ETV Bharat / state

ಕಲಾವಿದ ಫುಟ್ಬಾಲ್ ರಾಮಣ್ಣನ ಕುಂಚದಲ್ಲಿ ಅರಳಿದ ಶ್ರೀರಾಮ, ರಾಮಮಂದಿರ, ರಾಮಾಯಣ ಚಿತ್ರ

author img

By ETV Bharat Karnataka Team

Published : Jan 19, 2024, 4:03 PM IST

ಶಿವಮೊಗ್ಗದ ಚಿತ್ರ ಕಲಾವಿದ ಫುಟ್ಬಾಲ್ ರಾಮಣ್ಣ ಅವರು ಗೋಡೆಯ ಮೇಲೆ ಶ್ರೀರಾಮ ರಾಮಮಂದಿರ, ರಾಮನ ಪಕ್ಕದಲ್ಲಿ ಆಂಜನೇಯ ಧ್ಯಾನ ಮಾಡುತ್ತಿರುವ ಚಿತ್ರ, ರಾಮಾಯಣಕ್ಕೆ ಸಂಬಂಧಿಸಿದ ಚಿತ್ರಗಳನ್ನು ಬಿಡಿಸಿ ಜನರ ಮನಸೆಳೆದಿದ್ದಾರೆ.

shree rama mandir
ಫುಟ್ಬಾಲ್ ರಾಮಣ್ಣ ಕೈಯಲ್ಲಿ ಅರಳಿದ ಶ್ರೀರಾಮ ಮಂದಿರ

ಶಿವಮೊಗ್ಗ: ಅಯೋಧ್ಯೆಯಲ್ಲಿ ನಿರ್ಮಿಸಿರುವ ರಾಮಮಂದಿರ ಹಾಗೂ ಶ್ರೀರಾಮ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ಉದ್ಘಾಟನೆ ಕಾರ್ಯಕ್ರಮದತ್ತ ಈಗ ಜನರ ಚಿತ್ತ ಹರಿದಿದೆ. ಜನವರಿ 22 ರಂದು ಆಗಲಿರುವ ಶ್ರೀರಾಮ ಮಂದಿರ ಉದ್ಘಾಟನೆ ನಿಮಿತ್ತ ಅಯೋಧ್ಯೆಗೆ ದೇಶದ ವಿವಿಧ ಭಾಗಗಳಿಂದ ವಿವಿಧ ವಸ್ತು ರವಾನೆಯಾಗುತ್ತಿವೆ. ರಾಜ್ಯದಲ್ಲಿಯೂ ಭಕ್ತರು ಶ್ರೀರಾಮನ ಆರಾಧನೆಯಲ್ಲಿ ತೂಡಗಿದ್ದಾರೆ. ಅನೇಕ ಕಡೆ ಹೋಮ- ಹವನ ನಡೆಯುತ್ತಿವೆ. ಹೀಗೆ ಭಕ್ತರು ವಿವಿಧ ರೀತಿಯಲ್ಲಿ ಶ್ರೀರಾಮನ ಆರಾಧನೆಯಲ್ಲಿ ತಲ್ಲೀನರಾಗಿದ್ದಾರೆ.

Building a bridge
ಶ್ರೀರಾಮನು ವಾನರ ಸೈನ್ಯದಿಂದ ಸೇತುವೆ ನಿರ್ಮಿಸುತ್ತಿರುವುದು.

ಆದರೆ ಇಲ್ಲೊಬ್ಬ ಚಿತ್ರ ಕಲಾವಿದ ಶಿವಮೊಗ್ಗದ ವಿವಿಧ ಮನೆಯ ಗೋಡೆಗಳ ಮೇಲೆ ಅಂದವಾಗಿ ಶ್ರೀರಾಮ ಮಂದಿರ, ಶ್ರೀರಾಮ ಹನುಮನ ಚಿತ್ರ ಬಿಡಿಸುವದರೊಂದಿಗೆ ಶ್ರೀರಾಮನ ಆರಾಧನೆಯಲ್ಲಿ ತೊಡಗಿದ್ದಾರೆ. ಕಲಾವಿದ ಫುಟ್ಬಾಲ್ ರಾಮಣ್ಣ ತಮ್ಮ ಕೈಯಾರ, ಕುಂಚದಲ್ಲಿ ಗೋಡೆಗಳ ಮೇಲೆ ಶ್ರೀರಾಮ ಮಂದಿರ, ಶ್ರೀರಾಮ ಜೊತೆಗಿರುವ ಹನುಮನ ಚಿತ್ರಗಳು, ಶ್ರೀರಾಮನು ತನ್ನ ಕೋತಿ ಸೇನೆಯ ಜೊತೆ ಲಂಕಾಕ್ಕೆ ಸೇತುವೆ ಕಟ್ಟುತ್ತಿರುವುದು ಹಾಗೂ ವಿವಿಧ ಬಗೆಯ ಚಿತ್ರಗಳನ್ನು ಸುಂದರವಾಗಿ ಬಿಡಿಸಿ ಜನರ ಮನಗೆದ್ದಿದ್ದಾರೆ.

ಗೋಡೆಯ ಮೇಲೆ ಅರಳಿದ ಚಿತ್ರಗಳು:ಶಿವಮೊಗ್ಗದ ಹೊಸ ತೀರ್ಥಹಳ್ಳಿ ರಸ್ತೆಯ ಪಿಯರ್ ಲೈಟ್ ಬಳಿ ವಾಸವಿರುವ ರಾಮಣ್ಣನವರು ತಮ್ಮ ಮನೆಯ ಮುಂದೆ ಇರುವ ಆಂಜನೇಯ ದೇವಾಲಯದ ಪಕ್ಕದ ಗೋಡೆಯ ಮೇಲೆ ಶ್ರೀರಾಮ ರಾಮಮಂದಿರದ ಚಿತ್ರವನ್ನು ಅದ್ಬುತವಾಗಿ ಚಿತ್ರಿಸಿದ್ದಾರೆ.

