ETV Bharat / state

'ಜೀವಂತ ಇದ್ದಾಗಲೇ ಬಿಜೆಪಿಗೆ ಸೇರಿಸೋಲ್ಲ': ಸತ್ರೂ ಬಿಜೆಪಿ ಸೇರಲ್ಲ ಎಂದ ಸಿದ್ದರಾಮಯ್ಯಗೆ ಈಶ್ವರಪ್ಪ ತಿರುಗೇಟು

author img

By

Published : Jan 31, 2023, 1:45 PM IST

Updated : Jan 31, 2023, 5:32 PM IST

ಸತ್ರೂ ಬಿಜೆಪಿ ಸೇರಲ್ಲ ಎಂದು ಹೇಳಿದ್ದ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಹೇಳಿಕೆಗೆ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ತಿರುಗೇಟು ನೀಡಿದ್ದಾರೆ.

Former Minister K S Ishwarappa
ಮಾಜಿ ಸಚಿವ ಕೆ ಎಸ್​ ಈಶ್ವರಪ್ಪ

ಮಾಜಿ ಸಚಿವ ಕೆ ಎಸ್​ ಈಶ್ವರಪ್ಪ

ಶಿವಮೊಗ್ಗ: "ಸಿದ್ದರಾಮಯ್ಯ ಜೀವಂತ ಇದ್ದಾಗಲೇ ಬಿಜೆಪಿ ಸೇರಿಸೋಲ್ಲ. ಅವರ ಹಣೆಬರಹ ಮತದಾರರಿಗೆ ಗೊತ್ತು" ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ. ಸತ್ರೂ ಬಿಜೆಪಿ ಸೇರಲ್ಲ ಎಂಬ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆ ವಿಚಾರವಾಗಿ ಶಿವಮೊಗ್ಗದಲ್ಲಿ ಸುದ್ದಿಗಾರೊಂದಿಗೆ ಅವರು ಮಾತನಾಡಿದರು.

"ಈ ಮನುಷ್ಯ ನಂಬಿಕಸ್ತ ಅಲ್ಲ, ಸುಧಾರಿಸಲ್ಲ. ಚುನಾವಣೆಯಲ್ಲಿ ಜನರು ಸೋಲಿಸ್ತಾರೆ ಎಂಬ ಒಂದೇ ಕಾರಣಕ್ಕೆ ಸಿದ್ದರಾಮಯ್ಯ ಮತ್ತೆ ಕ್ಷೇತ್ರ ಹುಡುಕುತ್ತಿದ್ದಾರೆ. ಒಂದೇ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡು ಅಲ್ಲಿನ ಮತದಾರರನ್ನು ಸಂತೃಪ್ತಿಪಡಿಸಬೇಕು. ಅದು ಬಿಟ್ಟು ಒಂದು ಕಡೆ ಸೋತರೆ ಇನ್ನೊಂದು ಕಡೆ ಇರಲಿ ಎಂದು ಒಂದಕ್ಕಿಂತ ಹೆಚ್ಚು ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ನಾನು ಸಹ ಸೋತಿದ್ದೆ ಆದರೆ ನಾನು ಬೇರೆ ಕ್ಷೇತ್ರಕ್ಕೆ ಹೋಗಬಹುದಿತ್ತು. ಮತ್ತೆ ಅದೇ ಜನರನ್ನು ಸಂತೃಪ್ತಿಪಡಿಸಿ ಅಲ್ಲೇ ಪದೇ ಪದೇ ಗೆಲ್ಲುತ್ತಿದ್ದೇವೆ" ಎಂದರು.

"ಮಂಡ್ಯ ಸಂಸದೆ ಸುಮಲತಾ ಅಂಬರೀಶ್​ ಅವರ ಬಗ್ಗೆ ರಾಷ್ಟ್ರೀಯ ನಾಯಕರು ವಿಚಾರ ಮಾಡ್ತಾರೆ. ಇವತ್ತಲ್ಲ ನಾಳೆ, ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಬಿಟ್ಟರೆ ಬೇರೆ ಪಕ್ಷ ಅಧಿಕಾರಕ್ಕೆ ಬರೋದಿಲ್ಲ, ಇದು ಶತಸಿದ್ಧ. ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪೂರ್ಣ ಬಹುಮತದಿಂದ ಅಧಿಕಾರಕ್ಕೆ ಬರುತ್ತದೆ. ಪ್ರಧಾನಿ ನರೇಂದ್ರ ಮೋದಿಯವರು ಮತ್ತೊಮ್ಮೆ ಪ್ರಧಾನಿಯಾಗುತ್ತಾರೆ" ಎಂದು ವಿಶ್ವಾಸದ ಮಾತುಗಳನ್ನಾಡಿದರು.

