ETV Bharat / state

ಉತ್ತರ ಕರ್ನಾಟಕಕ್ಕೆ ಕಾಳಿ ನದಿ ನೀರು ಹರಿಸುವ ತೆರೆಮರೆಯ ಪ್ರಯತ್ನ ಆರೋಪ: ಸ್ಥಳೀಯರ ಆಕ್ರೋಶ

author img

By

Published : Mar 24, 2021, 8:24 PM IST

ಸಂರಕ್ಷಿತಾರಣ್ಯ ಪ್ರದೇಶದ ಮಧ್ಯೆ ಹರಿದು ಹೋಗುವ ಕಾಳಿ ನದಿ ಅದೆಷ್ಟೋ ಜೀವ ಸಂಕುಲಕ್ಕೆ ಆಸರೆಯಾಗಿದೆ. ಮಾತ್ರವಲ್ಲದೆ ದಾಂಡೇಲಿಗೆ 24 ಗಂಟೆ ನೀರು ಪೂರೈಸುವುದಾಗಿ ಹೇಳುತ್ತಾರೆ. ಆದರೆ ಈಗಾಗಲೇ ಅದೆಷ್ಟೋ ಕುಡಿಯುವ ನೀರಿನ ಯೋಜನೆಗಳು ಸಾಕಾರಗೊಂಡಿಲ್ಲ. ದಾಂಡೇಲಿ, ಜೋಯಿಡಾ ತಾಲೂಕಿನ ಹಲವು ಹಳ್ಳಿಗಳಿಗೆ ಇನ್ನೂ ಕುಡಿಯುವ ನೀರಿನ ಯೋಜನೆ ಕೈಗೊಂಡಿಲ್ಲ. ಆದ್ರೆ ಇದೀಗ ದೂರದ ಉತ್ತರ ಕರ್ನಾಟಕ ಭಾಗಕ್ಕೆ ನೀರು ಒಯ್ಯಲು ಮುಂದಾಗಿರುವುದು ಸ್ಥಳೀಯರ ಅಸಮಾಧಾನಕ್ಕೆ ಕಾರಣವಾಗಿದೆ.

Allegation of Kali River diversion
ಉತ್ತರ ಕರ್ನಾಟಕಕ್ಕೆ ಕಾಳಿ ನದಿ ನೀರು ಹರಿಸುವ ತೆರೆಮರೆಯ ಪ್ರಯತ್ನ ಆರೋಪ

ಕಾರವಾರ: ಕಾಳಿ ನದಿ ಉತ್ತರ ಕನ್ನಡ ಜಿಲ್ಲೆಯ ಜನರ ಪಾಲಿಗೆ ಜೀವನದಿ. ಮಾತ್ರವಲ್ಲದೆ ಕೈಗಾದಂತಹ ಬೃಹತ್ ಅಣು ವಿದ್ಯುತ್ ಯೋಜನೆಗೆ ನೀರು ಪೂರೈಸುವುದಲ್ಲದೆ ರಾಜ್ಯದಲ್ಲಿ ವಿದ್ಯುತ್ ಬೆಳಗಲು ಈ ನದಿ ನೀರು ಕೂಡ ಪ್ರಮುಖ ಕಾರಣ. ಆದರೆ ಇದೀಗ ಇದೇ ನದಿಯಿಂದ ಬೃಹತ್ ಯೋಜನೆಗಳ ಮೂಲಕ ಉತ್ತರ ಕರ್ನಾಟಕ ಭಾಗಗಳಿಗೆ ನೀರು ಹರಿಸಲು ತೆರೆಮರೆಯ ಪ್ರಯತ್ನ ನಡೆದಿದ್ದು, ಇದು ದಾಂಡೇಲಿ ಸೇರಿದಂತೆ ಜಿಲ್ಲೆಯ ನಾಗರಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಹೌದು, ಸಾಮಾನ್ಯವಾಗಿ ಯಾವುದೇ ಯೋಜನೆಗಳನ್ನು ಕೈಗೆತ್ತಿಕೊಳ್ಳುವ ಮೊದಲು ಸ್ಥಳೀಯರಿಗೆ ಸೂಕ್ತ ಮಾಹಿತಿ ನೀಡಿ ಸಾಧಕ ಬಾಧಕಗಳ ಬಗ್ಗೆ ಚರ್ಚೆ ನಡೆಸಬೇಕಾಗುತ್ತದೆ. ಆದರೆ ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯಲ್ಲಿ ಕಳೆದ ಕೆಲ ತಿಂಗಳುಗಳಿಂದ ಕೋಟ್ಯಂತರ ರೂ. ವೆಚ್ಚದ ಕಾಮಗಾರಿ ನಡೆಸಲಾಗುತ್ತಿದೆ. ಆದರೆ ಕಾಮಗಾರಿ ಬಗ್ಗೆ ಕೇಳಿದ್ರೆ ದಾಂಡೇಲಿ-ಅಳ್ನಾವರ ಭಾಗದ ಜನರಿಗೆ ಕುಡಿಯುವ ನೀರು ಪೂರೈಕೆಗೆ ಎಂದು ಹೇಳುತ್ತಿದ್ದಾರೆ.

