ETV Bharat / state

ಹಫ್ತಾ ನೀಡದ ಉದ್ಯಮಿಯ ಹತ್ಯೆಗೈದ ರೌಡಿ ಬನ್ನಂಜೆ ಗ್ಯಾಂಗ್‌: 9 ವರ್ಷಗಳ ಬಳಿಕ ಬಂತು ತೀರ್ಪು

author img

By

Published : Mar 30, 2022, 10:02 PM IST

ಉದ್ಯಮಿ ಆರ್.ಎನ್.ನಾಯಕ್ ಅವರಿಗೆ ಬನ್ನಂಜೆ ರಾಜಾ ಇಂಟರ್ ನೆಟ್ ಕಾಲ್ ಮಾಡಿ ಹಣ ಕೇಳಿದ್ದ. ಪದೇ ಪದೇ ಕಾಲ್ ಮಾಡಿ ಹಣ ಕೇಳಿ ಬೆದರಿಕೆ ಹಾಕಿರುವ ಕಾರಣ 2012ರಲ್ಲಿ ನಾಯಕ್ ಅವರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಇದರಿಂದ ಸಿಟ್ಟಿಗೆದ್ದಿದ್ದ ಬನ್ನಂಜೆ ಹತ್ಯೆಗೆ ಸಂಚು ರೂಪಿಸಿದ್ದ.

details about why assassinated the businessman N R nayak
details about why assassinated the businessman N R nayak

ಕಾರವಾರ: ಉತ್ತರಕನ್ನಡ ಮಾತ್ರವಲ್ಲ, ರಾಜ್ಯ ಹಾಗೂ ದೇಶದಲ್ಲಿ ಸಂಚಲನ ಮೂಡಿಸಿದ್ದ ಅಂಕೋಲಾದ ಉದ್ಯಮಿ ಆರ್.ಎನ್.ನಾಯಕ್ ಹತ್ಯೆ ಪ್ರಕರಣದ ತೀರ್ಪು ಇಂದು ಹೊರಬಿದ್ದಿದೆ. ಕುಖ್ಯಾತ ರೌಡಿ ಬನ್ನಂಜೆ ರಾಜಾ ಸೇರಿ 9 ಮಂದಿ ದೋಷಿಗಳು ಮತ್ತು ಮೂವರು ನಿರ್ದೋಷಿಗಳು ಎಂದು ನ್ಯಾಯಾಲಯ ಮಹತ್ವದ ತೀರ್ಪು ಪ್ರಕಟಿಸಿದೆ.

2013ರ ಡಿಸೆಂಬರ್ 21ರಂದು ಹತ್ಯೆಯಾಗಿದ್ದ ಆರ್.ಎನ್.ನಾಯಕ್ ಪ್ರಕರಣದ ಬಗ್ಗೆ ಬೆಳಗಾವಿಯ ಕೋಕಾ ನ್ಯಾಯಾಲಯದಲ್ಲಿ ಸುದೀರ್ಘ ವಿಚಾರಣೆ ನಡೆದು ನ್ಯಾಯಾಧೀಶ ಸಿ.ಎಂ.ಜೋಶಿ ಈ ತೀರ್ಪಿತ್ತರು. ಪ್ರಕರಣದಡಿ ಕೇರಳದ ರಬ್ದಿನ್, ಫಿಚೈ, ಬೆಂಗಳೂರಿನ ಮೊಹಮ್ಮದ್ ಶಾಬಂದ್ರಿ ಹಾಗೂ ಉತ್ತರಕನ್ನಡ ಜಿಲ್ಲೆಯ ಆನಂದ ನಾಯ್ಕ್ ಅವರನ್ನು ನಿರ್ದೋಷಿಗಳು ಎಂದು ನ್ಯಾಯಾಲಯ ಹೇಳಿದೆ.

