ETV Bharat / state

ಆಸ್ತಿಗಾಗಿ ಅಜ್ಜಿಯನ್ನೇ ಹೊರದಬ್ಬಿದ ಮೊಮ್ಮಗ: ಕಾನೂನಿನ ಮೂಲಕ ಮನೆ ಬಿಡಿಸಿಕೊಟ್ಟ ಉಪವಿಭಾಗಾಧಿಕಾರಿ

author img

By

Published : Feb 1, 2023, 11:20 AM IST

Updated : Feb 1, 2023, 12:50 PM IST

ಬದುಕು ನೀಡಿದ್ದ ಅಜ್ಜಿಯನ್ನೇ ಮನೆಯಿಂದ ಹೊರದಬ್ಬಿದ್ದ ಮೊಮ್ಮಗ-ಕಾನೂನು ಪ್ರಕಾರವೇ ವೃದ್ಧೆಗೆ ದೊರೆತ ನ್ಯಾಯ-ತಾಲೂಕು ಉಪವಿಭಾಗಾಧಿಕಾರಿ ಕಾರ್ಯಕ್ಕೆ ಮೆಚ್ಚುಗೆ

grandmother Kavalamma
ತನ್ನ ಮನೆ ಹಿಂಪಡೆದ ಕಾವಲಮ್ಮ ಅಜ್ಜಿ

ತನ್ನ ಮನೆ ಹಿಂಪಡೆದ ಕಾವಲಮ್ಮ ಅಜ್ಜಿ

ತುಮಕೂರು: ತುಮಕೂರು ಜಿಲ್ಲೆ ಕೊರಟಗೆರೆ ಪಟ್ಟಣದ 3ನೇ ವಾರ್ಡ್ ನಲ್ಲಿ 80 ವರ್ಷದ ವೃದ್ಧೆಯ ಮನೆಯನ್ನು ಆಕ್ರಮಿಸಿಕೊಂಡಿದ್ದ ಮೊಮ್ಮಗನಿಂದ ಕಾನೂನು ಪ್ರಕಾರವೇ ವಾಪಸ್ ಪಡೆದು ವೃದ್ಧೆಗೆ ತಾಲೂಕು ಉಪವಿಭಾಗಾಧಿಕಾರಿ ಹಸ್ತಾಂತರ ಮಾಡಿದ್ದಾರೆ. 8 ತಿಂಗಳ ಹಿಂದೆ ಕಾವಲಮ್ಮನನ್ನು ಮನೆಯಿಂದ ಮೊಮ್ಮಗ ಮಾರುತಿ ಹೊರದಬ್ಬಿದ್ದನು. 8 ತಿಂಗಳ ಹಿಂದೆ ಕ್ಯಾನ್ಸರ್​ನಿಂದ ಕಾವಲಮ್ಮ ಮಗಳಾದ ಲಕ್ಷ್ಮಮ್ಮ ಮೃತಪಟ್ಟಿದ್ದರು. ಲಕ್ಷ್ಮಮ್ಮ ಮೃತಪಟ್ಟ ಬಳಿಕ ಮನೆಯನ್ನು ಮೊಮ್ಮಗ ಮಾರುತಿ ಆಕ್ರಮಿಸಿಕೊಂಡಿದ್ದನು. ಬಳಿಕ ಮನೆಯಲ್ಲಿದ್ದ ಅಜ್ಜಿಯನ್ನು ಹೊರದಬ್ಬಿ ಮನೆ ಮಾರಾಟ ಮಾಡಲು ಹೊಂಚುಹಾಕಿದ್ದ. ಬೀದಿಗೆ ಬಿದ್ದ ಬಳಿಕ ಸಂಬಂಧಿಕರ ಮನೆಯಲ್ಲಿ ವೃದ್ಧೆ ಕಾವಲಮ್ಮ ಆಶ್ರಯ ಪಡೆದಿದ್ದರು. ಇದರಿಂದ ಮಾರುತಿ ವಿರುದ್ಧ ಹಿರಿಯ ನಾಗರೀಕರ ಹಕ್ಕು ಕಾಯ್ದೆ ಅಡಿ ಸಂಬಂಧಿಕರು ದೂರು ನೀಡಿದ್ದರು.

