ETV Bharat / state

ಬಂದ್ ಹಾಗೂ ಪ್ರತಿಭಟನೆಗಳು ಕಾನೂನು ಚೌಕಟ್ಟಿನಲ್ಲಿರಬೇಕು: ಗೃಹ ಸಚಿವ ಜಿ ಪರಮೇಶ್ವರ್

author img

By ETV Bharat Karnataka Team

Published : Sep 23, 2023, 8:14 PM IST

ಸಿಡಬ್ಲ್ಯೂಎಂಎ ನವರು ತಮಿಳುನಾಡಿಗೆ 5 ಸಾವಿರ ಕ್ಯೂಸೆಕ್ ಕಾವೇರಿ ನೀರು ಬಿಡಬೇಕು ಅಂತ ಹೇಳಿದ್ದಾರೆ. ನಾವು ಅವರು ಹೇಳಿದಂತೆ 5 ಸಾವಿರ ಕ್ಯೂಸೆಕ್ ಬಿಟ್ಟಿಲ್ಲ ಎಂದು ಗೃಹ ಸಚಿವ ಡಾ ಜಿ ಪರಮೇಶ್ವರ್ ಸ್ಪಷ್ಟನೆ ನೀಡಿದ್ದಾರೆ.

home-minister-dr-g-parameshwar-reaction-on-cauvery-issue
ಬಂದ್ ಹಾಗೂ ಪ್ರತಿಭಟನೆಗಳು ಕಾನೂನು ಚೌಕಟ್ಟಿನಲ್ಲಿರಬೇಕು: ಗೃಹ ಸಚಿವ ಡಾ ಜಿ ಪರಮೇಶ್ವರ್

ಗೃಹ ಸಚಿವ ಜಿ ಪರಮೇಶ್ವರ್

ತುಮಕೂರು: ಕಾವೇರಿ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಪಟ್ಟಂತೆ ವಿವಿಧ ಸಂಘಟನೆಗಳಿಂದ ಕರೆ ನೀಡಲಾಗಿರುವ ಬೆಂಗಳೂರು ಬಂದ್ ಹಾಗೂ ಪ್ರತಿಭಟನೆಗಳು ಕಾನೂನು ಚೌಕಟ್ಟಿನಲ್ಲಿ ಇರಬೇಕು ಎಂದು ಗೃಹ ಸಚಿವ ಡಾ ಜಿ ಪರಮೇಶ್ವರ್ ತಿಳಿಸಿದರು. ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಂದ್ ಮಾಡಲು ಅನುಮತಿ ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ಅದು ಕಾನೂನಿಗೆ ವಿರೋಧವಾಗುತ್ತದೆ. ಸಾರ್ವಜನಿಕ ಹಾಗೂ ಖಾಸಗಿ ಆಸ್ತಿ ನಷ್ಟವಾಗಬಾರದು ಎಂದರು.

ಕಾನೂನಿಗೆ ವಿರುದ್ಧವಾದ ಚಟುವಟಿಕೆಗಳನ್ನು ಮಾಡಬಾರದು. ಶಾಂತಿಯುತವಾಗಿ ಪ್ರತಿಭಟನೆ ಮಾಡಿದರೆ ಅನುಮತಿ ಕೊಡಬಹುದು. ಸರ್ಕಾರದ ಜೊತೆಗೆ ಸಹಕಾರ ಮಾಡಿ, ನಾವು ಎಲ್ಲಾ ರೀತಿ ಕ್ರಮ ತೆಗೆದುಕೊಳ್ಳುತ್ತಿದ್ದೇವೆ. ಇದನ್ನು ಪ್ರತಿಭಟನಾಕಾರರು ಮನನ ಮಾಡಿಕೊಳ್ಳಬೇಕು. ಸಿಡಬ್ಲ್ಯೂಎಂಎ ಮುಂದೆ ಎಲ್ಲವನ್ನು ಲೀಗಲ್ ಟೀಂ‌ ಹೇಳುತ್ತಿದೆ. ನಾವು ಯಾವುದನ್ನು ಮುಚ್ಚಿಟ್ಟಿಲ್ಲ, ನೀರಾವರಿ ಸಚಿವರು, ಸಿಎಂ, ಕಾನೂನು ತಂಡ ಎಲ್ಲವನ್ನು ಮುಕ್ತವಾಗಿ‌ ಹೇಳುತ್ತಿದ್ದಾರೆ. ಸರ್ವ ಪಕ್ಷ ಸಭೆ ಕರೆದು ವಿವರಣೆ ಪಡೆದಿದ್ದೇವೆ. ಸರ್ಕಾರಕ್ಕೆ‌ ಜವಾಬ್ದಾರಿಯಿದೆ ಎಂದು ಸಚಿವ ಪರಮೇಶ್ವರ್ ಹೇಳಿದರು.

