ETV Bharat / state

KPC ನಿರ್ಲಕ್ಷ್ಯಕ್ಕೆ ಬಲಿಯಾದ ಬದುಕು: ಸಿದ್ದರಾಮಯ್ಯ ಎದುರು ಅಳಲು ತೋಡಿಕೊಂಡ ನಿರಾಶ್ರಿತರು

author img

By

Published : Aug 2, 2021, 8:07 PM IST

ಕಾಳಿ ನದಿ ಪ್ರವಾಹದಿಂದ ಹಾನಿಗೊಳಗಾದ ಪ್ರದೇಶಗಳ ವೀಕ್ಷಣೆ ನಡೆಸಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ಮುನ್ಸೂಚನೆ ನೀಡದೇ ಜಲಾಶಯದಿಂದ ನೀರು ಬಿಟ್ಟ ಕೆಪಿಸಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

Siddaramaiah visits Karwar
ಕಾಳಿ ನದಿ ಪ್ರವಾಹದಿಂದ ಹಾನಿಗೊಳಗಾದ ಪ್ರದೇಶಗಳ ವೀಕ್ಷಣೆ ನಡೆಸಿದ ಸಿದ್ದರಾಮಯ್ಯ

ಕಾರವಾರ: ಕಾಳಿ ನದಿ ಪ್ರವಾಹದಿಂದ ಹಾನಿಗೊಳಗಾಗಿದ್ದ ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಪ್ರದೇಶಗಳಿಗೆ ಸಿಎಂ ಬಸವರಾಜ್ ಬೊಮ್ಮಾಯಿ ಭೇಟಿ ನೀಡದೇ ನಿರ್ಲಕ್ಷಿಸಿದ್ದಾರೆ ಎಂಬ ಆರೋಪದ ನಡುವೆ ಇಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಕಾರವಾರಕ್ಕೆ ಭೇಟಿ ನೀಡಿದ್ದರು.

ಕಾಳಿ ನದಿ ಪ್ರವಾಹದಿಂದ ಹಾನಿಗೊಳಗಾದ ಪ್ರದೇಶಗಳ ವೀಕ್ಷಣೆ ನಡೆಸಿದ ಅವರು, ಮುನ್ಸೂಚನೆ ನೀಡದೇ ಜಲಾಶಯದಿಂದ ನೀರು ಬಿಟ್ಟ ಕೆಪಿಸಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಕಳೆದ ಜು.23 ರಂದು ಉತ್ತರ ಕನ್ನಡ ಜಿಲ್ಲೆಯಲ್ಲಿ ಸುರಿದ ಧಾರಾಕಾರ ಮಳೆಯಿಂದ ಹಲವೆಡೆ ನೆರೆ ಸೃಷ್ಟಿಯಾಗಿ ಅವಾಂತರ ಉಂಟಾಗಿತ್ತು. ಕಾಳಿ ನದಿ ಉಕ್ಕಿ ಹರಿದ ಪರಿಣಾಮ ಕದ್ರಾ ಜಲಾಶಯದಿಂದ ಅಪಾರ ಪ್ರಮಾಣದಲ್ಲಿ ನೀರು ಹೊರಬಿಟ್ಟಿದ್ದರಿಂದ ಕಾರವಾರ ತಾಲೂಕಿನ ಹಲವಾರು ಗ್ರಾಮಗಳು ಮುಳುಗಡೆಯಾಗಿದ್ದವು.

ಕಾರವಾರದಲ್ಲಿ ಪ್ರವಾಹ ಹಾನಿ ವೀಕ್ಷಿಸಿ ಅಧಿಕಾರಿಗಳಿಗೆ ಸಿದ್ದರಾಮಯ್ಯ ಕ್ಲಾಸ್​

ಅದರಲ್ಲಿಯೂ ಜಲಾಶಯದ ಸಮೀಪದಲ್ಲಿರುವ ಮಲ್ಲಾಪುರ, ಕುರ್ನಿಪೇಟೆ, ಗಾಂಧಿನಗರ ಗ್ರಾಮಗಳಲ್ಲಿ ಮನೆಗಲೂ ಪ್ರವಾಹದಿಂದ ಕೊಚ್ಚಿ ಹೋಗಿದ್ದವು. ಕಳೆದ ವಾರ ಜಿಲ್ಲೆಗೆ ಸಿಎಂ ಬಸವರಾಜ್ ಬೊಮ್ಮಾಯಿ ಭೇಟಿ ನೀಡಿದ್ದು, ಕೇವಲ ಯಲ್ಲಾಪುರ ಹಾಗೂ ಅಂಕೋಲಾ ತಾಲೂಕಿಗೆ ಮಾತ್ರ.

ಇಂದು ಕಾರವಾರ ತಾಲೂಕಿನ ಕದ್ರಾ ಜಲಾಶಯದ ಸುತ್ತಮುತ್ತಲಿನ ಗ್ರಾಮಕ್ಕೆ ವಿಪಕ್ಷ ನಾಯಕ ಭೇಟಿ ನೀಡಿದರು. ಮಲ್ಲಾಪುರ, ಕುರ್ನಿಪೇಟೆ, ಗಾಂಧಿನಗರ ಸೇರಿದಂತೆ ಹಲವು ಗ್ರಾಮಗಳಿಗೆ ಭೇಟಿ ನೀಡಿ ಪ್ರವಾಹದಿಂದಾದ ಹಾನಿ ಕುರಿತು ವೀಕ್ಷಣೆ ನಡೆಸಿದರು.