Football Ramanna drawing the picture
ಗೋಡೆಯ ಮೇಲೆ ಚಿತ್ರ ಬಿಡಿಸುತ್ತಿರುವ ಫುಟ್ಬಾಲ್ ರಾಮಣ್ಣ

ರಾಮನ ಪಕ್ಕದಲ್ಲಿ ಆಂಜನೇಯ ಕುರಿತು ರಾಮಧ್ಯಾನ ಮಾಡುತ್ತಿರುವಂತ ಚಿತ್ರ ಸುಂದರವಾಗಿ ಮೂಡಿ ಬಂದಿದೆ. ಶ್ರೀರಾಮನು ತನ್ನ ಕೋತಿ ಸೇನೆಯ ಜೊತೆ ಲಂಕಾಕ್ಕೆ ಸೇತುವೆ ಕಟ್ಟುತ್ತಿರುವ ಚಿತ್ರ ನೋಡುಗರನ್ನು ತನ್ನತ್ತ ಸೆಳೆಯುತ್ತಿದೆ. ಇವುಗಳು ಅಲ್ಲದೇ ನಗರದ ವಿವಿಧ ಕಡೆ ತಮ್ಮ ಕೈಯಲ್ಲಿ ವಿವಿಧ ಮಹಾತ್ಮರ ಚಿತ್ರಗಳನ್ನು ರಚಿಸಿದ್ದಾರೆ.

ಚಿತ್ರ ರಚಿಸಲು ಶಾಸಕರ ಸಹಾಯ: ಫುಟ್ಬಾಲ್ ರಾಮಣ್ಣ ಅವರು ಶ್ರೀರಾಮನ ಚಿತ್ರ ರಚಿಸಲು ಮುಂದಾದಾಗ ಶಿವಮೊಗ್ಗ ನಗರ ಶಾಸಕ ಎಸ್.ಎನ್.ಚನ್ನಬಸಪ್ಪ ಪೇಂಟ್​ ಕೊಡಿಸಿದ್ದಾರೆ. ಇತರರು ಸಹ ಸಹಾಯ ಒದಗಿಸಿದ್ದಾರೆ. ಕಲಾವಿದ ರಾಮಣ್ಣನ ಕುಂಚದಲ್ಲಿ ಶ್ರೀರಾಮನ ಮಂದಿರದ ಚಿತ್ರ ಸುಂದರವಾಗಿ ಅರಳಿದೆ.

ಚಿತ್ರ ಬಿಡಿಸುವ ಕಲೆ ನನಗೆ ಬಂದಿದ್ದು ಆಶ್ಚರ್ಯ : ಶ್ರೀರಾಮನ ಚಿತ್ರ ರಚಿಸಿರುವ ಫುಟ್ಬಾಲ್ ರಾಮಣ್ಣ ಈಟಿವಿ ಭಾರತ್ ಜೊತೆ ಮಾತನಾಡಿ, ನಾನು ಮೊದಲು ಫುಟ್ಬಾಲ್ ಆಟಗಾರ, ಶಿವಮೊಗ್ಗ ಜಿಲ್ಲಾ ಫುಟ್ಬಾಲ್ ಸಂಘದ ಉಪಾಧ್ಯಕ್ಷನಾಗಿ ಸೇವೆ ಸಲ್ಲಿಸುತ್ತಿದ್ದೇನೆ. ನಾನು‌‌‌‌ ಮೊದಲಿನಿಂದಲೂ ಚಿತ್ರ ಕಲಾವಿದ ಆಗಿರಲಿಲ್ಲ. ಚಿತ್ರ ಬಿಡಿಸುವ ಕಲೆ ಅದು ಹೇಗೆ ಬಂದಿತು‌ ಅನ್ನುವುದು ನನಗೆ ಆಶ್ಚರ್ಯವಾಗಿದೆ.

ಆದರೆ, ದಿನಕ್ಕೊಂದು ಚಿತ್ರ ಬಿಡಿಸುವ ಹವ್ಯಾಸ ರೂಢಿಸಿಕೊಂಡಿದ್ದೇನೆ. ಅದ್ದರಿಂದ ಚಿತ್ರ ಬಿಡಿಸುವ ಕಲೆ ನನ್ನಲ್ಲಿ ಕರಗತವಾಗಿದೆ. ನಾನು ಈಗ ರಚಿಸಿರುವ ಗೋಡೆ ಚಿತ್ರವನ್ನು ಕಂಡು ಪ್ರತಿಯೊಬ್ಬರು ಶ್ರೀರಾಮ, ರಾಮಮಂದಿರ , ಆಂಜನೇಯ ಚೆನ್ನಾಗಿದೆ ಎಂದು ಹೇಳುತ್ತಿರುವುದು ನನಗೆ ಸಂತೋಷ ತಂದಿದೆ ಎಂದು ತಿಳಿಸಿದ್ದಾರೆ.

ಇದನ್ನೂಓದಿ:ರಾಮಮಂದಿರ ಉದ್ಘಾಟನೆ ಸಂಭ್ರಮ: ವಿಜಯಪುರದ ಜೆಎಸ್‌ಎಸ್‌ ಆಸ್ಪತ್ರೆಯಲ್ಲಿ ಗರ್ಭಿಣಿಯರಿಗೆ 5 ದಿನಗಳ ಉಚಿತ ಚಿಕಿತ್ಸೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.