ETV Bharat / state

ತಡೆಗೋಡೆ ಕಾಮಗಾರಿ ವಿಳಂಬ : ಜಮೀನಿಗೆ ನುಗ್ಗಿದ ಸಮುದ್ರದ ಉಪ್ಪು ನೀರು

author img

By

Published : Feb 19, 2021, 7:49 AM IST

ಕೋವಿಡ್ ಸಂದರ್ಭದಕ್ಕೂ ಪೂರ್ವದಲ್ಲಿ ಇಲ್ಲಿ ತಡೆಗೋಡೆ ನಿರ್ಮಾಣಕ್ಕಾಗಿ ದೊಡ್ಡ ದೊಡ್ಡ ಕಲ್ಲುಗಳನ್ನು ತಂದು ಹಾಕಲಾಗಿದೆ. ಒಂದೂವರೆ ವರ್ಷ ಕಳೆದರೂ ಸಹ ಇನ್ನೂ ತಡೆಗೋಡೆ ಕಾಮಗಾರಿ ನಿಂತಲ್ಲಿಯೇ ಇದೆ. ತಡೆಗೋಡೆ ಕಾಮಗಾರಿ ಬೇಗ ಮಾಡುವಂತೆ ಇಲ್ಲಿನ ಸ್ಥಳೀಯರು ಸಂಬಂಧಪಟ್ಟ ಇಲಾಖೆಗೆ ತಿಳಿಸಿದರೂ ಸಹ ಇನ್ನೂ ಕಾರ್ಯಪ್ರವೃತ್ತರಾಗಿಲ್ಲ..

ಜಮೀನಿಗೆ ನುಗ್ಗಿದ ಸಮುದ್ರದ ಉಪ್ಪು ನೀರು
ಜಮೀನಿಗೆ ನುಗ್ಗಿದ ಸಮುದ್ರದ ಉಪ್ಪು ನೀರು

ಭಟ್ಕಳ : ತಾಲೂಕಿನ ಕರಿಕಲ್ ಭಾಗದಲ್ಲಿ ಕಳೆದ ಎರಡು ವರ್ಷದಿಂದ ನಿರ್ಮಾಣವಾಗುತ್ತಿರುವ ಸಮುದ್ರದ ತಡೆಗೋಡೆ ಕಾಮಗಾರಿಯೂ ಅರ್ಧಂಬರ್ಧ ಮಾಡಿದ ಹಿನ್ನೆಲೆ ಉಪ್ಪು ನೀರು ರೈತರ ಗದ್ದೆ, ಜಮೀನಿಗೆ ಸೇರುತ್ತಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜಮೀನಿಗೆ ನುಗ್ಗಿದ ಸಮುದ್ರದ ಉಪ್ಪು ನೀರು..

ಕರಿಕಲ್ ಭಾಗದಲ್ಲಿ ಸಮುದ್ರದ ನೀರು ಮನೆ, ಗದ್ದೆ, ಜಮೀನಿಗೆ ನುಗ್ಗದಂತೆ ತಡೆಗೋಡೆ ನಿರ್ಮಾಣದ ಬಗ್ಗೆ ಮಾಜಿ ಶಾಸಕ ಮಂಕಾಳ ವೈದ್ಯರ ಅವರ ಪ್ರಯತ್ನದಿಂದ 3 ಕೋಟಿ ವೆಚ್ಚದಲ್ಲಿ ಕಾಮಗಾರಿ ಪ್ರಾರಂಭಿಸಲಾಯಿತು. ಬಳಿಕ ಶಾಸಕ ಸುನೀಲ ನಾಯ್ಕ್ ಅವರ ಅವಧಿಯಲ್ಲಿ ಕಾಮಗಾರಿ ವೇಗ ಪಡೆಯದ ಹಿನ್ನೆಲೆ ಸಮುದ್ರ ನೀರಿನ ಉಬ್ಬರದಿಂದಾಗಿ ಕೃತಕವಾಗಿ ನಿರ್ಮಿಸಿಕೊಂಡಿದ್ದ ಇಲ್ಲಿನ ಸ್ಥಳೀಯರೋರ್ವರ ಜಮೀನಿಗೆ ಹಾಕಲಾದ ಕಾಂಪೌಂಡ್‌ನೊಳಗೆ ನೀರು ನುಗ್ಗಿದ್ದು, ಭಾರೀ ನಷ್ಟ ಉಂಟಾಗಿದೆ.

