ETV Bharat / state

ಶಿವಮೊಗ್ಗ ಜಿಲ್ಲೆಯಿಂದ ಯಾರಿಗೆ ಸಿಗಲಿದೆ ಮಂತ್ರಿ ಸ್ಥಾನ ?: ಇಲ್ಲಿನ ಸಚಿವ ಸ್ಥಾನದ ಆಕಾಂಕ್ಷಿಗಳ ವಿವರ

author img

By

Published : May 19, 2023, 4:08 PM IST

ಶಿವಮೊಗ್ಗ ಜಿಲ್ಲೆಯಿಂದ ಮೂವರು ಕಾಂಗ್ರೆಸ್​ ಶಾಸಕರು ಆಯ್ಕೆಯಾಗಿದ್ದು, ಸಚಿವ ಸ್ಥಾನ ಪಡೆಯಲು ಆಕಾಂಕ್ಷಿಗಳು ಪೈಪೋಟಿ ನಡೆಸುತ್ತಿದ್ದಾರೆ.

which-mla-get-minister-post-in-shivamogga
ಶಿವಮೊಗ್ಗ ಜಿಲ್ಲೆಯ ಯಾವ ಶಾಸಕನಿಗೆ ಒಲಿಯುತ್ತದೆ ಮಂತ್ರಿ ಸ್ಥಾನ ?: ಇಲ್ಲಿನ ಸಚಿವ ಸ್ಥಾನದ ಆಕಾಂಕ್ಷಿಗಳ ವಿವರ

ಶಿವಮೊಗ್ಗ: ಮಲೆನಾಡ ಹೆಬ್ಬಾಗಿಲು ಶಿವಮೊಗ್ಗ ಜಿಲ್ಲೆಯಿಂದ ಯಾರು ಮಂತ್ರಿಯಾಗುತ್ತಾರೆ ಎಂಬ ಬಗ್ಗೆ ಜಿಲ್ಲೆಯ ಜನರಲ್ಲಿ ಕುತೂಹಲ ಮೂಡಿದೆ. ಜಿಲ್ಲೆಯಿಂದ ಮೂವರು ಶಾಸಕರಾಗಿ ಆಯ್ಕೆಯಾಗಿದ್ದಾರೆ. ಭದ್ರಾವತಿ ಕ್ಷೇತ್ರದಿಂದ ಬಿ.ಕೆ.ಸಂಗಮೇಶ್, ಸೊರಬ ಕ್ಷೇತ್ರದಿಂದ ಮಧು ಬಂಗಾರಪ್ಪ ಹಾಗೂ ಸಾಗರ ಕ್ಷೇತ್ರದಿಂದ ಗೋಪಾಲಕೃಷ್ಣ ಬೇಳೂರು ಶಾಸಕರಾಗಿದ್ದಾರೆ.

ಜಿಲ್ಲೆಯಿಂದ ಈ ಹಿಂದೆ ಕಾಗೋಡು ತಿಮ್ಮಪ್ಪ, ಕಿಮ್ಮನೆ ರತ್ನಾಕರ್ ರವರು ಸಚಿವರಾಗಿ ಕೆಲಸ ಮಾಡಿದ್ದಾರೆ. ಈ ಬಾರಿ ಈ ಮೂವರು ಶಾಸಕರಲ್ಲಿ ಯಾರಿಗೆ ಸಚಿವ ಸ್ಥಾನ ಒಲಿಯುತ್ತದೆ ಎಂದು ನಾಳೆಯವರೆಗೂ ಕಾದು‌ ನೋಡಬೇಕಾಗಿದೆ. ನಾಳೆ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಸಿಎಂ ಆಗಿ ಸಿದ್ದರಾಮಯ್ಯ, ಉಪ‌ಮುಖ್ಯಮಂತ್ರಿಯಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದು, ಅವರೊಂದಿಗೆ ಸಚಿವರಾಗಿ ಯಾರು ಪ್ರಮಾಣ ವಚನ ಸ್ವೀಕಾರಿಸಲಿದ್ದಾರೆ ಎಂಬುದು ಯಕ್ಷ ಪ್ರಶ್ನೆಯಾಗಿದೆ.

