ETV Bharat / state

ಪಂಚಮಸಾಲಿಗೆ 2ಎ ಮೀಸಲಾತಿ ನೀಡಬೇಡಿ: ಹಿಂದುಳಿದ ವರ್ಗಗಳ ಹಿತರಕ್ಷಣಾ ವೇದಿಕೆ ಒತ್ತಾಯ!

author img

By

Published : Feb 7, 2021, 5:38 PM IST

ಪಂಚಮಸಾಲಿ‌ ಲಿಂಗಾಯತರಿಗೆ 2ಎ ಮೀಸಲಾತಿ ನೀಡುವುದಕ್ಕೆ ಭಟ್ಕಳ ಹಿಂದುಳಿದ ವರ್ಗಗಳ 2ಎ ಹಿತರಕ್ಷಣಾ ವೇದಿಕೆ ತೀವ್ರ ವಿರೋಧ ವ್ಯಕ್ತಪಡಿಸಿದೆ.

Opposition to the Panchamasaali 2A
ಹಿಂದುಳಿದ ವರ್ಗಗಳ ಹಿತರಕ್ಷಣಾ ವೇದಿಕೆ ಸುದ್ದಿಗೋಷ್ಠಿ

ಕಾರವಾರ: ಹಿಂದುಳಿದ ವರ್ಗಗಳ‌ 2ಎ ಮೀಸಲಾತಿಗಾಗಿ ಪಂಚಮಸಾಲಿ ಸಮುದಾಯದ ಹೋರಾಟ ದಿನದಿಂದ‌ ದಿನಕ್ಕೆ ಜೋರಾಗುತ್ತಿದೆ. ಜಯಮೃತ್ಯುಂಜಯ ಸ್ವಾಮೀಜಿ ಹಾಗೂ ವಚನಾನಂದ ಶ್ರೀಗಳು ಪಾದಯಾತ್ರೆ ಮೂಲಕ ಮೀಸಲಾತಿಗೆ ಆಗ್ರಹಿಸುತ್ತಿದ್ದು, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಿಂದುಳಿದ ವರ್ಗಗಳ ಆಯೋಗಕ್ಕೆ ವರದಿ ನೀಡುವಂತೆ ಸೂಚಿಸಿದ್ದಾರೆ.

ಇದೀಗ ಪಂಚಮಸಾಲಿ‌ ಲಿಂಗಾಯತರಿಗೆ 2ಎ ಮೀಸಲಾತಿ ನೀಡುವುದಕ್ಕೆ ಭಟ್ಕಳ ಹಿಂದುಳಿದ ವರ್ಗಗಳ (2ಎ) ಹಿತರಕ್ಷಣಾ ವೇದಿಕೆ ತೀವ್ರ ವಿರೋಧ ವ್ಯಕ್ತಪಡಿಸಿದೆ. ಭಟ್ಕಳದಲ್ಲಿ ನಾಮಧಾರಿ ಸೇರಿದಂತೆ ಸುಮಾರು 20ಕ್ಕೂ ಹೆಚ್ಚು ಸಮುದಾಯದವರು ಇಂದು ಉಜಿರೆಯ ಶ್ರೀರಾಮ ಕ್ಷೇತ್ರದ ಮಠಾಧೀಶ ಬ್ರಹ್ಮಾನಂದ ಸರಸ್ವತಿ ಸಾಮೀಜಿ ಅವರ ಸಮ್ಮುಖದಲ್ಲಿ ಮಾಧ್ಯಮಗೋಷ್ಠಿ ನಡೆಸಿ‌ ವಿರೋಧ ವ್ಯಕ್ತಪಡಿಸಿದ್ದಾರೆ.

