ಸನ್ನಡತೆಗೆ ಸಂದ ಮನ್ನಣೆ: ಶಿವಮೊಗ್ಗದಲ್ಲಿ 1092 ರೌಡಿಶೀಟರ್‌ಗಳಿಗೆ 'ರೌಡಿ' ಕುಖ್ಯಾತಿಯಿಂದ ಮುಕ್ತಿ

author img

By

Published : Sep 23, 2021, 7:40 PM IST

Rowdys shortlisted in shimoga

ಶಿವಮೊಗ್ಗದಲ್ಲಿ ಕೆಲವು ವರ್ಷಗಳಿಂದೀಚೆಗೆ ಯಾವುದೇ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗದೇ ಸನ್ನಡತೆ ತೋರಿ ಸಮಾಜದಲ್ಲಿ ಬದುಕುತ್ತಿರುವವರನ್ನು ರೌಡಿಶೀಟರ್ ಪಟ್ಟಿಯಿಂದ ಕೈಬಿಡಲಾಗಿದೆ.

ಶಿವಮೊಗ್ಗ: ಸಣ್ಣಪುಟ್ಟ ಅಪರಾಧ ಮಾಡಿ ರೌಡಿಶೀಟರ್ ಪಟ್ಟಿ ಸೇರಿ ಸುದೀರ್ಘ ಅವಧಿಯವರೆಗೆ ಅಪರಾಧ ಚಟುವಟಿಕೆಗಳಿಂದ ದೂರವಿದ್ದವರನ್ನು ಜಿಲ್ಲಾ ಪೊಲೀಸ್ ಇಲಾಖೆ ರೌಡಿಶೀಟರ್​​ ಪಟ್ಟಿಯಿಂದ ಕೈಬಿಟ್ಟಿದೆ.

ಶಿವಮೊಗ್ಗದಲ್ಲಿ 1092 ಜನ ರೌಡಿಶೀಟರ್ ಪಟ್ಟಿಯಿಂದ ಔಟ್

ಶಿವಮೊಗ್ಗದಲ್ಲಿ ಏಪ್ರಿಲ್‌ನಿಂದ ನಾಲ್ಕು ತಿಂಗಳ ಅವಧಿಯಲ್ಲಿ ಒಟ್ಟು 1,092 ರೌಡಿಗಳನ್ನು ಪಟ್ಟಿಯಿಂದ ಕೈಬಿಡಲಾಗಿದೆ. ಪ್ರಸ್ತುತ 1760 ರೌಡಿಶೀಟರ್​ಗಳಿದ್ದಾರೆ. ಇವರ ಮೇಲೆ ತೀವ್ರ ನಿಗಾ ಇಡಲಾಗಿದೆ. ಶೇ.50ರಷ್ಟು ರೌಡಿಗಳನ್ನು ಪಟ್ಟಿಯಿಂದ ಕೈಬಿಟ್ಟಿದೆ. ನಾಲ್ಕು ತಿಂಗಳಲ್ಲಿ ಹೊಸದಾಗಿ ಇಪ್ಪತ್ತು ಮಂದಿಯನ್ನು ರೌಡಿಶೀಟರ್ ಪಟ್ಟಿಗೆ ಸೇರಿಸಲಾಗಿದೆ.

2021ರ ಏಪ್ರಿಲ್ ಆರಂಭದಲ್ಲಿ ರೌಡಿಶೀಟರ್‌ಗಳ ಸಂಖ್ಯೆ 2,832 ಇತ್ತು. ಅದರಲ್ಲಿ 1092 ಜನರನ್ನು ಕೈಬಿಟ್ಟಿದ್ದು, ಈಗ 1,760 ಜನರಿದ್ದಾರೆ. ಪದೇ ಪದೇ ಸಣ್ಣಪುಟ್ಟ ಅಪರಾಧಗಳನ್ನು ಮಾಡುವುದು, ಹೆಣ್ಣು ಮಕ್ಕಳನ್ನು ಚುಡಾಯಿಸುವವರು, ಪೊಕ್ಸೊ ಕಾಯಿದೆ ಅಡಿ ಪ್ರಕರಣ ಎದುರಿಸುತ್ತಿರುವ ಕಾನೂನು ಸಂಘರ್ಷಕ್ಕೆ ಒಳಪಟ್ಟವರು, ಸಾರ್ವಜನಿಕ ಆಸ್ತಿಪಾಸ್ತಿ ಹಾಳು ಮಾಡುವುದು, ಕೋಮು ಗಲಭೆ, ಆಸ್ತಿ ವಿವಾದ, ಹಫ್ತಾ ಹೀಗೆ ನಾನಾ ಠಾಣೆಗಳಲ್ಲಿ ದೂರುಗಳಿದ್ದು, ಅವರ ವಿರುದ್ಧ ಪ್ರಕರಣ ದಾಖಲಾಗಿವೆ. ಆದರೆ, ಕೆಲವು ವರ್ಷಗಳಿಂದ ಯಾವುದೇ ಅಪರಾಧ ಚಟುವಟಿಕೆಗಳನ್ನು ಮಾಡದೇ ಸನ್ನಡತೆಯಿಂದ ಸಮಾಜದಲ್ಲಿ ಬದುಕುತ್ತಿರುವವರನ್ನು ರೌಡಿಶೀಟರ್ ಪಟ್ಟಿಯಿಂದ ಕೈಬಿಡಲಾಗಿದೆ.

