ETV Bharat / state

ಆರ್.ಎನ್. ನಾಯಕ ಹತ್ಯೆ ಪ್ರಕರಣ; ಪೊಲೀಸರ ಪರಿಶ್ರಮಕ್ಕೆ ಕೊನೆಗೂ ಸಿಕ್ತು ಯಶಸ್ಸು!

author img

By

Published : Apr 6, 2022, 8:45 AM IST

ಉತ್ತರಕನ್ನಡ ಜಿಲ್ಲೆಯ ಅಂಕೋಲಾ ಪಟ್ಟಣದಲ್ಲಿ ನಡೆದಿದ್ದ ಉದ್ಯಮಿ ಆರ್.ಎನ್.ನಾಯಕ ಹತ್ಯೆ ಪ್ರಕರಣದಲ್ಲಿ ಅಂತೂ 9 ವರ್ಷಗಳ ಬಳಿಕ 9 ಮಂದಿ ಅಪರಾಧಿಗಳಿಗೆ ಶಿಕ್ಷೆ ಪ್ರಕಟವಾಗಿದೆ. ಹತ್ತು ಹಲವು ಸವಾಲಿನ ನಡುವೆಯೂ ರಾಜ್ಯ ಪೊಲೀಸರ ನೆರವಿನೊಂದಿಗೆ ಜಿಲ್ಲೆಯ ಪೊಲೀಸರು ಭೂಗತಪಾತಕಿಗಳ ಲೋಕವನ್ನೂ ಭೇದಿಸಿ ಅಪರಾಧಿಗಳನ್ನ ಬಂಧಿಸುವಲ್ಲಿ 9 ವರ್ಷಗಳ ಕಾಲ ಶ್ರಮಿಸಿದ್ದ ಈ ಪ್ರಕರಣದಲ್ಲಿ ಪೊಲೀಸರ ಪರಿಶ್ರಮಕ್ಕೆ ಯಶಸ್ಸು ಸಿಕ್ಕಂತಾಗಿದೆ. ಈ ಕುರಿತು ಒಂದು ವರದಿ ಇಲ್ಲಿದೆ ನೋಡಿ.

court-verdicts-on-rn-nayaka-murder-case
ಆರ್.ಎನ್. ನಾಯಕ ಹತ್ಯೆ ಪ್ರಕರಣ; ಪೊಲೀಸರ ಪರಿಶ್ರಮಕ್ಕೆ ಕೊನೆಗೂ ಸಿಕ್ಕ ಯಶಸ್ಸು!

ಕಾರವಾರ: ಕರಾವಳಿ ಜಿಲ್ಲೆ ಉತ್ತರಕನ್ನಡದಲ್ಲಿ ಸಹಕಾರಿ ಸಂಸ್ಥೆಗಳನ್ನ ಕಟ್ಟಿ, ಅದೆಷ್ಟೋ ಜನರಿಗೆ ಉದ್ಯೋಗ ಒದಗಿಸಿ, ಲಾಭದತ್ತ ಮುನ್ನುಗ್ಗುತ್ತ ಯಶಸ್ವಿ ಉದ್ಯಮಿಯಾಗಿದ್ದವರು ಅಂಕೋಲಾದ ನಿವಾಸಿ ಆರ್.ಎನ್.ನಾಯಕ. 2009ರಿಂದಲೇ ಬನ್ನಂಜೆ ರಾಜಾ ಒಡೆತನದ ಬಿ.ಆರ್ ಕಂಪನಿಯಿಂದ ಉದ್ಯಮ ಆರ್.ಎನ್.ನಾಯಕಗೆ 3 ಕೋಟಿ ರೂಪಾಯಿ ಹಫ್ತಾಕ್ಕೆ ಬೇಡಿಕೆ ಬಂದಿತ್ತು. ಆದರೂ ಇದಕ್ಕೆ ತಲೆಕೆಡಿಸಿಕೊಳ್ಳದ ಆರ್.ಎನ್.ನಾಯಕ ತಮ್ಮ ಉದ್ಯಮ ಮುಂದುವರಿಸಿದ್ದರು. ಆದರೆ, 2012ರಲ್ಲಿ ಬಿ.ಆರ್.ಕಂಪನಿಯಿಂದ ಹಫ್ತಾಕ್ಕಾಗಿ ಮತ್ತೆ ಬೇಡಿಕೆ ಬಂದಿದ್ದು ಕೊಡದಿದ್ದರೆ ಕೊಲ್ಲುವ ಬೆದರಿಕೆಯೊಡ್ಡಿದ ಹಿನ್ನೆಲೆ ಆರ್.ಎನ್.ನಾಯಕ ಅಂಕೋಲಾ ಪೊಲೀಸರಿಗೆ ದೂರು ನೀಡಿದ್ದರು.

