ETV Bharat / state

ಚುನಾವಣೆ ಬೆನ್ನಲ್ಲೇ ಗೋವಾದಿಂದ ಹರಿದು ಬರುತ್ತಿದೆ ಅಗ್ಗದ ಮದ್ಯ, ಕಂತೆ ಕಂತೆ ನೋಟು!!

author img

By

Published : Apr 3, 2023, 9:00 PM IST

Updated : Apr 3, 2023, 9:55 PM IST

ಗೋವಾದಿಂದ ಅಗ್ಗದ ಬೆಲಗೆ ಸಿಗುವ ಮದ್ಯ ಅಕ್ರಮವಾಗಿ ಉತ್ತರ ಕನ್ನಡ ಜಿಲ್ಲೆಗೆ ಹರಿದು ಬರುತ್ತಿದ್ದು, ಜಿಲ್ಲಾಡಳಿತ ಚೆಕ್​​​ ಪೋಸ್ಟ್​ಗಳಲ್ಲಿ ತಪಾಸಣೆ ಬಿಗಿಗೊಳಿಸಿದ್ದಾರೆ.

cheap-liquors-and-illegal-money-coming-from-goa
ಚುನಾವಣೆ ಬೆನ್ನಲ್ಲೇ ಗೋವಾದಿಂದ ಹರಿದುಬರುತ್ತಿದೆ ಅಗ್ಗದ ಮದ್ಯ, ಕಂತೆ ಕಂತೆ ನೋಟು!!

ಚುನಾವಣೆ ಬೆನ್ನಲ್ಲೇ ಗೋವಾದಿಂದ ಹರಿದು ಬರುತ್ತಿದೆ ಅಗ್ಗದ ಮದ್ಯ, ಕಂತೆ ಕಂತೆ ನೋಟು!!

ಕಾರವಾರ: ಚುನಾವಣೆ ನೀತಿಸಂಹಿತೆ ಜಾರಿಯಾದ ಬೆನ್ನಲ್ಲೇ ರಾಜ್ಯಾದ್ಯಂತ ಪ್ರಮುಖ ಸ್ಥಳಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಅದರಂತೆ ಕರ್ನಾಟಕ ಗೋವಾ ಗಡಿಭಾಗವಾದ ಕಾರವಾರದ ಮಾಜಾಳಿ ಚೆಕ್​ ಪೋಸ್ಟ್ ನಲ್ಲಿಯೂ ಜಿಲ್ಲಾಡಳಿತ ತಪಾಸಣೆ ಬಿಗಿಗೊಳಿಸಿದ ಪರಿಣಾಮ ಲಾರಿಗಟ್ಟಲೆ ಅಕ್ರಮ ಮದ್ಯದ ಜೊತೆಗೆ ದಾಖಲೆಗಳೇ ಇಲ್ಲದ ಕಂತೆ ಕಂತೆ ನೋಟುಗಳು ರಾಜ್ಯಕ್ಕೆ ಸಾಗಾಟ ಮಾಡುತ್ತಿರುವುದು ಪತ್ತೆಯಾಗತೊಡಗಿದೆ.

ರಾಜ್ಯದಲ್ಲಿ ಚುನಾವಣೆ ಕಾವು ಜೋರಾಗಿದೆ. ಟಿಕೆಟ್ ಆಕಾಂಕ್ಷಿಗಳು ಒಂದೆಡೆ ಟಿಕೆಟ್ ಗಿಟ್ಟಿಸಿಕೊಳ್ಳುವ ಜಿದ್ದಿಗೆ ಬಿದ್ದಿದ್ದರೇ ಇನ್ನು ಕೆಲವರೂ ಟಿಕೆಟ್ ಸಿಗುವ ಭರವಸೆಯಿಂದ ಭರ್ಜರಿ ಚುನಾವಣಾ ತಯಾರಿ ಕೂಡ ನಡೆಸುತ್ತಿದ್ದಾರೆ. ಇದೇ ಕಾರಣಕ್ಕೆ ಅಗ್ಗದ ಮದೀರೆಗೆ ಹೆಸರಾಗಿರುವ ಗೋವಾದಿಂದ ಅಕ್ರಮವಾಗಿ ಯಥೇಚ್ಚ ಪ್ರಮಾಣದಲ್ಲಿ ಮದ್ಯ ಹರಿದುಬರುತ್ತಿರುವುದು ಚೆಕ್​​​ ಪೋಸ್ಟ್​ನಲ್ಲಿ ತಪಾಸಣೆ ಬಿಗಿಗೊಳಿಸಿದ ವಾರದಲ್ಲಿಯೇ ಬೆಳಕಿಗೆ ಬಂದಿದೆ. ಮತದಾರರನ್ನು ಸೆಳೆಯಲು ಕಂತೆ ಕಂತೆ ಹಣ, ಗರಿಗರಿ ನೋಟು, ಅಕ್ರಮ ಮದ್ಯವನ್ನು ಸಾಗಾಟ ಮಾಡುತ್ತಿರುವುದು ಮೇಲಿಂದ ಮೇಲೆ ಪತ್ತೆಯಾಗುತ್ತಲೇ ಇದೆ.

