ETV Bharat / state

ತಾಂಡಾ ನಿವಾಸಿಗಳಿಗೆ ಮೋದಿ ಹಕ್ಕುಪತ್ರ ನೀಡಿರುವುದು ಬರೀ ಬೋಗಸ್​ : ಕಾಗೋಡು ತಿಮ್ಮಪ್ಪ

author img

By

Published : Jan 22, 2023, 4:02 PM IST

ಪ್ರಧಾನಿ ನರೇಂದ್ರ ಮೋದಿ ಅವರು ಹಕ್ಕುಪತ್ರ ವಿತರಣೆ ಮಾಡಿರುವುದು ಬರೀ ಬೋಗಸ್ - 50 ಸಾವಿರ ಹಕ್ಕುಪತ್ರಗಳನ್ನು ಯಾವ ತಾಲೂಕಿಗೆ ಎಷ್ಟು ಕೊಟ್ಟಿದ್ದಾರೆ ದಾಖಲೆ ಕೊಡಲಿ- ಕಾಗೋಡು ತಿಮ್ಮಪ್ಪ ಒತ್ತಾಯ

mps-should-speak-loudly-on-forest-land-issue-in-lok-sabha-kagodu-thimmappa
ಅರಣ್ಯ ಭೂಮಿ ಸಮಸ್ಯೆಗಳ ಬಗ್ಗೆ ಸಂಸದರು ಲೋಕಸಭೆಯಲ್ಲಿ ಮಾತನಾಡಬೇಕು: ಕಾಗೋಡು ತಿಮ್ಮಪ್ಪ

ಅರಣ್ಯ ಭೂಮಿ ಸಮಸ್ಯೆಗಳ ಬಗ್ಗೆ ಸಂಸದರು ಲೋಕಸಭೆಯಲ್ಲಿ ಮಾತನಾಡಬೇಕು: ಕಾಗೋಡು ತಿಮ್ಮಪ್ಪ

ಶಿವಮೊಗ್ಗ: ಮಲೆನಾಡು ಸೇರಿದಂತೆ ರಾಜ್ಯದ ಅರಣ್ಯ ಭೂಮಿ ಸಮಸ್ಯೆ ಬಗ್ಗೆ ಸಂಸದರು ಲೋಕಸಭೆಯಲ್ಲಿ ಗಟ್ಟಿ ಧ್ವನಿಯಲ್ಲಿ ಕೇಂದ್ರ ಸರ್ಕಾರದ ಗಮನ ಸೆಳೆಯುವ ಕೆಲಸ ಮಾಡಬೇಕು ಎಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಹೇಳಿದರು. ಮಾಧ್ಯಮಗೋಷ್ಟಿಯಲ್ಲಿಂದು ಮಾತನಾಡಿದ ಅವರು, ಕಲಬುರಗಿಯಲ್ಲಿ ಲಂಬಾಣಿ ತಾಂಡಾ ಜನರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಹಕ್ಕುಪತ್ರ ವಿತರಣೆ ಮಾಡಿರುವುದು ಬರೀ ಬೋಗಸ್. ಅದರಲ್ಲಿ ಯಾವುದೇ ಸತ್ಯಾಂಶ ಇಲ್ಲ. ನಮ್ಮ ಸರ್ಕಾರದ ಸಮಯದಲ್ಲಿ ಅಲೆಮಾರಿ, ಅರೆ ಅಲೆಮಾರಿ ಸೇರಿದಂತೆ ಎಲ್ಲಾ ಜನರಿಗೆ ಹಕ್ಕುಪತ್ರ ಕೊಡಲು ಕಾನೂನು ತಿದ್ದುಪಡಿ ಮಾಡಿದ್ದು, ನಾನು ಕಂದಾಯ ಸಚಿವನಾಗಿದ್ದಾಗಲೇ. ಇನ್ನು ಆರು ತಿಂಗಳ ಸಮಯ ಸಿಕ್ಕಿದ್ದರೆ ಎಲ್ಲಾ ಪ್ರಕ್ರಿಯೆ ಮುಗಿದು ಹಕ್ಕುಪತ್ರ ವಿತರಿಸುತ್ತಿದ್ದೆವು ಎಂದು ಹೇಳಿದರು.

