ETV Bharat / state

ಮಂಕಾಳ ವೈದ್ಯರು ಸಚಿವರಾಗಿದ್ದು ಕಾನೂನಿನ ಅಡಿಯಲ್ಲಿ : ನಾಗರಾಜ ನಾಯಕ ತಿರುಗೇಟು

author img

By

Published : Jul 2, 2023, 6:01 PM IST

ಮಂಕಾಳ ವೈದ್ಯರಿಗೆ ಈ ದೇಶದ ಕಾನೂನಿನ ಋಣವಿದೆ ಎಂದು ಉತ್ತರ ಕನ್ನಡ ಜಿಲ್ಲಾ ಬಿಜೆಪಿ ವಕ್ತಾರ ನಾಗರಾಜ ನಾಯಕ ಹೇಳಿದ್ದಾರೆ.

ಉತ್ತರ ಕನ್ನಡ ಜಿಲ್ಲಾ ಬಿಜೆಪಿ ವಕ್ತಾರ ನಾಗರಾಜ ನಾಯಕ
ಉತ್ತರ ಕನ್ನಡ ಜಿಲ್ಲಾ ಬಿಜೆಪಿ ವಕ್ತಾರ ನಾಗರಾಜ ನಾಯಕ

ಉತ್ತರ ಕನ್ನಡ ಜಿಲ್ಲಾ ಬಿಜೆಪಿ ವಕ್ತಾರ ನಾಗರಾಜ ನಾಯಕ

ಕಾರವಾರ : ಮಂಕಾಳ ವೈದ್ಯರು ಶಾಸಕ, ಸಚಿವರಾಗಿದ್ದು ಸಹ ಈ ದೇಶದ ಕಾನೂನಿನ ಅಡಿಯಲ್ಲೇ ಎನ್ನುವುದನ್ನ ಅವರು ಅರಿತಿರಬೇಕು ಎಂದು ಉತ್ತರ ಕನ್ನಡ ಜಿಲ್ಲಾ ಬಿಜೆಪಿ ವಕ್ತಾರ ನಾಗರಾಜ ನಾಯಕ ಹೇಳಿದ್ದಾರೆ.

‘ಈ ದೇಶದ ಕಾನೂನೇ ಸರಿ ಇಲ್ಲ’ ಎಂದು ಹೇಳಿಕೆ ನೀಡಿದ್ದ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಮಂಕಾಳ ವೈದ್ಯರ ಹೇಳಿಕೆಯನ್ನು ಖಂಡಿಸಿರುವ ಅವರು, ಮಂಕಾಳ ವೈದ್ಯರ ಹೇಳಿಕೆ ಬಹಳ ಹಾಸ್ಯಾಸ್ಪದ ಹಾಗೂ ವಿಚಿತ್ರವಾಗಿದೆ. ಸಚಿವರಿಂದ ಇಂಥ ಹೇಳಿಕೆಗಳನ್ನ ಈ ಬುದ್ಧಿವಂತ ಜಿಲ್ಲೆಯ ಜನ ಬಯಸಿರಲಿಲ್ಲ. ಅವರು ಯಾವ ಹಿನ್ನೆಲೆಯಲ್ಲಿ ಈ ಹೇಳಿಕೆ ನೀಡಿದ್ದಾರೋ ಗೊತ್ತಿಲ್ಲ. ಸ್ವಭಾವತಃ ಅವರು ಒಳ್ಳೆಯ ವ್ಯಕ್ತಿ ಎನ್ನುತ್ತಾರೆ. ಆದರೆ ಅವರ ಹೇಳಿಕೆ ನೋಡಿದರೆ ಮುಂದಿನ ದಿನಗಳಲ್ಲಿ ಈ ಜಿಲ್ಲೆಯಲ್ಲಿ ಅವರ ಆಡಳಿತ ಕಷ್ಟ ಎಂದೆನಿಸುತ್ತದೆ ಎಂದರು.

ಅವರು ಎರಡು ಬಾರಿ ಶಾಸಕರಾಗಿ ಈಗ ಸಚಿವರಾಗಿದ್ದಾರೆ. ಅವರು ಶಾಸಕರಾಗಿರುವುದು ಜನಪ್ರತಿನಿಧಿ ಕಾಯ್ದೆಯಡಿ. ಪ್ರಮಾಣವಚನವನ್ನ ಭಾರತೀಯ ಸಂವಿಧಾನದ ಅಡಿ ವಿಧಾನಸೌಧದಲ್ಲಿ ಪಡೆದಿದ್ದಾರೆ. ಈ ಹೇಳಿಕೆ ನೀಡಲು ಅವರು ಕಾರವಾರಕ್ಕೆ ಬಂದ ಅವರ ಕಾರು ಕೂಡ ಮೋಟಾರು ವಾಹನಗಳ ಕಾಯ್ದೆ ಅಡಿಯಲ್ಲಿ ಬರುತ್ತದೆ. ಪ್ರತಿ ಹೆಜ್ಜೆಗೂ ಕಾನೂನು ಅನ್ವಯವಾಗುತ್ತದೆ. ವೈದ್ಯರಿಗೆ ಈ ದೇಶದ ಕಾನೂನಿನ ಋಣ ಇದೆ. ಅವರು ಈ ರೀತಿ ಬೇಜವಾಬ್ದಾರಿ ಹೇಳಿಕೆಗಳನ್ನ ನೀಡಲಾಗುವುದಿಲ್ಲ. ಇನ್ನು ಮುಂದಾದರೂ ಅರಿತುಕೊಳ್ಳಬೇಕು. ಜವಾಬ್ದಾರಿ ಮಂತ್ರಿಯಾಗಿ ವರ್ತಿಸಬೇಕು ಎಂದಿದ್ದಾರೆ.

