ETV Bharat / state

ವರ್ಷದಿಂದ ಕಾರವಾರ ನೌಕಾನೆಲೆ ನೌಕರ ನಾಪತ್ತೆ: ಪತಿ ಹುಡುಕಿಕೊಡುವಂತೆ ಜಿಲ್ಲಾಡಳಿತದ ಮೊರೆ ಹೋದ ಪತ್ನಿ

author img

By

Published : May 25, 2023, 12:20 PM IST

ಕಾರವಾರ ನೌಕಾನೆಲೆಯಲ್ಲಿ ಕೆಲಸಕ್ಕೆ ತೆರಳುವುದಾಗಿ ಹೇಳಿ ಹೋದ ಪತಿ ಒಂದು ವರ್ಷವಾದರೂ ವಾಪಸ್​ ಬಂದಿಲ್ಲ, ಗಂಡನನ್ನು ಹುಡುಕಿಕೊಡಿ ಎಂದು ಮಹಿಳೆಯೊಬ್ಬರು ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದಾರೆ.

uttara kannada dc
ಕಾರವಾರ ನೌಕಾನೆಲೆ ನೌಕರ ನಾಪತ್ತೆ

ಕಾರವಾರ: ಅವರಿಬ್ಬರು ಪ್ರೀತಿಸಿ ಮದುವೆಯಾಗಿದ್ದ ಜೋಡಿ. ಇಬ್ಬರ ಪ್ರೀತಿಗೆ ಸಾಕ್ಷಿವೆಂಬಂತೆ ಎರಡು ಮುದ್ದಾದ ಹೆಣ್ಣುಮಕ್ಕಳನ್ನು ಪಡೆದಿದ್ದರು. ಆರು ವರ್ಷದಿಂದ ಸಂಸಾರ ನಡೆಸುತ್ತಿದ್ದ ಪತಿ, ಕಳೆದೊಂದು ವರ್ಷದ ಹಿಂದೆ ಕೆಲಸಕ್ಕೆ ಹೋಗಿ ಬರುವುದಾಗಿ ಹೇಳಿ ತೆರಳಿದವರು ಮರಳಿ ಬಾರದೆ ನಾಪತ್ತೆಯಾಗಿದ್ದಾರೆ. ಪತಿಯನ್ನು ಹುಡುಕಿ ಕೊಡುವಂತೆ ಕಳೆದೊಂದು ವರ್ಷದಿಂದ ಪೊಲೀಸ್​ ಠಾಣೆಗಳಿಗೆ ಅಲೆದು ಸಾಕಾಗಿರುವ ಪತ್ನಿ ಇದೀಗ ಜಿಲ್ಲಾಡಳಿತದ ಮೊರೆ ಹೋಗಿದ್ದಾರೆ.

ಕಾರವಾರ ತಾಲೂಕಿನ ಹಾರವಾಡ ಮೂಲದ ಮನೋಜ್ ಪೆಡ್ನೇಕರ್ (33) ನಾಪತ್ತೆಯಾದ ನೌಕರ. ಕಾರವಾರ ನೌಕಾನೆಲೆಯಲ್ಲಿ ಖಾಯಂ ನೌಕರನಾಗಿ ಕಳೆದ 10 ವರ್ಷದಿಂದ ಕೆಲಸ ನಿರ್ವಹಿಸುತ್ತಿದ್ದ ಇವರು ಬೈತಖೋಲ ಮೂಲದ ರೇಷ್ಮಾ ಪೆಡ್ನೇಕರ್ ಎಂಬ ಯುವತಿಯನ್ನು 7 ವರ್ಷದ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು. ಅಲ್ಲದೇ, ದಂಪತಿಗೆ ಇಬ್ಬರು ಹೆಣ್ಣುಮಕ್ಕಳಿದ್ದಾರೆ. ಆದರೆ, ಎರಡನೇ ಮಗು ಜನಿಸಿ ಆರು ತಿಂಗಳಾಗಿರುವ ವೇಳೆಗೆ ಪತಿ ನಾಪತ್ತೆಯಾಗಿದ್ದು, ಈವರೆಗೂ ಪತ್ತೆಯಾಗಿಲ್ಲ.‌ ನೌಕಾನೆಲೆಯಲ್ಲಿ ಕೆಲಸಕ್ಕೆ ತೆರಳುವುದಾಗಿ ಹೇಳಿ ಹೋದವನು ಮರಳಿ ಬಾರದ ಹಿನ್ನೆಲೆಯಲ್ಲಿ ಆತನ ಪತ್ನಿ ಹಾಗೂ ತಾಯಿ ಕಾರವಾರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ 2022ರ ಜುಲೈ 25 ರಂದು ದೂರು ದಾಖಲಿಸಿದ್ದಾರೆ.

