ETV Bharat / state

ಮಲೆನಾಡು ಗಿಡ್ಡ ಸಾಕಣೆಗೆ ಮುಂದಾದ ಬಯಲುಸೀಮೆ ರೈತರು; ಬಿಜೆಪಿ ಯುವ ಮೋರ್ಚಾದಿಂದ ಉಚಿತವಾಗಿ 101 ರಾಸುಗಳ ವಿತರಣೆ

author img

By ETV Bharat Karnataka Team

Published : Oct 3, 2023, 9:52 PM IST

ತುಮಕೂರು ಜಿಲ್ಲೆಯಲ್ಲಿ ಹಳ್ಳಿಕಾರ್ ತಳಿಯ ಜಾನುವಾರುಗಳಿಗೆ ಅಪಾರ ಬೇಡಿಕೆ ಇದೆ. ಆದರೆ ಈಗ ರೈತರು ಮಲೆನಾಡಿನ ಗಿಡ್ಡ ತಳಿಯತ್ತ ಆಕರ್ಷಿತರಾಗಿದ್ದಾರೆ.

malenadu short breed cows
ಮಲೆನಾಡು ಗಿಡ್ಡ ತಳಿ ಹಸುಗಳು

ಮಲೆನಾಡು ಗಿಡ್ಡ ತಳಿ ಹಸುಗಳು

ತುಮಕೂರು: ಸಾಮಾನ್ಯವಾಗಿ ಮಲೆನಾಡು ಪ್ರದೇಶದಲ್ಲಿ ಕಂಡುಬರುವ ಅಪರೂಪದ ಮಲೆನಾಡು ಗಿಡ್ಡ ತಳಿಯ ಜಾನುವಾರುಗಳನ್ನು ಬಯಲುಸೀಮೆ ಪ್ರದೇಶದಲ್ಲೂ ಪರಿಚಯಿಸಲಾಗುತ್ತಿದೆ. ಮಲೆನಾಡಿಗೆ ಸೀಮಿತವಾಗಿದ್ದ ಈ ತಳಿಯ ಹಸು ಸಾಕಣೆ ಬಯಲುಸೀಮೆ ರೈತರಲ್ಲಿ ಮಹತ್ವ ಪಡೆದುಕೊಳ್ಳುತ್ತಿದೆ. ಮಲೆನಾಡು ಗಿಡ್ಡವನ್ನು ಉಳಿಸಿ ಬೆಳೆಸುವ ಕಾರ್ಯ ಸದ್ದಿಲ್ಲದೆ ನಡೆಯುತ್ತಿದೆ.

ಜಿಲ್ಲೆಯಲ್ಲಿ ಸಾಕುವ ಹಳ್ಳಿಕಾರ್ ತಳಿ ಜಾನುವಾರುಗಳಿಗೆ ಅಪಾರ ಬೇಡಿಕೆ ಇದೆ. ಇಂತಹ ತಳಿಯ ಹಸುಗಳನ್ನು ಕೆಲ ಜಾನುವಾರು ಜಾತ್ರೆಗಳಲ್ಲಿ ಉತ್ತರ ಕರ್ನಾಟಕ ಭಾಗದ ರೈತರು ಖರೀದಿಸಿ ತೆಗೆದುಕೊಂಡು ಹೋಗುತ್ತಾರೆ. ಈಗ ತುಮಕೂರು ಜಿಲ್ಲೆಯ ರೈತರು ಮಲೆನಾಡಿನ ಗಿಡ್ಡ ತಳಿಯತ್ತ ಆಕರ್ಷಿತರಾಗಿದ್ದಾರೆ. ಕಳೆದ ನಾಲ್ಕೈದು ವರ್ಷಗಳಿಂದ ರೈತರು ಈ ತಳಿಯ ಹಸುಗಳನ್ನೂ ಸಹ ಸಾಕುವುದಕ್ಕೆ ಒಲವು ತೋರುತ್ತಿದ್ದಾರೆ. ಮಲೆನಾಡು ಗಿಡ್ಡ ತಳಿಯ ಹಾಲಿನ ಮಹತ್ವ ಹಾಗೂ ಅದರಿಂದ ಉತ್ಪತ್ತಿಯಾಗುವ ಸಗಣಿ ಹಾಗೂ ಗಂಜಲ ಬಳಸಿ ಕೃಷಿ ಚಟುವಟಿಕೆಗಳಿಗೆ ಉತ್ತಮ ಗೊಬ್ಬರವಾಗಿ ಬಳಸಬಹುದು ಎಂದು ರೈತರಲ್ಲಿ ಅರಿವು ಮೂಡಿಸಲಾಗುತ್ತಿದೆ.