ಈ ವೇಳೆ ಮಾತನಾಡಿದ ಬ್ರಹ್ಮಾನಂದ ಸರಸ್ವತಿ ಸಾಮೀಜಿ, ಕಾಲಕಾಲಕ್ಕೆ ರಾಜ್ಯ ಸರ್ಕಾರಗಳು ಬಹುಸಂಖ್ಯಾತರಿರುವ ಜನಾಂಗಗಳ ಪ್ರೀತಿ, ವಿಶ್ವಾಸ ಯಾವ ರೀತಿ ಗಳಿಸಿ ಅದನ್ನು ವೋಟ್ ಬ್ಯಾಂಕ್ ಆಗಿ ಹೇಗೆ ಪರಿವರ್ತಿಸಬೇಕೆಂಬ ಏಕಮೇವ ಉದ್ದೇಶವನ್ನು ಸಾಧಿಸುತ್ತಿವೆ. ಅದು ಸರಿ ಅಲ್ಲ. ಸದ್ಯ ಹಿಂದುಳಿದ ವರ್ಗಗಳ 2ಎನಲ್ಲಿರುವವರು ಯಾವುದೇ ಹೊಸ ಸೌಲಭ್ಯಗಳನ್ನು ಕೇಳುತ್ತಿಲ್ಲ. ಬದಲಿಗೆ ಯಥಾಸ್ಥಿತಿ ಕೇಳುತ್ತಿದ್ದಾರೆ ಎಂದರು.

ಲಿಂಗಾಯತರು 2ಎಗೆ ಸೇರಿಸುವಂತೆ ಕೇಳುತ್ತಿದ್ದಾರೆ. ತುಂಬಾ ಎತ್ತರಕ್ಕೆ ಹೋದ‌ ಅವರನ್ನು 2ಎಗೆ ಸೇರಿಸಿದಲ್ಲಿ ಅವರು ಎಲ್ಲಾ ಅವಕಾಶಗಳನ್ನು ಕಬಳಸಿಕೊಳಿಸಲಿದ್ದಾರೆ. ಇಂತಹ ಚಿಂತನೆ ಸರಿಯಲ್ಲ ಎಂದರು. ಈಗಾಗಲೇ ಎಷ್ಟು ಶೇಕಡಾ ಮೀಸಲಾತಿ ಹಿಂದುಳಿದ 2ಎನಲ್ಲಿರುವ ಜಾತಿಗಳಿಗೆ ಕೊಟ್ಟಿದ್ದಾರೋ, ಅದನ್ನು ಯಥಾಸ್ಥಿತಿ ಕಾಯ್ದುಕೊಂಡು ಹೋಗಲು ಸರ್ಕಾರ ಪ್ರಯತ್ನಿಸುವ ಅಗತ್ಯವಿದೆ‌ ಎಂದರು.

ಹಿಂದುಳಿದ ವರ್ಗಗಳ ಹಿತರಕ್ಷಣಾ ವೇದಿಕೆ ಸುದ್ದಿಗೋಷ್ಠಿ

ಈಗಾಗಲೇ ಸುಮಾರು 300ಕ್ಕೂ ಹೆಚ್ಚು ಸಮುದಾಯದ ಜನರು ವಿರೋಧ ವ್ಯಕ್ತಪಡಿಸಿದ್ದು, ಭಟ್ಕಳದಲ್ಲಿ ಫೆಬ್ರವರಿ 22ರಂದು ಪ್ರತಿಭಟನೆ ನಡೆಸಲು ತಿರ್ಮಾನಿಸಿದ್ದಾರೆ. ಯಾವುದೇ ಕಾರಣಕ್ಕೂ ಈ ಹೋರಾಟಕ್ಕೆ ರಾಜಕೀಯ ಪ್ರವೇಶವಾಗಬಾರದು. 2ಎಗೆ ಲಿಂಗಾಯತರು ಸೇರ್ಪಡೆಯಾದರೆ ಈಗಿರುವ ಜನಸಂಖ್ಯೆಗೆ ಮೀಸಲಾತಿಯನ್ನು ಹೆಚ್ಚುವರಿಯಾಗಿ ಹೆಚ್ಚಿಸಬೇಕು. ಅದರ ಬಗ್ಗೆ ಆಯೋಗ, ಕೇಂದ್ರ ಸರ್ಕಾರ ಗಮನ ಹರಿಸಬೇಕು. ಸರ್ಕಾರ ಹಿಂದೆ ಮುಂದೆ ನೋಡಿದಲ್ಲಿ ಸಂವಿಧಾನಾತ್ಮಕವಾಗಿ ಹೈಕೋರ್ಟ್, ಸುಪ್ರೀಂ ಕೋರ್ಟ್ ಮೂಲಕ ಹೋರಾಟವನ್ನು ಶಾಂತಿಯುತವಾಗಿ ನಡೆಸಲು ತೀರ್ಮಾನಿಸಿದ್ದಾರೆ ಎಂದರು.

