ಶಾಲೆ ಪಕ್ಕದಲ್ಲೇ ಹೆದ್ದಾರಿ: ರಸ್ತೆ ದಾಟಲು ಮಕ್ಕಳ ಪರದಾಟ

author img

By

Published : Sep 25, 2022, 4:16 PM IST

honnavara students facing problem to cross national highway

ರಾಷ್ಟ್ರೀಯ ಹೆದ್ದಾರಿ 66ಕ್ಕೆ ಹೊಂದಿಕೊಂಡೇ ಅಭಿತೋಟ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಇದೆ. ಹೀಗಾಗಿ ಪ್ರತಿನಿತ್ಯ ಶಾಲೆಗೆ ಆಗಮಿಸುವ ಮಕ್ಕಳು ಜೀವ ಕೈಯಲ್ಲಿ ಹಿಡಿದು ಹೆದ್ದಾರಿ ದಾಟಬೇಕಿದೆ.

ಕಾರವಾರ(ಉತ್ತರಕನ್ನಡ): ಹೊನ್ನಾವರ ತಾಲೂಕಿನ ಅಭಿತೋಟದಲ್ಲಿ ಶಾಲೆ ಪಕ್ಕದಲ್ಲೇ ಹೆದ್ದಾರಿ ಹಾದು ಹೋಗಿರುವ ಹಿನ್ನೆಲೆ ಪ್ರತಿನಿತ್ಯ ಹೆದ್ದಾರಿ ದಾಟಲು ಮಕ್ಕಳು ಹರಸಾಹಸ ಪಡಬೇಕಾದ ಸ್ಥಿತಿ ನಿರ್ಮಾಣವಾಗಿದೆ.

ತಾಲೂಕಿನಲ್ಲಿ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿ 66ಕ್ಕೆ ಹೊಂದಿಕೊಂಡೇ ಅಭಿತೋಟ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಇದೆ. ಹೀಗಾಗಿ ಪ್ರತಿನಿತ್ಯ ಶಾಲೆಗೆ ಆಗಮಿಸುವ ಮಕ್ಕಳು ಜೀವ ಕೈಯಲ್ಲಿ ಹಿಡಿದು ಹೆದ್ದಾರಿ ದಾಟಬೇಕಿದೆ. ರಾಷ್ಟ್ರೀಯ ಹೆದ್ದಾರಿ 66 ಚತುಷ್ಪಥ ರಸ್ತೆಯಾಗಿದ್ದು, ಪ್ರತಿನಿತ್ಯ ಸಾವಿರಾರು ಸಂಖ್ಯೆಯಲ್ಲಿ ವಿವಿಧ ಬಗೆಯ ವಾಹನಗಳು ಹಾದು ಹೋಗುತ್ತವೆ. ಅದರಲ್ಲೂ ಹೆದ್ದಾರಿ ಮಾರ್ಗವಾಗಿರುವುದರಿಂದಾಗಿ ಅತೀ ವೇಗವಾಗಿ ವಾಹನಗಳು ಸಂಚರಿಸುವುದರಿಂದ, ವಿದ್ಯಾರ್ಥಿಗಳಿಗೆ ಸಮಸ್ಯೆಯಾಗಿದೆ.

ಹೆದ್ದಾರಿ ದಾಟಲು ಮಕ್ಕಳ ಪರದಾಟ

ಅಭಿತೋಟ ಗ್ರಾಮದಿಂದ ಪ್ರತಿನಿತ್ಯ ಮೂವತ್ತಕ್ಕೂ ಅಧಿಕ ಮಕ್ಕಳು ಹೆದ್ದಾರಿ ಪಕ್ಕದ ಹಿರಿಯ ಪ್ರಾಥಮಿಕ ಶಾಲೆಗೆ ತೆರಳುತ್ತಾರೆ. ಹೆದ್ದಾರಿ 45 ಮೀಟರ್​ನಷ್ಟು ಅಗಲವಿದ್ದು ರಸ್ತೆ ತಿರುವಿನಲ್ಲೇ ಶಾಲೆಯಿದೆ. ಹೀಗಾಗಿ ರಸ್ತೆ ದಾಟುವ ವೇಳೆ ಎಷ್ಟೋ ಬಾರಿ ವಾಹನ ಆಗಮಿಸುವುದೇ ಅರಿವಿಗೆ ಬರುವುದಿಲ್ಲ. ಹೀಗಾಗಿ ಮಕ್ಕಳನ್ನು ಶಾಲೆಗೆ ಕಳುಹಿಸಲು ಪಾಲಕರು ಸಹ ಆತಂಕಪಡಬೇಕಾದ ಸ್ಥಿತಿಯಿದೆ.

ಇದನ್ನೂ ಓದಿ: ಬೆಳಗಾವಿಯಲ್ಲಿ ಭೀಕರ ಸರಣಿ ರಸ್ತೆ ಅಪಘಾತ.. ಎಎಸ್ಐ ಪತ್ನಿ, ಪುತ್ರಿ, ಕಾರು ಚಾಲಕ, ಓರ್ವ ಅಜ್ಜಿ ಸೇರಿ ನಾಲ್ವರು ಸಾವು

ಕಳೆದ ತಿಂಗಳು ಇದೇ ಹೆದ್ದಾರಿ ದಾಟುವ ವೇಳೆ ವಾಹನ ಡಿಕ್ಕಿ ಹೊಡೆದು ವಿದ್ಯಾರ್ಥಿಯೋರ್ವ ಗಾಯಗೊಂಡಿದ್ದ ಘಟನೆ ಸಹ ನಡೆದಿದ್ದು, ಅದೃಷ್ಟವಶಾತ್ ಹೆಚ್ಚಿನ ಅಪಾಯ ಉಂಟಾಗಿರಲಿಲ್ಲ. ಹೀಗಾಗಿ ಶಾಲೆಗೆ ತೆರಳಲು ಮಕ್ಕಳಿಗೆ ಅನುವು ಮಾಡಿಕೊಡುವ ದೃಷ್ಟಿಯಿಂದ ಹೆದ್ದಾರಿಗೆ ಮೇಲ್ಸೇತುವೆ ನಿರ್ಮಿಸಿಕೊಡುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ. ಅಲ್ಲದೇ ಹೆಚ್ಚಿನ ಅನಾಹುತಗಳು ಸಂಭವಿಸುವ ಮುನ್ನ ಅಧಿಕಾರಿಗಳು, ಜನಪ್ರತಿನಿಧಿಗಳು ಎಚ್ಚೆತ್ತು ಈ ಬಗ್ಗೆ ಗಮನಹರಿಸುವಂತೆ ಆಗ್ರಹಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.