನ್ಯಾಯ ಪಾಲನೆ ಮಾಡಿಲ್ಲ. ಈ ಅಸಮಾನತೆ ಸರಿಪಡಿಸದೇ ಇದ್ದರೆ ಮುಂದಿನ ದಿನಗಳಲ್ಲಿ ಎಲ್ಲಾ ತಾಲ್ಲೂಕುಗಳಲ್ಲಿ ಪಾದಯಾತ್ರೆ ಕೈಗೊಳ್ಳುವ ಮೂಲಕ ಸಮುದಾಯದ ಜನರಲ್ಲಿ ರಾಜಕೀಯ ಜಾಗೃತಿ ಮೂಡಿಸುತ್ತೇನೆ ಎಂದು ತಿಳಿಸಿದರು.
ವಿಧಾನಸಭೆ ಚುನಾವಣೆಯ ತರುವಾಯ ಲೋಕಸಭೆ ಚುನಾವಣೆ ನಡೆಯಲಿದ್ದು, ನಾಮಧಾರಿ ಸಮಾಜಕ್ಕೆ ಕಾಂಗ್ರೆಸ್ ಟಿಕೆಟ್ ಘೋಷಣೆ ಮಾಡಬೇಕು ಎಂದು ಸ್ವಾಮೀಜಿಯವರು ಇದೇ ಸಂದರ್ಭದಲ್ಲಿ ಒತ್ತಾಯಿಸಿದರು.

ಇನ್ನು ಸದ್ಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಈಡಿಗ ಸಮುದಾಯವನ್ನ ನಿರ್ಲಕ್ಷಿಸಿದ್ದು, ಒಂದೊಮ್ಮೆ ಸರ್ಕಾರ ಬಂದರೆ ಸಮುದಾಯದವನ್ನ ನಿರ್ಲಕ್ಷಿಸದೆ ನಿಗಮ ಮಂಡಳಿ, ಮಂತ್ರಿ ಸ್ಥಾನ ನೇಮಕದಲ್ಲಿ ಆದ್ಯತೆ ಕೊಡಬೇಕು. ಜೊತೆಗೆ ಲೋಕಸಭಾ ಚುನಾವಣೆಯಲ್ಲಿ ಸಹ ಅವಕಾಶ ಕಲ್ಪಿಸಬೇಕು ಎನ್ನುವುದು ಈಡಿಗ ಸ್ವಾಮೀಜಿಯ ಆಗ್ರಹ.

ಸ್ವಾಮೀಜಿ ರಾಜಕೀಯ ಪಕ್ಷದಲ್ಲಿದ್ದರೆ ಉತ್ತರ ಕೊಡುತ್ತಿದ್ದೆವು : ಇನ್ನು ಈ ಬಗ್ಗೆ ಕಾಂಗ್ರೆಸ್ ನಾಯಕ ಬಿ ಕೆ ಹರಿಪ್ರಸಾದ್ ಅವರ ಬಳಿ ಕೇಳಿದ್ರೆ ಸ್ವಾಮೀಜಿ ರಾಜಕೀಯ ಪಕ್ಷದಲ್ಲಿದ್ದರೆ ಉತ್ತರ ಕೊಡುತ್ತಿದ್ದೆವು. ಮಠದಲ್ಲಿದ್ದರಿಂದ ಉತ್ತರ ಕೊಡುವ ಅಗತ್ಯವಿಲ್ಲ ಎಂದು ತಿರುಗೇಟು ನೀಡಿದ್ದಾರೆ.

ಈಡಿಗ ಸಮುದಾಯ ಹೆಚ್ಚಿರುವ ಉತ್ತರ ಕನ್ನಡ ಜಿಲ್ಲೆಯ ಕರಾವಳಿಯಲ್ಲಿ ಒಂದು ಕ್ಷೇತ್ರಕ್ಕೂ ಸಮುದಾಯಕ್ಕೆ ಸೀಟು ನೀಡಿಲ್ಲ ಎನ್ನುವ ಕಾರಣಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದು, ಸದ್ಯ ಟಿಕೆಟ್ ಹಂಚಿಕೆಯಾಗಿ, ಚುನಾವಣೆಯ ಪ್ರಚಾರ ಪ್ರಾರಂಭವಾದರೂ ಟಿಕೆಟ್ ಹಂಚಿಕೆ ಸಂಬಂಧ ಗೊಂದಲಗಳು ಇನ್ನೂ ಬಗೆಹರಿದಿಲ್ಲದಂತಾಗಿದೆ. ಒಟ್ಟಿನಲ್ಲಿ ಅಧಿಕಾರಕ್ಕೆ ಬರುವ ವಿಶ್ವಾಸದಲ್ಲಿರುವ ಕೈ ಪಕ್ಷಕ್ಕೆ ಈಡಿಗ ಸಮುದಾಯದ ಮೇಲೆ ನಿರ್ಲಕ್ಷ್ಯ ಮಾಡಿದ್ದಾರೆ ಎನ್ನುವ ಆರೋಪ ಎಷ್ಟರ ಮಟ್ಟಿಗೆ ಪರಿಣಾಮ ಆಗಲಿದೆ ಎನ್ನುವುದನ್ನ ಕಾದು ನೋಡಬೇಕಾಗಿದೆ.

ಇದನ್ನೂ ಓದಿ : ವೈರಲ್​ ಆಗಿರುವ ಆಡಿಯೋಗೂ ನನಗೂ ಸಂಬಂಧ ಇಲ್ಲ: ಬಿಜೆಪಿ ಅಭ್ಯರ್ಥಿ ವಿ ಸೋಮಣ್ಣ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.