ETV Bharat / state

ಸಿಗಂದೂರು ದೇವಸ್ಥಾನದ‌ ಪೂಜೆ ಗಲಾಟೆ: ರಾಜಿ ಸಂಧಾನದ ಮೂಲಕ ವಿವಾದಕ್ಕೆ ತೆರೆ

author img

By

Published : Oct 22, 2020, 8:26 AM IST

Updated : Oct 23, 2020, 8:36 AM IST

ಸಾಗರ ತಾಲೂಕಿನ ಸಿಗಂದೂರು ಚೌಡೇಶ್ವರಿ ದೇವಾಲಯದ ನವರಾತ್ರಿ ಪೂಜೆಯ ಧಾರ್ಮಿಕ ಕಾರ್ಯಕ್ರಮ ನಡೆಸುವ ಸಂಬಂಧ ಆರಂಭಗೊಂಡಿದ್ದ ವಿವಾದವು ಸಾಗರದ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರ ಮಧ್ಯಸ್ಥಿಕೆಯಲ್ಲಿ ರಾಜಿ ಸಂಧಾನದ ಮೂಲಕ ಬಗೆಹರಿದಿದೆ.

Sigandoor temple clash: Compromise of controversy
ಸಿಗಂದೂರು ದೇವಸ್ಥಾನದ‌ ಪೂಜೆ ಗಲಾಟೆ : ರಾಜಿ ಸಂಧಾನದಿಂದ ವಿವಾದಕ್ಕೆ ತೆರೆ

ಶಿವಮೊಗ್ಗ: ಸಾಗರ ತಾಲೂಕಿನ ಸಿಗಂದೂರು ಚೌಡೇಶ್ವರಿ ದೇವಾಲಯದ ನವರಾತ್ರಿ ಪೂಜೆಯ ಧಾರ್ಮಿಕ ಕಾರ್ಯಕ್ರಮ ನಡೆಸುವ ಸಂಬಂಧ ಆರಂಭಗೊಂಡಿದ್ದ ವಿವಾದವು ಸಾಗರದ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರ ಮಧ್ಯಸ್ಥಿಕೆಯಲ್ಲಿ ರಾಜಿ ಸಂಧಾನದ ಮೂಲಕ ಬಗೆಹರಿದಿದೆ.

ಸಿಗಂದೂರು ದೇವಸ್ಥಾನದ ಆಡಳಿತ ಮಂಡಳಿ ಹಾಗೂ ಪ್ರಧಾನ ಅರ್ಚಕರ ನಡುವಿನ ಆಂತರಿಕ ಗಲಾಟೆ ಹಿನ್ನೆಲೆ ದೇವಿಯ ನವರಾತ್ರಿ ಪೂಜೆಗೆ ಅಡತಡೆ ಉಂಟಾಗಿತ್ತು. ಧರ್ಮದರ್ಶಿ ರಾಮಪ್ಪ ಅವರು ನವರಾತ್ರಿಯ ಸಲುವಾಗಿ ಚಂಡಿಕಾ ಯಾಗ ನಡೆಸಲು ಪ್ರಧಾನ ಅರ್ಚಕರಿಗೆ ಅವಕಾಶ ನೀಡಿಲ್ಲ ಎಂದು ಕಳೆದ ಒಂದು ವಾರದ ಹಿಂದೆ ಅಮಾವಾಸ್ಯೆ ದಿನ ದೇವಸ್ಥಾನದಲ್ಲಿ ಪ್ರಧಾನ ಅರ್ಚಕ ಶೇಷಗಿರಿ ಭಟ್ ಅವರು ಮೌನ ವ್ರತ ಕೈಗೊಂಡಿದ್ದರು. ಈ ಸಂದರ್ಭದಲ್ಲಿ ಕೆಲವು ಅಹಿತಕರ ಘಟನೆಗಳು ನಡೆದು ಗುಂಪು ಘರ್ಷಣೆ ನಡೆದಿತ್ತು. ಹೀಗಾಗಿ ನವರಾತ್ರಿ ಸಂದರ್ಭದಲ್ಲಿ ದೇವಿಗೆ ಪೂಜೆಯೂ ಸರಿಯಾಗಿ ನಡೆಯುತ್ತಿಲ್ಲ, ತೊಂದರೆಯಾಗುತ್ತಿದೆ ಎಂದು ಭಕ್ತರು ನ್ಯಾಯಾಲಯದ ಮೊರೆ ಹೋಗಿದ್ದರು.

ಈ ಸಂಬಂಧ ಸೋಮವಾರ ಅರ್ಜಿ ಸಲ್ಲಿಕೆಯಾಗಿತ್ತು. ಬುಧವಾರ ಅರ್ಜಿಯ ವಿಚಾರಣೆ ಸಂಬಂಧ ನ್ಯಾಯಾಧೀಶರು ದೇವಸ್ಥಾನದ ಇಬ್ಬರೂ ಮುಖ್ಯಸ್ಥರನ್ನು ಕರೆಯಿಸಿ ರಾಜಿ ಸಂಧಾನ ನಡೆಸಿ ಪ್ರಕರಣವನ್ನು ತಿಳಿಗೊಳಿಸಿದ್ದಾರೆ.