ಪೊಲೀಸರು ಈಗಾಗಲೇ ಕಾರವಾರದ ಮಾಜಾಳಿ, ಅನಮೋಡ ಚೆಕ್​​ ಪೋಸ್ಟ್‌ಗಳಲ್ಲಿ 24/7 ಅಲರ್ಟ್​ ಆಗಿ ಹೆಚ್ಚಿನ ಸಿಬ್ಬಂದಿಗಳಿಂದ ವಾಹನಗಳ ತಪಾಸಣೆ ನಡೆಸುತ್ತಿದ್ದಾರೆ. ಈವರೆಗೆ ಜಿಲ್ಲೆಯಲ್ಲಿ‌‌ ಅಕ್ರಮ ಮದ್ಯ ಸಾಗಣೆ ಸಂಬಂಧ ಸುಮಾರು 127 ಪ್ರಕರಣಗಳು ದಾಖಲು ಮಾಡಿ 17 ಜನ ಆರೋಪಿಗಳನ್ನು ಕೂಡ ಬಂಧನ ಮಾಡಲಾಗಿದೆ. ಜೊತೆಗೆ 5 ವಾಹನಗಳನ್ನು ಜಪ್ತಿ ಮಾಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಅಕ್ರಮಗಳಿಗೆ ಕಡಿವಾಣ: ಇನ್ನು ಜಿಲ್ಲೆಯಲ್ಲಿ ನೀತಿ ಸಂಹಿತೆ ಜಾರಿಯಾದ ಬಳಿಕ 127 ಪ್ರಕರಣದಲ್ಲಿ 3,138 ಲೀಟರ್ ಭಾರತೀಯ ತಯಾರಿಕೆ ಮದ್ಯ, 1,267 ಲೀಟರ್ ಗೋವಾದಲ್ಲಿ ತಯಾರಿಸಿದ ಮದ್ಯ, 890 ಲೀಟರ್ ಕಳ್ಳಬಟ್ಟಿ ಕೊಳೆಯನ್ನು ಈಗಾಗಲೇ ಅಬಕಾರಿ ಇಲಾಖೆ ಜಪ್ತಿ ಮಾಡಿದೆ. ಕುಮಟಾ, ಭಟ್ಕಳ, ಹೊನ್ನಾವರ, ಶಿರಸಿ, ಹಳಿಯಾಳದಲ್ಲಿರುವ ತನಿಖಾ ಠಾಣೆಯಲ್ಲಿ 24/7 ಅಧಿಕಾರಿಗಳು ಹದ್ದಿನ ಕಣ್ಣಿಟ್ಟಿದ್ದು ಅಕ್ರಮಗಳಿಗೆ ಕಡಿವಾಣ ಹಾಕುತ್ತಿದ್ದಾರೆ.

