ETV Bharat / state

ಸರ್ಕಾರಿ ಯೋಜನೆ ಸದುಪಯೋಗ; ಸಾಲದ ಸುಳಿಯಿಂದ ಪಾರಾದ ಉತ್ತರ ಕನ್ನಡ ರೈತ!

author img

By

Published : Jul 7, 2021, 6:54 AM IST

ಸಾಲದ ಸುಳಿಗೆ ಸಿಲುಕಿದ್ದ ಉತ್ತರಕನ್ನಡ ಜಿಲ್ಲೆಯ ರೈತರೊಬ್ಬರು, ಕೊನೆಗೆ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯೊಂದರ ಸದುಪಯೋಗ ಪಡೆದುಕೊಂಡು ಹಂತ ಹಂತವಾಗಿ ಸಾಲದ ಸುಳಿಯಿಂದ ಪಾರಾಗಿದ್ದಾರೆ. ಅನ್ನದಾತರು ಆತ್ಮಹತ್ಯೆಯಂತಹ ದುಡುಕು ನಿರ್ಧಾರ ತೆಗೆದುಕೊಳ್ಳುವ ಮುನ್ನ ಈ ಮಾದರಿ ರೈತನ ಬಗ್ಗೆ ತಿಳಿದುಕೊಳ್ಳಬೇಕಿದೆ.

uttarakannada
ಸಾಲದ ಸುಳಿಯಿಂದ ಪಾರಾಗಿ ಇತರ ರೈತರಿಗೆ ಮಾದರಿಯಾದ ಫಕೀರಪ್ಪ

ಕಾರವಾರ: ಮಕ್ಕಳ‌ ವಿದ್ಯಾಭ್ಯಾಸ ಹಾಗೂ ಬೆಳೆ ಬೆಳೆಯುವುದಕ್ಕಾಗಿ ಕಂಡ ಕಂಡಲ್ಲಿ ಸಾಲ ಮಾಡಿ ಸರಿಯಾದ ಬೆಳೆ ಹಾಗೂ ಬೆಲೆ ಸಿಗದೆ ಸಾಲದ ಸುಳಿಗೆ ಸಿಲುಕಿದ್ದ ಉತ್ತರಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನ ಪಾಳಾ ಗ್ರಾಮ ಪಂಚಾಯತ್​ ವ್ಯಾಪ್ತಿಯ ಇಂಗಳಕಿ ಗ್ರಾಮದ ಫಕೀರಪ್ಪ, ಇದೀಗ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಿಂದಾಗಿ ಹಂತ ಹಂತವಾಗಿ ಸಾಲ ತೀರಿಸಿ ಇತರರಿಗೆ ಮಾದರಿಯಾಗಿದ್ದಾರೆ.