ಕೋವಿಡ್ ಸಂದರ್ಭದಕ್ಕೂ ಪೂರ್ವದಲ್ಲಿ ಇಲ್ಲಿ ತಡೆಗೋಡೆ ನಿರ್ಮಾಣಕ್ಕಾಗಿ ದೊಡ್ಡ ದೊಡ್ಡ ಕಲ್ಲುಗಳನ್ನು ತಂದು ಹಾಕಲಾಗಿದೆ. ಒಂದೂವರೆ ವರ್ಷ ಕಳೆದರೂ ಸಹ ಇನ್ನೂ ತಡೆಗೋಡೆ ಕಾಮಗಾರಿ ನಿಂತಲ್ಲಿಯೇ ಇದೆ. ತಡೆಗೋಡೆ ಕಾಮಗಾರಿ ಬೇಗ ಮಾಡುವಂತೆ ಇಲ್ಲಿನ ಸ್ಥಳೀಯರು ಸಂಬಂಧಪಟ್ಟ ಇಲಾಖೆಗೆ ತಿಳಿಸಿದರೂ ಸಹ ಇನ್ನೂ ಕಾರ್ಯಪ್ರವೃತ್ತರಾಗಿಲ್ಲದಿರುವುದು ಆಕ್ರೋಶಕ್ಕೆ ಕಾರಣವಾಗಿದೆ.

ಈ ಕರಿಕಲ್ ಭಾಗದಲ್ಲಿ ನಿರ್ಮಾಣಗೊಂಡ ಧ್ಯಾನ ಮಂದಿರಕ್ಕೂ ಅಣತಿ ದೂರದಲ್ಲಿ ಮಾದೇವ ಕಂಚಿಗುಂಡಿ ನಾಯ್ಕ್ ಎಂಬುವರ 5 ಎಕರೆ ಜಮೀನಿದೆ. ಇವರು ಪ್ರತಿ ವರ್ಷ ಗದ್ದೆ ಸಾಗುವಳಿ ಮಾಡುತ್ತಾರೆ. ಆದರೆ, ಏಕಾಏಕಿ ಅಬ್ಬರದಿಂದಾಗಿ ಹಾಗೂ ಅರ್ಧಂಬರ್ಧ ತಡೆಗೋಡೆ ಕಾಮಗಾರಿಯಿಂದ ಇವರ 3 ಎಕರೆ ಗದ್ದೆ, ತೆಂಗಿನ ಮರದ ಜಮೀನಿನ ಜಾಗವೆಲ್ಲವೂ ಸಂಪೂರ್ಣ ನೀರು ನುಗ್ಗಿ ಮರಳಿನಿಂದಾವೃತವಾಗಿದೆ. ಪ್ರತಿ ವರ್ಷ 15-20 ಚೀಲದಷ್ಟು ಭತ್ತದ ಇಳುವರಿ ತೆಗೆಯುವ ಗದ್ದೆ ಹಾನಿಯಾಗಿದೆ. ಅದೇ ರೀತಿ 12 ತೆಂಗಿನಮರ ಸಮುದ್ರದ ಉಪ್ಪು ನೀರಿನಿಂದಾಗಿ ನಾಶವಾಗಿವೆ.

ಇನ್ನು, ಈ ಭಾಗದಲ್ಲಿ ಗುಡ್ಡದಿಂದ ಬರುವ ನೀರು ಸಮುದ್ರಕ್ಕೆ ಸೇರುವ ಕಾಲುವೆಯಿದ್ದು, ತಡೆಗೋಡೆಯಿಲ್ಲದ ಹಿನ್ನೆಲೆ ಸಮುದ್ರದ ನೀರು ಸತತ ಕಾಲುವೆ ಸೇರುತ್ತಿದೆ. ಪರಿಣಾಮ ಅಕ್ಕಪಕ್ಕದ ಸ್ಥಳೀಯ ಮನೆಗಳ ಬಾವಿ ನೀರು ಉಪ್ಪಿನಿಂದ ಆವೃತವಾಗಿದೆ. ಗುಡ್ಡದ ನೀರು ಹರಿಯಲು ಇರುವ ಕಾಲುವೆಯೂ ಮರಳಿನಿಂದಾವೃತಗೊಂಡಿದೆ. ಅತ್ತ ಏಕಾಏಕಿ ಸಮುದ್ರದ ನೀರು ಕಾಲುವೆಗೆ ಸೇರುತ್ತಿರುವ ಹಿನ್ನೆಲೆ ಮಳೆಗಾಲದಲ್ಲಿ ನೂರಾರು ಎಕರೆ ಗದ್ದೆ ಹಾನಿಯಾಗುವ ಭೀತಿ ಉಂಟಾಗಿದೆ.