ಗ್ರಾಮೀಣ ಭಾಗದಲ್ಲಿ ಅಕ್ರಮವಾಗಿ ಸಾರಾಯಿ ಶೇಖರಿಸಿ ಚುನಾವಣೆ ಸಂದರ್ಭದಲ್ಲಿ ಮತಗಳನ್ನು ಸೆಳೆಯಲು ಆಮಿಷ ಒಡ್ಡುವ ತಂತ್ರಗಾರಿಕೆ ಮೇಲೆ ಕಣ್ಣಿಡಲು ಹೆಚ್ಚಿನ ಸಿಬ್ಬಂದಿಗಳನ್ನು ಗೃಹ ರಕ್ಷಕ ದಳದಿಂದ ನಿಯೋಜನೆ ಮಾಡಲು ಈಗಾಗಲೇ ಮನವಿ ಮಾಡಲಾಗಿದೆ ಎನ್ನುತ್ತಾರೆ ಅಧಿಕಾರಿಗಳು. ಚುನಾವಣೆ ಸಂದರ್ಭದಲ್ಲಿ ಈ ರೀತಿ ಬಿಗಿ ತಪಾಸಣೆ ಮಾಡಿದ್ದರಿಂದ ಅಕ್ರಮಗಳು ಹೊರಬರಲು ಸಾಧ್ಯವಾಗಿದೆ.

ಜಲಮಾರ್ಗ ಹಾಗೂ ಕಾಡಿನಿಂದಲೂ ಅಕ್ರಮ ಸಾಗಣೆ: ಕೇವಲ ಈ ಚೆಕ್ ​ಪೋಸ್ಟ್ ಮಾತ್ರವಲ್ಲದೇ ಜಲಮಾರ್ಗ ಹಾಗೂ ಕಾಡಿನಿಂದಲೂ ಕಡಿಮೆ ದರಕ್ಕೆ ಸಿಗುವ ಗೋವಾ ಮದ್ಯವನ್ನು ಅಕ್ರಮವಾಗಿ ಸಾಗಾಟ ಮಾಡಲಾಗುತ್ತದೆ. ಹೆಚ್ಚಿನ ಸಿಬ್ಬಂದಿಗಳೊಂದಿಗೆ ಈ ಭಾಗದಲ್ಲಿಯೂ ತಪಾಸಣೆ ನಡೆಸಿದಲ್ಲಿ ಚುನಾವಣಾ ಸಮಯದಲ್ಲಿ ಅಕ್ರಮ ತಡೆಯಬಹುದಾಗಿದೆ. ಕೂಡಲೇ ಮತ್ತಷ್ಟು ಸಿಬ್ಬಂದಿ ನಿಯೋಜನೆ ಮಾಡಿಕೊಂಡು, ಇನ್ನಷ್ಟು ಬಿಗಿ ಕ್ರಮಕೈಗೊಳ್ಳಬೇಕು ಎಂದು ಸ್ಥಳೀಯರಾದ ಸುನೀಲ್ ಹಣಕೋಣ ಮನವಿ ಮಾಡಿದ್ದಾರೆ.

ಒಟ್ಟಿನಲ್ಲಿ ಚುನಾವಣೆ ಘೋಷಣೆ ಆಗುತ್ತಿದ್ದಂತೆ ಮತದಾರರನ್ನ ಸೆಳೆಯಲು ಹಣ, ಹೆಂಡ ಹಂಚಲು ಮುಂದಾಗಿದ್ದ ಅಭ್ಯರ್ಥಿಗಳಿಗೆ ಅಧಿಕಾರಿಗಳು ಸದ್ಯ ಚೆಕ್​ಪೋಸ್ಟ್​​ಗಳಲ್ಲಿ ಹದ್ದಿನ ಕಣ್ಣಿಟ್ಟಿದ್ದಾರೆ. ಇನ್ನು ಅಬಕಾರಿ ಇಲಾಖೆ ಟೋಲ್ ಫ್ರೀ ನಂಬರ್ ನೀಡಿದ್ದು ಅಕ್ರಮಗಳು ಕಂಡು ಬಂದಲ್ಲಿ ಸಾರ್ವಜನಿಕರು ಈ 8005997084 ಸಂಖ್ಯೆಗೆ ಕರೆ ಮಾಡಿ ದೂರು ನೀಡಲು ಮನವಿ ಮಾಡಲಾಗಿದೆ. ಜೊತೆಗೆ ದೂರುದಾರರ ಗೌಪ್ಯತೆ ಕೂಡ ಕಾಪಾಡಲಾಗುತ್ತೆ.

ಇದನ್ನು ಓದಿ: ಕಾರವಾರದಲ್ಲಿ ಕೊನೆಗೂ ತೆರೆದ ಬ್ಲಾಕ್ ಕಾಂಗ್ರೆಸ್ ಕಚೇರಿ

Last Updated : Apr 3, 2023, 9:55 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.