ETV Bharat / state

ಕಾಂಗ್ರೆಸ್ ಶಾಸಕರನ್ನು ಬಿಗಿದಪ್ಪಿ ಅಭಿನಂದಿಸಿದ ಸಂಸದ ಅನಂತಕುಮಾರ್ ಹೆಗಡೆ!

author img

By

Published : Jun 24, 2023, 2:01 PM IST

ಬಿಜೆಪಿ ಸಂಸದ ಅನಂತಕುಮಾರ್ ಹೆಗಡೆ ಅವರು ಕಾಂಗ್ರೆಸ್ ಶಾಸಕ ಸತೀಶ್ ಸೈಲ್ ಅವರನ್ನು ಅಪ್ಪಿಕೊಂಡು ಅಭಿನಂದಿಸಿರುವ ಫೋಟೋ ವೈರಲ್ ಆಗಿದೆ.

MP Anantkumar Hegade hugs Congress MLA Satish Sail
MP Anantkumar Hegade hugs Congress MLA Satish Sail

ಕಾರವಾರ: ಚುನಾವಣೆ ಬಳಿಕ ಇದೇ ಮೊದಲ ಬಾರಿಗೆ ಜಿಲ್ಲಾ ಕೇಂದ್ರಕ್ಕೆ ಅಧಿಕಾರಿಗಳ ಸಭೆ ನಡೆಸಲು ಆಗಮಿಸಿದ್ದ ಸಂಸದ ಅನಂತಕುಮಾರ್ ಹೆಗಡೆ ಅವರು ಕಾಂಗ್ರೆಸ್ ಶಾಸಕ ಸತೀಶ್ ಸೈಲ್ ಅವರನ್ನು ಬಿಗಿದಪ್ಪಿ ಅಭಿನಂದನೆ ಸಲ್ಲಿಸಿದರು. ಶಾಸಕರನ್ನು ಸಂಸದರು ಮುಗುಳ್ನಗೆಯೊಂದಿಗೆ ಬಿಗಿದಪ್ಪಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

MP Anantkumar Hegade hugs Congress MLA Satish Sail
ದಿಶಾ ಸಭೆಯಲ್ಲಿ ಅನಂತ್ ಕುಮಾರ್ ಹೆಗಡೆ ಮತ್ತು ಸತೀಶ್ ಸೈಲ್

ಫೈರ್ ಬ್ರಾಂಡ್ ಖ್ಯಾತಿಯ ಸಂಸದ ಅನಂತಕುಮಾರ್ ಹೆಗಡೆ ಶುಕ್ರವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಆಯೋಜಿಸಿದ್ದ ದಿಶಾ ಸಭೆಗೆ ಆಗಮಿಸಿದ್ದರು. ಚುನಾವಣೆ ವೇಳೆಯೂ ಎಲ್ಲಿಯೂ ಕಾಣಿಸಿಕೊಳ್ಳದ ಅವರು ಚುನಾವಣೆ ಬಳಿಕ ಇದೇ ಮೊದಲ‌ ಬಾರಿಗೆ ಜಿಲ್ಲಾ ಕೇಂದ್ರಕ್ಕೆ ಆಗಮಿಸಿದ್ದರು. ಇನ್ನು ಕಾರವಾರ- ಅಂಕೋಲಾ ಶಾಸಕರಾದ ಬಳಿಕ ಇದೇ ಮೊದಲ ಬಾರಿಗೆ ಎದುರಾದ ಸತೀಶ್ ಸೈಲ್ ಅವರನ್ನು ಬಿಗಿದಪ್ಪಿ ಅಭಿನಂದಿಸಿದರು. ಸಭೆ ಬಳಿಕ ಅನಂತ್ ಕುಮಾರ್ ಹೆಗಡೆ ಅವರ ಕಾರಿನಲ್ಲಿ ಕಾಂಗ್ರೆಸ್ ಶಾಸಕ ಸತೀಶ್ ಸೈಲ್ ಅವರು ಭೋಜನಕ್ಕೆ ತೆರಳಿ, ಅಚ್ಚರಿ ಮೂಡಿಸಿದರು.

ಅಧಿಕಾರಿಗಳಿಗೆ ಖಡಕ್ ಸೂಚನೆ: ಜಿಲ್ಲೆಗೆ ಸರ್ಕಾರದಿಂದ ಜಾರಿಯಾಗಿರುವ ಕಾಮಗಾರಿ, ಯೋಜನೆಗಳನ್ನು ನಿಗದಿಪಡಿಸಿದ ಅವಧಿಯೊಳಗೆ ಮುಗಿಸಿ ಸಾರ್ವಜನಿಕರಿಗೆ ಅದರ ಉಪಯೋಗವಾಗುವಂತೆ ಮಾಡಲು ಅಧಿಕಾರಿಗಳು ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಬೇಕು ಎಂದು ಸಂಸದ ಅನಂತಕುಮಾರ ಹೆಗಡೆ ಸೂಚಿಸಿದ್ದಾರೆ.

ದಿಶಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ವಿವಿಧ ಇಲಾಖೆಗಳ ಪ್ರಗತಿ ವರದಿಯನ್ನು ಪರಿಶೀಲಿಸಿ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. ಬಳಿಕ ತೋಟಗಾರಿಕೆ ಇಲಾಖೆಯ ಪ್ರಗತಿ ಪರಿಶೀಲಿಸಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಸುರಗಿ ಹೂ ಗಿಡಗಳನ್ನು ಬೆಳೆಯಲು ಸೂಚಿಸಿದರು. ಈ ಗಿಡದ ಹೂವಿನಲ್ಲಿ ಶೇ.34 ರಷ್ಟು ಸಿಗಮಿಕ್ ಆಸಿಡ್ ದೊರೆಯುತ್ತದೆ. ಇದು ಅತ್ಯಂತ ಪ್ರಮುಖವಾದ ಆಸಿಡ್ ಆಗಿದ್ದು, ಜಗತ್ತಿನ ಕೆಲವು ಔಷಧ ತಯಾರಿಸುವ ಕಂಪನಿಗಳು ಆಸಿಡ್ ಉಪಯೋಗಿಸುತ್ತವೆ. ಇದು 1 ಕೆಜಿ ಗೆ 1600 ಕೋಟಿ ರೂ ಗೆ ಬೆಲೆಬಾಳುತ್ತದೆ. ಇದು ನಮ್ಮ ಉತ್ತರಕನ್ನಡ ಜಿಲ್ಲೆಯ ಅರಣ್ಯದಲ್ಲಿ ಬೆಳೆಯಲು ಪ್ರಯತ್ನಿಸೋಣ ಎಂದು ತಿಳಿಸಿದರು. ಜಿಲ್ಲಾ ಪಂಚಾಯತ್​​, ಅರಣ್ಯ ಇಲಾಖೆ ತೋಟಗಾರಿಕೆ ಇಲಾಖೆಯ ಸಹಯೋಗದಲ್ಲಿ ಇದನ್ನು ಕಾರ್ಯರೂಪಕ್ಕೆ ತರಲು ಸೂಚಿಸಿದರು.

ಬಳಿಕ ಆರೋಗ್ಯ ಇಲಾಖೆಯಿಂದ ಮಾಹಿತಿ ಪಡೆದು ಆಯುಷ್ಮಾನ್ ಭಾರತ ಯೋಜನೆ ಅಡಿಯಲ್ಲಿ ಒಟ್ಟು 13 ಲಕ್ಷ ಕಾರ್ಡುಗಳ ವಿತರಣೆ ಗುರಿ ಇದ್ದು, ಅದರಲ್ಲಿ ಇಲಾಖೆಯಿಂದ 4.25 ಲಕ್ಷ ಕಾರ್ಡ್​​​ಗಳನ್ನು ವಿತರಿಸಲಾಗಿದೆ. ಉಳಿದ ಕಾರ್ಡುಗಳನ್ನು ತ್ವರಿತಗತಿಯಲ್ಲಿ ವಿತರಿಸಲು ಅಧಿಕಾರಿಗಳು ಕ್ರಮ ವಹಿಸಬೇಕು. ಕಾರ್ಡುಗಳನ್ನು ವಿತರಿಸಲು ಅಧಿಕಾರಿಗಳು ರೂಪರೇಷವನ್ನು ಸಿದ್ಧಪಡಿಸಿ ಅದರ ವರದಿಯನ್ನು ಸಲ್ಲಿಸಬೇಕು ಎಂದು ಸೂಚಿಸಿದರು.

ಬಳಿಕ ಕಾರವಾರ ಹಾಗೂ ಶಿರಿಸಿ ಶೈಕ್ಷಣಿಕ ಜಿಲ್ಲೆಯಲ್ಲಿ ಶಾಲೆ ಬಿಟ್ಟ ಮಕ್ಕಳ ಕುರಿತು ಚರ್ಚಿಸಿದರು. ಭಟ್ಕಳ್ ಮತ್ತು ಸಿದ್ದಾಪುರ ತಾಲೂಕುಗಳಲ್ಲಿ ವಿದ್ಯಾರ್ಥಿಗಳ ಹಾಜರಾತಿ ಕಡಿಮೆ ಇದ್ದು, ಈ ಬಗ್ಗೆ ಕ್ರಮ ವಹಿಸಬೇಕು. ವಿದ್ಯಾರ್ಥಿಗಳಿಗೆ ಅವಶ್ಯಕ ಇರುವ ವಾತಾವರಣವನ್ನು ಸೃಷ್ಟಿಸಿ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಶಾಲೆಗೆ ಹಾಜರಾಗುವಂತೆ ನೋಡಿಕೊಳ್ಳಬೇಕೆಂದು ಅಧಿಕಾರಿಗಳಿಗೆ ತಿಳಿಸಿದರು.

ಇದನ್ನೂ ಓದಿ: ಸಕ್ರಿಯ ರಾಜಕೀಯಕ್ಕೆ ಅನಂತ್ ಕುಮಾರ್ ಹೆಗಡೆ ವಾಪಸ್: ಸಿಎಂ ಭೇಟಿಯಾದ ಹಿಂದೂ ಫೈರ್ ಬ್ರ್ಯಾಂಡ್ ಲೀಡರ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.