ETV Bharat / state

ಶಿವಮೊಗ್ಗ: ಶಿಮುಲ್​ ನಷ್ಟ ಸರಿದೂಗಿಸಲು ಹಾಲಿನ ದರ ಇಳಿಕೆ

author img

By ETV Bharat Karnataka Team

Published : Dec 22, 2023, 7:30 PM IST

ಮತ್ತೊಮ್ಮೆ ಹಾಲಿನ ದರ ಇಳಿಸಿ ಶಿವಮೊಗ್ಗ ಹಾಲು ಒಕ್ಕೂಟ ರೈತರಿಗೆ ಶಾಕ್ ನೀಡಿದೆ.

ಶಿವಮೊಗ್ಗ ಹಾಲು ಒಕ್ಕೂಟ
ಶಿವಮೊಗ್ಗ ಹಾಲು ಒಕ್ಕೂಟ

ಶಿವಮೊಗ್ಗ: ಶಿಮುಲ್​ ತನ್ನ ನಷ್ಟ ಸರಿದೂಗಿಸಲು ಹಾಲಿನ ದರ ಇಳಿಸಿದೆ. ದರ ಇಳಿಸಿರುವ ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ ಹಾಲು ಉತ್ಪಾದಕರ ಸಹಕಾರ ಸಂಘದ ನಿರ್ಧಾರಕ್ಕೆ ಉತ್ಪಾದಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶಿವಮೊಗ್ಗ ಹಾಲು ಒಕ್ಕೂಟದಿಂದ ನಿನ್ನೆಯಿಂದಲೇ 2 ರೂ. ದರ ಕಡಿತ ಮಾಡಲಾಗಿದೆ. ಇದಕ್ಕೂ ಹಿಂದೆ ದರವನ್ನು 3 ರೂ ಏರಿಸಲಾಗಿತ್ತು. ಈಗ ಉತ್ಪಾದನೆ ನಷ್ಟ ತೋರಿಸಿರುವ ಒಕ್ಕೂಟ 2 ರೂ. ಕಡಿಮೆ ಮಾಡಿದೆ. ಏಪ್ರಿಲ್‌ನಿಂದ ನವೆಂಬರ್‌ ಅಂತ್ಯದವರೆಗೆ ಶಿಮುಲ್‌ಗೆ 26.89 ಕೋಟಿ ರೂ. ನಷ್ಟವಾಗಿದೆ ಎಂದು ವರದಿಯಾಗಿದೆ. ಒಂದು ತಿಂಗಳ ಹಿಂದೆ 1.65 ರೂ.ಗಳನ್ನು ಶಿಮುಲ್ ಇಳಿಸಿತ್ತು. ಈಗ ಮತ್ತೆ 2 ರೂ. ಇಳಿಸಿ ಆದೇಶಿಸಿದೆ. ಇದರಿಂದ ರೈತರಿಗೆ ಇನ್ಮುಂದೆ ಪ್ರತಿ ಲೀಟರ್ ಹಾಲಿಗೆ 31.07 ರೂ. ಲಭ್ಯವಾಗಲಿದೆ.

ಈ ಹಿಂದೆ ರೈತರಿಗೆ ಪ್ರತಿ ಲೀಟರ್ ಹಾಲಿಗೆ 33.4 ಸಿಗುತ್ತಿತ್ತು. ಡಿಸೆಂಬರ್ 18ರಂದು ನಡೆದ 442ನೇ ಆಡಳಿತ ಮಂಡಳಿ ಸಭೆಯಲ್ಲಿ ದರ ಇಳಿಕೆ ಕುರಿತು ನಿರ್ಣಯ ತೆಗೆದುಕೊಳ್ಳಲಾಗಿದೆ. ಡಿಸೆಂಬರ್ 21ರಿಂದಲೇ ದರ ಇಳಿಕೆ ಕುರಿತು ಸುತ್ತೋಲೆಯನ್ನು ಶಿಮುಲ್ ಹೊರಡಿಸಿದೆ.

ಡಿ.21ರಂದು ಗುರುವಾರ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಂದಿನಿ ಬ್ರ್ಯಾಂಡ್‌ನ ಹೊಸ ಉತ್ಪನ್ನಗಳನ್ನು ಲೋಕಾರ್ಪಣೆ ಮಾಡುವ ಸಂದರ್ಭದಲ್ಲಿ ರಾಜ್ಯದಲ್ಲಿ ಸದ್ಯಕ್ಕೆ ನಂದಿನಿ ಹಾಲಿನ ದರ ಹೆಚ್ಚಳವಿಲ್ಲ. ಈ ಕುರಿತ ಪ್ರಸ್ತಾಪ ನಮ್ಮ ಮುಂದಿಲ್ಲ ಎಂದು ಕೆಎಂಎಫ್ ಅಧ್ಯಕ್ಷ ಭೀಮಾ ನಾಯ್ಕ್ ಹೇಳಿದ್ದರು.

ನಂತರ ಪ್ರತಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಂದಿನಿ ಬ್ರ್ಯಾಂಡ್​ನ ಮೂರು ಹೊಸ ಉತ್ಪನ್ನಗಳನ್ನು ಬಿಡುಗಡೆ ಮಾಡಿದ್ದೇವೆ. ಎಮ್ಮೆಯ ಮೊಸರು ಮಾರಾಟ ಮಾಡಲು ತೀರ್ಮಾನಿಸಿದ್ದೇವೆ. ಸದ್ಯಕ್ಕೆ ಹಾಲಿನ ದರ ಹೆಚ್ಚಳದ ಪ್ರಸ್ತಾಪವಿಲ್ಲ. ಆಗಸ್ಟ್ 1ರಂದು 3 ರೂ ಹೆಚ್ಚಿಸಿದ್ದೇವೆ. ಅದನ್ನು ನೇರವಾಗಿ ರೈತರಿಗೆ ಕೊಟ್ಟಿದ್ದೇವೆ ಎಂದಿದ್ದರು.

ನಂದಿನಿ ಉತ್ಪನ್ನಗಳ ನೂತನ ರಾಯಭಾರಿ ನಟ ಶಿವ ರಾಜ್‌ಕುಮಾರ್‌ ಅವರ ಜಾಹೀರಾತನ್ನು ಇದೇ ವೇಳೆ ಬಿಡುಗಡೆ ಮಾಡಲಾಗಿತ್ತು. ಸಮಾರಂಭದಲ್ಲಿ ಗೀತಾ ಶಿವ ರಾಜ್‌ಕುಮಾರ್‌, ಸಚಿವ ಮಧು ಬಂಗಾರಪ್ಪ, ಭೀಮಾ ನಾಯ್ಕ್‌ ಮೊದಲಾದವರು ಭಾಗವಹಿಸಿದ್ದರು.

ಇದನ್ನೂ ಓದಿ: ನಂದಿನಿ ಹೊಸ ಉತ್ಪನ್ನಗಳ ಬಿಡುಗಡೆ: ಸದ್ಯಕ್ಕೆ ಹಾಲಿನ ದರ ಹೆಚ್ಚಳವಿಲ್ಲ- ಕೆಎಂಎಫ್ ಅಧ್ಯಕ್ಷ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.