ಇನ್ನು, ಪ್ರತಿ ಠಾಣೆಯ ವ್ಯಾಪ್ತಿಯಲ್ಲಿರುವ ರೌಡಿಶೀಟರ್‌ಗಳ ಮೇಲೆ ಪೊಲೀಸರ ತಂಡ ಕಣ್ಣಿಟ್ಟು ಅವರು ಕಾರ್ಯಾಲಯ, ಮನೆ, ಅಕ್ಕಪಕ್ಕದವರೊಂದಿಗೆ ಅವರ ವ್ಯವಹಾರ ಹೀಗೆ ಎಲ್ಲ ವಿಚಾರಗಳ ಮೇಲೆ ನಿಗಾ ಇಡಲಿದೆ. ಅವರು ನಿಜವಾಗಿಯೂ ಅಪರಾಧ ಚಟುವಟಿಕೆಗಳನ್ನು ಮಾಡುತ್ತಿಲ್ಲ ಎನ್ನುವುದಾದರೆ ಅಂತಹವರನ್ನು ರೌಡಿಶೀಟರ್ ಪಟ್ಟಿಯಿಂದ ಕೈಬಿಡುವ ಬಗ್ಗೆ ಆಯಾ ಠಾಣೆಯ ಇನ್‌ಸ್ಪೆಕ್ಟರ್‌ಗಳು ಡಿವೈಎಸ್‌ಪಿಗಳಿಗೆ ಶಿಫಾರಸು ಮಾಡುತ್ತಾರೆ. ಅವರೂ ಸೂಕ್ಷ್ಮವಾಗಿ ಗಮನಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹೆಸರನ್ನು ತಿಳಿಸುತ್ತಾರೆ. ಈ ಎಲ್ಲ ಪ್ರಕ್ರಿಯೆಗಳು ಪೂರ್ಣಗೊಂಡ ನಂತರವಷ್ಟೇ ಅವರ ವಿರುದ್ಧ ಇರುವ ರೌಡಿಶೀಟ್ ಅಮಾನತುಗೊಳಿಸಲಾಗುತ್ತದೆ. ಆಗ ಪಟ್ಟಿಯಿಂದ ಅವರನ್ನು ಹೊರಗಿಡಲಾಗುತ್ತದೆ. ಆದರೆ, ಇದಕ್ಕಾಗಿ ಅವರ ಒಂದು ದಶಕಗಳ ರೌಡಿ ಶೀಟ್‌ ಪರಿಶೀಲಿಸಲಾಗುತ್ತದೆ.

ಶಿವಮೊಗ್ಗದಲ್ಲಿ 2021ರ ಏಪ್ರಿಲ್ ಆರಂಭದವರೆಗೆ 2,832 ರೌಡಿಶೀಟರ್‌ಗಳಿದ್ದು, ಪ್ರತಿಯೊಬ್ಬರ ಮೇಲೆ ಕಣ್ಣಿಡುವುದು ಕಷ್ಟ. ಹೀಗಾಗಿ, ಚಟುವಟಿಕೆರಹಿತರನ್ನು ಕೈಬಿಟ್ಟು ನಿಜವಾಗಿಯೂ ಅಪರಾಧ ಜಗತ್ತಿನಲ್ಲಿ ಸಕ್ರಿಯವಾಗಿರುವವರ ಮೇಲೆ ಪೂರ್ಣ ನಿಗಾ ಇಡಲು ಇಲಾಖೆ ಮುಂದಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.