ರ್‌ಎನ್ ನಾಯಕ ಹತ್ಯೆ
ಎನ್‌.ಆರ್‌.ನಾಯಕ್

ಪ್ರಮುಖ ಆರೋಪಿ ವಿವೇಕ್ ಉಪಾಧ್ಯಾಯ ಮೃತಪಟ್ಟಿದ್ದು, ಉಳಿದಂತೆ ಉತ್ತರಪ್ರದೇಶದ ಜಗದೀಶ ಪಟೇಲ್, ಬೆಂಗಳೂರಿನ ಅಭಿ ಭಂಡಗಾರ, ಉಡುಪಿಯ ಗಣೇಶ ಭಜಂತ್ರಿ, ಕೇರಳದ ಕೆ.ಎಂ.ಇಸ್ಮಾಯಿಲ್, ಎಂ.ಬಿ.ಸಂತೋಷ, ಹಾಸನದ ಮಹೇಶ್ ಅಚ್ಚಂಗಿ, ಉಡುಪಿ ಮೂಲದ ಬನ್ನಂಜೆ ರಾಜಾ, ಬೆಂಗಳೂರಿನ ಚಂದ್ರರಾಜ್, ಉತ್ತರಪ್ರದೇಶದ ಅಂಕಿತಕುಮಾರ್ ಕಶ್ಯಪ್ ದೋಷಿಗಳಾಗಿದ್ದಾರೆ. 9 ವರ್ಷಗಳ ಸುದೀರ್ಘ ವಿಚಾರಣೆಯ ಈ ತೀರ್ಪು ಬಂದಿದೆ ಅನ್ನೋದು ಗಮನಾರ್ಹ. ಆದರೆ, ಶಿಕ್ಷೆಯ ಪ್ರಮಾಣವನ್ನು ಏಪ್ರಿಲ್‌ 4 ರಂದು ಪ್ರಕಟಿಸುವುದಾಗಿ ಕೋರ್ಟ್‌ ತಿಳಿಸಿದೆ.

ಹಾಡಹಗಲೇ ನಡೆದಿತ್ತು ಹತ್ಯೆ: ಸಹಕಾರಿ, ರಾಜಕೀಯ, ಅದಿರು ಉದ್ಯಮ.. ಹೀಗೆ ಹಲವು ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿದ್ದ ಆರ್.ಎನ್.ನಾಯಕ್ 2013ರ ಡಿಸೆಂಬರ್ 21 ರಂದು ಮಧ್ಯಾಹ್ನ ಅಂಕೋಲಾದಲ್ಲಿರುವ ತಮ್ಮ ದ್ವಾರಕಾ ಸೌಹಾರ್ದ ಸಹಕಾರಿ ಬ್ಯಾಂಕ್​ನಿಂದ ಹೊರಬಂದು ಕಾರಿನಲ್ಲಿ ಕುಳಿತುಕೊಳ್ಳುತ್ತಿದ್ದಂತೆ ಅವರ ಗುಂಡಿನ ದಾಳಿ ನಡೆಸಲಾಗಿತ್ತು. ಈ ವೇಳೆ ಆರ್.ಎನ್.ನಾಯಕ್ ಅವರಿಗೆ ಗುಂಡು ತಗುಲಿ ಗನ್‌ಮ್ಯಾನ್ ರಮೇಶ್ ಪ್ರತಿಯಾಗಿ ಗುಂಡು ಹಾರಿಸಿದ ವಿವೇಕ್ ಉಪಾಧ್ಯಾಯನನ್ನು ಬೆನ್ನತ್ತಿ ತೆರಳಿದ್ದರು. ಈ ವೇಳೆ ಇಬ್ಬರ ಕಡೆಯಿಂದಲೂ ಗುಂಡಿನ ಚಕಮಕಿ ನಡೆದು ಬಸ್ ನಿಲ್ದಾಣದ ಬಳಿ ವಿವೇಕ್‌ಗೆ ಗುಂಡು ಬಡಿದಿತ್ತು.