ಉತ್ತರ ಕರ್ನಾಟಕಕ್ಕೆ ಕಾಳಿ ನದಿ ನೀರು ಹರಿಸುವ ತೆರೆಮರೆಯ ಪ್ರಯತ್ನ ಆರೋಪ

ವಾಸ್ತವವಾಗಿ ಕಾಮಗಾರಿ ವೆಚ್ಚ, ನೀರು ಪೂರೈಕೆಗೆ ಬಳಸುತ್ತಿರುವ ಪೈಪ್​​ಗಳ ಗಾತ್ರಗಳನ್ನು ನೋಡಿದ್ರೆ ನದಿ ನೀರನ್ನು ಉತ್ತರ ಕರ್ನಾಟಕ ಭಾಗಗಳಿಗೆ ಕೊಂಡೊಯ್ಯುವ ಹುನ್ನಾರ ನಡೆಸಲಾಗುತ್ತಿದೆ ಎಂದು ಜನ ಶಂಕೆ ವ್ಯಕ್ತಪಡಿಸಿದ್ದಾರೆ. ಜೋಯಿಡಾದಿಂದ ಪಶ್ಚಿಮಾಭಿಮುಖವಾಗಿ 150 ಕಿ.ಮೀ. ಹರಿದು ಸಮುದ್ರ ಸೇರುವ ಕಾಳಿ ನದಿ ಜಿಲ್ಲೆಯ ಜೀವನದಿಯಾಗಿದ್ದು, ಕೈಗಾ, ಜಲ ವಿದ್ಯುತ್ ಯೋಜನೆ ಮಾತ್ರವಲ್ಲದೆ ಜೋಯಿಡಾ, ದಾಂಡೇಲಿ, ಕಾರವಾರ ಭಾಗದ ಜನರ ಜೀವನಾಡಿಯಾಗಿದೆ.

ಇನ್ನು ಜಿಲ್ಲೆಯ ಅದೆಷ್ಟೋ ಗ್ರಾಮಗಳಿಗೆ ಕುಡಿಯುವ ನೀರು ಸಮರ್ಪಕವಾಗಿ ದೊರೆಯುತ್ತಿಲ್ಲ. ಹೀಗಿರುವಾಗ ಕಾಳಿ ನದಿ ನೀರನ್ನು ಉತ್ತರ ಕರ್ನಾಟಕ ಭಾಗಗಳಿಗೆ ಕೊಂಡೊಯ್ಯುವುದಕ್ಕೆ ದಾಂಡೇಲಿ ಸಮಗ್ರ ಅಭಿವೃದ್ಧಿ ಸಮಿತಿಯಿಂದ ಕಳೆದ ಒಂದು ತಿಂಗಳಿಂದ ಬೃಹತ್ ಹೋರಾಟ ನಡೆಸುತ್ತಿರುವುದಾಗಿ ಸಮಿತಿ ಅಧ್ಯಕ್ಷ ಅಕ್ರಮ್ ಖಾನ್ ಹೇಳಿದರು.