ಪ್ರಕರಣದ ಬಗ್ಗೆ ಕೂಲಂಕಶವಾಗಿ ವಿಚಾರಣೆ ನಡೆಸಿದ್ದ ಮಧುಗಿರಿ ಎಸಿ ರಿಶಿ ಆನಂದ್ ಅವರು ಮೊಮ್ಮಗನಿಂದ ವೃದ್ಧೆಗೆ ಮನೆ ಬಿಡಿಸಿಕೊಂಡುವಂತೆ ಆದೇಶ ನೀಡಿದ್ದಾರೆ. ಎಸಿ ಆದೇಶದಂತೆ ಮಾರುತಿಯನ್ನು ಮನೆಯಿಂದ ಅಧಿಕಾರಿಗಳು ಖಾಲಿ ಮಾಡಿಸಿದರು. ಸದ್ಯ ತಹಶೀಲ್ದಾರ್, ಪೊಲೀಸರ ಸಮಕ್ಷಮದಲ್ಲಿ ವೃದ್ಧೆ ಕಾವಲಮ್ಮ ತನ್ನ ಮನೆ ಸೇರಿದ್ದಾರೆ. ಈ ಹಿಂದೆ ಮಾರುತಿ ಬೆಂಗಳೂರಿನಲ್ಲಿ ಕೆಲಸ ಮಾಡಿಕೊಂಡಿದ್ದ. ಕೊರೊನಾ ಅಬ್ಬರದ ನಡುವೆ ಕೆಲಸ ಕಳೆದುಕೊಂಡು ವಾಪಸ್ ಕೊರಟಗೆರೆ ಪಟ್ಟಣಕ್ಕೆ ಬಂದಿದ್ದ. ಅಲ್ಲದೆ ತನ್ನ ತಾಯಿ ಲಕ್ಷ್ಮಮ್ಮ ಹಾಗೂ ಅಜ್ಜಿ ವಾಸ ಮಾಡುತ್ತಿದ್ದ ಮನೆಗೆ ಬಂದು ಹೆಂಡತಿ ಮಕ್ಕಳೊಂದಿಗೆ ವಾಸಿಸುತ್ತಿದ್ದ. ಪ್ರಾರಂಭದಲ್ಲಿ ಅಜ್ಜಿ ಹಾಗೂ ತನ್ನ ತಾಯಿಗೆ ಬರುತ್ತಿದ್ದ ಸರ್ಕಾರದ ಮಾಶಾಸನ ಬಳಸಿಕೊಂಡು ಕೆಲಸವಿಲ್ಲದೆ ಒದ್ದಾಡುತ್ತಿದ್ದ ಮಾರುತಿ ಅಲ್ಲಿಯೇ ತನ್ನ ಬದುಕು ಕಟ್ಟಿಕೊಂಡಿದ್ದನು.

ಅಜ್ಜಿ ಹಾಗೂ ತಾಯಿ ಲಕ್ಷ್ಮಮ್ಮ ಇಬ್ಬರೂ ಕೂಡ ಮಾರುತಿಯ ದುಸ್ಥಿತಿಯನ್ನು ಕಂಡು ತಮ್ಮ ಬಳಿಯೇ ಇರಿಸಿಕೊಂಡಿದ್ದರು. ನಂತರದ ದಿನಗಳಲ್ಲಿ ಯಾವುದೇ ಕೆಲಸಕ್ಕೂ ಕೂಡ ಹೋಗದೆ ದುಡಿಮೆಯು ಮಾಡದೆ ಓಡಾಡಿಕೊಂಡಿದ್ದ ಮಾರುತಿ ಒಂದು ರೀತಿ ತಾಯಿ ಹಾಗೂ ಅಜ್ಜಿಗೆ ಹೊರೆಯಾಗಿ ಪರಿಣಮಿಸಿದ್ದನು. ಅಲ್ಲದೆ ಸಂಬಂಧಿಕರು ಕೂಡ ಮಾರುತಿಗೆ ಸಾಕಷ್ಟು ಬಾರಿ ಬುದ್ಧಿವಾದ ಕೂಡ ಹೇಳಿದ್ದರು. ಇದಕ್ಕೆ ಮಾರುತಿ ಕ್ಯಾರೆ ಎನ್ನದೆ ತಾಯಿ ಹಾಗೂ ಅಜ್ಜಿಯ ಮೇಲೆ ದಬ್ಬಾಳಿಕೆ ಮಾಡಿಕೊಂಡು ಮನೆಯೊಳಗೆ ಸೇರಿಕೊಂಡಿದ್ದನು.