ಬಯಲುಸೀಮೆ ಭಾಗದಲ್ಲಿ ಈ ಜಾನುವಾರುಗಳನ್ನು ಸಾಕಲು ಯಾವುದೇ ತೊಂದರೆ ಇಲ್ಲ. ಕನಿಷ್ಠ ನಾಲ್ಕರಿಂದ ಐದು ತಿಂಗಳ ಕಾಲ ಬಹಳ ಜೋಪಾನದಿಂದ ಕಾಪಾಡಬೇಕಷ್ಟೇ. ಆ ನಂತರ ಇಲ್ಲಿನ ವಾತಾವರಣಕ್ಕೆ ಈ ಜಾನುವಾರು ತಳಿ ಹೊಂದಿಕೊಳ್ಳುತ್ತವೆ ಎನ್ನುತ್ತಾರೆ ರೈತರು.

ಜಾನುವಾರು ಜಾತ್ರೆಗಳಲ್ಲಿ ಅತಿ ಕಡಿಮೆ ಸಂಖ್ಯೆಯಲ್ಲಿ ಮಲೆನಾಡು ಗಿಡ್ಡ ತಳಿಯನ್ನು ಕಾಣುತ್ತಿದ್ದೆವು. ಆದರೆ ಇದನ್ನು ಸಾಕಲು ಕೂಡ ರೈತರಿಗೆ ಪ್ರೋತ್ಸಾಹ ಸಿಗುತ್ತಿರಲಿಲ್ಲ. ಇದೀಗ ಈ ಜಾನುವಾರು ತಳಿಯ ಮಹತ್ವವನ್ನು ಪರಿಚಯಿಸಲು ಬಿಜೆಪಿ ರೈತ ಮೋರ್ಚಾ ಮುಂದಾಗಿದ್ದು, ರೈತರಿಗೆ ಅರಿವು ಮೂಡಿಸಲು ಹಮ್ಮಿಕೊಂಡಿದ್ದ ಕಾರ್ಯಕ್ರಮಗಳು ಸಾಕಷ್ಟು ಸಹಕಾರಿಯಾಗಿದೆ. ಆಯ್ದ ರೈತರಿಗೆ ಉಚಿತವಾಗಿ ಮಲೆನಾಡು ಗಿಡ್ಡ ತಳಿಯನ್ನು ಬಿಜೆಪಿ ಯುವಮೋರ್ಚಾ ನೀಡುತ್ತಿದ್ದು, ಈ ವಿಷಯವನ್ನರಿತ ಅರಿತ ಅನೇಕ ರೈತರು ತಂಡೋಪತಂಡವಾಗಿ ಮಲೆನಾಡು ಗಿಡ್ಡ ಸಾಕಲು ಮುಂದೆ ಬರುತ್ತಿದ್ದಾರೆ.

101 ಮಲೆನಾಡು ಗಿಡ್ಡ ತಳಿ ರಾಸು ರೈತರಿಗೆ ವಿತರಣೆ: ತುಮಕೂರಿನ ಸಿದ್ದಗಂಗಾ ಮಠದ ಆವರಣದಲ್ಲಿ ಬಿಜೆಪಿ ರೈತ ಮೋರ್ಚಾ ಆಶ್ರಯದಲ್ಲಿ ನಡೆದ ಶೂನ್ಯ ಬಂಡವಾಳ ನೈಸರ್ಗಿಕ ಕೃಷಿ ಕಾರ್ಯಾಗಾರದಲ್ಲಿ 101 ಮಲೆನಾಡು ಗಿಡ್ಡ ತಳಿ ರಾಸುಗಳನ್ನು ರೈತರಿಗೆ ಉಚಿತವಾಗಿ ನೀಡಲಾಯಿತು. ಹಲವಾರು ರೈತರು ನಾ ಮುಂದು ತಾ ಮುಂದೆಂದು ಮಲೆನಾಡು ಗಿಡ್ಡ ತಳಿಗಳನ್ನು ತಮ್ಮದಾಗಿಸಿಕೊಳ್ಳಲು ಆಸಕ್ತಿ ವಹಿಸಿದ್ದು ಕಂಡುಬಂತು.

ಇದನ್ನೂಓದಿ: ಪುತ್ತೂರು: ಪೊದೆಯೊಳಗಿನ ಮುರುಕಲು ಮನೆಯಲ್ಲಿ 40 ವರ್ಷಗಳಿಂದ ಬ್ರಹ್ಮಚಾರಿಯ ಏಕಾಂತ ವಾಸ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.