ETV Bharat / state

'ಸರ್ಕಾರ ಬದುಕಿದ್ದು ಸತ್ತಂತಿದೆ': ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ

author img

By ETV Bharat Karnataka Team

Published : Nov 6, 2023, 5:07 PM IST

BSY outrage against congress government: ತುಮಕೂರು ನಗರದ ಕೆಎಸ್​ಎಫ್​ಸಿ ಆವರಣದಲ್ಲಿ ಕೈಗಾರಿಕೋದ್ಯಮಿಗಳ ಸಂವಾದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಮಾಜಿ ಮುಖ್ಯಮಂತ್ರಿ ಬಿ ಎಸ್​ ಯಡಿಯೂರಪ್ಪ ಕಾಂಗ್ರೆಸ್​ ಸರ್ಕಾರ ವಿರುದ್ಧ ಕಿಡಿಕಾರಿದ್ದಾರೆ.

ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ

ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಮಾಧ್ಯಮ ಪ್ರತಿಕ್ರಿಯೆ

ತುಮಕೂರು: 'ಸರ್ಕಾರ ಬದುಕಿದ್ದು ಸತ್ತಂತಿದೆ. ನಾನೇ ಖುದ್ದಾಗಿ ಬಂದು ಸಮಸ್ಯೆ ಆಲಿಸಿದ್ದೇವೆ. ನಾವು ಬರ ಪರಿಸ್ಥಿತಿ ಅಧ್ಯಯನ ಮಾಡುತ್ತೇವೆ ಅಂದಾಗ ಡಿಸಿಎಂ ಡಿಕೆಶಿ, ಸಿಎಂ ಹಗುರವಾಗಿ ಮಾತಾಡಿರುವುದನ್ನು ನಾನು ಕೇಳಿದ್ದೇನೆ, ನೋಡಿದ್ದೇನೆ' ಎಂದು ಮಾಜಿ ಮಖ್ಯಮಂತ್ರಿ ಬಿ ಎಸ್​ ಯಡಿಯೂರಪ್ಪ ಹೇಳಿದ್ದಾರೆ.

ತುಮಕೂರಿನಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೈಗಾರಿಕೆ ಕ್ಷೇತ್ರದಲ್ಲಿ ತುಮಕೂರು ಜಿಲ್ಲೆ ಬೆಳವಣಿಗೆಯಾಗುತ್ತಿದ್ದು, 10 ಸಾವಿರ ಜನರಿಗೆ ಉದ್ಯೋಗ ನೀಡುತ್ತಿದೆ. ಆದರೆ ಇಲ್ಲಿ ವಿದ್ಯುತ್​ ಅಭಾವ, ಕುಡಿಯುವ ನೀರಿನ ಸಮಸ್ಯೆಯಿದೆ. ದುಡಿಯುವ ಕೈಗಳಿಗೆ ಕೆಲಸ ಇಲ್ಲ. ಈ ಜಿಲ್ಲೆಯ ಇಬ್ಬರೂ ಸಚಿವರುಗಳು ಸಮಸ್ಯೆ ತಿಳಿದುಕೊಂಡು ಸ್ಥಳದಲ್ಲೇ ಬಗೆಹರಿಸುವ ಕೆಲಸ ಮಾಡಬೇಕಿತ್ತು ಎಂದು ಬೇಸರ ವ್ಯಕ್ತಪಡಿಸಿದರು.

