ETV Bharat / state

ಶಾಲಾ ಮಕ್ಕಳಿಂದ ಅಪ್ಪ-ಅಮ್ಮನ ಪಾದ ಪೂಜೆ: ಶಿವಮೊಗ್ಗದ ಈ ಶಾಲೆಯಲ್ಲಿ ವಿಶೇಷವಾಗಿ ಹೊಸ ವರ್ಷಾಚರಣೆ

author img

By ETV Bharat Karnataka Team

Published : Jan 1, 2024, 8:33 PM IST

ಶಿವಮೊಗ್ಗದ ಶಾಲೆಯೊಂದರಲ್ಲಿ ಹೊಸ ವರ್ಷಾಚರಣೆಗೆ ಶಾಲಾ ಮಕ್ಕಳಿಂದ ತಂದೆ ತಾಯಿಗಳ ಪಾದಪೂಜೆ ಮಾಡಿಸಲಾಯಿತು.

ಶಾಲಾ ಮಕ್ಕಳಿಂದ ತಂದೆ-ತಾಯಿಗಳಿಗೆ ಪಾದಪೂಜೆ
ಶಾಲಾ ಮಕ್ಕಳಿಂದ ತಂದೆ-ತಾಯಿಗಳಿಗೆ ಪಾದಪೂಜೆ

ಹೊಸವರ್ಷಕ್ಕೆ ಶಾಲಾ ಮಕ್ಕಳಿಂದ ತಂದೆ-ತಾಯಂದಿರ ಪಾದಪೂಜೆ

ಶಿವಮೊಗ್ಗ: ನಗರದ ಶಾಲೆಯೊಂದರಲ್ಲಿ ಪ್ರತಿವರ್ಷ ಹೊಸ ವರ್ಷಾಚರಣೆಯನ್ನು ವಿಭಿನ್ನವಾಗಿ ಆಚರಣೆ ಮಾಡಲಾಗುತ್ತದೆ. ಅದೇ ರೀತಿ ಇಲ್ಲಿಯ ಅನುಪಿನಕಟ್ಟೆ ರಾಮಕೃಷ್ಣ ಗುರುಕುಲ ವಸತಿ ಶಾಲೆಯಲ್ಲಿ ಪ್ರತಿವರ್ಷ ಜನವರಿ 1ರಂದು ವಿದ್ಯಾರ್ಥಿಗಳಿಂದ ಅವರ ತಂದೆ-ತಾಯಂದಿರ ಅಥವಾ ಪೋಷಕರ ಪಾದಪೂಜೆ ನಡೆಸಲಾಗುತ್ತದೆ. ಈ ದಿನದಂದು ಶಾಲೆಯ ಪ್ರತಿಯೊಬ್ಬ ವಿದ್ಯಾರ್ಥಿಗಳು ತಮ್ಮ ತಂದೆ-ತಾಯಿ ಅಥವಾ ಪೋಷಕರೊಂದಿಗೆ ಈ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಾರೆ.

ಪಾದಪೂಜೆ ಕಾರ್ಯಕ್ರಮದಲ್ಲಿ ಪೂಜೆಗೆ ಬೇಕಾದ ಎಲ್ಲಾ ಸಾಮಾಗ್ರಿಗಳನ್ನು ಮಕ್ಕಳಿಗೆ ನೀಡಿ ಪೋಷಕರಿಂದ ಪಾದಪೂಜೆ ಮಾಡಿಸಲಾಗುತ್ತದೆ. ನಂತರ ಶಾಲೆಯಲ್ಲಿ ಪಾಠ, ಆಟೋಟಗಳಲ್ಲಿ ಉತ್ತಮ ಪ್ರದರ್ಶನ ನೀಡಿದವರಿಗೆ ಬಹುಮಾನವನ್ನು ನೀಡಲಾಗುತ್ತದೆ. ಈ ಪಾದಪೂಜೆಯು ಕಳೆದ 19 ವರ್ಷಗಳಿಂದ ನಡೆದುಕೊಂಡು ಬಂದಿದೆ. ಪಾದಪೂಜೆ ಕಾರ್ಯಕ್ರಮಕ್ಕೆ ಪ್ರತಿ ವರ್ಷ ಇದೇ ಶಾಲೆಯಲ್ಲಿ ಓದಿ ಉದ್ಯೋಗದಲ್ಲಿರುವ ಹಳೆಯ ವಿದ್ಯಾರ್ಥಿಗಳನ್ನು ಕರೆಯಿಸಿ ಅವರಿಂದ ಸ್ಫೂರ್ತಿದಾಯಕ ಭಾಷಣವನ್ನು ಮಾಡಿಸಲಾಗುತ್ತದೆ. ಅಲ್ಲದೆ ಜಿಲ್ಲೆಯ ವಿವಿಧ ಮಠಾಧೀಶರನ್ನು ಕರೆಯಿಸಿ ಆಶೀರ್ವಾದ ಮಾಡಿಸಲಾಗುತ್ತದೆ.

