ETV Bharat / state

ಕನಿಷ್ಠ 140 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿ ಮತ್ತೆ ಬಿಜೆಪಿ ಸರ್ಕಾರ ರಚನೆ: ಬಿ ಎಸ್ ಯಡಿಯೂರಪ್ಪ

author img

By

Published : Mar 18, 2023, 3:05 PM IST

Updated : Mar 18, 2023, 6:02 PM IST

ಸಚಿವ ಸೋಮಣ್ಣ ಪಕ್ಷದ ಜೊತೆ ಅಂತರ ಕಾಪಾಡಿಕೊಂಡಿಲ್ಲ. ನಾವೆಲ್ಲಾ ಚೆನ್ನಾಗಿದ್ದೇವೆ - ಯಡಿಯೂರಪ್ಪ ಸ್ಪಷ್ಟನೆ

Former CM B S Yadiyurappa
ಮಾಜಿ ಮುಖ್ಯಮಂತ್ರಿ ಬಿ ಎಸ್​ ಯಡಿಯೂರಪ್ಪ

ಮಾಜಿ ಮುಖ್ಯಮಂತ್ರಿ ಬಿ ಎಸ್​ ಯಡಿಯೂರಪ್ಪ

ತುಮಕೂರು: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ ಕನಿಷ್ಠ 135 ರಿಂದ 140 ಕ್ಷೇತ್ರಗಳಲ್ಲಿ ಗೆದ್ದು ಸರ್ಕಾರ ರಚಿಸುವುದು ನಿಶ್ಚಿತ ಎಂದು ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ತಿಳಿಸಿದ್ದಾರೆ. ತುಮಕೂರು ಜಿಲ್ಲೆಯ ತಿಪಟೂರು ಪಟ್ಟಣದಲ್ಲಿ ಆಯೋಜಿಸಲಾಗಿದ್ದ ಜನ ಸಂಕಲ್ಪ ಯಾತ್ರೆ ಕಾರ್ಯಕ್ರಮದಲ್ಲಿ ಭಾಗವಹಿಸುವ ಮುನ್ನ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು.

ನಮ್ಮ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಅವರು ವಿಜಯ ಸಂಕಲ್ಪ ಯಾತ್ರೆಗೆ ಆಗಮಿಸಿದ್ದಾರೆ. ವಿಜಯ ಸಂಕಲ್ಪ ಯಾತ್ರೆ ಹೋದ ಕಡೆಯಲ್ಲೆಲ್ಲಾ ವಾತಾವರಣ ಚೆನ್ನಾಗಿದೆ. ನಮ್ಮ ನಿರೀಕ್ಷೆಗೂ ಮೀರಿ ಜನರ ಪ್ರತಿಕ್ರಿಯೆ ಸಿಗುತ್ತಿದೆ. ಯಾವ ರೀತಿ ಜನಸ್ಪಂದನೆ ಸಿಗುತ್ತಿದೆ ಎನ್ನುವುದರ ಮೇಲೆ ನಮ್ಮ ಪಕ್ಷದ ಪರಿಸ್ಥಿತಿ ಏನು ಎನ್ನುವುದು ಗೊತ್ತಾಗುತ್ತದೆ. ಹಾಗಾಗಿ ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಹೆಚ್ಚಿನ ಸ್ಥಾನಗಳನ್ನು ಗೆದ್ದು ಸರ್ಕಾರ ರಚಿಸುತ್ತದೆ ಎಂಬುದು ಸ್ಪಷ್ಟವಾಗಿದೆ ಎಂದು ತಿಳಿಸಿದರು.

ಸಿದ್ದರಾಮಯ್ಯ ವರುಣಾ ಕ್ಷೇತ್ರದಿಂದ ಸ್ಪರ್ಧೆ ವಿಚಾರದ ಕುರಿತು ಸಿದ್ದರಾಮಯ್ಯ ಅವರಿಗೆ ಈ ಹಿಂದೆ ಒಂದು ಮಾತು ಹೇಳಿದ್ದೆ. ಸಿದ್ದರಾಮಯ್ಯ ಅವರು ಅನಗತ್ಯವಾಗಿ ಅಲ್ಲಿ ಇಲ್ಲಿ ಓಡಾಟ ಮಾಡ್ಕೊಂಡು ಕಥೆ ಹೇಳ್ತಿದ್ದಾರೆ. ಇಲ್ಲಿ ಸತ್ಯಾಂಶ ಅವರು ಈ ಬಾರಿ ವಿಧಾನಸಭಾ ಚುನಾವಣೆಗೆ ವರುಣಾ ಕ್ಷೇತ್ರದಿಂದ ನಿಲ್ಲೋದು ಎಂದು ಹೇಳಿದ್ದೆ. ಭವಿಷ್ಯದಲ್ಲಿ ನನ್ನ ಮಾತು‌ ನಿಜ ಆಗಬಹುದು ಅನ್ಸುತ್ತೆ ಎಂದರು.

