ETV Bharat / state

36 ಸಾವಿರ ಕಿ.ಮೀ ಸೈಕಲ್ ಯಾತ್ರೆ: ಸಾವಯವ ಕೃಷಿ, ಪ್ಲಾಸ್ಟಿಕ್ ಬಳಕೆ ಬಗ್ಗೆ ಜನ ಜಾಗೃತಿ

author img

By

Published : Jun 20, 2022, 8:32 PM IST

ಮಧ್ಯಪ್ರದೇಶದ ಮುರೆನಾ ಜಿಲ್ಲೆಯ ಸಿಕ್ರೋದಾ ಗ್ರಾಮದ ಬ್ರಿಜೇಶ್ ಶರ್ಮಾ ಏಕಬಳಕೆಯ ಪ್ಲಾಸ್ಟಿಕ್‌ನಿಂದ ಪರಿಸರದ ಮೇಲೆ ಉಂಟಾಗುತ್ತಿರುವ ಅಡ್ಡಪರಿಣಾಮ ಹಾಗೂ ಸಾವಯಕ ಕೃಷಿಯ ಮಹತ್ವದ ಕುರಿತು ಜಾಗೃತಿ ಮೂಡಿಸಲು ದೇಶದಾದ್ಯಂತ ಸೈಕಲ್ ಯಾತ್ರೆಯನ್ನು ಕೈಗೊಂಡಿದ್ದಾರೆ.

cycle-ride-to-raise-awareness-about-plastic-and-organic-farming
ಮಧ್ಯಪ್ರದೇಶದ ಯುವಕನಿಂದ ಜನಜಾಗೃತಿಗೆ ಸೈಕಲ್ ಯಾತ್ರೆ

ಕಾರವಾರ: ಆತ ಸೈನ್ಯ ಸೇರಬೇಕು, ದೇಶಸೇವೆ ಮಾಡಬೇಕು ಎನ್ನುವ ಮಹದಾಸೆ ಇಟ್ಟುಕೊಂಡಿದ್ದ ಯುವಕ. ಆದರೆ ತರಬೇತಿ ವೇಳೆ ಕಾಲಿಗೆ ಉಂಟಾದ ಪೆಟ್ಟಿನಿಂದಾಗಿ ಸೈನ್ಯ ಸೇರಲು ಸಾಧ್ಯವಾಗಲಿಲ್ಲ. ಆದರೂ ಸುಮ್ಮನೆ ಮನೆಯಲ್ಲಿ ಕೂರದೆ ಒಳ್ಳೆಯ ಉದ್ದೇಶದೊಂದಿಗೆ ದೇಶ ಸುತ್ತಿ ಜಾಗೃತಿ ಮೂಡಿಸಲು ಮುಂದಾಗಿದ್ದಾನೆ.


ಮಧ್ಯಪ್ರದೇಶದ ಮುರೆನಾ ಜಿಲ್ಲೆಯ ಸಿಕ್ರೋದಾ ಗ್ರಾಮದ ಬ್ರಿಜೇಶ್ ಶರ್ಮಾ ಇದೀಗ ಸೈಕಲ್ ಮೂಲಕ ದೇಶಸುತ್ತಿ ಜಾಗೃತಿ ಮೂಡಿಸುವ ಕೆಲಸಕ್ಕೆ ಮುಂದಾಗಿದ್ದಾರೆ. 32 ವರ್ಷ ಪ್ರಾಯದ ಬ್ರಿಜೇಶ್ 2019ರ ಸೆಪ್ಟೆಂಬರ್ 17 ರಂದು ಗುಜರಾತ್‌ನ ಗಾಂಧಿನಗರದಿಂದ ತಮ್ಮ ಸೈಕಲ್ ಜಾಥಾ ಆರಂಭಿಸಿದರು. ಏಕಬಳಕೆಯ ಪ್ಲಾಸ್ಟಿಕ್‌ನಿಂದ ಪರಿಸರದ ಮೇಲೆ ಉಂಟಾಗುತ್ತಿರುವ ಅಡ್ಡಪರಿಣಾಮ ಹಾಗೂ ಸಾವಯಕ ಕೃಷಿಯ ಮಹತ್ವದ ಕುರಿತು ಜಾಗೃತಿ ಮೂಡಿಸಲು ಈ ಸೈಕಲ್ ಯಾತ್ರೆಯನ್ನು ಬ್ರಿಜೇಶ್ ಕೈಗೊಂಡಿದ್ದಾರೆ.

ಆದರೆ ಸೈಕಲ್ ಯಾತ್ರೆ ಆರಂಭಿಸಿದ ಬಳಿಕ 2020ರಲ್ಲಿ ಎದುರಾದ ಕೊರೊನಾ ಲಾಕ್‌ಡೌನ್‌ನಿಂದಾಗಿ ಮಹಾರಾಷ್ಟ್ರದ ಶಹಾಪುರದಲ್ಲಿ ಬುಡಕಟ್ಟು ಸಮುದಾಯದವರೊಂದಿಗೆ 6 ತಿಂಗಳ ಕಾಲ ಉಳಿದುಕೊಳ್ಳುವಂತಾಯಿತು. ನಂತರ ಮತ್ತೆರಡು ಲಾಕ್‌ಡೌನ್‌ನಲ್ಲೂ ಮಹಾರಾಷ್ಟ್ರದಲ್ಲೇ ಜಾಥಾ ನಡೆಸಿದ್ದು ಕೊರೊನಾ ಕಡಿಮೆಯಾದ ಬಳಿಕ ಗೋವಾ ದಾಟಿ ಇದೀಗ ಕರ್ನಾಟಕದ ಕಾರವಾರಕ್ಕೆ ಆಗಮಿಸಿದ್ದಾರೆ.