ಇನ್ನು ಕಾಳಿ ನದಿಗೆ ಅಡ್ಡಲಾಗಿ ಅನೇಕ ಅಣೆಕಟ್ಟುಗಳಿದ್ದು, ಹೆಚ್ಚಿನ ಮಳೆಯಾದಲ್ಲಿ ಮಾತ್ರ ಅಣೆಕಟ್ಟು ಭರ್ತಿಯಾಗಲಿದೆ. ಆದ್ರೆ ಕಳೆದ ಕೆಲ ವರ್ಷಗಳಿಂದ ಮಳೆಯ ಪ್ರಮಾಣ ಕಡಿಮೆಯಾಗಿದ್ದು, ಅಣೆಕಟ್ಟುಗಳು ಭರ್ತಿಯಾಗುತ್ತಿಲ್ಲ. ಹೀಗಿರುವಾಗ ಘಟಪ್ರಭಾ ಮತ್ತು ಮಲಪ್ರಭಾ ನದಿಗೆ ಕಾಳಿ ನದಿಯಿಂದ 25 ಟಿಎಂಸಿ ನೀರು ಹಾಯಿಸುವ ಯೋಜನೆ ಸಿದ್ಧಪಡಿಸಿರುವುದು ಕಾಳಿ ಕಣಿವೆ ಪ್ರದೇಶದ ನಾಗರಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಕೇವಲ ಕುಡಿಯುವ ನೀರಿಗೆ ಯೋಜನೆ ರೂಪಿಸಿದರೆ ತಮ್ಮ ಅಭ್ಯಂತರವಿರಲಿಲ್ಲ. ಆದ್ರೆ ನೀರಾವರಿ ಮತ್ತು ದೊಡ್ಡ ದೊಡ್ಡ ಕಾರ್ಖಾನೆಗಳಿಗೆ ನೀರು ಕೊಂಡೊಯ್ಯುವ ಹುನ್ನಾರ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಅಲ್ಲದೇ ಯೋಜನೆ ಸಂಬಂಧ ಜಾಕ್​ವೆಲ್ ಕಾಮಗಾರಿ ಕಾನೂನು ಬಾಹಿರವಾಗಿ ನಡೆಸಲಾಗುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಸಂರಕ್ಷಿತಾರಣ್ಯ ಪ್ರದೇಶದ ಮಧ್ಯೆ ಹರಿದು ಹೋಗುವ ಕಾಳಿ ನದಿ ಅದೆಷ್ಟೋ ಜೀವ ಸಂಕುಲಕ್ಕೆ ಆಸರೆಯಾಗಿದೆ. ಮಾತ್ರವಲ್ಲದೆ ದಾಂಡೇಲಿಗೆ 24 ಗಂಟೆ ನೀರು ಪೂರೈಸುವುದಾಗಿ ಹೇಳುತ್ತಾರೆ. ಆದರೆ ಈಗಾಗಲೇ ಅದೆಷ್ಟೋ ಕುಡಿಯುವ ನೀರಿನ ಯೋಜನೆಗಳು ಸಾಕಾರಗೊಂಡಿಲ್ಲ. ದಾಂಡೇಲಿ, ಜೋಯಿಡಾ ತಾಲೂಕಿನ ಹಲವು ಹಳ್ಳಿಗಳಿಗೆ ಇನ್ನೂ ಕುಡಿಯುವ ನೀರಿನ ಯೋಜನೆ ಕೈಗೊಂಡಿಲ್ಲ. ಆದ್ರೆ ಇದೀಗ ದೂರದ ಉತ್ತರ ಕರ್ನಾಟಕ ಭಾಗಕ್ಕೆ ನೀರು ಒಯ್ಯಲು ಮುಂದಾಗಿರುವುದು ಸ್ಥಳೀಯರ ಅಸಮಾಧಾನಕ್ಕೆ ಕಾರಣವಾಗಿದೆ.

ಒಟ್ಟಾರೆ ಕಾಳಿ ನದಿ ನೀರಿನಿಂದಲೇ ಜಲ ವಿದ್ಯುತ್ ಯೋಜನೆಗಳು, ಕೈಗಾ ಅಣು ವಿದ್ಯುತ್ ಯೋಜನೆ ಕಾರ್ಯನಿರ್ವಹಿಸುತ್ತಿವೆ. ಒಂದು ವೇಳೆ ಕಾಳಿಯ ನೀರು ಬೇರೆಡೆ ಒಯ್ದರೆ ವಿದ್ಯುತ್ ಯೋಜನೆಗಳು ಭವಿಷ್ಯದಲ್ಲಿ ನಿಂತು ಹೋಗುವ ಆತಂಕವಿದೆ. ಹೀಗಾಗಿ ಕಾಳಿ ನದಿಯ ನೀರನ್ನು ಬೇರೆ ಜಿಲ್ಲೆಗೆ ಕೊಂಡೊಯ್ಯುವ ಪ್ರಯತ್ನ ಕೈಬಿಡಬೇಕೆಂದು ದಾಂಡೇಲಿ ನಾಗರಿಕರು ಒತ್ತಾಯಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.