ಬಳಿಕ‌ ಮಾತನಾಡಿದ ಮಾಜಿ ಶಾಸಕ ಜೆ.ಡಿ.ನಾಯ್ಕ, ಈಗಾಗಲೇ 2ಎಗೆ ಸರ್ಕಾರ ನೀಡುತ್ತಿರುವ ಮೀಸಲಾತಿ ಪ್ರಮಾಣವೇ ಕಡಿಮೆ ಇದೆ. ಹೀಗಿರುವಾಗ ಇದೀಗ ಎಲ್ಲಾ ರಂಗದಲ್ಲಿಯೂ ಮುಂದುವರೆದ ಮತ್ತು ಅತಿ ಹೆಚ್ಚಿನ ಜನಸಂಖ್ಯೆ ಇರುವ ಸಮುದಾಯವನ್ನು ನಮ್ಮ 2ಎ ಮೀಸಲಾತಿಯಲ್ಲಿ ಸೇರಿಸಿದ್ದಲ್ಲಿ ನಮ್ಮವರು ಶಿಕ್ಷಣ, ಉದ್ಯೋಗ ಎಲ್ಲದರಲ್ಲಿಯೂ ವಂಚಿತರಾಗುತ್ತಾರೆ. ಆದ್ದರಿಂದ ಸರ್ಕಾರ ಕೂಡಲೇ ಆಯೋಗಕ್ಕೆ ವರದಿ ಸಲ್ಲಿಕೆಗೆ ಸೂಚಿಸಿರುವ ಆದೇಶವನ್ನು ವಾಪಸ್ ಪಡೆಯಬೇಕು. ಇಲ್ಲದೆ ಇದ್ದಲ್ಲಿ ಫೆ. 22ರಂದು ಈ ಬಗ್ಗೆ ಭಟ್ಕಳದಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.

ಬಳಿಕ ಮಾತನಾಡಿದ ನಾಮಧಾರಿ ಸಮುದಾಯದ ಅಧ್ಯಕ್ಷ ಕೃಷ್ಣಾ ನಾಯ್ಕ, ಪಂಚಮಸಾಲಿ ಲಿಂಗಾಯುತ ಸಮುದಾಯದವರು 2ಎ ಮೀಸಲಾತಿಗೆ ನಮ್ಮ ತೀವ್ರ ವಿರೋಧ ಇದೆ. 90 ಲಕ್ಷ ಜನಸಂಖ್ಯೆ ಇರುವ ಅವರು ನಮ್ಮ ಸಮುದಾಯಕ್ಕೆ ಸೇರ್ಪಡೆಯಾದಲ್ಲಿ ನಾವು ಉದ್ಯೋಗ, ಶೈಕ್ಷಣಿಕವಾಗಿ ವಂಚಿತರಾಗಲಿದ್ದೇವೆ.‌ ಒಂದೊಮ್ಮೆ ಅವರನ್ನು ನಮ್ಮ ಸಮುದಾಯಕ್ಕೆ ಸೇರಿಸುವುದೇ ಆದಲ್ಲಿ ನಮ್ಮನ್ನು ಪರಿಶಿಷ್ಟ ಜಾತಿ ಇಲ್ಲವೇ ಪಂಗಡಕ್ಕೆ ಸೇರಿಸಲಿ. ಸರ್ಕಾರ ಈ ಬಗ್ಗೆ ಗಂಭೀರವಾಗಿ ಪರಿಗಣಿಸಿ ಇನ್ನೊಂದು ಸಮುದಾಯಕ್ಕೆ ಅನ್ಯಾಯವಾಗುವುದನ್ನು ತಪ್ಪಿಸಬೇಕು ಎಂದು ಒತ್ತಾಯಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.