ಎಂಟು ರಾಜ್ಯಗಳಲ್ಲಿ ಜಾಗೃತಿ: ಬ್ರಿಜೇಶ್ ಇದುವರೆಗೆ ಗುಜರಾತ್, ರಾಜಸ್ಥಾನ, ಹರಿಯಾಣ, ದೆಹಲಿ, ಉತ್ತರಪ್ರದೇಶ, ಮಧ್ಯಪ್ರದೇಶ, ಮಹಾರಾಷ್ಟ್ರ ಹಾಗೂ ಗೋವಾ ಸೇರಿ 8 ರಾಜ್ಯಗಳಿಗೆ ಭೇಟಿ ನೀಡಿದ್ದಾರೆ. ಮಾರ್ಗದಲ್ಲಿ ಸಿಗುವ ಜನರು ಹಾಗೂ ಶಾಲೆಗಳಿಗೆ ಭೇಟಿ ನೀಡಿ ಅಲ್ಲಿನ ವಿದ್ಯಾರ್ಥಿಗಳಿಗೆ ಏಕಬಳಕೆಯ ಪ್ಲಾಸ್ಟಿಕ್‌ನ ವ್ಯತಿರಿಕ್ತ ಪರಿಣಾಮದ ಕುರಿತು ಜಾಗೃತಿ ಮೂಡಿಸುತ್ತಾರೆ. ಜೊತೆಗೆ ಗ್ರಾಮೀಣ ಪ್ರದೇಶಗಳಿಗೆ ತೆರಳಿ ಅಲ್ಲಿನ ರೈತರಿಗೆ ಸಾವಯವ ಕೃಷಿಯ ಕುರಿತು ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ.

ಇದುವರೆಗಿನ ಜಾಥಾದಲ್ಲಿ 30 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು 9 ಲಕ್ಷಕ್ಕೂ ಅಧಿಕ ರೈತರಿಗೆ ಜಾಗೃತಿ ಮೂಡಿಸಿದ್ದಾರೆ. ಏಳೂವರೆ ಸಾವಿರಕ್ಕೂ ಅಧಿಕ ಗ್ರಾಮಗಳು ಹಾಗೂ 205ಕ್ಕೂ ಅಧಿಕ ನಗರಗಳಿಗೆ ಭೇಟಿ ನೀಡಿದ್ದಾರೆ. ಇದುವರೆಗೆ ಸುಮಾರು 36 ಸಾವಿರ ಕಿಲೋ ಮೀಟರ್ ದೂರವನ್ನು ಇವರು ಸೈಕಲ್‌ನಲ್ಲಿ ಕ್ರಮಿಸಿದ್ದಾರೆ. ಇದುವರೆಗೆ ಭೇಟಿ ನೀಡಿದ ಗ್ರಾಮಗಳಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಕೆಲವೊಂದು ಗ್ರಾಮಗಳ ಶಾಲೆ, ದೇವಸ್ಥಾನಗಳಲ್ಲಿ ಇವರ ಜಾಗೃತಿಯಿಂದಾಗಿ ಏಕಬಳಕೆಯ ಪ್ಲ್ಯಾಸ್ಟಿಕ್ ಮೇಲೆ ನಿರ್ಬಂಧ ವಿಧಿಸಿದ್ದಾರೆಂದು ಅವರು ಹೇಳಿದ್ದಾರೆ.

ಸದ್ಯ ಬ್ರಿಜೇಶ್ ಶರ್ಮಾ ಉತ್ತರಕನ್ನಡ, ಉಡುಪಿ, ದಕ್ಷಿಣಕನ್ನಡ ಮಾರ್ಗವಾಗಿ ಕೇರಳ, ಆಂಧ್ರಪ್ರದೇಶ ರಾಜ್ಯಗಳತ್ತ ಹೊರಟಿದ್ದು ಭಾರತ ಸುತ್ತಲು ಇನ್ನೂ ಐದಾರು ವರ್ಷಗಳೇ ಬೇಕಾಗಬಹುದು ಎನ್ನುತ್ತಾರೆ. ಜನರು ನೀಡುವ ಊಟ, ವಸತಿಯೊಂದಿಗೆ ತಮ್ಮ ಜಾಗೃತಿ ಕಾರ್ಯ ಮುಂದುವರೆಸಿದ್ದಾರೆ.

ಇದನ್ನೂ ಓದಿ: ನ್ಯಾಷನಲ್ ಕಾಂಗ್ರೆಸ್ ಬದಲು ಪಾಕಿಸ್ತಾನ ಕಾಂಗ್ರೆಸ್ ಪಾರ್ಟಿ ಎಂದು ಹೆಸರು ಬದಲಿಸಲಿ : ಯತ್ನಾಳ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.