ಬಳಿಕ ಕೆಪಿಸಿ ಅಧಿಕಾರಿಗಳ ಸಭೆ ನಡೆಸಿದ ಸಿದ್ದರಾಮಯ್ಯ ಯಾವುದೇ ಮುನ್ಸೂಚನೆ ನೀಡದೇ ಜಲಾಶಯದಿಂದ ಅಪಾರ ಪ್ರಮಾಣದ ನೀರು ಬಿಟ್ಟು ಜನರನ್ನಿ ಸಮಸ್ಯೆಗೆ ಸಿಲುಕಿಸಿದ್ದೀರಾ? ಎಂದು ಗರಂ ಆದರು. ಅಲ್ಲದೇ ನಿರಾಶ್ರಿತರಾದವರಿಗೆ KPC ಕಾಲೋನಿಯಲ್ಲಿಯೇ ಉಳಿದುಕೊಳ್ಳಲು ಸೂರು ನೀಡುವಂತೆ ಸೂಚನೆ ನೀಡಿದರು.

ಪ್ರವಾಹದಿಂದ ಹಾನಿಗೊಳಗಾದ ಗ್ರಾಮಗಳ ಜನರ ಜತೆ ಸಿದ್ದರಾಮಯ್ಯ ಸಭೆ ನಡೆಸಿ ಅಹವಾಲನ್ನು ಸ್ವೀಕರಿಸಿದರು. ಹಲವು ಗ್ರಾಮಸ್ಥರು ಸಿದ್ದರಾಮಯ್ಯ ಅವರ ಮುಂದೆ ತಮ್ಮ ನೋವು ಹೇಳಿಕೊಂಡಿದ್ದು, ತಮಗೆ ಪದೇ ಪದೆ ಪ್ರವಾಹದಿಂದ ಕಷ್ಟಕ್ಕೆ ಸಿಲುಕುವಂತಾಗಿದ್ದು, ಶಾಶ್ವತ ಪರಿಹಾರ ಕಲ್ಪಿಸುವಂತೆ ಮನವಿ ಮಾಡಿದರು.

ಈ ಸಂದರ್ಭ ಮಾತನಾಡಿದ ಮಾಜಿ ಸಚಿವ ಆರ್.ವಿ ದೇಶಪಾಂಡೆ ಕೆಪಿಸಿ ಅಧಿಕಾರಿಗಳು ನೋಟಿಸ್ ನೀಡದೆ ನೀರು ಬಿಟ್ಟು ಅನಾಹುತಕ್ಕೆ ಕಾರಣವಾಗಿದ್ದಾರೆ. ಹಾನಿಗೊಳಗಾದವರಿಗೆ ಸರ್ಕಾರ ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

ಕಾರವಾರ ನಂತರ ಅಂಕೋಲಾ ತಾಲೂಕಿನಲ್ಲಿ ಗಂಗಾವಳಿ ನದಿ ಪ್ರವಾಹದಿಂದ ಹಾನಿಗೊಳಗಾದ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇದಲ್ಲದೇ ಅಂಕೋಲಾ ಪಟ್ಟಣದಲ್ಲಿಯೂ ನಿರಾಶ್ರಿತರ ಅಹವಾಲು ಸಭೆ ನಡೆಸಿದರು. ಇದಾದ ನಂತರ ಯಲ್ಲಾಪುರಕ್ಕೆ ತೆರಳಿ ಪ್ರವಾಹದಿಂದ ಹಾನಿಗೊಳಗಾದ ಪ್ರದೇಶಕ್ಕೆ ಭೇಟಿ ನೀಡಿ ವೀಕ್ಷಣೆ ಮಾಡಿದರು.

ಒಟ್ಟಿನಲ್ಲಿ ಸಿಎಂ ಬಸವಾರಜ್ ಬೊಮ್ಮಾಯಿ ಉತ್ತರ ಕನ್ನಡ ಜಿಲ್ಲೆಗೆ ಭೇಟಿ ನೀಡಿದ ಬೆನ್ನಲ್ಲೇ ವಿಪಕ್ಷ ನಾಯಕ ಸಿದ್ದರಾಮಯ್ಯ ಭೇಟಿ ನೀಡಿ ಪ್ರವಾಹದಿಂದ ಹಾನಿಗೊಳಗಾದ ಪ್ರದೇಶದ ಜನರಿಗೆ ಸಾಂತ್ವನ ಹೇಳಲು ಮುಂದಾಗಿರುವುದು ಜಿಲ್ಲೆಯ ರಾಜಕೀಯ ವಲಯದಲ್ಲಿ ಸಾಕಷ್ಟು ಬೆಳವಣಿಗೆಗೆ ಕಾರಣವಾಗಿದೆ.

ಸಿದ್ದರಾಮಯ್ಯ ಅವರಿಗೆ ಮಾಜಿ ಸಚಿವ ಆರ್.ವಿ ದೇಶಪಾಂಡೆ, ಮಾಜಿ ಶಾಸಕರಾದ ಸತೀಶ್ ಸೈಲ್, ಮಂಕಾಳು ವೈದ್ಯ ಸೇರಿದಂತೆ ಹಲವು ಕಾಂಗ್ರೆಸ್ ಮುಖಂಡರು ಸಾಥ್ ನೀಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.