ಕಾನೂನು ಸರಿ ಇಲ್ಲ ಎನ್ನುವುದು ಸರಿಯಲ್ಲ: ಕಾನೂನು ಸರಿ ಇಲ್ಲ ಎಂಬುವವರು ಯಾರೆಂದರೆ ಕಾನೂನಿಗೆ ಅಂಜುವವರು. ಬಹುಶಃ ಮಂಕಾಳ ವೈದ್ಯರಿಗೂ ಸಹ ಕಾನೂನಿನ ಅಂಜಿಕೆ ಇರಬೇಕು. ಆ ಅಂಜಿಕೆಯನ್ನ ಬಿಟ್ಟುಬಿಡಿ. ಸತ್ಪ್ರಜೆಯಾದರೆ ಯಾವ ಕಾನೂನಿಗೂ ಅಂಜಬೇಕಿಲ್ಲ ಎಂದು ಕಿವಿಮಾತು ಹೇಳಿರುವ ಅವರು, ಸಾಮಾಜಿಕ ಜಾಲತಾಣಕ್ಕೆ ಸಂಬಂಧಿಸಿದಂತೆ ನೀಡಿರುವ ದೂರು ದಾಖಲಾಗಿಲ್ಲ. ಅದಕ್ಕಾಗಿ ದೇಶದ ಕಾನೂನು ಸರಿ ಇಲ್ಲ ಎಂದಿದ್ದಾರೆ. ನೀವು ಕೂಡ ವಕೀಲರನ್ನ ಆಯ್ಕೆ ಮಾಡಿಕೊಳ್ಳಬಹುದು. ಒಂದು ವೇಳೆ ಪೊಲೀಸರು 150 ಸಿಆರ್‌ಪಿಸಿ ಅಡಿಯಲ್ಲಿ ದೂರು ಸ್ವೀಕರಿಸದಿದ್ದರೆ ಮುಂದೇನು ಮಾಡಬೇಕು ಎನ್ನುವುದಕ್ಕೂ ಕಾನೂನು ಇದೆ. ಸೆಕ್ಷನ್ 200 ಸಿಆರ್‌ಪಿಸಿ ಅಡಿಯಲ್ಲಿ ನೇರವಾಗಿ ಕೋರ್ಟ್​ಗೆ ತೆರಳಿ ಖಾಸಗಿ ದೂರನ್ನು ದಾಖಲಿಸಲು ಅವಕಾಶವಿದೆ. ಭಾರತೀಯ ಕಾನೂನನ್ನೇ ತಿಳಿಯದೆ ಕಾನೂನು ಸರಿ ಇಲ್ಲ ಎನ್ನುವುದು ಸರಿಯಲ್ಲ ಎಂದಿದ್ದಾರೆ.

ಎಲ್ಲರೂ ಕಾನೂನಿನಲ್ಲಿ ಸಮಾನರು : ಕಾನೂನೇ ತಿಳಿದಿಲ್ಲ ಎಂದು ಕೊಲೆ ಮಾಡಲಾಗುವುದಿಲ್ಲ. ಸಚಿವರು ಈ ಬಗ್ಗೆ ತಿದ್ದಿಕೊಳ್ಳಬೇಕು. ಕಾನೂನು, ಕೋರ್ಟ್- ಕಚೇರಿಗಳ ಬಗ್ಗೆ ಮಾತನಾಡುವಾಗ ಮೈಯೆಲ್ಲಾ ಕಣ್ಣಾಗಿರಬೇಕು. ಕಾನೂನಿನ ಮೇಲೆ ಯಾರೂ ಇಲ್ಲ. ಎಲ್ಲರೂ ಕಾನೂನಿನಲ್ಲಿ ಸಮಾನರು. ಅದು ನಾನಾಗಲಿ, ಸಚಿವ ವೈದ್ಯರಾಗಲಿ, ಜನಸಾಮಾನ್ಯನಾಗಲಿ ಎಲ್ಲರಿಗೂ ಒಂದೇ ಎಂದು ಹೇಳಿದ್ದಾರೆ.

ಇದನ್ನೂ ಓದಿ: 'ದೇಶದ ಕಾನೂನೇ ಸರಿಯಿಲ್ಲ, ಸಾಮಾಜಿಕ ಜಾಲತಾಣ ನಿಂದಕರ ವಿರುದ್ಧ ಕೇಸು ಕೊಟ್ಟರೂ ಪ್ರಯೋಜನವಾಗುತ್ತಿಲ್ಲ': ಸಚಿವ ಮಂಕಾಳು ವೈದ್ಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.