500 ಮೀ. ತನಕ ತಡೆಗೋಡೆ ಕಾಮಗಾರಿ : ಲಭ್ಯ ಮಾಹಿತಿಯ ಪ್ರಕಾರ ಕರಿಕಲ್‍ನ ಈ ಭಾಗದಲ್ಲಿನ ಧ್ಯಾನ ಮಂದಿರದ ಹಿಂಬದಿ ಸಮುದ್ರದ ನೀರು ನುಗ್ಗಬಾರದೆಂದು ತಡೆಗೋಡೆಯನ್ನು ಈ ಹಿಂದೆ ನಿರ್ಮಿಸಲಾಗಿತ್ತು. ಇದರಿಂದ ಅಲ್ಲಿ ಸಮುದ್ರದ ನೀರು ನುಗ್ಗಲು ಯಾವುದೇ ಅವಕಾಶ ಇಲ್ಲವಾಗಿದೆ.

ಆದರೆ, ನೀರಿನ ರಭಸವೂ ಮಾದೇವ ನಾಯ್ಕ್ ಅವರ ಜಮೀನು ಸೇರಿ ಧ್ಯಾನ ಮಂದಿರದ ಹಿಂಬದಿಯ ಬಲಭಾಗದಲ್ಲಿನ ಮನೆ, ಗದ್ದೆ ಜಮೀನಿಗೆ ನುಗ್ಗುತ್ತಿದೆ. ಸದ್ಯಕ್ಕೆ 500 ಮೀ. ದೂರದ ತನಕ ಕಲ್ಲಿನ ತಡೆಗೋಡೆ ನಿರ್ಮಾಣ ಕಾರ್ಯಕ್ಕಾಗಿ ಕಲ್ಲನ್ನು ತಂದು ಸುರಿಯಲಾಗಿದೆಯೇ ಹೊರತು, ಕಾಮಗಾರಿಗೆ ಚಾಲನೆ ನೀಡಿಲ್ಲ.

ಇನ್ನು, ಹಾನಿ ಸಂಭವಿಸಿದರು ಕುರಿತು ಜಾಗದ ಮಾಲೀಕರ ಪುತ್ರ ಸಂತೋಷ ನಾಯ್ಕ್‌ ಅಧಿಕಾರಿಗಳಿಗೆ ಮಾಹಿತಿ ನೀಡಿದರೂ ಸಹ ಪಂಚಾಯತ್​ನಿಂದ ಸ್ಥಳ ಪರಿಶೀಲನೆಗೆ ಯಾರೂ ಬಂದಿಲ್ಲ. ಈ ಬಗ್ಗೆ ಇಲಾಖೆಯ ಗಮನಕ್ಕೂ ತಂದಿದ್ದು, ಅವರು ಸಹ ನಿರ್ಲಕ್ಷ ಮಾಡಿರುವುದು ಜಾಗದ ಮಾಲೀಕರ ಆಕ್ರೋಶಕ್ಕೆ ಕಾರಣವಾಗಿದೆ.

ಜೊತೆಗೆ ಈ ಹಿಂದೆ ಶಾಸಕ ಸುನೀಲ ನಾಯ್ಕ ಅವರನ್ನು ಸಂಪರ್ಕಿಸಿ ಸಂತೋಷ ನಾಯ್ಕ ಇಲ್ಲಿನ ಪರಿಸ್ಥಿತಿ ಮನವರಿಕೆ ಮಾಡಿಕೊಟ್ಟಿದ್ದರು. ತಕ್ಷಣವೇ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ನಷ್ಟ ಪರಿಹಾರ ನೀಡಿ, ಶೀಘ್ರ ತಡೆಗೋಡೆ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಮಾಲೀಕರು ಒತ್ತಾಯಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.