uttarakannada
ಸಾಲದ ಸುಳಿಯಿಂದ ಪಾರಾಗಿ ಇತರ ರೈತರಿಗೆ ಮಾದರಿಯಾದ ಫಕೀರಪ್ಪ

ತಮ್ಮ ಮೂರು ಎಕರೆ ಹದಿನಾರು ಗುಂಟೆ ಜಮೀನಿನಲ್ಲಿ ದಿನವಿಡೀ ದುಡಿಯುತ್ತಿದ್ದ ಅವರು, ಭತ್ತ ಬೆಳೆಯುತ್ತಿದ್ದರು. ವರ್ಷದ ಬೆಳೆಗೆ 60 ಸಾವಿರ ಖರ್ಚು ಮಾಡುವ ಅವರಿಗೆ ಆ ಫಸಲಿಗೆ ನಿರೀಕ್ಷಿತ ಬೆಲೆ ದೊರೆತಿರಲಿಲ್ಲ. ಇದರಿಂದ ಮತ್ತೆ ಬೆಳೆ ಬೆಳೆಯುವುದಕ್ಕೆ ಬ್ಯಾಂಕುಗಳಿಗೆ ಎಡತಾಕುತ್ತಿದ್ದಾರೆ. ಬಯಲು ಸೀಮೆ ಪರಿಧಿಗೆ ಒಳಪಟ್ಟ ಮುಂಡಗೋಡ ತಾಲೂಕಿನ ಪಾಳಾದಲ್ಲಿ ಮಳೆರಾಯನ ಒಲುಮೆ ಕೂಡ ಹೇಳಿಕೊಳ್ಳುವಷ್ಟು, ಅಂದರೆ ಭತ್ತಕ್ಕೆ ಬೇಕಾಗುವ ಪ್ರಮಾಣದಲ್ಲಿ ದೊರೆಯುವುದು ವಿರಳ. ಆದರೂ ಅದೆಷ್ಟೋ ರೈತರು ಮಳೆಯರಾಯನ ಮೇಲೆ ನಂಬಿಕೆಯಿಟ್ಟು ಭೂಮಿ ಹೂಟೆ ಮಾಡುವ ಕೆಲಸದಲ್ಲಿ ಬೆವರು ಸುರಿಸುತ್ತಾರೆ. ಏನೇ ಇದ್ದರೂ ಇಲ್ಲಿನ ರೈತರ ಪಾಡು ಮಳೆಯ ಪ್ರಮಾಣದ ಮೇಲೆ ಆಧಾರಿತವಾಗಿದೆ. ಇದಕ್ಕೆ ಪಕೀರಪ್ಪ ಕೂಡ ಹೊರತಾಗಿಲ್ಲ. ಗಂಗಾ ಕಲ್ಯಾಣ ಯೋಜನೆಯಡಿಯ ಕೊರೆಯಿಸಿದ ಬೋರ್‌ವೆಲ್ ಇವರ ಜಮೀನಿಗೆ ವರದಾನವಾಗಿದೆ.

ನರೇಗಾದ ಮಾಹಿತಿ ನೀಡಿದ ಪಠಾಣ್:

ಭತ್ತ ಬೆಳೆಯಲು ಫಕೀರಪ್ಪ ಮಾಡಿಕೊಂಡಿದ್ದ ಲಕ್ಷಗಟ್ಟಲೆ ಸಾಲ ಪ್ರತಿವರ್ಷವೂ ಹೆಚ್ಚಳವಾಗುತ್ತಲೇ ತೊಡಗಿತ್ತು. ಈ ಸಂದರ್ಭದಲ್ಲಿ ಈತನಿಗೆ ದೇವರಂತೆ ಕಂಡವರು ತಾಲೂಕಿನ ಸಹಾಯಕ ತೋಟಗಾರಿಕಾ ಅಧಿಕಾರಿ ಕೆ.ಬಿ.ಪಠಾಣ್. ಇಂದಿಗೂ ಫಕೀರಪ್ಪ ಇವರನ್ನು ಅಪಾರ ಗೌರವದಿಂದ, ಆತ್ಮಾನಂದದಿಂದ ನೆನೆಯುತ್ತಾರೆ. ಅವರಿಂದ ಊಟ ಮಾಡುತ್ತಿದ್ದೇವೆ ಎಂದು ಉಚ್ಛರಿಸುತ್ತಾರೆ. ನರೇಗಾ ಯೋಜನೆಯಡಿ ಕಡಿಮೆ ವೆಚ್ಚದಲ್ಲಿ ಅಡಿಕೆ ತೋಟ ನಿರ್ಮಾಣ ಮಾಡಿ, ಉತ್ತಮ ಆದಾಯ ಗಳಿಸಬಹುದು. ಮಾಡುವ ವಿಧಾನ ಕೂಡ ವಿಭಿನ್ನ ಎಂದು ಪಠಾಣ್ ಅವರು ಆರೈಕೆಯ ವಿಧ ಸೇರಿದಂತೆ ಇನ್ನಿತರ ಮಾಹಿತಿಗಳನ್ನು ತಿಳಿಸಿದರು. ಅವರ ಮಾಹಿತಿಯಾಧಾರದಲ್ಲಿ ಬೇಡಿಕೆ ಸಲ್ಲಿಸಿದ ಫಕೀರಪ್ಪನಿಗೆ, ಅಡಿಕೆ ತೋಟದ ನಿರ್ಮಾಣಕ್ಕೆ ಬೇಕಾಗುವ ಎಲ್ಲಾ ಸಿದ್ಧತೆಗೆ ಕೂಡ ಪಠಾಣ್ ಸಹಕರಿಸಿದರು.

