ETV Bharat / state

ಎದುರಾಳಿಗೆ ಮತ ಹಾಕಿದ ಅಧ್ಯಕ್ಷೀಯ ಆಕಾಂಕ್ಷಿ.. ಕೊನೆಗೂ ಚೀಟಿ ಮೂಲಕ ಕುಲಾಯಿಸಿದ ಅದೃಷ್ಟ

author img

By

Published : Feb 13, 2021, 1:41 PM IST

ಶುಕ್ರವಾರ ಮಧ್ಯಾಹ್ನ ಅಧಿಕಾರಿಗಳ ಸಮ್ಮುಖದಲ್ಲಿ ಆಯ್ಕೆ ಪ್ರಕ್ರಿಯೆ ನಡೆದಿತ್ತು. ನಾಲ್ವರು ಮತ ಚಲಾಯಿಸಿದ್ದರು. ಆದರೆ ಈ ವೇಳೆ ಬಿಜೆಪಿ ಬೆಂಬಲಿತ ರಾಜೇಶ್ ನಾಯ್ಕ ಕಾರ್ಗೆಜೂಗ ತಮ್ಮ ಮತವನ್ನು ಕಾಂಗ್ರೆಸ್ ಬೆಂಬಲಿತ ರಾಜೇಂದ್ರ ಹಾಡು ರಾಣೆ ಅವರಿಗೆ ಹಾಕಿದ್ದರು. ಆದರೆ, ಅಂತಿಮವಾಗಿ ಫಲಿತಾಂಶ ಪ್ರಕಟವಾದಾಗ ರಾಜೇಂದ್ರ ಹಾಡುಗೆ ಮೂರು ಮತಗಳು ಬಂದಿದ್ದವು.

karwar gram panchayat president vice president election
ಕಾರವಾರ ಗ್ರಾಮ ಪಂಚಾಯತಿ

ಕಾರವಾರ: ಗ್ರಾಮ ಪಂಚಾಯಿತಿ ಒಂದರಲ್ಲಿ ಶುಕ್ರವಾರ ನಡೆದ ಆಯ್ಕೆ ಪ್ರಕ್ರಿಯೆ ವೇಳೆ ಅಧ್ಯಕ್ಷಕಾಂಕ್ಷಿ ಸದಸ್ಯರೋರ್ವರು ತಮ್ಮ ಮತವನ್ನೇ ಇನ್ನೋರ್ವ ಅಧ್ಯಕ್ಷಕಾಂಕ್ಷಿಗೆ ಹಾಕಿ ಕುತೂಹಲ ಮೂಡಿಸಿದ್ದಲ್ಲದೇ ಬಳಿಕ ಅಧ್ಯಕ್ಷ ಹುದ್ದೆಗೇರಿದ ಘಟನೆ ಶುಕ್ರವಾರ ನಡೆದಿದೆ.

ಕಾರವಾರ ತಾಲೂಕಿನ ವೈಲವಾಡ ಪಂಚಾಯಿತಿಯಲ್ಲಿ ಒಟ್ಟು ಐದು ಸ್ಥಾನಗಳಿದ್ದು, ನಾಲ್ಕು ಸ್ಥಾನಗಳಿಗೆ ಚುನಾವಣೆ ನಡೆದು ತಲಾ ಇಬ್ಬರು ಕಾಂಗ್ರೆಸ್ ಹಾಗೂ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಆಯ್ಕೆಯಾಗಿದ್ದರು. ಆದರೆ, ವೈಲವಾಡ ಪ್ರದೇಶ ದೊಡ್ಡದಾಗಿದ್ದು, ಎರಡು ಸ್ಥಾನ ನೀಡುವಂತೆ ಆಗ್ರಹಿಸಿ ಸ್ಥಳೀಯರು ಚುನಾವಣೆ ಬಹಿಷ್ಕಾರ ಹಾಕಿದ್ದರಿಂದ ಆ ಸ್ಥಾನ ಚುನಾವಣೆ ನಡೆಯದೆ ಖಾಲಿ ಉಳಿದಿದೆ.

ನಾಲ್ಕು ಸದ್ಯಸ್ಯರನ್ನೊಳಗೊಂಡ ಪಂಚಾಯಿತಿ ಅಧ್ಯಕ್ಷ - ಉಪಾಧ್ಯಕ್ಷ ಆಯ್ಕೆ ಪ್ರಕ್ರಿಯೆ ಕುತೂಹಲ ಮೂಡಿಸಿತ್ತು. ಬಿಜೆಪಿ ಬೆಂಬಲಿತ ರಾಜೇಶ ನಾಯ್ಕ ಕಾರ್ಗೆಜೂಗ, ಸದಸ್ಯೆ ಪೂಜಾ ಮಹೇಶ ಹುಲಸ್ವಾರ ಹಾಗೂ ಕಾಂಗ್ರೆಸ್ ಬೆಂಬಲಿತ ರಾಜೇಂದ್ರ ಹಾಡು ರಾಣೆ, ಸದಸ್ಯೆ ಮೇಘಾ ಮನೋಹರ್ ಗಾಂವಕರ್ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದರು.

