ಫೇಸ್‌ಬುಕ್​​​​ನಲ್ಲಿ ಬಂದ ಲಿಂಕ್ ಕ್ಲಿಕ್ಕಿಸಿ 60 ಸಾವಿರ ಕಳೆದುಕೊಂಡ ವ್ಯಕ್ತಿ! ವಂಚಕರ ಬಗ್ಗೆ ಎಚ್ಚರವಹಿಸಿ..

author img

By

Published : Oct 14, 2021, 10:15 AM IST

online fraud

ಫೇಸ್​ಬುಕ್​ನಲ್ಲಿ ಬಂದ ಡಿಜಿಟಲ್​ ಇಂಡಿಯಾ ಮಿನಿ ಬ್ಯಾಂಕ್​​ ಜಾಹೀರಾತು ನಂಬಿ ವ್ಯಕ್ತಿಯೋರ್ವ ವಂಚನೆಗೆ ಗುರಿಯಾಗಿ ಸಾವಿರಾರು ರೂಪಾಯಿ ಹಣ ಕಳೆದುಕೊಂಡಿರುವ ಘಟನೆ ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನಲ್ಲಿ ನಡೆದಿದೆ.

ಕಾರವಾರ: ಮಿನಿ ಬ್ಯಾಂಕ್ ತೆರೆಯುವ ವಿಷಯವಾಗಿ ಫೇಸ್‌ಬುಕ್​ನಲ್ಲಿ ಬಂದಿರುವ ಲಿಂಕ್ ಕ್ಲಿಕ್ ಮಾಡಿದ ವ್ಯಕ್ತಿಯೋರ್ವ ವಂಚಕರ ಜಾಲಕ್ಕೆ ಸಿಲುಕಿ 60,100 ರೂ. ಕಳೆದುಕೊಂಡಿದ್ದಾರೆ.

ಹೊನ್ನಾವರ ತಾಲೂಕಿನ ಟೊಂಕಾದ ಮೈದಿನ್ ಕಾಸಿಂ ಸಾಬ್ ಹಣ ಕಳೆದುಕೊಂಡ ವ್ಯಕ್ತಿ. ಕಳೆದ ಕೆಲ ತಿಂಗಳ ಹಿಂದೆ ತಮ್ಮ ಫೇಸ್‌ಬುಕ್ ಖಾತೆ(Facebook) ವಿಕ್ಷಣೆ ಮಾಡುತ್ತಿರುವಾಗ‌ ಡಿಜಿಟಲ್ ಇಂಡಿಯಾ, ಸಿ.ಎಸ್.ಪಿ. ಪಾಯಿಂಟ್ ಮಿನಿ ಬ್ಯಾಂಕ್ ಎನ್ನುವ ಜಾಹೀರಾತನ್ನು ಕಂಡು ಕ್ಲಿಕ್ ಮಾಡಿದ್ದಾರೆ. ಮರುದಿನ ವ್ಯಕ್ತಿಯೊಬ್ಬ ಕರೆ ಮಾಡಿ, ತಾನು ಸಿ.ಎಸ್.ಪಿ. ಕಂಪನಿಯ ಎಕ್ಸಿಕ್ಯೂಟಿವ್ ಎಂದು ಪರಿಚಯ ಮಾಡಿಕೊಂಡು ಮಿನಿ ಬ್ಯಾಂಕ್ ಆ್ಯಪ್ ಬಳಸುವಂತೆ ತಿಳಿಸಿದ್ದಾನೆ.

ಅಲ್ಲದೇ ಮಿನಿ ಬ್ಯಾಂಕ್ ಪಾಯಿಂಟ್ ತೆರೆಯಲು ನಿಮಗೆ ಎರಡು ಕಂಪ್ಯೂಟರ್, ನಾಲ್ಕು ಸಿಸಿ ಟಿವಿ ಕ್ಯಾಮರಾ ಕಳುಹಿಸುತ್ತೇವೆ. ನಿಮ್ಮ ಹಳ್ಳಿಯಲ್ಲಿ ಬೇರೆಯವರ ಬ್ಯಾಂಕ್ ಖಾತೆಗೆ ಆನ್ಲೈನ್ ಮೂಲಕ ಹಣ ವರ್ಗಾವಣೆ, ರೀಚಾರ್ಚ್ ಮಾಡಿದರೆ ಕಮಿಷನ್ ನೀಡುತ್ತೇವೆ ಎಂದು ನಂಬಿಸಿದ್ದಾರೆ. ಅಲ್ಲದೆ, ಮಿನಿ ಬ್ಯಾಂಕ್ ಪಡೆಯಲು 10,100 ರೂ. ತಮ್ಮ ಕಂಪನಿ ಖಾತೆಗೆ ಜಮಾ ಮಾಡುವಂತೆಯೂ ತಿಳಿಸಿದ್ದಾರೆ. ವಂಚಕರ ಮಾತು ನಂಬಿದ್ದ ಮೈದಿನ್ ಹಣ ವರ್ಗಾವಣೆ ಸಹ ಮಾಡಿದ್ದಾರೆ.

ಬಳಿಕ ಮತ್ತೆ ಕರೆ ಮಾಡಿ ತಾವು ಮಿನಿ ಬ್ಯಾಂಕ್ ಓ.ಡಿ. ಡಿಪಾರ್ಟ್ಮೆಂಟ್‌ನಿಂದ ಕರೆ ಮಾಡುತ್ತಿದ್ದು, ನೀವು ಹಣ ವರ್ಗಾವಣೆ ಮಾಡಿದ್ದ ಖಾತೆಯಲ್ಲಿ 50 ಸಾವಿರ ರೂ. ಇರಬೇಕು. ಅದನ್ನೂ ಆರ್.ಬಿ.ಐ ಪರಿಶೀಲನೆ ಮಾಡಲಿದೆ. ನಿಮ್ಮ ಹಣವನ್ನು ಗಂಟೆಯೊಳಗೆ ನಿಮಗೆ ಮರಳಿ ವರ್ಗಾವಣೆ ಮಾಡಲಾಗುವುದು ಎಂದು ತಿಳಿಸಿದ್ದಾರೆ. ಇದನ್ನು ನಂಬಿದ ಮೈದಿನ್ ಖಾತೆಗೆ 50 ಸಾವಿರ ರೂ. ಸಹ ಜಮೆ ಮಾಡಿದ್ದಾರೆ. ಇದಾದ ಬಳಿಕ ಮಿನಿ ಬ್ಯಾಂಕ್ ಕರೆಯಿಂದ ಯಾವುದೇ ಪ್ರತಿಕ್ರಿಯೆ ಬರದೇ ಇದ್ದುದರಿಂದ ತಾವು ಮೋಸ ಹೋಗಿರುವುದು ಮೈದಿನ್‌ಗೆ ತಿಳಿದು ಬಂದಿದೆ.

ಈ ಬಗ್ಗೆ ಅವರು ಕಾರವಾರದ ಸಿ.ಇ.ಎನ್ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.