76 ಸಾವಿರಕ್ಕೆ ತೋಟ ನಿರ್ಮಾಣ:

2014-15ನೇ ಸಾಲಿನಲ್ಲಿ ನಿರ್ಮಾಣದ ಸಿದ್ಧತೆಗಳನ್ನು ಪ್ರಾರಂಭಿಸಿದರು. ಮೊದಲು ಕಾಮಗಾರಿಗೆ 78,909 ರೂ.ಗಳ ಮೊತ್ತಕ್ಕೆ ಅಂದಾಜು ಪಟ್ಟಿಯನ್ನು ತಯಾರಿಸಿ, ನರೇಗಾ ಯೋಜನೆಯಡಿ ಅನುಷ್ಠಾನಕ್ಕೆ ಹಸಿರು ನಿಶಾನೆ ತೋರಿಸಿದರು. 350 ಮಾನವ ದಿನಗಳ ಸೃಜನೆಯಾಗಿ 575 ಗುಂಡಿಗಳ ನಿರ್ಮಾಣವಾಯಿತು. ಪ್ರತಿ ಅಡಿಕೆ ಸಸಿಗೆ 15 ರೂ.ನಂತೆ 575 ಗಿಡಗಳಿಗೆ 8,625 ರೂ.ಗಳು ಮತ್ತು 350 ದಿನಕ್ಕೆ 191ರೂ. ಕೂಲಿಯಂತೆ 67,626 ರೂ. ಸೇರಿ ಒಟ್ಟು 76,251 ರೂ.ಗಳ ಮೊತ್ತಕ್ಕೆ ತೋಟ ನಿರ್ಮಾಣವಾಯಿತು. ಅಡಿಕೆ ಗಿಡಗಳಿಗೆ ನೆರಳಿನ ವ್ಯವಸ್ಥೆಗಾಗಿ ಬಾಳೆಗಿಡಗಳನ್ನು ನೆಡಲಾಯಿತು. ನರೇಗಾ ಯೋಜನೆಯಡಿ ನಿರ್ಮಾಣವಾದ ಅಡಿಕೆ ತೋಟ ಫಕೀರಪ್ಪನಿಗೆ ಒಂದು ಹೊಸ ಭರವಸೆ, ಚೈತನ್ಯ ಮೂಡಿತು.

4ರಿಂದ 5 ವರ್ಷಗಳಲ್ಲಿ ಅಡಿಕೆ ಫಲ ಬರಲು ಶುರುವಾಗಿ, ಪ್ರಥಮ ಫಲ 60 ಸಾವಿರ ರೂ.ಗಳ ಆದಾಯ ದೊರೆತಾಗ ಎಲ್ಲಿಲ್ಲದ ಖುಷಿ. ನಂತರದ ವರ್ಷದಲ್ಲಿ 1 ಲಕ್ಷ ಆದಾಯ ದೊರೆಯಿತು, ಪ್ರಸಕ್ತ ಸಾಲಿನಲ್ಲಿ 1.40 ಲಕ್ಷ ದೊರೆಯುವ ವಿಶ್ವಾಸವಿದೆ ಎಂದು ಖುಷಿಯಿಂದಲೇ ನುಡಿಯುತ್ತಾರೆ ಫಕೀರಪ್ಪ. ಅಡಿಕೆ ತೋಟ ಬೆಳೆದು ಇಂದಿಗೆ 7 ವರ್ಷ. ಅದರ ಜೊತೆಯಲ್ಲಿ ಒಂದು ಟ್ರ‍್ಯಾಕ್ಟರ್ ಅನ್ನು ಸಹ ಖರೀದಿಸಿರುವ ಅವರು, 4 ಲಕ್ಷ ಇದ್ದ ಸಾಲವನ್ನು 2.5 ಲಕ್ಷಕ್ಕೆ ತಂದು ನಿಲ್ಲಿಸಿದ್ದಾರೆ.