ಸುಮ್ಮನೆ ನೀರು ಬಿಡಲ್ಲ, 20 ಟಿಎಂಸಿ ನೀರು ಕೆಆರ್​ಎಸ್ ಡ್ಯಾಂನಲ್ಲಿದೆ. 10 ಟಿಎಂಸಿ ಡೆಡ್ ಸ್ಟೋರೇಜ್ ಇರುತ್ತದೆ. 10 ಟಿಎಂಸಿ ನೀರನ್ನು‌ ಬೆಂಗಳೂರಿಗೆ ಕುಡಿಯಲು ಕೊಟ್ಟು, ಅಲ್ಲಿ ಬೆಳೆಗೆ ನೀರು ಕೊಡುವುದು ಕಷ್ಟವಾಗಲಿದೆ ಎಂಬುದನ್ನು ವಿಚಾರ ಮಾಡಿದ್ದೇವೆ. ಸಿಡಬ್ಲ್ಯೂಎಂಎ ನವರು 5 ಸಾವಿರ ಕ್ಯೂಸೆಕ್ ನೀರು ಬಿಡಬೇಕು ಅಂತ ಹೇಳಿದ್ದಾರೆ. ನಾವು ಅಪೀಲ್ ಹಾಕಿದ್ದೇವೆ, 26ಕ್ಕೆ ಕೇಸ್ ಬರುತ್ತದೆ, ಏನು ತೀರ್ಮಾನ ಆಗುತ್ತೆ ಅನ್ನೋದನ್ನು ಕಾದು ನೋಡೋಣ. ನಾವು ಅವರು ಹೇಳಿದಂತೆ 5 ಸಾವಿರ ಕ್ಯೂಸೆಕ್ ನೀರು ಬಿಟ್ಟಿಲ್ಲ. ಸಹಜವಾಗಿಯೇ ತಮಿಳುನಾಡಿನತ್ತ 2 ಸಾವಿರ ಕ್ಯೂಸೆಕ್ ಹರಿದು ಹೋಗುತ್ತದೆ. ಹೆಚ್ಚು ನೀರು ಬಿಟ್ಟಿಲ್ಲ‌ ಎಂದು ಸಚಿವರು ಸ್ಪಷ್ಟಪಡಿಸಿದರು.

ಪಾದಯಾತ್ರೆ ಮಾಡಿ ಅಧಿಕಾರಕ್ಕೆ ಬಂದು ರೈತರಿಗೆ ಚಿಪ್ಪು ಕೊಟ್ಟಿದೆ ಎಂಬ ಮಾಜಿ ಶಾಸಕ ಸಿ ಟಿ ರವಿ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, ಜವಾಬ್ದಾರಿಯುತವಾದ ಮಾತನಾಡಿದರೆ ಪ್ರತಿಕ್ರಿಯೆ ಕೊಡಬಹುದು. ನಮ್ಮ ಬಳಿ ಒಳ್ಳೆಯ ವಕೀಲರ ತಂಡವಿದೆ. ಬಿಜೆಪಿ ಸರ್ಕಾರ ಇದ್ದಾಗಲೂ ಇದೇ ತಂಡವಿತ್ತು, ನಾವು ಬದಲಾವಣೆ ಮಾಡಿಲ್ಲ. ಈ ಕಾನೂನು ತಂಡ ಬಹಳ ಕಾಲದಿಂದಲೂ ಇದೆ. ತಮಿಳುನಾಡಿನವರು 24 ಸಾವಿರ ಕ್ಯೂಸೆಕ್ ಕೇಳಿದ್ದರು, ಕೋರ್ಟ್ 10 ಸಾವಿರ ಕೊಡಲು ತೀರ್ಮಾನ ಮಾಡಿತ್ತು. ಕೊನೆಯದಾಗಿ ನಮ್ಮ‌ ಮನವಿ ಕೇಳಿ 5 ಸಾವಿರ ಕ್ಯೂಸೆಕ್ ಬಿಡಲು ಹೇಳಿದೆ. ನಮಗೂ ಒಂದಿಷ್ಟು ಅನುಕೂಲವಾಗಿದೆ ಎಂದರು.