ಬಳಿಕ ಸ್ಥಳ ಪರಿಶೀಲನೆಯ ವೇಳೆ ಓಮ್ನಿ ಕಾರೊಂದು ಪತ್ತೆಯಾಗಿತ್ತು. ಅದರಲ್ಲಿದ್ದ ದಾಖಲಾತಿಗಳನ್ನು ಪರಿಶೀಲಿಸಿ ಶಿವಮೊಗ್ಗದಲ್ಲಿ ಇಬ್ಬರನ್ನು ಬಂಧಿಸಲಾಗಿತ್ತು. ನಂತರ ತನಿಖೆ ನಡೆದು ಬನ್ನಂಜೆ ರಾಜ ತನ್ನ ಸಹಚರರನ್ನು ಬಿಟ್ಟು ಹತ್ಯೆ ಮಾಡಿಸಿರುವುದು ತಿಳಿದುಬಂದಿತ್ತು. ಆರ್.ಎನ್.ನಾಯಕ್ ಕೊಲೆಗೆ ಜೈಲಿನಲ್ಲಿದ್ದುಕೊಂಡೇ ಸಂಚು ರೂಪಿಸಿರುವುದು ತನಿಖೆಯಿಂದ ದೃಢಪಟ್ಟಿತ್ತು.

ಇದನ್ನೂ ಓದಿ: ಉದ್ಯಮಿ ಕೊಲೆ ಕೇಸ್‌: ಭೂಗತ ಪಾತಕಿ ಬನ್ನಂಜೆ ರಾಜಾ ಸೇರಿ 9 ಆರೋಪಿಗಳು ದೋಷಿ- ಕೋರ್ಟ್​

ಹಫ್ತಾ ನೀಡದ್ದಕ್ಕೆ ಹತ್ಯೆ: ಬನ್ನಂಜೆ ರಾಜಾ ಉದ್ಯಮಿ ಆರ್.ಎನ್.ನಾಯಕ್ ಅವರಿಗೆ ಇಂಟರ್‌ನೆಟ್ ಕಾಲ್ ಮಾಡಿ ಹಣ ಕೇಳಿದ್ದ. ಪದೇ ಪದೇ ಕರೆ ಮಾಡಿ ಹಣ ಕೇಳಿ ಬೆದರಿಕೆ ಹಾಕಿದ ಕಾರಣ 2012ರಲ್ಲಿ ನಾಯಕ್ ಅವರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಇದರಿಂದ ಸಿಟ್ಟಿಗೆದ್ದಿದ್ದ ಬನ್ನಂಜೆ, ಆರ್.ಎನ್.ನಾಯಕ್ ಹತ್ಯೆಗೆ ಸಂಚು ರೂಪಿಸಿದ್ದಾನೆ.

9 ವರ್ಷಗಳ ಬಳಿಕ ತೀರ್ಪು: ರೌಡಿ ಬನ್ನಂಜೆಯನ್ನು ಬಂಧಿಸಿ 2015ರ ಆಗಸ್ಟ್‌ 14ರಂದು ಬೆಳಗಾವಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಆರ್.ಎನ್.ನಾಯಕ್ ಹತ್ಯೆ ಪ್ರಕರಣವನ್ನು ಗಂಭೀರವಾಗಿ ಹಾಗೂ ಸವಾಲಾಗಿ ಸ್ವೀಕರಿಸಿದ್ದ ಪೊಲೀಸ್ ಇಲಾಖೆ, ಕೋಕಾ ಕಾಯ್ದೆಯಡಿ ವಿಚಾರಣೆ ನಡೆಸಿದ್ದರಿಂದ ಪ್ರಕರಣಕ್ಕೆ ಸಂಬಂಧಿಸಿದಂತೆ 16 ಆರೋಪಿಗಳನ್ನು ಗುರುತಿಸಿ ಅವರಲ್ಲಿ 13 ಆರೋಪಿಗಳನ್ನು ಬಂಧಿಸಿ ಬೆಳಗಾವಿಯ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಿತ್ತು. ಪ್ರಕರಣದ 9ನೇ ಆರೋಪಿಯಾಗಿ ಬನ್ನಂಜೆ ರಾಜಾನ ಮೇಲೆ ಸುಮಾರು 500 ಪುಟಗಳ ಚಾರ್ಜ್‌ಶೀಟ್ ಅನ್ನು ಪೊಲೀಸರು ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಆದರೆ, ಸುದೀರ್ಘ 9 ವರ್ಷಗಳ ವಿಚಾರಣೆ ನಡೆಸಿದ ನ್ಯಾಯಾಲಯ ತೀರ್ಪು ಪ್ರಕಟಿಸಿದೆ.