ಸಿಡಿ ಬಿಡುಗಡೆ ವಿಚಾರ: "ಅದರ ಬಗ್ಗೆ ಡಿಕೆಶಿ ಏನೂ ಉತ್ತರ ಕೊಟ್ಟಿಲ್ಲ. ಯಾವ್ಯಾವ ದೇಶದಲ್ಲಿ ಮನೆ ಮಾಡಿದ್ದೇನೆ ಎಂದು ಡಿಕೆಶಿ ಆಡಿಯೋದಲ್ಲಿ ಒಪ್ಪಿಕೊಂಡಿದ್ದಾರೆ. ಅದು ಅವರ ವೈಯಕ್ತಿಕ ವಿಷಯ, ಅದರ ಬಗ್ಗೆ ನಾನು ಕಮೆಂಟ್ ಮಾಡಲ್ಲ. ಆದರೆ, ಆಡಿಯೋ ಬಗ್ಗೆ ಅವರು ಉತ್ತರ ಕೊಡಲಿ. ಆಡಿಯೋದಲ್ಲಿರುವುದು ಸರಿನೋ, ತಪ್ಪೋ, ಸುಳ್ಳೋ ಏನಾದರೂ ಒಂದು ಹೇಳಲಿ. ಏನೂ ಹೇಳದೆ ಬೇರೆ ಬೇರೆ ಉತ್ತರ ಕೊಡೋದು ಸರಿಯಲ್ಲ" ಎಂದು ಹೇಳಿದರು.

"ಒಂದು ಪಕ್ಷದಲ್ಲಿ ರಾಜ್ಯಾಧ್ಯಕ್ಷರು ಇರುತ್ತಾರೆ. ಚುನಾವಣಾ ಸಮಿತಿ ಇರುತ್ತದೆ, ಸಂವಿಧಾನ ಇರುತ್ತದೆ. ಅದೆಲ್ಲವನ್ನೂ ಬದಿಗೆ ತಳ್ಳಿ ನಾನೇ ಅಭ್ಯರ್ಥಿ ಎಂದು ತಿರುಗೋದು ಸರಿಯಲ್ಲ. ನಿಖಿಲ್ ಅಭ್ಯರ್ಥಿ ಅಂತ ಹೆಚ್​ಡಿಕೆ ಘೋಷಣೆ ಮಾಡಿದ್ರು. ಭವಾನಿ ರೇವಣ್ಣ ತಾನೂ ಅಭ್ಯರ್ಥಿ ಅಂತಾರೆ. ಇತ್ತ ಕಡೆ ಸಿದ್ದರಾಮಯ್ಯ ಅವರು ಕೋಲಾರಕ್ಕೆ ತಾನೇ ಅಭ್ಯರ್ಥಿ ಅಂತಾರೆ, ಇವರು ಯಾರು ಅವರಿಷ್ಟಕ್ಕೆ ಹೇಳಿಕೊಳ್ಳೋಕೆ? ಅವರಿಗೆ ಪಕ್ಷ ಇಲ್ವಾ? ಚುನಾವಣೆ ಸಮಿತಿ ಅಭ್ಯರ್ಥಿ ಯಾರು ಎಂದು ಹೇಳಿದರೆ, ಅದು ಸರಿ. ಇವರೇ ಹೇಳ್ಕೊಂಡು ಹೋಗೋದು, ಇದು ಕಾಂಗ್ರೆಸ್​ ಹಾಗೂ ಜೆಡಿಎಸ್​ನಲ್ಲಿ ಪ್ರಜಾಪ್ರಭುತ್ವದ ಬಗ್ಗೆ ನಂಬಿಕೆ ಇಲ್ಲ ಎಂಬುದನ್ನು ತೋರಿಸುತ್ತದೆ" ಎಂದರು.

"ನಾನು ಶಕುನಿ ಬಗ್ಗೆ ಮಾತನಾಡಲು ಇಷ್ಟಪಡಲ್ಲ. ಯಾರು ಭವಾನಿ ರೇವಣ್ಣ ಅವರ ಹಿಂದೆ ಶಕುನಿಯನ್ನು ಬಿಟ್ಟಿದ್ದಾರೆ. ಅದನ್ನು ಕುಮಾರಸ್ವಾಮಿ ಅವರೇ ಹೇಳಲಿ. ನಾನು ಅದನ್ನು ಹೇಳಲ್ಲ, ಅವರ ಪಕ್ಷದ ಆಂತರಿಕ ವಿಚಾರವದು. ಅದು ಭವಾನಿ ರೇವಣ್ಣ, ಹೆಚ್​ಡಿಕೆಗೆ ಗೊತ್ತು" ಎಂದರು. ಕಟೀಲ್ ಒಬ್ಬ ಬಫೂನ್ ಇದ್ದಂತೆ ಎಂದ ಸಿದ್ದರಾಮಯ್ಯ ಹೇಳಿಕೆ ವಿಚಾರವಾಗಿ ಮಾತನಾಡಿ, "ನನಗೂ ಸಿದ್ದರಾಮಯ್ಯ ಕುರಿತು ಹೇಳಲು ಬರುತ್ತೆ. ಆದರೆ ನಾನು ಅದನ್ನು ಹೇಳಲ್ಲ. ಕಟೀಲ್ ರಾಜ್ಯಾಧ್ಯಕ್ಷರಾಗಿ ಉತ್ತಮ ಕೆಲಸ ಮಾಡ್ತಿದ್ದಾರೆ. ಚುನಾವಣೆ ನಂತರ ಅವರಿಗೇ ಎಲ್ಲ ಗೊತ್ತಾಗುತ್ತದೆ" ಎಂದು ಸಿದ್ದರಾಮಯ್ಯ ಅವರಿಗೆ ಟಾಂಗ್ ನೀಡಿದರು.

ಇದನ್ನೂ ಓದಿ: ಕ್ಷೇತ್ರ ವಿಚಾರದಲ್ಲಿ ಸಿದ್ದರಾಮಯ್ಯ ನಡೆ ಇನ್ನೂ ನಿಗೂಢ!

Last Updated : Jan 31, 2023, 5:32 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.