ನಮ್ಮ ಪರವಾಗಿಯೂ ತೀರ್ಮಾನಗಳಾಗಿವೆ. ಈ ಬಾರಿ ಮಳೆಯಾಗಿಲ್ಲ. ಇಡೀ ರಾಜ್ಯ ಬರದ ಛಾಯೆಯಲ್ಲಿದೆ, ಈ ನಿಟ್ಟಿನಲ್ಲೂ ಸರ್ಕಾರ ಕೆಲಸ‌ ಮಾಡುತ್ತಿದೆ. ಮೇಕೆದಾಟುವಿನಲ್ಲಿ ಡ್ಯಾಂ ಕಟ್ಟಲು ಕೋರ್ಟ್​ಗೆ ಅಪೀಲ್ ಮಾಡಿದ್ದೇವೆ. ಸುಪ್ರೀಂಕೋರ್ಟ್ ಪಿಟಿಷಿನ್‌ನಲ್ಲಿ ಇದನ್ನು ಸೇರಿಸುತ್ತೇವೆ. 172 ಟಿಎಂಸಿ ನೀರು ಕೊಟ್ಟ ಮೇಲೆ ಅವರ‌್ಯಾಕೆ ಡ್ಯಾಂ‌ ಕಟ್ಟಲು ಪ್ರಶ್ನೆ ಮಾಡಬೇಕು. ನಾವು ಡ್ಯಾಂ ಕಟ್ಟೇ ಕಟ್ಟುತ್ತೇವೆ. ಎಲ್ಲಾ ಸಂಸದರನ್ನು ಕರೆಸಿದ್ದೀವಿ, ಅವರೆಲ್ಲರು ನಿಮಗೆ ಬೆಂಬಲ‌ ಕೊಡುತ್ತೇವೆ ಎಂದಿದ್ದಾರೆ. ಹೊರಗೆ ಬಂದು ಒಬ್ಬೊಬ್ಬರು ಒಂದೊಂದು ಹೇಳಿಕೆ‌ ಕೊಡುತ್ತಾರೆ ಎಂದು ಹೇಳಿದರು.

ಬಿಜೆಪಿ- ಜೆಡಿಎಸ್ ಮೈತ್ರಿ ವಿಚಾರವಾಗಿ ಮಾತನಾಡಿ, ಇದರಿಂದ ಕಾಂಗ್ರೆಸ್​ಗೆ ನಷ್ಟನೂ ಇಲ್ಲ, ಲಾಭನೂ‌ ಇಲ್ಲ. ಕಳೆದ ಲೋಕಸಭೆ ಚುನಾವಣೆಯಲ್ಲಿ ಅವರೊಂದಿಗೆ ಮೈತ್ರಿ ಮಾಡೊಕೊಂಡಿದ್ವಿ. ಅದರ ಫಲಿತಾಂಶ ಏನಾಯ್ತು ಎಂದು ಗೊತ್ತಲ್ಲ. ನಂತರ ಅವರಿಗೂ ಗೊತ್ತಾಗುತ್ತದೆ. ಮೈತ್ರಿಯನ್ನು ಜನರು ಒಪ್ಪಲ್ಲ ಎಂದರು.

ಇದನ್ನೂ ಓದಿ: ರಾಜ್ಯ ಸರ್ಕಾರ ನೀರು ಬಿಡಲ್ಲ ಎನ್ನುವ ನಿಲುವು ತಾಳಿದರೆ ನಾವು ಅವರೊಂದಿಗಿದ್ದೇವೆ: ಮಾಜಿ ಸಚಿವ ಸಿ ಟಿ ರವಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.