ETV Bharat / state

'ಸೋಗಾನೆ ವಿಮಾನ ನಿಲ್ದಾಣದ ಉದ್ಘಾಟನೆಗೆ ಮೊದಲೇ ಸಂತ್ರಸ್ತರಿಗೆ ಪರಿಹಾರ ಒದಗಿಸಿ'

author img

By

Published : Feb 20, 2023, 9:42 PM IST

ಸೋಗಾನೆ ವಿಮಾನ ನಿಲ್ದಾಣಕ್ಕಾಗಿ ಭೂಮಿ ನೀಡಿರುವ ರೈತರಿಗೆ ಉದ್ಘಾಟನೆಗೂ ಮೊದಲೇ ಹಕ್ಕು ಪತ್ರ ನೀಡದಿದ್ದರೆ ನಿಲ್ದಾಣದ ಬಳಿಯೇ ಮುಷ್ಕರ ಮಾಡುವುದಾಗಿ ಸೋಗಾನೆ ಭೂ ಹಕ್ಕು ಸಂತ್ರಸ್ತರ ಹೋರಾಟ ಸಮಿತಿ ಎಚ್ಚರಿಸಿದೆ.

ತೀ.ನ.ಶ್ರೀನಿವಾಸ್
ತೀ.ನ.ಶ್ರೀನಿವಾಸ್

ಶಿವಮೊಗ್ಗ: ಸಂತ್ರಸ್ತರಿಗೆ ಹಕ್ಕು ಪತ್ರ ನೀಡದಿದ್ದರೆ ವಿಮಾನ ನಿಲ್ದಾಣ ಬಳಿಯೇ ಧರಣಿ ಮಾಡಬೇಕಾಗುತ್ತದೆ ಎಂದು ಸೋಗಾನೆ ಭೂಹಕ್ಕು ಸಂತ್ರಸ್ತರ ಹೋರಾಟ ಸಮಿತಿ ಮತ್ತು ಮಲೆನಾಡು ರೈತರ ಹೋರಾಟ ಸಮಿತಿ ತಿಳಿಸಿದೆ. ಇಂದು ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ಪ್ರಮುಖರಾದ ತೀ.ನ.ಶ್ರೀನಿವಾಸ್ ಮತ್ತು ಎಂ.ಬಿ.ಕೃಷ್ಣಪ್ಪ, ರಾಜ್ಯ ಸರ್ಕಾರ ವಿಮಾನ ನಿಲ್ದಾಣಕ್ಕಾಗಿ ಭೂಮಿ ಕೊಟ್ಟವರನ್ನು ನಿರ್ಲಕ್ಷಿಸಿದೆ. ಹಕ್ಕು ಪತ್ರ ಕೊಡುತ್ತೇವೆ ಎಂದರು, ನಿವೇಶನ ನೀಡುತ್ತೇವೆ ಎಂದಿದ್ದರು. ಹುಬ್ಬಳ್ಳಿ ಮಾದರಿಯಲ್ಲಿ ಸಂತ್ರಸ್ತರ ಸಮಸ್ಯೆಯನ್ನು ಆಲಿಸುತ್ತೇವೆ ಎಂದಿದ್ದರು. ಆದರೆ ಕೊಟ್ಟ ಮಾತಿಗೆ ತಪ್ಪಿದ್ದಾರೆ. ಸುಳ್ಳು ಹೇಳುವುದರಲ್ಲಿಯೇ ಕಾಲ ಕಳೆಯುತ್ತಿದ್ದಾರೆ. ರೈತರ ಅಲೆದಾಟ ತಪ್ಪಿಲ್ಲ ಎಂದು ದೂರಿದರು.