ಪ್ರಧಾನ ಅರ್ಚಕರ ಕುಟುಂಬ ಹಾಗೂ ಧರ್ಮದರ್ಶಿ ರಾಮಪ್ಪ ಕುಟುಂಬದವರಿಬ್ಬರೂ ಸೇರಿ ದೇವಿಯ ಪೂಜೆ ನಡೆಸಬೇಕು. ದೇವಿಗೆ ಚಂಡಿಕಾ ಯಾಗವನ್ನು ಸಹ ಮಾಡಬೇಕು. ಕಳೆದ ಬಾರಿ ನವರಾತ್ರಿ ಉತ್ಸವದಲ್ಲಿ ನಡೆದ ಧಾರ್ಮಿಕ ವಿಧಿ ವಿಧಾನಗಳು ಈ ವರ್ಷವೂ ಶೇಷಗಿರಿ ಭಟ್ ಅವರ ನೇತೃತ್ವದಲ್ಲಿ ನಡೆಯಬೇಕು. ಇದಕ್ಕೆ ರಾಮಪ್ಪ ಅವರು ಸಹಕರಿಸಬೇಕು. ಅಲ್ಲದೆ ಕೊರೊನಾ ವೈರಸ್​ ಹಿನ್ನೆಲೆ ದೇವಸ್ಥಾನದ ಗರ್ಭಗುಡಿಯ ಮುಂಭಾಗದಲ್ಲಿ ಏಕಕಾಲಕ್ಕೆ 40 ಭಕ್ತರು ಮಾತ್ರ ಉಪಸ್ಥಿತರಿರಲು ಅವಕಾಶವಿದೆ. ಈ ಎಲ್ಲಾ ಭಕ್ತರೂ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು ಎಂಬ ರಾಜಿ ಸಂಧಾನದ ಸೂಚನೆಗೆ ರಾಮಪ್ಪ, ರವಿಕುಮಾರ್ ಮತ್ತು ಶೇಷಗಿರಿ ಭಟ್ ಅವರು ಸಮ್ಮತಿ ಸೂಚಿಸಿದ್ದಾರೆ.

ಅಲ್ಲದೆ ಪೂಜೆಯ ನಂತರ ಮಂಗಳಾರತಿ ತಟ್ಟೆಯನ್ನು ಒಂದು ಜಾಗದಲ್ಲಿ ಇಟ್ಟು ಅದಕ್ಕೆ ನಮಸ್ಕರಿಸಲು ಭಕ್ತರಿಗೆ ಅವಕಾಶ ನೀಡಬೇಕು. ಅರ್ಚಕರು ಅದನ್ನು ಎಲ್ಲಾ ಭಕ್ತರ ಎದುರು ಕೊಂಡೊಯ್ಯಬಾರದು. ದಸರಾ ಹಬ್ಬದ ಅಂಗವಾಗಿ ಅರ್ಚಕ ಶೇಷಗಿರಿ ಭಟ್ ಅವರು ತಮ್ಮ ಕುಟುಂಬದವರೊಂದಿಗೆ, ರಾಮಪ್ಪನವರ ಕುಟುಂಬದವರೊಂದಿಗೆ ಹೋಮವನ್ನು ನಡೆಸಬೇಕು ಎಂಬ ಅಂಶಗಳನ್ನು ಎರಡೂ ಕಡೆಯವರು ಒಪ್ಪಿಕೊಂಡಿದ್ದಾರೆ.

ರಾಮಪ್ಪ, ರವಿಕುಮಾರ್ ಹಾಗೂ ಶೇಷಗಿರಿ ಭಟ್ ಅವರು ರಾಜಿ ಸಂಧಾನಕ್ಕೆ ಸಮ್ಮತಿ ಸೂಚಿಸಿದ್ದರಿಂದ ಭಕ್ತರಾದ ಸಂದೀಪ್ ಹೆಚ್.ಎನ್. ಮತ್ತು ನವೀನ್ ಜೈನ್ ತಮ್ಮ ದಾವೆಯನ್ನು ಹಿಂದಕ್ಕೆ ಪಡೆದಿದ್ದಾರೆ.

ದಾವೆ ಹೂಡಿದ್ದ ಸಂದೀಪ್ ಹೆಚ್.ಎನ್. ಮತ್ತು ನವೀನ್ ಜೈನ್ ಅವರ ಪರವಾಗಿ ನ್ಯಾಯವಾದಿ ರವೀಶಕುಮಾರ್ ಮತ್ತು ರಾಮಪ್ಪ ಮತ್ತು ರವಿಕುಮಾರ್ ಪರವಾಗಿ ಎನ್.ವೆಂಕಟರಾಮ್, ಹೆಚ್.ಎನ್.ದಿವಾಕರ್, ಬಿ.ನಾಗರಾಜ್, ಎಂ.ರಾಘವೇಂದ್ರ, ಕೆ.ಬಿ.ಮಹಾಬಲೇಶ್ ಹಾಜರಾಗಿದ್ದರೆ, ಶೇಷಗಿರಿ ಭಟ್ ಪರವಾಗಿ ಟಿ.ಎಸ್.ರಮಣ ಹಾಜರಾಗಿದ್ದರು. ಮಧ್ಯಸ್ಥಿಕೆಗಾರರಾಗಿ ನ್ಯಾಯವಾದಿ ಮರಿದಾಸ್ ಭಾಗವಹಿಸಿದ್ದರು.

Last Updated : Oct 23, 2020, 8:36 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.