ಭದ್ರಾವತಿ ವಿಧಾನ ಕ್ಷೇತ್ರದ ಬಿ.ಕೆ.ಸಂಗಮೇಶ್ ನಾಲ್ಕನೇ ಬಾರಿ ಕಾಂಗ್ರೆಸ್​ನಿಂದ ಶಾಸನಸಭೆಗೆ ಆಯ್ಕೆಯಾಗಿದ್ದಾರೆ. ಇವರು ತಮ್ಮ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಕಾಂಗ್ರೆಸ್​ ಪಕ್ಷ ಅಧಿಕಾರಕ್ಕೆ ಬಂದರೆ ನಾನು ಮಂತ್ರಿಯಾಗುತ್ತೇನೆ ಎಂದು ಹೇಳಿ ಮತಯಾಚನೆ ಸಹ ಮಾಡಿದ್ದರು. ಇನ್ನು ಕಾಂಗ್ರೆಸ್ ಪಕ್ಷದ ಪ್ರಜಾಧ್ವನಿ ಯಾತ್ರೆಯ ವೇಳೆ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಸಂಗಮೇಶ್​ರನ್ನು ಗೆಲ್ಲಿಸಿ, ನಾವು ಮಂತ್ರಿ ಮಾಡುತ್ತೇವೆ ಎಂದು ಆಶ್ವಾಸನೆ ನೀಡಿದ್ದರು. ಸಂಗಮೇಶ್​ ಕ್ಷೇತ್ರದಿಂದ ಸತತ ಎರಡೇ ಬಾರಿಗೆ ಶಾಸಕರಾಗಿ ಆಯ್ಕೆಯಾದ ಬೆನ್ನಲೆ ವರಿಷ್ಠರು ನನ್ನನ್ನು ಮಂತ್ರಿ ಮಾಡುತ್ತಾರೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ್ದರು.

ಬಿ.ಕೆ. ಸಂಗಮೇಶ್ ರಾಜಕೀಯ ಹಿನ್ನೆಲೆ : ಇವರು ಭದ್ರಾವತಿ ಕ್ಷೇತ್ರದಿಂದ‌ ಮೊದಲ ಬಾರಿಗೆ ಪಕ್ಷೇತರರಾಗಿ 1999ರಲ್ಲಿ ಸ್ಪರ್ಧೆ ಮಾಡಿ ಸೋಲನ್ನು‌ ಅನುಭವಿಸುತ್ತಾರೆ. ನಂತರ 2004 ರಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧೆ ಮಾಡಿ ಗೆಲುವು‌ ಸಾಧಿಸುತ್ತಾರೆ. 2008 ರಲ್ಲಿ ಪುನಃ ಭದ್ರಾವತಿ ಜನರ ಆಶೀರ್ವಾದ ಪಡೆದು ಶಾಸಕರಾಗುತ್ತಾರೆ. 2013ರಲ್ಲಿ ಸೋಲುತ್ತಾರೆ. 2018 ಮತ್ತು 2023ರಲ್ಲಿ ಸತತ ಎರಡನೇ ಬಾರಿಗೆ ಆಯ್ಕೆಯಾಗಿದ್ದಾರೆ. ಇದರೊಂದಿಗೆ ಸಂಗಮೇಶ್ ಒಟ್ಟು ನಾಲ್ಕನೇ ಬಾರಿಗೆ ಶಾಸಕರಾಗಿದ್ದಾರೆ.

ಮಧು ಬಂಗಾರಪ್ಪ ರಾಜಕೀಯ ಹಿನ್ನೆಲೆ: ಇವರು ರಾಜಕೀಯ ಕುಟುಂಬದಿಂದ ಬಂದವರು. ಇವರ ತಂದೆ ಮಾಜಿ ಮುಖ್ಯಮಂತ್ರಿ ದಿವಂಗತ ಎಸ್.ಬಂಗಾರಪ್ಪನವರು, ಇವರ ಇಬ್ಬರು ಪುತ್ರರಲ್ಲಿ ಎರಡನೇ ಯವರೇ ಮಧು ಬಂಗಾರಪ್ಪ. ಇವರು 2004ರಲ್ಲಿ ಮೊದಲ ಬಾರಿಗೆ ಸೊರಬ ಕ್ಷೇತ್ರದಿಂದ ಬಿಜೆಪಿಯಿಂದ ಸ್ಪರ್ಧಿಸಿ ಸೋಲುತ್ತಾರೆ. ನಂತರ 2008ರಲ್ಲಿ ಸಮಾಜವಾದಿ ಪಕ್ಷದಿಂದ ಸ್ಪರ್ಧಿಸಿ ಸೋಲುತ್ತಾರೆ. 2013ರಲ್ಲಿ ಜೆಡಿಎಸ್ ನಿಂದ ಸ್ಪರ್ಧಿಸಿ ಮೊದಲ ಬಾರಿಗೆ ವಿಧಾನಸೌಧ ಪ್ರವೇಶ ಮಾಡುತ್ತಾರೆ. 2018ರಲ್ಲಿ ಸೋಲು ಕಾಣುತ್ತಾರೆ. ನಂತರ ನಡೆದ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್​ನಿಂದ ಸ್ಪರ್ಧಿಸಿ ಸೋಲನ್ನು ಅನುಭಸಿಸುತ್ತಾರೆ.

