ETV Bharat / state

ಸನಾತನ ಧರ್ಮದ ವ್ಯಾಖ್ಯಾನ ತಿಳಿಸಿ : ಎಚ್ ಎನ್ ನಾಗಮೋಹನದಾಸ್

author img

By ETV Bharat Karnataka Team

Published : Sep 24, 2023, 3:15 PM IST

ಸನಾತನ ಧರ್ಮದ ಪರ ನಿಂತವರು ಅದರ ಸರಿಯಾದ ವ್ಯಾಖ್ಯಾನ ತಿಳಿಸಬೇಕು ಎಂದು ಹೈಕೋರ್ಟ್​ ನಿವೃತ್ತ ನ್ಯಾಯಮೂರ್ತಿ ಎಚ್​ ಎನ್​​ ನಾಗಮೋಹನ್​ದಾಸ್​ ಅವರು ಒತ್ತಾಯಿಸಿದ್ದಾರೆ.

ಹೈಕೋರ್ಟ್​ ನಿವೃತ್ತ ನ್ಯಾಯಮೂರ್ತಿ ಎಚ್​ ಎನ್​​ ನಾಗಮೋಹನ್​ದಾಸ್
ಹೈಕೋರ್ಟ್​ ನಿವೃತ್ತ ನ್ಯಾಯಮೂರ್ತಿ ಎಚ್​ ಎನ್​​ ನಾಗಮೋಹನ್​ದಾಸ್

ಹೈಕೋರ್ಟ್​ ನಿವೃತ್ತ ನ್ಯಾಯಮೂರ್ತಿ ಎಚ್​ ಎನ್​​ ನಾಗಮೋಹನ್​ದಾಸ್

ಶಿರಸಿ (ಉತ್ತರ ಕನ್ನಡ) : ಸನಾತನ ಧರ್ಮದ ಸರಿಯಾದ ವ್ಯಾಖ್ಯಾನವನ್ನು ಜನರಿಗೆ ತಿಳಿಸಬೇಕು. ಒಂದೊಮ್ಮೆ ಅದು ಮನುಕುಲ, ಸಮಾಜಕ್ಕೆ ಒಳ್ಳೆಯದು ಮಾಡುತ್ತದೆ ಎಂದಾದರೆ ಒಪ್ಪಬಹುದು. ಆದರೆ, ಜನವಿರೋಧಿ ಅಂಶಗಳಿದ್ದರೆ ವಿರೋಧಿಸಬೇಕು ಎಂದು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಚ್ ಎನ್ ನಾಗಮೋಹನದಾಸ್ ಹೇಳಿದರು.

ಶಿರಸಿಯಲ್ಲಿ ಭಾನುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸನಾತನ ಧರ್ಮದ ವಿಷಯವಾಗಿ ಗೊಂದಲ ಸೃಷ್ಟಿಸುವ ಬದಲು ಅದರ ಬಗ್ಗೆ ಜನಸಾಮಾನ್ಯರಿಗೆ ವ್ಯಾಖ್ಯಾನಿಸುವ ಗುರುತರ ಜವಾಬ್ದಾರಿ ಸನಾತನದ ಪರ ನಿಂತವರ ಮೇಲಿದೆ. ಸನಾತನ ಧರ್ಮದ ಬಗ್ಗೆ ಸರಿಯಾದ ವ್ಯಾಖ್ಯಾನ ಈವರೆಗೆ ಇಲ್ಲ. ಹೀಗಾಗಿ ಗೊಂದಲಮಯ ವಾತಾವರಣ ಸೃಷ್ಟಿಯಾಗಿದೆ. ಇಂಥ ಕಾಲಘಟ್ಟದಲ್ಲಿ ಸನಾತನ ಧರ್ಮದ ಪರ ನಿಂತವರು ಅದರ ಸರಿಯಾದ ವ್ಯಾಖ್ಯಾನ ತಿಳಿಸಬೇಕು ಎಂದರು.

ಸಂವಿಧಾನದ ಪೀಠಿಕೆಗೆ 42ನೇ ತಿದ್ದುಪಡಿ ಆಧಾರದ ಮೇಲೆ ಸೇರಿಸಿರುವ ಜಾತ್ಯತೀತ, ಸಮಾಜವಾದ ಹಾಗೂ ದೇಶದ ಐಕ್ಯತೆ ಪದಗಳನ್ನು ಕೇಂದ್ರ ಸರ್ಕಾರ ತೆಗೆದು ಸಂವಿಧಾನ ಪೀಠಿಕೆ ಹಂಚಿರುವುದು ತಪ್ಪು ಕೆಲಸ. ಇದು ಆಕಸ್ಮಿಕ ಅಥವಾ ಕಣ್ತಪ್ಪಿನಿಂದಾದ ಕೆಲಸವಲ್ಲ. ಬದಲಾಗಿ ಉದ್ದೇಶ ಪೂರ್ವಕವಾಗಿ ಮಾಡಿದ ಕಾರ್ಯ. ಇದು ಖಂಡನೀಯ. ಸರ್ಕಾರವು ಇನ್ನು ಮುಂದೆ ಇಂಥ ಗುರುತರ ತಪ್ಪು ಆಗದಂತೆ ಎಚ್ಚರಿಕೆ ವಹಿಸಬೇಕು ಎಂದು ಆಗ್ರಹಿಸಿದರು.