ರನ್‌ವೇ ಜಾಸ್ತಿ ಮಾಡಲು ರೈತರು ಮತ್ತಷ್ಟು ಭೂಮಿ ಕೊಟ್ಟಿದ್ದರು. ಸರ್ಕಾರ ಇದಕ್ಕಾಗಿ 10 ಕೋಟಿ ರೂ. ಬಿಡುಗಡೆ ಮಾಡಿದೆ. ಈ ಹಣ ಡಿಸಿ ಖಾತೆಯಲ್ಲಿದೆ. ಆದರೆ ಅಧಿಕಾರಿಗಳು ಅದನ್ನು ನೀಡದೇ ಈ ಭೂಮಿ ನಿಮ್ಮದಲ್ಲ ಸರ್ಕಾರದ್ದು ಎಂದು ರೈತರ ವಿರುದ್ಧವೇ ಕೇಸು ಹಾಕಿದ್ದಾರೆ. 400 ಜನರಿಗೆ ನಿವೇಶನ ನೀಡುವುದಾಗಿ ಭರವಸೆ ಕೊಟ್ಟಿದ್ದರು. ವಿಮಾನ ನಿಲ್ದಾಣ ಉದ್ಘಾಟನೆಗೆ ಮೊದಲು ನಿಮಗೆ ನಿವೇಶನದ ಹಕ್ಕುಪತ್ರ ನೀಡುತ್ತೇವೆ ಎಂದು ಭರವಸೆ ನೀಡಿದ್ದರು. ಆ ಭರವಸೆ ಈಗ ಹುಸಿಯಾಗಿದೆ ಎಂದರು.

ವಿಮಾನ ನಿಲ್ದಾಣ ಉದ್ಘಾಟನೆಗೆ ಮೊದಲು ಸಂತ್ರಸ್ತರ ಸಮಸ್ಯೆಯನ್ನು ಬಗೆಹರಿಸಬೇಕು. ರಾಜ್ಯಸರ್ಕಾರ ಇದರ ಹೊಣೆ ಹೊರಬೇಕು. ಅಕಸ್ಮಾತ್ ಸಮಸ್ಯೆ ಬಗೆಹರಿಯದಿದ್ದರೆ ಸಂತ್ರಸ್ತರು ಮತ್ತು ರೈತರು ವಿಮಾನ ನಿಲ್ದಾಣದ ಬಳಿಯೇ ಮುಷ್ಕರ ಮಾಡುವುದಾಗಿ ಎಚ್ಚರಿಸಿದರು. ಸರ್ಕಾರ ಶರಾವತಿ, ವರಾಹಿ ಯೋಜನೆ ಸೇರಿದಂತೆ ಎಲ್ಲಾ ರೀತಿಯ ಯೋಜನೆಗಳ ಸಂತ್ರಸ್ತರನ್ನು ಕಡೆಗಣಿಸುತ್ತಿದೆ. ಅನ್ನದಾತರನ್ನು ಮೆರೆತಿದೆ. ಅದರಲ್ಲೂ ಮಲೆನಾಡು ಸಂತ್ರಸ್ತರಿಗೆ ಚಿತ್ರಹಿಂಸೆ ನೀಡುತ್ತಿದ್ದಾರೆ. ಮಾತಿನಲ್ಲಿ ಮನೆ ಕಟ್ಟುತ್ತಿದ್ದಾರೆ ಎಂದು ಆರೋಪಿಸಿದರು. ಇನ್ನು ಈ ಭ್ರಮೆಗಳೆಲ್ಲಾ ಬೇಡ. ರೈತರೆಲ್ಲ ಒಟ್ಟಾಗುತ್ತಿದ್ದಾರೆ. ಎಲ್ಲ ಸಂತ್ರಸ್ತರ ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಹೋರಾಟವನ್ನು ಆರಂಭಿಸುತ್ತಾರೆ ಎಂದು ಹೇಳಿದರು.

ಇದನ್ನೂ ಓದಿ: ಫೆ. 27ರಂದು ಪ್ರಧಾನಿಯಿಂದ ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟನೆ: ಬಿ.ವೈ.ರಾಘವೇಂದ್ರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.