ಪ್ರಸ್ತುತ 2023ರ ಚುನಾವಣೆಯಲ್ಲಿ ತಮ್ಮ ಅಣ್ಣ ಕುಮಾರ್​ ಬಂಗಾರಪ್ಪ ವಿರುದ್ಧ ಗೆದ್ದು ಮಧು ಬಂಗಾರಪ್ಪ ಎರಡನೇ ಬಾರಿಗೆ ಶಾಸಕರಾಗಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಜೆಡಿಎಸ್​ನಲ್ಲಿದ್ದ ಮಧು ಬಂಗಾರಪ್ಪ ಅವರನ್ನು ಕಾಂಗ್ರೆಸ್​ಗೆ ಕರೆತಂದಿದ್ದರು. ಇತ್ತೀಚೆಗೆ ಮಧು ಬಂಗಾರಪ್ಪನವರ ಸಹೋದರಿ ಗೀತಾ ಶಿವರಾಜಕುಮಾರ ಕಾಂಗ್ರೆಸ್​ಗೆ ಸೇರ್ಪಡೆಯಾಗಿದ್ದರು. ಇನ್ನು ಕೆಪಿಸಿಸಿ ಉಪಾಧ್ಯಕ್ಷ ಹಾಗೂ ಕಾಂಗ್ರೆಸ್​ನ ಒಬಿಸಿ ಘಟಕದ ಅಧ್ಯಕ್ಷರಾಗಿರುವು ಇವರು ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದಾರೆ.

ಗೋಪಾಲಕೃಷ್ಣ ಬೇಳೂರು ರಾಜಕೀಯ ಹಿನ್ನೆಲೆ: ಇವರು 2004ರಲ್ಲಿ ಬಿಜೆಪಿಯಿಂದ ಸ್ಫರ್ಧಿಸಿ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗುತ್ತಾರೆ. 2008ರಲ್ಲಿ ಎರಡನೇ ಬಾರಿಗೆ ಶಾಸಕರಾಗುತ್ತಾರೆ. 2013ರಲ್ಲಿ ಬಿಜೆಪಿಯಿಂದ ಟಿಕೆಟ್ ಸಿಗದ ಕಾರಣ ಜೆಡಿಎಸ್ ನಿಂದ ಸ್ಪರ್ಧೆ ಮಾಡಿ ಸೋಲ ಕಾಣುತ್ತಾರೆ. 2017ರಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುತ್ತಾರೆ. ನಂತರ 2018ರಲ್ಲಿ ಕಾಗೋಡು ತಿಮ್ಮಪ್ಪನವರ ಪರವಾಗಿ ಕೆಲಸ ಮಾಡುತ್ತಾರೆ ಮತ್ತು ಕೆಪಿಸಿಸಿ ವಕ್ತಾರರಾಗಿ ಸೇವೆ ಸಲ್ಲಿಸಿದ್ದಾರೆ. ಈಗ ಮೂರನೇ ಬಾರಿಗೆ ವಿಧಾನಸೌಧವನ್ನು ಪ್ರವೇಶಿಸಿದ್ದು ಸಚಿವ ಸ್ಥಾನ ಸಿಗುವ ನಿರೀಕ್ಷೆಯಲ್ಲಿದ್ದಾರೆ.

ಇದನ್ನೂ ಓದಿ:ಸಿಎಂ ಪದಗ್ರಹಣ: ಯಾರೆಲ್ಲಾ ಭಾಗಿ? ಇಲ್ಲಿದೆ ಗಣ್ಯರ ಪಟ್ಟಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.