ಕಾಂಗ್ರೆಸ್​ನವರು ವಿಧಾನಸಭಾ ಚುನಾವಣೆಗೆ ತಮ್ಮ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ ಮೇಲೆ ನೀವೆ ನೋಡ್ತಿರಾ. ಅನಗತ್ಯವಾಗಿ ಕೋಲಾರ ಮತ್ತೊಂದು ಅಂತ ಹೇಳೋ ಅವಶ್ಯಕತೆ ಇರಲಿಲ್ಲ. ಯಾಕೆ ಈ ರೀತಿಯ ಗೊಂದಲ ಮಾಡಿದ್ರೋ ಗೊತ್ತಿಲ್ಲ. ಒಟ್ಟಿನಲ್ಲಿ ನನ್ನ ಪ್ರಕಾರ ವರುಣಾದಿಂದಲೇ ನಿಲ್ಲೋದು ನಿಶ್ಚಿತ ಎಂದು ಹೇಳಿದರು.

ಸಚಿವ ಬಿ ಸೋಮಣ್ಣ ಪಕ್ಷದ ಜೊತೆ ಅಂತರ ಕಾಯ್ದುಕೊಂಡ ವಿಚಾರದ ಕುರಿತು ಮಾತನಾಡಿದ ಅವರು, ಹಾಗೇನು ಇಲ್ಲ, ನಾವೆಲ್ಲಾ ಚೆನ್ನಾಗಿದ್ದೇವೆ. ಅದರಲ್ಲಿ ಏನು ಸಮಸ್ಯೆ ಇಲ್ಲ ಎಂದರು. ಪೂರ್ಣಿಮಾ ಶ್ರೀನಿವಾಸ್ ಅವರು ಬಿಜೆಪಿ ಪಕ್ಷವನ್ನು ಬಿಟ್ಟು ಕಾಂಗ್ರೆಸ್​ಗೆ ಹೋಗುವ ವಿಚಾರದಲ್ಲಿ ಯಾವುದೇ ಸತ್ಯಾಂಶ ಇಲ್ಲ ಎಂದು ಬಿಎಸ್​ವೈ ಹೇಳಿದರು.

ಇದೇ ಸಂದರ್ಭದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಹಾಗೂ ಬಿ ಎಸ್ ಯಡಿಯೂರಪ್ಪ ಅವರು ತಿಪಟೂರಿನಲ್ಲಿ ಸಚಿವ ಬಿ ಎನ್ ನಾಗೇಶ್ ಅವರ ಮನೆಗೆ ಭೇಟಿ ನೀಡಿ ಸಚಿವರ ಜೊತೆ ಕೆಲ ಹೊತ್ತು ಸಭೆ ನಡೆಸಿದರು. ಈ ಸಂದರ್ಭದಲ್ಲಿ ತುಮಕೂರು ನಗರ ಬಿಜೆಪಿ ಟಿಕೆಟ್ ಆಕಾಂಕ್ಷಿ ಸೊಗಡು ಶಿವಣ್ಣ ಹಾಗೂ ಸಚಿವ ನಾಗೇಶ ಹಾಜರಿದ್ದರು. ಜೆ ಪಿ ನಡ್ಡಾ ತಿಪಟೂರು ನಗರಕ್ಕೆ ಆಗಮಿಸಿದ ಸಂದರ್ಭದಲ್ಲಿ ಅದ್ಧೂರಿ ಸ್ವಾಗತ ಕೋರಿದ ಬಿಜೆಪಿ ಕಾರ್ಯಕರ್ತರು ಬೃಹತ್ ಬೈಕ್ ರ‍್ಯಾಲಿ ನಡೆಸಿದರು.

ಇದನ್ನೂ ಓದಿ: ತುಮಕೂರಿನಲ್ಲಿ ಬಿಜೆಪಿ ವಿಜಯ ಸಂಕಲ್ಪ ಯಾತ್ರೆ.. ಜೆಪಿ ನಡ್ಡಾ ರೋಡ್​ ಶೋ

Last Updated :Mar 18, 2023, 6:02 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.