ಶಾಲೆಯಲ್ಲಿ ನಡೆದುಕೊಂಡು ಬಂದಿರುವ ಪಾದಪೂಜೆಯ ಕುರಿತು ಶಾಲೆಯ ಮುಖ್ಯಸ್ಥರಾದ ಶೋಭ ವೆಂಕಟರಮಣ ಅವರು ಮಾತನಾಡಿ, ನಮ್ಮ ಶಾಲೆಯಲ್ಲಿ ಜನ್ಮದಾತರಿಗೆ ಪಾದಪೂಜೆಯನ್ನು ನಡೆಸಲಾಗುತ್ತಿದೆ. 2005-06 ರಿಂದ ನಮ್ಮ ಶಾಲೆ ಸಂಸ್ಥಾಪಕರಾದ ವೆಂಕಟರಮಣ ಅವರು ಈ ಆಚರಣೆಯನ್ನು ಪ್ರಾರಂಭಿಸಿದರು.‌ ಪಾದಪೂಜೆಯ ಮುಖ್ಯ ಉದ್ದೇಶ, ಮಕ್ಕಳು ಪೋಷಕರನ್ನು ಕಡೆಗಣಿಸುವುದನ್ನು ತಡೆಯಲು, ಮಕ್ಕಳಿಗೆ ವಿದ್ಯೆಯ ಜೊತೆ ನೈತಿಕ ಶಿಕ್ಷಣವನ್ನು ನೀಡಬೇಕು. ಮಕ್ಕಳ ಕರ್ತವ್ಯ, ಬಾಧ್ಯತೆಗಳೇನು ಎಂಬುದನ್ನು ತಿಳಿಸಿಕೊಡುವುದು, ತಂದೆ- ತಾಯಿ ಮಕ್ಕಳ ಸಂಬಂದವನ್ನು ಗಟ್ಟಿಗೊಳಿಸುವುದು ಎಂದು ಹೇಳಿದರು.

ಪೋಷಕರಾದ ಸುಬ್ರಮಣ್ಯ ಎಂಬುವರು ಮಾತನಾಡಿ, ತಂದೆ-ತಾಯಿಗಳ ತಮ್ಮ ಮಕ್ಕಳು ಗೌರವ ಹಾಗೂ ಸಂಸ್ಕಾರದ ಕಲಿಯಬೇಕು‌ ಎಂಬುದು ಗುರುಕುಲ ಪದ್ಧತಿಯಲ್ಲಿತ್ತು. ಈ ಒಂದು ಅಂಶವನ್ನು ಈ ಆಂಗ್ಲ ಮಾಧ್ಯಮ ಶಾಲೆ ಅಳವಡಿಸಿಕೊಂಡಿದೆ. ಈಗ ಮಕ್ಕಳಲ್ಲಿ ಉತ್ತಮ ಸಂಸ್ಕಾರ ಬರಬೇಕು ಎಂಬುದು ಈ ಸಂಸ್ಥೆಯ ಮುಖ್ಯ ಉದ್ದೇಶವಾಗಿದೆ. ಇಲ್ಲಿ ಮಕ್ಕಳಿಗೆ ಸಂಸ್ಕಾರವನ್ನು ಕಲಿಸುತ್ತಿದ್ದಾರೆ, ಇದರ ಭಾಗವಾಗಿ ಶಾಲೆಯಲ್ಲಿ ಶಾರದೆಯ ಪೂಜೆಯ ಅಂಗವಾಗಿ ಪಾದಪೂಜೆ ನಡೆಸುತ್ತಿದ್ದಾರೆ. ಇದು ಮಕ್ಕಳಲ್ಲಿ ಹಾಗೂ ಪೋಷಕರಲ್ಲಿ ಜಾಗೃತಿ ಮೂಡುವಂತಹ ಕಾರ್ಯಕ್ರಮವಾಗಿದೆ. ಇದರಿಂದ ಪೋಷಕರು ಮಕ್ಕಳಿಗೆ ಹೇಗೆ ಕಲಿಸಬೇಕು ಅನ್ನೋದು ತಿಳಿದುಬರುತ್ತದೆ.

ಇದೇ ವೇಳೆ ವಿದ್ಯಾರ್ಥಿನಿ ಪ್ರಜ್ಞಾ ಮಾತನಾಡಿ, ಪಾದಪೂಜೆ ನಡೆಯುತ್ತದೆ ಎಂದು ಕೇಳಿದ್ದೆ, ಆದರೆ ಇಲ್ಲಿಗೆ ಬಂದ ಮೇಲೆ ನನಗೆ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿ ತುಂಬ ಸಂತೋಷವಾಯಿತು. ನಾನು ಇಂದು ನಮ್ಮ ಪೋಷಕರ ಪಾದಪೂಜೆ ಮಾಡಿದೆನು. ಇದರಿಂದ ಸಂತಸವಾಗಿದ್ದು, ನಮ್ಮ ಸಾಧನೆಗೆ ಸ್ಫೂರ್ತಿ ಸಿಗುತ್ತದೆ ಎಂದರು.

ಶಾಲೆಯ ಇನ್ನೋರ್ವ ವಿದ್ಯಾರ್ಥಿನಿ ಪ್ರೇಕ್ಷ ಮಾತನಾಡಿ, ಈ ಕಾರ್ಯಕ್ರಮವನ್ನು ನಮ್ಮ ಶಾಲೆಯಲ್ಲಿ ಮಾತ್ರ ನಡೆಸಲಾಗುತ್ತದೆ. ನಾನು ಈ ಶಾಲೆಯಲ್ಲಿ ಓದುತ್ತಿರುವುದು ಹೆಮ್ಮಯ ವಿಚಾರ ಎಂದರು.

ಇದನ್ನೂ ಓದಿ: ಬೆಣ್ಣೆನಗರಿಯಲ್ಲಿ ಹೊಸ ವರ್ಷಕ್ಕೆ ವಿವಿಧ ಮಾದರಿ ಕೇಕ್​ : ಗಮನ ಸೆಳೆದ ನೂತನ ಪಾರ್ಲಿಮೆಂಟ್ ಕೇಕ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.