ETV Bharat / state

ಬೈಂದೂರು: ಚಾಕೊಲೇಟ್​ ಗಂಟಲಲ್ಲಿ ಸಿಲುಕಿ ಶಾಲಾ ಬಾಲಕಿ ಸಾವು

author img

By

Published : Jul 20, 2022, 5:55 PM IST

ಚಾಕೊಲೇಟ್​ ಗಂಟಲಲ್ಲಿ ಸಿಲುಕಿ ಶಾಲೆಗೆ ಹೊರಟಿದ್ದ ಬಾಲಕಿ ಮೃತಪಟ್ಟಿರುವ ಘಟನೆ ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನಲ್ಲಿ ನಡೆದಿದೆ.

byndur-schoolgirl-dies-after-chocolate-gets-stuck-in-her-throat
ಬೈಂದೂರು : ಚಾಕಲೇಟ್ ಗಂಟಲಲ್ಲಿ ಸಿಲುಕಿ ಶಾಲಾ ಬಾಲಕಿ ಸಾವು

ಬೈಂದೂರು (ಉಡುಪಿ) : ಶಾಲೆಗೆ ಹೊರಟಿದ್ದ ಬಾಲಕಿ ಮನೆಯವರು ನೀಡಿದ ಚಾಕೊಲೇಟ್​ ಅನ್ನು ಬಾಯಿಗೆ ಹಾಕಿಕೊಂಡು ಶಾಲಾ ಬಸ್ ಬಂತೆಂದು ಬಸ್ ಬಳಿಗೆ ಓಡುವಾಗ ಚಾಕೊಲೇಟ್​ ನುಂಗಿದ ಪರಿಣಾಮ ಬಾಲಕಿ ಉಸಿರುಗಟ್ಟಿ ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ. ಬೈಂದೂರು ತಾಲೂಕಿನ ಬಿಜೂರು ಗ್ರಾಮದ ಕಬ್ಸೆಯ ನಿವಾಸಿ ಸುಪ್ರೀತಾ ಪೂಜಾರಿ ಎಂಬುವರ ಮಗಳು ಸಮನ್ವಿ (6) ಎಂಬ ಮೃತಪಟ್ಟ ಬಾಲಕಿ.

ಸಮನ್ವಿ ಬುಧವಾರ ಬೆಳಗ್ಗೆ ಎಂದಿನಂತೆಯೇ ಶಾಲೆಗೆ ಹೊರಡಲು ಸಮವಸ್ತ್ರ ಧರಿಸಿ ಸಿದ್ಧವಾಗಿದ್ದರು. ಆದರೆ, ಅದೇಕೋ ಆಕೆಯ ಮನಸ್ಸು ಶಾಲೆಗೆ ಹೋಗಲು ಒಪ್ಪಿರಲಿಲ್ಲ. ಇದರಿಂದಾಗಿ ಮನೆಯವರು ಆಕೆಗೆ ಪುಸಲಾಯಿಸಿ ಶಾಲೆಗೆ ಹೊರಡಿಸಿದ್ದು, ಕೈಯಲ್ಲೊಂದು ಚಾಕೊಲೇಟ್​​ ನೀಡಿದ್ದಾರೆ ಎನ್ನಲಾಗಿದೆ. ಅಷ್ಟೊತ್ತಿಗಾಗಲೇ ಶಾಲಾ ವಾಹನ ಬಂದಿದೆ. ಇದರಿಂದ ಗಾಬರಿಗೊಂಡ ಬಾಲಕಿ ಸಮನ್ವಿ ಕೈಯಲ್ಲಿದ್ದ ಚಾಕೊಲೇಟ್​ ಪ್ಲಾಸ್ಟಿಕ್ ಕವರ್ ಸಮೇತ ಬಾಯಿಗೆ ಹಾಕಿಕೊಂಡು ಬ್ಯಾಗ್ ಏರಿಸಿಕೊಂಡು ಶಾಲಾ ವಾಹನದತ್ತ ಓಡಿದ್ದಾಳೆ. ಹೀಗೆ ಓಡುವಾಗ ಚಾಕೊಲೇಟ್​ ಗಂಟಲಲ್ಲಿ ಸಿಕ್ಕಿಕೊಂಡಿದೆ.

ಗಂಟಲಲ್ಲಿ ಚಾಕೊಲೇಟ್​ ಕವರ್ ಸಮೇತ ಸಿಕ್ಕಿಹಾಕಿಕೊಂಡ ಪರಿಣಾಮ ಉಸಿರುಗಟ್ಟಿ ಶಾಲಾ ವಾಹನದ ಮೆಟ್ಟಿಲ ಬಳಿಯೇ ಕುಸಿದು ಬಿದ್ದಿದ್ದಾರೆ. ಮನೆಯವರು ಶಾಲಾ ವಿದ್ಯಾರ್ಥಿಗಳು, ಸ್ಕೂಲ್ ವ್ಯಾನ್ ಡ್ರೈವರ್ ಎಲ್ಲರೂ ಜಮಾಯಿಸಿದ್ದು, ವಾಹನ ಚಾಲಕ ಮಗುವಿಗೆ ಕೃತಕ ಉಸಿರಾಟ ನೀಡಲು ಪ್ರಯತ್ನಿಸಿದರೂ ಫಲಕಾರಿಯಾಗಲಿಲ್ಲ. ಕೂಡಲೇ ಬಾಲಕಿಯನ್ನು ಬೈಂದೂರು ಖಾಸಗಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅದಾಗಲೇ ಮಗು ಮೃತಪಟ್ಟಿದೆ ಎಂದು ತಿಳಿದು ಬಂದಿದೆ.

ಇನ್ನು ಕೆಲವರು ಮಗುವಿಗೆ ಹೃದಯಾಘಾತ ಸಂಭವಿಸಿದೆ ಎಂದು ಮಾತನಾಡಿಕೊಳ್ಳುತ್ತಿದ್ದಾರೆ. ಮಗುವಿನ ಸಾವಿಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಬಾಲಕಿಯ ಮರಣೋತ್ತರ ಪರೀಕ್ಷೆಗಾಗಿ ಮಣಿಪಾಲಕ್ಕೆ ಕರೆದೊಯ್ಯಲಾಗಿದ್ದು, ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತ ಬಾಲಕಿ ಉಪ್ಪುಂದದ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಒಂದನೇ ತರಗತಿ ವಿದ್ಯಾರ್ಥಿನಿಯಾಗಿದ್ದಳು. ವಿವೇಕಾನಂದ ಆಂಗ್ಲಮಾಧ್ಯಮ ಶಾಲೆಗೆ ಒಂದು ದಿನ ರಜೆ ಘೋಷಿಸಲಾಗಿದೆ.

ಓದಿ : ಸಾಮಾಜಿಕ ಜಾಲತಾಣದಲ್ಲಿ ನಿಂದಿಸಿದ್ದಕ್ಕೆ ಹತ್ಯೆ: ಮೂವರ ಬಂಧನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.