ಪೊಲೀಸ್ ಸಿಬ್ಬಂದಿ ಮರೆತ ಸರ್ಕಾರ: ಉದ್ಯಮಿ ಆರ್.ಎನ್.ನಾಯಕ್ ಅವರನ್ನು ನಡುಬೀದಿಯಲ್ಲಿ ಹತ್ಯೆ ಮಾಡಲು ಹಂತಕರು ಸುತ್ತುವರೆದು ನಿಂತಿದ್ದಾಗ ಧೈರ್ಯಗುಂದದೆ ಹಂತಕರ ಮೇಲೆ ಗುಂಡು ಹಾರಿಸಿ ಒಬ್ಬನನ್ನು ಎನ್​ಕೌಂಟರ್ ಮಾಡಿದ ಪೊಲೀಸ್ ಕಾನ್​ಸ್ಟೇಬಲ್​ ರಮೇಶ ಗೌಡ ಅವರಿಗೆ ಸರ್ಕಾರ ಸೂಕ್ತ ಬಹುಮಾನ ಘೋಷಿಸಿತ್ತಾದರೂ ಈವರೆಗೂ ನೀಡಿಲ್ಲ. ಹತ್ಯೆ ಘಟನೆಗೆ ಸಂಬಂಧಿಸಿ 9 ಜನರಿಗೆ ಶಿಕ್ಷೆ ವಿಧಿಸಿರುವ ಸಂದರ್ಭದಲ್ಲಿ ಅಂದು ಜೀವದ ಹಂಗು ತೊರೆದು ರಕ್ಷಣೆಗೆ ಮುಂದಾಗಿದ್ದ ಪೊಲೀಸ್ ಸಿಬ್ಬಂದಿಯ ಕಾರ್ಯಕ್ಷಮತೆಯನ್ನು ಸಾರ್ವಜನಿಕರು ಸ್ಮರಿಸಿದ್ದಾರೆ.

ಸಾಹಸಿ ಪೊಲೀಸ್ ಸಿಬ್ಬಂದಿ ಮರೆತ ಸರ್ಕಾರ

2015ರಲ್ಲಿ ಪೊಲೀಸ್ ಇಲಾಖೆ ಘೋಷಿಸಿದ್ದ ಒಂದು ಲಕ್ಷ ರೂಪಾಯಿ ಬಹುಮಾನ ಸಿಬ್ಬಂದಿಗೆ ಇದುವರೆಗೂ ನೀಡಿಲ್ಲ. ಮುಖ್ಯಮಂತ್ರಿ ಪದಕ ಹಾಗೂ ಹಿಂದೆ ಪೊಲೀಸ್ ಮಹಾನಿರ್ದೇಶಕರಾಗಿದ್ದ ನೀಲಮಣಿ ರಾಜು ನೀಡಿದ 20 ಸಾವಿರ ರೂಪಾಯಿ ನಗದು ಬಹುಮಾನ ಬಿಟ್ಟರೆ ಇಲಾಖೆಯಾಗಲಿ, ಸರ್ಕಾರವಾಗಲಿ ರಮೇಶ ಗೌಡರಿಗೆ ಸಹಾಯಹಸ್ತ ಚಾಚಿಲ್ಲ. ಇಂತಹ ಘಟನೆಗಳು ನಡೆದಾಗ ಎದೆಗುಂದದೆ ಕರ್ತವ್ಯ ನಿಭಾಯಿಸುವುದು ಸುಲಭದ ಮಾತಲ್ಲ. ಆದರೂ ಪ್ರಾಣ ಪಣಕ್ಕಿಟ್ಟು ಅಂದು ಶತಾಯಗತಾಯ ಆರ್.ಎನ್.ನಾಯಕ್‌ ಅವರನ್ನು ಉಳಿಸಲು ಹೋರಾಡಿದ ರಮೇಶ್ ನಾಯ್ಕ ಅವರನ್ನು ಸರ್ಕಾರ ಮರೆತಿದೆ ಎಂದು ಜನಶಕ್ತಿ ವೇದಿಕೆ ಅಧ್ಯಕ್ಷ ಮಾಧವ ನಾಯಕ ಬೇಸರ ವ್ಯಕ್ತಪಡಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.