ಎಲ್ಲಿ ಕೊಟ್ಟಿದ್ದಾರೆ. 50 ಸಾವಿರ ಹಕ್ಕುಪತ್ರಗಳನ್ನು ಯಾವ ತಾಲೂಕಿಗೆ ಎಷ್ಟು ಕೊಟ್ಟಿದ್ದಾರೆ ಎಂಬುದಕ್ಕೆ ದಾಖಲೆ ಕೊಡಲಿ. ಶಾಸನ ಸಭೆಯಲ್ಲಿ ಇದರ ಬಗ್ಗೆ ಪ್ರಸ್ತಾವನೆ ಆಗಿದೆಯಾ?, ಮೋದಿ ಅವರು ಬಂದು ಹಕ್ಕುಪತ್ರ ಕೊಟ್ಟಿದ್ದಾರೆ ಎಂಬುದು ಬರೀ ಸುಳ್ಳು. ಒಬ್ಬ ಪ್ರತಿನಿಧಿಯಾಗಿ ಹೀಗೆ ಸುಳ್ಳು ಹೇಳಬಾರದು. ಅಧಿಕಾರದ ಕೊನೆಯ ನಾಲ್ಕು ದಿನಗಳಲ್ಲಿ ಹಕ್ಕುಪತ್ರ ಕೊಟ್ಟು ನಾಟಕ ಮಾಡಿರುವುದು ಸರಿಯಲ್ಲ ಎಂದು ಕಾಗೋಡು ಆಕ್ಷೇಪ ವ್ಯಕ್ತಪಡಿಸಿದರು.

ಅರಣ್ಯ ಭೂಮಿಯಲ್ಲಿ ವಾಸ ಮಾಡುವವರಿಗೂ ಕೂಡ ಹಕ್ಕುಪತ್ರ ಕೊಡಲು ನಮ್ಮ ಸರ್ಕಾರದಲ್ಲಿ ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಆದರೆ ಅರಣ್ಯ ಭೂಮಿ ಮಂಜೂರಾತಿ ಮಾಡಲು ಕೇಂದ್ರ ಸರ್ಕಾರದ ಅನುಮತಿ ಬೇಕು ಎಂದು ತಿದ್ದುಪಡಿ ಮಾಡಿಟ್ಟಿದ್ದಾರೆ. ಕೇಂದ್ರ ಸರ್ಕಾರದಲ್ಲಿ ಆಡಳಿತ ನಡೆಸುವವರಿಗೆ ಇದರ ಬಗ್ಗೆ ಅರಿವು ಇರಬೇಕು. ಮನುಷ್ಯ ಕಾಡಿನಲ್ಲೇ ವಾಸ ಮಾಡುತ್ತಾ ಬಂದವನು. ಮನುಷ್ಯ ಇದ್ದರೆ ಕಾಡು. ಈಗ ಜನಸಂಖ್ಯೆ ಜಾಸ್ತಿ ಆಗಿದೆ. ಕರೂರು-ಬಾರಂಗಿ ಕಡೆ ಜನ ಈಗಲೂ ಕಾಡಲ್ಲಿ ವಾಸವಾಗಿದ್ದಾರೆ. ಹಾಗಾಗಿ ಭೂಮಿ ಕೊಡುವುದು ಅನಿವಾರ್ಯ. ಇದರ ಬಗ್ಗೆ ಸಂಸದರು ಲೋಕಸಭೆಯಲ್ಲಿ ಗಟ್ಟಿ ಧ್ವನಿಯಲ್ಲಿ ಸರ್ಕಾರದ ಗಮನ ಸೆಳೆಯುವ ಕೆಲಸ ಮಾಡಬೇಕು. ಇದು ಕೇವಲ ಕರ್ನಾಟಕದ ಸಮಸ್ಯೆ ಮಾತ್ರ ಅಲ್ಲ. ಬಿಹಾರ ಸೇರಿದಂತೆ ಅನೇಕ ರಾಜ್ಯದಲ್ಲಿನ ಸಮಸ್ಯೆ. ದೇಶದ ಎಲ್ಲಾ ಸಂಸದರೂ ಈ ಬಗ್ಗೆ ಲೋಕಸಭೆಯಲ್ಲಿ ಮಾತನಾಡಬೇಕು ಎಂದು ಮಾಜಿ ಸಚಿವರು ಒತ್ತಾಯಿಸಿದರು.