ಒಂದೇ ವರ್ಷದ ಅಂತರದಲ್ಲಿ, ಅಂದರೆ 2013ರ ಡಿಸೆಂಬರ್ 21ಕ್ಕೆ ಯಾರೂ ಊಹಿಸದಂತೆ ಅಂಕೋಲಾ ಪಟ್ಟಣದಲ್ಲಿ ಹಾಡಹಗಲೇ ಶೂಟೌಟ್‌ ನಡೆದಿದ್ದು ಆರ್.ಎನ್.ನಾಯಕ ಹತ್ಯೆಗೊಳಗಾಗಿದ್ದರು. ಗುಂಡಿಕ್ಕಿದ್ದ ಓರ್ವನನ್ನ ನಾಯಕರ ಗನ್‌ಮ್ಯಾನ್ ಆಗಿದ್ದ ಡಿಎಆರ್ ಪೊಲೀಸ್ ಕಾನ್‌ಸ್ಟೇಬಲ್ ರಮೇಶ ಗೌಡ ಎನ್ನುವವರು ಎನ್‌ಕೌಂಟರ್ ಮಾಡಿದ್ದರು.

ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದ್ದ ಹಾಡಹಗಲೇ ನಡೆದ ಓರ್ವ ಉದ್ಯಮಿಯ ಕೊಲೆ ಪ್ರಕರಣದ ತನಿಖೆ ಕೈಗೊಂಡ ಪೊಲೀಸರಿಗೆ ಬಿ.ಆರ್.ಕಂಪನಿ ಹೆಸರಿನಲ್ಲಿ ಭೂಗತ ಪಾತಕ ಲೋಕವನ್ನೇ ಸೃಷ್ಟಿಸಿಕೊಂಡಿದ್ದ ಬನ್ನಂಜೆ ರಾಜನ ಕೈವಾಡ ಕಂಡು ಬಂದಿತ್ತು. ಹೀಗಾಗಿ ರಾಜ್ಯದಲ್ಲಿ ಮೊಟ್ಟಮೊದಲ ಬಾರಿಗೆ 2014ರಲ್ಲಿ ಕೋಕಾ ಕಾಯ್ದೆ ಅಡಿ ಈ ಪ್ರಕರಣ ದಾಖಲಾಗಿದ್ದು, 8 ಮಂದಿ ಆರೋಪಿಗಳನ್ನ ಪೊಲೀಸರು ಬಂಧಿಸಿದ್ದರು.

2015ರ ಆಗಸ್ಟ್ 13ರಲ್ಲಿ ಭೂಗತಪಾತಕಿ ಬನ್ನಂಜೆ ರಾಜನನ್ನು ಮೊರಕ್ಕೋದಿಂದ ಪೊಲೀಸರು ಬಂಧಿಸಿ ಭಾರತಕ್ಕೆ ಕರೆತಂದಿದ್ದು ಇದೀಗ ಪ್ರಕರಣದ ಆರೋಪಿಗಳಿಗೆ ಶಿಕ್ಷೆ ಪ್ರಕಟವಾಗಿದೆ. ಇನ್ನು ಪ್ರಕರಣದಲ್ಲಿ ಸರ್ಕಾರದ ಪರವಾಗಿ ವಕಾಲತ್ತು ವಹಿಸಿಕೊಂಡಿದ್ದ ವಿಶೇಷ ಸರ್ಕಾರಿ ವಕೀಲರಾದ ಪುರಾಣಿಕ್ ಮಠ ಹಾಗೂ ಹೆಚ್ಚುವರಿ ವಿಶೇಷ ಸರ್ಕಾರಿ ವಕೀಲ ಶಿವಪ್ರಸಾದ್ ಆಳ್ವಾ ಕಳೆದ 9 ವರ್ಷಗಳಲ್ಲಿ ಪ್ರಕರಣದ ಕುರಿತಾಗಿ 342 ಸಾಕ್ಷಿಗಳನ್ನ, 1027 ಪುಟಗಳ ದಾಖಲೆ, ಅಪರಾಧಕ್ಕೆ ಬಳಸಿದ, ಘಟನಾ ಸ್ಥಳದಲ್ಲಿ ಸಿಕ್ಕ 137 ಸಾಕ್ಷ್ಯ ವಸ್ತುಗಳನ್ನ ಪೊಲೀಸರ ಸಹಕಾರದಿಂದಾಗಿ ಕೋರ್ಟ್‌ಗೆ ಹಾಜರುಪಡಿಸಿದ್ದರು.

