ETV Bharat / state

ಅಂಕಗಳ ಆಧಾರದ ವಿಶಿಷ್ಟ ವನಮಹೋತ್ಸವ ಕಾರ್ಯಕ್ರಮ: ಶಿರಸಿಯ ಅರಣ್ಯ ಕಾಲೇಜಿನಲ್ಲಿ ವಿನೂತನ ಪ್ರಯತ್ನ

author img

By

Published : Aug 12, 2023, 1:04 PM IST

ಶಿರಸಿಯ ರಾಯರ ಕೆರೆ ತಟದಲ್ಲಿ 'ಹಸಿರು ಪದವಿ ವನಮಹೋತ್ಸವ' ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಅರಣ್ಯ ಕಾಲೇಜು, ರಾಯರ ಕೆರೆ ಅಭಿವೃದ್ದಿ ಸಮಿತಿ ಹಾಗೂ ಶಿರಸಿ ಜೀವಜಲ‌ ಕಾರ್ಯಪಡೆಗಳು ಭಾಗಿಯಾಗಿದ್ದವು.

Green Graduation Program at sirsi forest college
ಹಸಿರು ಪದವಿ ವನಮಹೋತ್ಸವ ಕಾರ್ಯಕ್ರಮ

ಶಿರಸಿಯ ರಾಯರ ಕೆರೆ ತಟದಲ್ಲಿ ಹಸಿರು ಪದವಿ ವನಮಹೋತ್ಸವ ಕಾರ್ಯಕ್ರಮ

ಶಿರಸಿ: 'ಕಾಡು ಬೆಳೆಸಿ ನಾಡು ಉಳಿಸಿ' ಎಂಬ ನಾಣ್ಣುಡಿಗೆ ವನಮಹೋತ್ಸದಂತಹ ಕಾರ್ಯಕ್ರಮ ವಿಶೇಷ ಮಹತ್ವ ಪಡೆದುಕೊಳ್ಳುತ್ತವೆ. ಅದರಲ್ಲೂ ಯುವ ಜನತೆಗೆ ಅರಣ್ಯ‌ಪರ ಕಾಳಜಿಗೆ ಹೆಚ್ಚಿಸಲು ಗಿಡ ನೆಡುವ ಕಾರ್ಯಕ್ರಮಗಳು ಹೆಚ್ಚು ನಡೆಯಬೇಕಿದೆ. ಅಂತಹ ಒಂದು 'ವಿಶೇಷ ಅಂಕಗಳ ಆಧಾರದ ವನಮಹೋತ್ಸವ' ಕಾರ್ಯಕ್ರಮ ಶಿರಸಿಯಲ್ಲಿ ನಡೆಯಿತು.

ಒಂದೆಡೆ ಸಸ್ಯಗಳ ರಾಶಿ.. ಇನ್ನೊಂದೆಡೆ ವಿಶಾಲವಾದ ಕೆರೆ.. ಮತ್ತೊಂದೆಡೆ ಕೆರೆ ದಡದ ಅಂಚಿನಲ್ಲಿ ಗಿಡ ನೆಡುತ್ತಿರುವ ವಿದ್ಯಾರ್ಥಿಗಳು.. ಈ ಎಲ್ಲಾ ದೃಶ್ಯಗಳು ಕಂಡು ಬಂದದ್ದು ಉತ್ತರ ಕನ್ನಡ ಜಿಲ್ಲೆ ಶಿರಸಿಯ ರಾಯರ ಕೆರೆ ತಟದಲ್ಲಿ. ಅರಣ್ಯ ಕಾಲೇಜು, ರಾಯರ ಕೆರೆ ಅಭಿವೃದ್ದಿ ಸಮಿತಿ ಹಾಗೂ ಶಿರಸಿ ಜೀವಜಲ‌ ಕಾರ್ಯಪಡೆ ವತಿಯಿಂದ 'ಹಸಿರು ಪದವಿ ವನಮಹೋತ್ಸವ' ಕಾರ್ಯಕ್ರಮ ನಡೆಸಲಾಯಿತು.

ಪದವಿ ಪರೀಕ್ಷೆಯಲ್ಲಿ ಗರಿಷ್ಟ 5 ಅಂಕ: ಅರಣ್ಯ ಕಾಲೇಜಿನ ಮೊದಲ ವರ್ಷದ 60 ಪದವಿ ವಿದ್ಯಾರ್ಥಿಗಳು ತಮ್ಮ ಹೆಸರಿನಲ್ಲಿ ತಲಾ ಎರಡರಂತೆ ಒಟ್ಟು 120 ಗಿಡಗಳನ್ನು ತಂದು ಕೆರೆಯ ದಡದಲ್ಲಿ ನೆಟ್ಟರು. ಗಿಡಗಳನ್ನು ತರುವುದು, ನೆಡುವುದು, ಆರೈಕೆ ಮಾಡುವುದು, ಬೇಸಿಗೆಯಲ್ಲಿ ನೀರು ಹಾಕಿ ರಕ್ಷಿಸುವುದು ಎಲ್ಲ ಜವಾಬ್ದಾರಿ ವಿದ್ಯಾರ್ಥಿಗಳದ್ದೇ ಆಗಿರುತ್ತದೆ. 3 ವರ್ಷದ ನಂತರ ಅವರವರ ಸಾಧನೆ ಪರೀಕ್ಷೆ ನಡೆಸಿ ಯಾರು ತಮ್ಮ ಹೆಸರಿನ ಗಿಡವನ್ನು ಸರಿಯಾಗಿ ಬೆಳೆಸಿದ್ದಾರೋ ಅವರಿಗೆ ಪದವಿ ಪರೀಕ್ಷೆಯಲ್ಲಿ ಗರಿಷ್ಟ 5 ಅಂಕವನ್ನು ನೀಡಲಾಗುತ್ತದೆ. ಇದು ‌ವಿದ್ಯಾರ್ಥಿಗಳಿಗೆ ಸಸಿಗಳ‌ ಮೇಲಿನ ಕಾಳಜಿ ಇನ್ನಷ್ಟು ವೃದ್ದಿಸುವಲ್ಲಿ ಸಹಕಾರಿಯಾಗಲಿದೆ.