ನರೇಗಾದಿಂದಾಗಿ ಅಡಿಕೆ ತೋಟ ಮಾಡಿಕೊಂಡು ಕಡಿಮೆ ವೆಚ್ಚದಲ್ಲಿ ನಿರೀಕ್ಷೆಗೂ ಮೀರಿ ಲಾಭ ದೊರೆಯುತ್ತಿದೆ. ಭತ್ತ ಒಂದೇ ಬೆಳೆಯುತ್ತಿದ್ದ ನಾನು, ನೀರಿನ ಕೊರತೆಯನ್ನೂ ನೀಗಿಸಿಕೊಂಡು ಈಗ ಗೋವಿನ ಜೋಳವನ್ನು ಸಹ ಬೆಳೆಯಲಾರಂಭಿಸಿದ್ದು, ಪ್ರತಿವರ್ಷ ಹೆಚ್ಚುವರಿಯಾಗಿ 25 ಸಾವಿರ ಇದರಿಂದ ಗಳಿಸುತ್ತಿದ್ದೇನೆ ಎಂದು ಸಂತೋಷದಿಂದ ನುಡಿಯುತ್ತಾರೆ ಫಕೀರಪ್ಪ.

ರೈತರಿಗೆ ವರದಾನವಾದ ನರೇಗಾ
ರೈತರಿಗೆ ನರೇಗಾ ಯೋಜನೆ ಬಹುದೊಡ್ಡ ವರದಾನವಾಗಿದೆ. ಪಶ್ಚಿಮ ಫಟ್ಟ ಪ್ರದೇಶದಲ್ಲಿ ಅಡಿಕೆ ಬೆಳೆಗೆ ಪೂರಕವಾದ ವಾತಾವರಣ ಇರುವುದರಿಂದ ಇಂತಹ ತೋಟಗಳ ನಿರ್ಮಾಣ ಕಾಮಗಾರಿಗಳು ಜಿಲ್ಲೆಯಲ್ಲಿ ಭರದಿಂದ ಸಾಗಿದೆ. ಪ್ರಮುಖವಾಗಿ ಅಡಿಕೆ ಬೆಳೆದ ರೈತರಿಗೆ ಖರ್ಚು ಒಂದು ಭಾಗವಾದರೆ, ಅದರಿಂದ ದೊರೆಯುವ ಲಾಭ ಮೂರುಪಟ್ಟಾಗಿದೆ. ಸಾಲದ ಸುಳಿಯಲ್ಲಿ ಸಿಲುಕಿ ನರಳುತ್ತಿದ್ದ ಬಡ ರೈತರಿಗೆ ನರೇಗಾ ಬೆನ್ನೆಲುಬಾಗಿ ನಿಂತಂತಾಗಿದೆ.

ಉತ್ತರಕನ್ನಡದಲ್ಲಿ ನರೇಗಾ ಯೋಜನೆಯಡಿ ಸುಮಾರು 200 ಹೆಕ್ಟೇರ್‌ಗಳಷ್ಟು ಭೂಮಿಯಲ್ಲಿ ಅಡಿಕೆ ತೋಟ ನಿರ್ಮಾಣ ಅನುಷ್ಠಾನಗೊಳ್ಳುತ್ತಿದೆ ಎನ್ನಲಾಗಿದೆ. ಇದು ಅತ್ಯುತ್ತಮ, ಆಶಾದಾಯಕ, ಆದಾಯದಾಯಕ ಕಾಮಗಾರಿಯಾಗಿದ್ದು, ಅದೆಷ್ಟೋ ಬಡ ರೈತರಿಗೆ, ದುಡಿಯುವ ಕೈಗಳಿಗೆ ಯಾವುದೇ ಮೋಸವಿಲ್ಲದೆ ಉನ್ನತಿಯ ಎಡೆಗೆ ಕರೆದೊಯ್ಯುತ್ತಿದೆ. ಫಕೀರಪ್ಪನಂತಹ ಸಾಮಾಜಿಕವಾಗಿ, ಆರ್ಥಿಕವಾಗಿ ಹಿಂದುಳಿದ ಪರಿಶಿಷ್ಟ ಪಂಗಡ ಸಮುದಾಯಕ್ಕೂ ಕೂಡ ಈ ಯೋಜನೆ ಪೋಷಣೆ ನೀಡುತ್ತಿದೆ.

ಇದನ್ನೂ ಓದಿ: ಪ್ರಜ್ವಲ್ ರೇವಣ್ಣರನ್ನು ನೋಡಿ ಕುಮಾರಸ್ವಾಮಿ ಕಲಿಯುವುದು ಬಹಳಷ್ಟಿದೆ: ಸುಮಲತಾ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.