ಪ್ರಕರಣ ಅಂತಿಮಘಟ್ಟ ತಲುಪುವಷ್ಟರಲ್ಲಿ ಸುಮಾರು 12 ಮಂದಿ ಸಾಕ್ಷಿಗಳು ಮೃತಪಟ್ಟಿದ್ದರು. ಒಟ್ಟು 16 ಮಂದಿ ಆರೋಪಿಗಳಲ್ಲಿ ಮೂವರು ಈವರೆಗೂ ನಾಪತ್ತೆಯಾಗಿದ್ದಾರೆ. ಎಲ್ಲ ಸಾಕ್ಷ್ಯಾಧಾರಗಳನ್ನ ಕೂಲಂಕಷವಾಗಿ ಪರಿಶೀಲಿಸಿದ ಕೋಕಾ ವಿಶೇಷ ಕೋರ್ಟ್‌ನ ನ್ಯಾಯಾಧೀಶ ಸಿ.ಎಂ.ಜೋಷಿ ಅಂತಿಮವಾಗಿ ಮೂವರನ್ನು ಪ್ರಕರಣದಲ್ಲಿ ನಿರ್ದೋಷಿಗಳೆಂದು ಆದೇಶಿಸಿ, 9 ಮಂದಿಯನ್ನ ಅಪರಾಧಿಗಳೆಂದು ಪರಿಗಣಿಸಿದೆ. ಬನ್ನಂಜೆ ರಾಜ ಸೇರಿ 8 ಮಂದಿಗೆ ಜೀವಾವಧಿ, ಓರ್ವನಿಗೆ 5 ವರ್ಷದ ಕಠಿಣ ಶಿಕ್ಷೆ ವಿಧಿಸಿ ಕೋರ್ಟ್ ತೀರ್ಪು ನೀಡಿದೆ.

ಪ್ರಕರಣದ ತೀರ್ಪನ್ನು ಅಂಕೋಲಾ ಭಾಗದ ಸ್ಥಳೀಯರು ಸ್ವಾಗತಿಸಿದ್ದು ನ್ಯಾಯಾಂಗ ವ್ಯವಸ್ಥೆಯಲ್ಲಿ ಪ್ರಕರಣಗಳ ವಿಚಾರಣೆ ಶೀಘ್ರವಾಗಿ ನಡೆಯುವಂತಾಗಬೇಕೆಂದು ಅಭಿಪ್ರಾಯಪಟ್ಟಿದ್ದಾರೆ. ಒಟ್ಟಾರೇ ರಾಜ್ಯದಲ್ಲಿ ದಾಖಲಾಗಿದ್ದ ಮೊದಲ ಕೋಕಾ ಪ್ರಕರಣದಲ್ಲಿ 9 ವರ್ಷಗಳ ಬಳಿಕ ತೀರ್ಪು ಪ್ರಕಟಗೊಂಡಿದ್ದು, ಪೊಲೀಸರ ಶ್ರಮಕ್ಕೆ ಜಯ ಸಿಕ್ಕಂತಾಗಿದೆ. ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಇನ್ನೂ ಮೂವರು ಸಿಕ್ಕಲ್ಲಿ ರಾಜ್ಯದ ಮೊದಲ ಕೋಕಾ ಪ್ರಕರಣ ಯಶಸ್ವಿಯಾಗಿ ಭೇದಿಸಿದಂತಾಗಲಿದೆ.

ಇದನ್ನೂ ಓದಿ: ವಿದ್ಯಾರ್ಥಿ ಅಪಹರಿಸಿ, ಲೈಂಗಿಕ ದೌರ್ಜನ್ಯ ಎಸಗಿ‌ ಪರಾರಿಯಾಗಿದ್ದ ಆರೋಪಿಗಳ‌‌‌ ಮೇಲೆ‌ ಪೊಲೀಸರಿಂದ ಫೈರಿಂಗ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.