ರಾಯರ ಕೆರೆಗೆ‌ ಮರುಜೀವ: ಕಳೆದ ನಾಲ್ಕು ವರ್ಷಗಳ ಹಿಂದೆ ಹೂಳು ತುಂಬಿ, ಗಿಡ ಗಂಟಿಗಳು ಬೆಳೆದು ಪಾಳು ಬಿದ್ದ ರಾಯರ ಕೆರೆಗೆ‌ ಜೀವ ತುಂಬಿದ್ದು ಶಿರಸಿಯ ಜೀವಜಲ ಕಾರ್ಯಪಡೆ. ಜೀವಜಲ ಕಾರ್ಯಪಡೆ ಅಧ್ಯಕ್ಷ ಶ್ರೀನಿವಾಸ್ ಹೆಬ್ಬಾರ್ ಅವರು‌ ಕೆರೆಯ ಹೂಳು ತೆಗೆಸಿ ಅಭಿವೃದ್ದಿ ಮಾಡಿಸಿದ್ದರು. ನಂತರ ಸುತ್ತಲೂ ಬೇಲಿ ನಿರ್ಮಿಸಿ ಕೆರೆಗೆ ಜೀವಕಳೆ ತುಂಬುವಂತೆ ಮಾಡಿದ್ದರು. ಇದೀಗ ಈ ವಿಶಾಲವಾದ ಕೆರೆಯಲ್ಲಿ ನೀರು ನಳನಳಿಸುತ್ತಿದೆ.

ವಿನೂತನ ಪ್ರಯತ್ನ: ಈ ಕೆರೆ ಅರಣ್ಯ ಕಾಲೇಜಿನ ಸಮೀಪದಲ್ಲಿ ಇರುವುದರಿಂದ ಗಿಡಗಳನ್ನು ಪೋಷಿಸುವುದು ಸುಲಭವಾಗಲಿದೆ. ಇದನ್ನು ಈ ವರ್ಷ ಹೊಸ ಕಾರ್ಯಕ್ರಮದ ಮೂಲಕ ಪರಿಚಯಿಸಲಾಗಿದೆ. ಇದು ದೇಶದಲ್ಲೇ ಪ್ರಥಮ ಪ್ರಯತ್ನ ಕೂಡ. ದೇಶದ ಯಾವ ಭಾಗದಲ್ಲಿ ಕೂಡ ಈ ರೀತಿ ಗಿಡಗಳನ್ನು ನೆಟ್ಟು ಅದನ್ನ ಪೋಷಿಸಿ ಮರವಾಗಿ ಬೆಳೆಸುವ ಕಾರ್ಯಕ್ಕೆ ಪರೀಕ್ಷೆಯ ಅಂಕಗಳನ್ನು ನೀಡುವ ಕಾರ್ಯಕ್ರಮ ಇಲ್ಲ. ಈ ಒಂದು ವಿನೂತನ ಪ್ರಯತ್ನದಿಂದಾಗಿ ಮಕ್ಕಳು ಚಿಕ್ಕ ವಯಸ್ಸಿನಿಂದಲೇ ಅರಣ್ಯವನ್ನ ರಕ್ಷಿಸುವ ಕಾರ್ಯ ಮೈಗೂಡಿಸಿಕೊಳ್ಳಬೇಕು. ಆ ಮೂಲಕ ಪರಿಸರ ರಕ್ಷಣೆಯೂ ಸಾಧ್ಯ ಎಂಬುವುದನ್ನು ತೋರಿಸುವ ಕೆಲಸ ಮಾಡುತ್ತಿದ್ದಾರೆ ಸಂಘಟಕರು.

ಒಟ್ಟಿನಲ್ಲಿ ಒಂದು ವಿನೂತನ ವನಮಹೋತ್ಸವ ಕಾರ್ಯಕ್ರಮದ ಮೂಲಕ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವ ಕೆಲಸಕ್ಕೆ ಕಾಲೇಜು ಮುಂದಾಗಿರೋದು ಶ್ಲಾಘನೀಯ. ಇಂತಹ ಇನ್ನಷ್ಟು ಪ್ರಯತ್ನಗಳು ನಡೆದಾಗ ವಿದ್ಯಾರ್ಥಿ ದೆಸೆಯಿಂದಲೇ ಅರಣ್ಯ ರಕ್ಷಣೆ ಜೊತೆ ಪರಿಸರದ ಬಗೆಗಿನ ಕಾಳಜಿ ಇನ್ನಷ್ಟು ಹೆಚ್ಚಾಗುವುದರಲ್ಲಿ ಸಂಶಯವಿಲ್ಲ. ಇಂತಹ ಕಾರ್ಯಕ್ರಮಗಳು ಇನ್ನುಳಿದ ಸಂಸ್ಥೆಗಳಿಗೂ ಮಾದರಿಯಾಗಬೇಕಿದೆ.

ಇದನ್ನೂ ಓದಿ: ಮಿಯಾವಾಕಿ ಅರಣ್ಯ ಪದ್ಧತಿ ಮೂಲಕ ಪರಿಸರ ರಕ್ಷಣೆ: ಲಕ್ಷಕ್ಕೂ ಅಧಿಕ ಗಿಡ ನೆಟ್ಟ ಪರಿಸರ ಪ್ರೇಮಿ ಜೀತ್ ಮಿಲನ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.