ವಿದ್ಯುತ್ ಕಣ್ಣಾಮುಚ್ಚಾಲೆಯಿಂದ ಕೈಗಾರಿಕೆಗಳು ಮುಚ್ಚುವ ಹಂತಕ್ಕೆ ಬಂದಿವೆ. ಮತ್ತೊಂದು ಕಡೆ ವಿದ್ಯುತ್ ಬೆಲೆ ಏರಿಕೆ ಮಾಡಿದ್ದಾರೆ. ಈ ಎಲ್ಲಾ ಸಮಸ್ಯೆಗಳಿಗೆ ಸರ್ಕಾರ ಪರಿಹಾರ ಹುಡುಕುವ ಪ್ರಯತ್ನ ಮಾಡಬೇಕು. ಇಲ್ಲವಾದರೆ ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತೆ. ಸಿಎಂ, ಡಿಸಿಎಂಗೆ ಎಚ್ಚರಿಕೆ ಕೊಡುತ್ತಿದ್ದೇವೆ. ಕೇಂದ್ರ ತಂಡ ಬರ ಅಧ್ಯಯನ ನಡೆಸಿದೆ. ಕೇಂದ್ರ ಪರಿಹಾರ ಕೊಟ್ಟೇ ಕೊಡುತ್ತೆ ಎಂದರು. ನಾವು ಅಧಿಕಾರದಲ್ಲಿದ್ದಾಗ ಅತಿವೃಷ್ಟಿ ಹಾಗೂ ಅನಾವೃಷ್ಟಿ ಸಂಭವಿಸಿತ್ತು. ಆದರೆ ಕೇಂದ್ರ ಸರ್ಕಾರ ಅನುದಾನ ಕೊಡಲಿ ಎಂದು ಕಾಯುತ್ತಿರಲಿಲ್ಲ. ತಕ್ಷಣವೇ ಅನುದಾನ ಕೊಟ್ಟು, ಆ ನಂತರ ಕೇಂದ್ರ ಕೊಟ್ಟಾಗ ಸರಿದೂಗಿಸಿಕೊಳ್ಳುತ್ತಿದ್ದೆವು ಎಂದರು. ಚೇಂಬರ್ ಆಫ್ ಕಾಮರ್ಸ್ ಮುಖಂಡರು ಜ್ವಲಂತ ಸಮಸ್ಯೆಗಳನ್ನು ಗಮನಕ್ಕೆ ತಂದಿದ್ದಾರೆ ಎಂದು ತಿಳಿಸಿದರು.

ಕೈಗಾರಿಕೋದ್ಯಮಿಗಳೊಂದಿಗೆ ಸಂವಾದ: ತುಮಕೂರು ನಗರದ ಕೆಎಸ್​ಎಫ್​ಸಿ ಆವರಣದಲ್ಲಿ ಕೈಗಾರಿಕೋದ್ಯಮಿಗಳೊಂದಿಗೆ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಸಂವಾದ ನಡೆಸಿದರು. ಸಂವಾದದಲ್ಲಿ ಶಾಸಕ ಜ್ಯೋತಿ ಗಣೇಶ್, ಸುರೇಶ್ ಗೌಡ, ಸಂಸದ ಜಿ ಎಸ್ ಬಸವರಾಜು, ಮಾಜಿ ಸಂಸದ ಮುದ್ದಹನುಮೇಗೌಡ, ಮಾಜಿ ಸಚಿವ ನಾಗೇಶ್ ಮತ್ತಿತರರು ಹಾಜರಿದ್ದರು. ಜಿಲ್ಲೆಯಲ್ಲಿ ಬರ ಅಧ್ಯಯನಕ್ಕೆ ತುಮಕೂರಿಗೆ ಆಗಮಿಸಿದ ಮಾಜಿ ಸಿಎಂ‌ ಬಿಎಸ್​ ಯಡಿಯೂರಪ್ಪ, ಬರ ವೀಕ್ಷಣೆಗೂ ಮೊದಲು ಕೈಗಾರಿಕೋದ್ಯಮಿಗಳ ಜೊತೆ ಸಂವಾದ ನಡೆಸಿದರು.

ಸಂವಾದದ ಬಳಿಕ ಬರ ಪರಿಸ್ಥಿತಿ ವೀಕ್ಷಣೆ: ತುಮಕೂರು ಗ್ರಾಮಾಂತರ ಕ್ಷೇತ್ರದ ಬೆಳ್ಳಾವಿ, ಗುಬ್ಬಿ ತಾಲೂಕಿನ ಚೇಳೂರು, ಶಿರಾ ತಾಲೂಕಿನ ಜನ ಕುಂಟೆಯಲ್ಲಿ ಬರಪೀಡಿತ ಪ್ರದೇಶಗಳ ಅಧ್ಯಯನವನ್ನು ಯಡಿಯೂರಪ್ಪ ಮಾಡಲಿದ್ದಾರೆ.

ಇದನ್ನೂ ಓದಿ: ಹಾಲಿ, ಮಾಜಿ ಶಾಸಕರು ಸೇರಿದಂತೆ ಬಿಜೆಪಿ, ಜೆಡಿಎಸ್​​ನ ಹಲವರು ಕಾಂಗ್ರೆಸ್​ಗೆ ಬರ್ತಾರೆ: ಸಿಎಂ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.