ಕೊನೆಗೂ ಸಿಕ್ಕಿ ಬಿದ್ದ ಕೋಟಿ ಲಪಟಾಯಿಸಿದ ಬ್ಯಾಂಕ್ ನೌಕರ: ಆರೋಪಿ ಬಾಯ್ಬಿಟ್ಟ ಸತ್ಯಕ್ಕೆ ಪೊಲೀಸರು ಶಾಕ್

author img

By

Published : Sep 20, 2022, 7:50 PM IST

bank-manager-arrested-for-bank-robbery-in-karwar

ಬ್ಯಾಂಕಿಗೆ ವಂಚಿಸಿ 2.69 ಕೋಟಿ ರೂಗಳನ್ನು ಹೆಂಡತಿಯ ಖಾತೆಗೆ ವರ್ಗಾಯಿಸಿ, ಹಣದೊಂದಿಗೆ ಪರಾರಿಯಾಗಿದ್ದ ಬ್ಯಾಂಕ್​ ಆಫ್​​ ಬರೋಡಾ ಅಸಿಸ್ಟೆಂಟ್​ ಮ್ಯಾನೇಜರ್​ನ್ನು ಪೊಲೀಸರು ಬಂಧಿಸಿದ್ದಾರೆ.

ಕಾರವಾರ(ಉತ್ತರಕನ್ನಡ): ಯಲ್ಲಾಪುರದ ಬ್ಯಾಂಕ್ ಆಫ್ ಬರೋಡಾದಿಂದ 2.69 ಕೋಟಿ ರೂ. ವಂಚಿಸಿ ಪರಾರಿಯಾಗಿದ್ದ ಬ್ಯಾಂಕಿನ ಅಸಿಸ್ಟೆಂಟ್ ಮ್ಯಾನೇಜರ್ ಅನ್ನು ಕೊನೆಗೂ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ, ವಿಚಾರಣೆ ವೇಳೆ ಆತ ಬೇರೊಂದು ಮಾಹಿತಿಯನ್ನು ಹೊರ ಹಾಕಿದ್ದಾನೆ.

ಯಲ್ಲಾಪುರದ ಬ್ಯಾಂಕ್ ಆಫ್ ಬರೋಡಾದ ಚಾಲ್ತಿ ಖಾತೆಯಿಂದ ತನ್ನ ಹೆಂಡತಿಯ ಖಾತೆಗೆ ಹಣ ವರ್ಗಾಯಿಸಿಕೊಂಡಿದ್ದ ಅಸಿಸ್ಟೆಂಟ್ ಮ್ಯಾನೇಜರ್ ಆಂಧ್ರಪ್ರದೇಶ ಮೂಲದ ಕುಮಾರ್ ಬೋನಾಲನನ್ನಿಯನ್ನು ಹುಬ್ಬಳ್ಳಿಯಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸದ್ಯ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ.

ಕೊನೆಗೂ ಸಿಕ್ಕಿ ಬಿದ್ದ ಕೋಟಿ ಲಪಟಾಯಿಸಿದ ಬ್ಯಾಂಕ್ ನೌಕರ : ಆರೋಪಿ ಬಾಯ್ಬಿಟ್ಟ ಸತ್ಯಕ್ಕೆ ಪೊಲೀಸರು ಶಾಕ್

ಇನ್ನು ಆರೋಪಿಯ ವಿಚಾರಣೆಯ ವೇಳೆ ತಾನು ದೋಚಿರುವ ಹಣವನ್ನೆಲ್ಲ ಆನ್ಲೈನ್ ಆಟದ ಗೀಳಿಗೆ ಬಿದ್ದು ಕಳೆದುಕೊಂಡಿರುವುದಾಗಿ ಹೇಳಿದ್ದಾನೆ. ಐಪಿಎಲ್ ವೇಳೆ ಆನ್ಲೈನ್ ಕ್ರಿಕೆಟ್​ ಬೆಟ್ಟಿಂಗ್ ಚಟಕ್ಕೆ ಬಿದ್ದಿದ್ದ ಈತ, ಬ್ಯಾಂಕ್ ಅಕೌಂಟ್ ನಿಂದ ಹಣ ತೆಗೆಯುವುದು, ಆನ್ಲೈನ್ ನಲ್ಲಿ ಆಟವಾಡುವುದು ಮಾಡುತ್ತಿದ್ದ. ಹೀಗೆ ಎಲ್ಲ ಹಣವನ್ನು ಆರೋಪಿ ಕಳೆದುಕೊಂಡಿದ್ದಾನೆ ಎಂದು ಹೇಳಲಾಗಿದೆ.

ಸದ್ಯ ಆನ್ಲೈನ್ ಗೇಮ್ ಆಡಿ ಆರೋಪಿ ತನ್ನ ಬಳಿಯಿದ್ದ ಎಲ್ಲ ಹಣವನ್ನು ಕಳೆದುಕೊಂಡಿದ್ದು, ಇದೀಗ 2.69 ಕೋಟಿ ಹಣ ವಸೂಲಿ ಹೇಗೆ ಎನ್ನುವುದು ಪ್ರಶ್ನೆಯಾಗಿದೆ. ಆದರೆ, ಈ ಬಗ್ಗೆ ಖಾತೆದಾರರಿಗೆ ಆತಂಕ ಬೇಡ. ಲೂಟಿಯಾಗಿರೋದು ಬ್ಯಾಂಕ್​ನ ಚಾಲ್ತಿ ಖಾತೆಯ ಹಣವಾಗಿದ್ದು, ಗ್ರಾಹಕರದ್ದಲ್ಲ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ ಸುಮನ್​ ಡಿ ಪನ್ನೇಕರ್ ಹೇಳಿದ್ದಾರೆ.

ಒಟ್ಟಿನಲ್ಲಿ ಜಿಲ್ಲೆಯಲ್ಲಿ ದೊಡ್ಡ ಮಟ್ಟದ ಸುದ್ದಿಯಾಗಿ ಬ್ಯಾಂಕ್ ಆಫ್ ಬರೋಡಾದ ಗ್ರಾಹಕರ ಆತಂಕಕ್ಕೆ ಕಾರಣವಾಗಿದ್ದ ಮ್ಯಾನೇಜರ್ ಅನ್ನು ಕೊನೆಗೂ ಪೊಲೀಸರು ವಶಕ್ಕೆ ಪಡೆದು, ವಿಚಾರಣೆ ಮುಂದುವರೆಸಿದ್ದಾರೆ.

ಇದನ್ನೂ ಓದಿ : ಬ್ಯಾಂಕ್​ಗೆ ವಂಚಿಸಿ ಹೆಂಡತಿ ಖಾತೆಗೆ 2ಕೋಟಿಗೂ ಹೆಚ್ಚು ಹಣ ವರ್ಗಾವಣೆ: ನಾಪತ್ತೆಯಾದ ಅಧಿಕಾರಿ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.