ಕಳೆದ ಬಿಜೆಪಿ ಸರ್ಕಾರದ ಅವಧಿಯ ಕಾಮಗಾರಿಗಳಲ್ಲಿ ಆಗಿದೆ ಎನ್ನಲಾದ 40 ಪರ್ಸಂಟೇಜ್ ಹಗರಣದ ತನಿಖೆಯು ಆಯೋಗದ ಮೂಲಕ ಇನ್ನಷ್ಟೇ ಆರಂಭವಾಗಬೇಕು. ಸರ್ಕಾರ ನೀಡಿದ ಆದೇಶದಲ್ಲಿ ಕೆಲವು ಅಸ್ಪಷ್ಟತೆಯಿದೆ. ಅವುಗಳನ್ನು ಸರಿಪಡಿಸಿಕೊಂಡು ಬರುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಅದು ಬಂದ ಬಳಿಕ ಪ್ರಕರಣದ ಮಾಹಿತಿ ಸಂಗ್ರಹಿಸಿ, ಸತ್ಯ ಹೊರತರಲು ಪ್ರಯತ್ನಿಸಲಾಗುವುದು ಎಂದರು.

ಲೋಕಸಭೆ, ರಾಜ್ಯಸಭೆಯಲ್ಲಿ ಮಹಿಳಾ ಮೀಸಲಾತಿ ಬಿಲ್ ಅಂಗೀಕಾರ ಆಗಿರುವುದು ಸ್ವಾಗತಾರ್ಹ ಎಂದ ಅವರು, 2011ರ ಜನಗಣತಿ ಆಧಾರದ ಮೇಲೆ 2024ರ ಲೋಕಸಭೆಯಲ್ಲಿ ಈ ಮೀಸಲಾತಿ ಅನುಷ್ಠಾನಕ್ಕೆ ತರಲು ಅವಕಾಶವಿದೆ. ಇದರ ಬಗ್ಗೆ ಸರ್ಕಾರ ಆದ್ಯತೆ ನೀಡುವ ಜತೆ ಮಹಿಳೆಯರಿಗೆ ಒಳ ಮೀಸಲಾತಿ ನೀಡುವ ಕೆಲಸವನ್ನು ಮಾಡಬೇಕು ಎಂದು ಹೇಳಿದರು.

ಇದೇ ವೇಳೆ ಒಂದು ದೇಶ ಒಂದು ಚುನಾವಣೆಯನ್ನು ವಿರೋಧಿಸಿದ ನಿವೃತ್ತ ನ್ಯಾಯಾಧೀಶರು, ಇದು ಸಮಂಜಸವಲ್ಲ ಎಂದರು. ಜೊತೆಗೆ ರಾಷ್ಟ್ರಪತಿಯವರನ್ನು ಸಂಸತ್ ಉದ್ಘಾಟನೆಗೆ ಕರೆಯದಿರುವುದು ಸರಿಯಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಅಲ್ಲದೇ ಅರಣ್ಯ ಅತಿಕ್ರಮಣದಾರರಿಗೆ ಸಂಬಂಧಿಸಿ 2006 ರಲ್ಲಿ ನಿರ್ಣಯವಾದ ಕಾನೂನನ್ನು ಜಾರಿಗೊಳಿಸಲಿ ಎಂದು ಒತ್ತಾಯಿಸಿದರು. ಈ ವೇಳೆ ನ್ಯಾಯವಾದಿಗಳಾದ ಅನಂತ್ ನಾಯಕ್, ರವೀಂದ್ರ ನಾಯ್ಕ ಇದ್ದರು.

ಇತ್ತೀಚಿನ ಕೆಲ ತೀರ್ಪುಗಳಿಂದ ನ್ಯಾಯಾಂಗದ ಮೇಲಿನ ನಂಬಿಕೆ ಕಡಿಮೆ ಆಗುತ್ತಿದೆ ಎಂದು ನಿವೃತ್ತ ನ್ಯಾಯಮೂರ್ತಿ ನಾಗಮೋಹನದಾಸ್ (ಫೆಬ್ರವರಿ 13-2023) ಅಭಿಪ್ರಾಯ ಪಟ್ಟಿದ್ದರು. ಶಿವಮೊಗ್ಗ ಪ್ರೆಸ್ ಟ್ರಸ್ಟ್ ವತಿಯಿಂದ ನಡೆದ ಸಂವಾದ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ್ದ ಅವರು, ಶಾಸಕಾಂಗ, ಕಾರ್ಯಾಂಗದ ಮೇಲೆ‌ ಜನ ನಂಬಿಕೆಯನ್ನು ಕಳೆದುಕೊಂಡಿದ್ದಾರೆ. ಇನ್ನೂ ನಂಬಿಕೆ ಉಳಿಸಿಕೊಂಡಿರುವ ಅಂಗ ಅದು ನ್ಯಾಯಾಂಗವಾಗಿದೆ. ಇತ್ತೀಚಿನ ಕೆಲ ತೀರ್ಪುಗಳಿಂದಾಗಿ ನ್ಯಾಯಾಂಗದಲ್ಲೂ ವಿಶ್ವಾಸವನ್ನು ಕಳೆದು‌ಕೊಳ್ಳುವ ಪ್ರಕ್ರಿಯೆ ಈ ದೇಶದಲ್ಲಿ ಪ್ರಾರಂಭವಾಗಿದೆ ಎಂದಿದ್ದರು.

ಇದನ್ನೂ ಓದಿ: ಇತ್ತಿಚೀನ ಕೆಲ ತೀರ್ಪುಗಳಿಂದ ನ್ಯಾಯಾಂಗದ ಮೇಲಿನ ನಂಬಿಕೆ ಕುಸಿತ: ನಾಗಮೋಹನ್ ದಾಸ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.