ಅಮದಳ್ಳಿಯ ಬಾಡಿಗೆ ಮನೆಯಲ್ಲಿದ್ದಾಗ ಒಂದೂವರೆ ತಿಂಗಳಿಂದ ಕೆಲಸಕ್ಕೆ ತೆರಳದೇ ಇದ್ದವರು 2022 ರ ಜುಲೈ 18 ರಂದು ಬೆಳಗ್ಗೆ 8 ಗಂಟೆಗೆ ಕೆಲಸಕ್ಕೆ ತೆರಳುವುದಾಗಿ ಹೇಳಿ ಹೋಗಿದ್ದರು. ಎರಡು ದಿನದ ಬಳಿಕ ಕರೆ ಮಾಡಿ‌ ತಾನು ಮುಂದಿನ ವಾರ ಬರುವುದಾಗಿ ತಿಳಿಸಿದ್ದರು. ಎಲ್ಲಿಗೆ ತೆರಳುತ್ತಿರುವುದಾಗಿ ಪ್ರಶ್ನಿಸಿದಾಗಲು ಏನೂ ಹೇಳದೆ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದು, ಈವರೆಗೆ ಸಂಪರ್ಕಕ್ಕೆ ಸಿಕ್ಕಿಲ್ಲ ಎಂದು ದೂರಿನಲ್ಲಿ ನಮೂದಿಸಿದ್ದಾರೆ.

marriage certificate
ಮದುವೆ ಪ್ರಮಾಣಪತ್ರ

ಪೊಲೀಸ್ ಠಾಣೆ ಹಾಗೂ ನೌಕಾನೆಲೆ ಅಧಿಕಾರಿಗಳಿಗೆ ಮಾಹಿತಿ ನೀಡಿ ಕಳೆದೊಂದು ವರ್ಷದಿಂದ ಅಲೆದಾಡಿದರೂ ಯಾವುದೇ ಪರಿಹಾರ ಸಿಗದ ಹಿನ್ನೆಲೆಯಲ್ಲಿ ಬುಧವಾರ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಅವರನ್ನು ಇಬ್ಬರು ಪುಟ್ಟ ಮಕ್ಕಳೊಂದಿಗೆ ಭೇಟಿ ಮಾಡಿದ ರೇಷ್ಮಾ ಪೆಡ್ನೇಕರ್, ಕಣ್ಣೀರು ಹಾಕಿದ್ದಾರೆ. ಪತಿ ಕೆಲಸಕ್ಕೆ ಹೋದವರು ಮನೆಗೆ ಮರಳಿ ಬಂದಿಲ್ಲ. ಮನೆಬಿಟ್ಟು ತೆರಳುವ ಮುನ್ನ ಮನೆಯ ಆಸ್ತಿ, ಒಡವೆ ಎಲ್ಲವನ್ನು ಸಾಲ ತುಂಬುವುದಕ್ಕಾಗಿ ಮಾರಾಟ ಮಾಡಿದ್ದರು. ಬಳಿಕ, ಬಾಡಿಗೆ ಮನೆಯಲ್ಲಿದ್ದ ನಮಗೆ ಜೀವನ ನಡೆಸುವುದೇ ಕಷ್ಟವಾಗಿದೆ. ಸದ್ಯ ತಾಯಿಯ ಮನೆಯಲ್ಲಿದ್ದು, ನನಗೆ ಗಂಡನನ್ನು ಹುಡುಕಿ ಕೊಡಿ ಎಂದು ಮಹಿಳೆ ಮನವಿ ಮಾಡಿದ್ದಾರೆ.

ಇದನ್ನೂ ಓದಿ : ಗಂಗಾನದಿಯಲ್ಲಿ ದೋಣಿ ಮುಳುಗಿ 4 ಸಾವು, 24 ಮಂದಿ ನಾಪತ್ತೆ: ಭೀಕರ ವಿಡಿಯೋ

"ರೇಷ್ಮಾ ಪತಿ ನಾಪತ್ತೆಯಾಗಿ ವರ್ಷ ಸಮೀಪಿಸಿದರೂ ಪೊಲೀಸರು ಹಾಗೂ ನೌಕಾನೆಲೆ ಅಧಿಕಾರಿಗಳು ಹುಡುಕಾಟಕ್ಕೆ ನಿರ್ಲಕ್ಷ್ಯ ಮಾಡುತ್ತಿದ್ದಾರೆ. ಇದರಿಂದ ಪುಟ್ಟ ಮಕ್ಕಳಿರುವ ಕುಟುಂಬ ಸಂಕಷ್ಟಕ್ಕೆ ಸಿಲುಕಿದೆ. ಜಿಲ್ಲಾಡಳಿತ ಕೂಡಲೇ ಆ ಕುಟುಂಬದ ನೆರವಿಗೆ ಧಾವಿಸಬೇಕು. ಪತಿ ಹುಡುಕಿಕೊಡುವುದರ ಜೊತೆಗೆ ಅವರ ಜೀವನಕ್ಕೆ ಅನುಕೂಲವಾಗುವಂತೆ ನೌಕಾನೆಲೆಯಲ್ಲಿ ಕೆಲಸ ನೀಡಲು ಪ್ರಯತ್ನಿಸಬೇಕು. ಒಂದೊಮ್ಮೆ ಈಗಲೂ ನಿರ್ಲಕ್ಷ್ಯ ಮುಂದುವರಿಸಿದಲ್ಲಿ ನಮ್ಮ ಸಂಘಟನೆಯಿಂದ ನೌಕಾನೆಲೆ ಗೇಟ್ ಎದುರು ಕುಟುಂಬಸ್ಥರ ಜೊತೆಗೂಡಿ ಹೋರಾಟ ನಡೆಸಲಾಗುವುದು" ಎಂದು ಸಾಮಾಜಿಕ ಕಾರ್ಯಕರ್ತ ರಾಘು ನಾಯ್ಕ ಎಚ್ಚರಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.