ಅದರಂತೆ, ಶುಕ್ರವಾರ ಮಧ್ಯಾಹ್ನ ಅಧಿಕಾರಿಗಳ ಸಮ್ಮುಖದಲ್ಲಿ ಆಯ್ಕೆ ಪ್ರಕ್ರಿಯೆ ನಡೆದಿತ್ತು. ನಾಲ್ವರು ಮತ ಚಲಾಯಿಸಿದ್ದರು. ಆದರೆ, ಈ ವೇಳೆ ಬಿಜೆಪಿ ಬೆಂಬಲಿತ ರಾಜೇಶ್ ನಾಯ್ಕ ಕಾರ್ಗೆಜೂಗ ತಮ್ಮ ಮತವನ್ನು ಕಾಂಗ್ರೆಸ್ ಬೆಂಬಲಿತ ರಾಜೇಂದ್ರ ಹಾಡು ರಾಣೆ ಅವರಿಗೆ ಹಾಕಿದ್ದರು. ಆದರೆ, ಅಂತಿಮವಾಗಿ ಫಲಿತಾಂಶ ಪ್ರಕಟವಾದಾಗ ರಾಜೇಂದ್ರ ಹಾಡುಗೆ ಮೂರು ಮತಗಳು ಬಂದಿದ್ದವು. ತಮ್ಮ ಮತ ಬೆರೆಯವರಿಗೆ ಹಾಕಿದ್ದನ್ನು ತಿಳಿದು ಕಂಗಾಲಾದ ರಾಜೇಶ್​ ನಾಯ್ಕ ಕೊನೆಗೆ ತಮ್ಮಿಂದ ತಪ್ಪಾಗಿದ್ದು, ಮತ್ತೊಮ್ಮೆ ಮತದಾನ ನಡೆಸುವಂತೆ ಕೋರಿದ್ದರು ಎನ್ನಲಾಗಿದೆ.

ಆದರೆ ಈ ಬಗ್ಗೆ ರಾಜೇಂದ್ರ ಹಾಡು ಕೂಡ ಯಾವುದೇ ಆಕ್ಷೇಪ ತೆಗೆಯದ ಕಾರಣ ಮತ್ತೊಮ್ಮೆ ಚುನಾವಣೆ ನಡೆಸಿದಾಗ ಇಬ್ಬರಿಗೂ ಸಮಾನ ಮತಗಳು ಬಂದಿದ್ದವು. ಅಂತಿಮವಾಗಿ ಅಧಿಕಾರಿಗಳು ಚೀಟಿ ಹಾರಿಸಿದಾಗ ಬಿಜೆಪಿ ಬೆಂಬಲಿತ ಅಭ್ಯರ್ಥಿ ರಾಜೇಶ ನಾಯ್ಕ ಅವರಿಗೆ ಅದೃಷ್ಟ ಕುಲಾಯಿಸಿದೆ.

ಶಾಸಕ ಸತೀಶ್​​ ಸೈಲ್​​​ ಆಕ್ಷೇಪ

ಆದರೆ, ಆಯ್ಕೆ ಪ್ರಕ್ರಿಯೆ ಬಗ್ಗೆ ತಿಳಿದ ಮಾಜಿ ಶಾಸಕ‌ ಸತೀಶ್ ಸೈಲ್ ಆಕ್ಷೇಪ ವ್ಯಕ್ತಪಡಿಸಿದ್ದರು. ಗ್ರಾಮ ಪಂಚಾಯಿತಿಗೆ ಆಗಮಿಸಿ ಎರಡು ಬಾರಿ ಚುನಾವಣೆ ನಡೆಸಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ಅಲ್ಲದೇ ಈ ಬಗ್ಗೆ ನ್ಯಾಯಾಲಯದಲ್ಲಿ ಪ್ರಶ್ನಿಸುವುದಾಗಿ ತಿಳಿಸಿದ್ದರು. ಆದರೆ ಕಾಂಗ್ರೆಸ್ ಅಭ್ಯರ್ಥಿಯೇ ಪ್ರಕರಣವನ್ನು ಮುಂದುವರಿಸುವುದು ಬೇಡ ಎಂದು ಸೈಲ್ ಬಳಿ ಮನವಿ ಮಾಡಿದಾಗ ಕುತೂಹಲದ ಪ್ರಹಸನದಲ್ಲಿ ಪ್ರಕರಣ ಮುಕ್ತಾಯಗೊಂಡಿತು. ಅಂತಿಮವಾಗಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ರಾಜೇಶ ನಾಯ್ಕ ಅಧ್ಯಕ್ಷರಾಗಿ, ಕಾಂಗ್ರೆಸ್ ಬೆಂಬಲಿತ ಮೇಘಾ ಮನೋಹರ್ ಗಾಂವಕರ್ ಉಪಾಧ್ಯಕ್ಷೆಯಾಗಿ ಆಯ್ಕೆಯಾಗಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.