ಅಲ್ಲದೆ ಕಳೆದ ಎಂಟು ತಿಂಗಳ ಹಿಂದಯಷ್ಟೇ ತಾಯಿ ಲಕ್ಷ್ಮಮ್ಮ ಮೃತಪಟ್ಟ ನಂತರ ಮಾರುತಿ ಮನೆಯಲ್ಲಿದ್ದ ಅಜ್ಜಿಗೆ ಕಿರುಕುಳ ನೀಡಲು ಆರಂಭಿಸಿದ್ದನು. ಮಾರುತಿ ತನ್ನ ಕಿರಾತಕ ಬುದ್ಧಿಯಿಂದ ಅಜ್ಜಿಯನ್ನೇ ಮನೆಯಿಂದ ಹೊರದಬ್ಬಿದ್ದನು. ಹೀಗಾಗಿ ಅಸಹಾಯಕತೆಯಿಂದ ಅಜ್ಜಿ ತನ್ನ ಸಂಬಂಧಿಕರ ಮನೆಯಲ್ಲಿ ನೆಲೆ ಕಂಡುಕೊಂಡಿದ್ದಳು ಅಲ್ಲದೆ ಮನೆಯಿಂದ ಹೊರ ಕಳುಹಿಸಿರುವ ಮಾರುತಿಯನ್ನು ಹೊರಗೆ ಕಳುಹಿಸಿ ನನ್ನ ಮನೆಗೆ ಹೋಗುವಂತೆ ಸಂಬಂಧಿಕರ ಬಳಿಗೆ ಅಂಗಲಾಚಿ ಬೇಡಿಕೊಳ್ಳುವ ಆರಂಭಿಸಿದ್ದಳು.

ಅಜ್ಜಿಯ ಸ್ಥಿತಿಯನ್ನು ಕಂಡ ಸಂಬಂಧಿಕರು ಉಪ ವಿಭಾಗ ಅಧಿಕಾರಿಗಳ ಬಳಿ ತೆರಳಿ, ಅಜ್ಜಿಯ ಸ್ಥಿತಿಯನ್ನು ವಿವರಿಸಿದ್ದರು. ಅಲ್ಲದೇ ಮಾರುತಿಯು ಮನೆಯನ್ನು ಮಾರಾಟಕ್ಕೆ ಇರಿಸಿರುವುದು ಕೂಡ ಸ್ಪಷ್ಟವಾಗುತ್ತಿದ್ದಂತೆ ಎಚ್ಚೆತ್ತುಕೊಂಡ ಉಪವಿಭಾಗಾಧಿಕಾರಿ ತಕ್ಷಣ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿ ಅಜ್ಜಿಗೆ ವಾಪಸ್ ಮನೆಯನ್ನು ಕೊಡಿಸುವಂತೆ ಆದೇಶ ನೀಡಿದ್ದಾರೆ. ಈ ರೀತಿ ಉಪವಿಭಾಗಾಧಿಕಾರಿ ಮಧ್ಯ ಪ್ರವೇಶಿಸಿ ಅಜ್ಜಿಗೆ ಮನೆಯನ್ನು ಮೊಮ್ಮಗನಿಂದ ವಾಪಸ್​ ನೀಡಿದ್ದು ಸಾಕಷ್ಟು ಪ್ರಶಂಸೆಗೆ ಒಳಗಾಗಿದೆ. ಅಲ್ಲದೇ ವಯೋವೃದ್ಧರಿಗೆ ಇಂತಹ ಕಿರುಕುಳ ನೀಡುತ್ತಿರುವ ಮಕ್ಕಳು ಹಾಗೂ ಮೊಮ್ಮಕ್ಕಳಿಗೆ ಒಂದು ರೀತಿ ಪಾಠವಾಗಿದೆ.

ಇದನ್ನೂ ಓದಿ:ವರದಕ್ಷಿಣೆಗಾಗಿ ಪತ್ನಿಯನ್ನೇ ಕೊಲೆಗೈದ ಪಾಪಿ ಪತಿ.. ಆರೋಪಿ ಅಂದರ್

Last Updated : Feb 1, 2023, 12:50 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.