ಭೂ ಸುಧಾರಣಾ ಕಾಯ್ದೆ ಬಗ್ಗೆ ದೇವರಾಜ ಅರಸು ಮುಖ್ಯಮಂತ್ರಿಗಳಾಗಿದ್ದಾಗ ಅವರ ಜೊತೆ ಕಾಯ್ದೆ ಬಗ್ಗೆ ಹೃದಯ ಬಿಚ್ಚಿ ಮಾತಾಡಿದ್ದೆ. ಏನು ಮಾಡಬೇಕು ಹೇಳು ಎಂದು ಅರಸು ಕೇಳಿದ್ದರು. ಕಾಯ್ದೆ ತಿದ್ದುಪಡಿ ಮಾಡಿ ಸಮಿತಿ ರಚಿಸಿ ಕಾಯ್ದೆಯನ್ನು ಜಾರಿ ಮಾಡಿದರು. ಬದ್ಧತೆ ಇದ್ದರೆ ಮಾಡಲು ಸಾಧ್ಯ. ಈ ಶತಮಾನದಲ್ಲಿ ಕಾಡಾದರೇನು, ಬೀಡಾದರೇನು ಜನರು ಬದುಕಲು ಅವಕಾಶ ಮಾಡಿಕೊಡಬೇಕು ಎಂದು ಕಾಗೋಡು ತಿಮ್ಮಪ್ಪ ಹೇಳಿದರು.

ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಆಂಕಾಕ್ಷಿ ಅಲ್ಲಾ: ಶಿವಮೊಗ್ಗ ಗ್ರಾಮಾಂತರ ಕ್ಷೇತ್ರಕ್ಕೆ ಮಾಜಿ ಸಚಿವ ಶಿವಮೂರ್ತಿ ನಾಯ್ಕ ಸ್ಪರ್ಧಿಸುತ್ತಾರೆ ಎನ್ನುವ ಕುರಿತು ಸ್ಪಷ್ಟನೆ ನೀಡಿದ ಅವರು, ನಾನು ಇಲ್ಲಿ ಸ್ಪರ್ಧಿಸುವುದಿಲ್ಲಾ ಮಾಯಕೊಂಡ ಹಾಗೂ ಹೊಳಲ್ಕೆರೆ ಕ್ಷೇತ್ರಕ್ಕೆ ಮಾತ್ರ ಅರ್ಜಿ ಸಲ್ಲಿಸಿದ್ದೇನೆ ಎಂದು ಸ್ಪಷ್ಟನೆ ನೀಡಿದರು. ಮಾಧ್ಯಮಗೋಷ್ಟಿಯಲ್ಲಿ, ಡಾ. ರಾಜನಂದಿನಿ, ಅನಿತಾ ಕುಮಾರಿ, ಪ್ರಫುಲ್ಲಾ ಮಧುಕರ್ ಉಪಸ್ಥಿತರಿದ್ದರು.

ಇದನ್ನೂ ಓದಿ: ಶ್ರೀರಾಮ 11 ಸಾವಿರ ವರ್ಷ ರಾಜ್ಯವಾಳಲಿಲ್ಲ, ಆದರ್ಶ ವ್ಯಕ್ತಿಯೂ ಅಲ್ಲ: ಸಾಹಿತಿ ಕೆ.ಎಸ್.ಭಗವಾನ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.