ETV Bharat / state

ಮಾಜಿ ಮುಖ್ಯಮಂತ್ರಿಗಳು, ಮಂತ್ರಿಗಳ ಮಕ್ಕಳಿಗೆ ಅಧಿಕಾರ ಕೊಟ್ಟರೆ ನಾವೇನು ಮಾಡಬೇಕು : ಶಾಸಕ ಗೋಪಾಲಕೃಷ್ಣ ಬೇಳೂರು ಪ್ರಶ್ನೆ

author img

By ETV Bharat Karnataka Team

Published : Oct 30, 2023, 10:27 AM IST

Updated : Oct 30, 2023, 11:05 AM IST

ಕಾಂಗ್ರೆಸ್​ ಸರ್ಕಾರ ಬೀಳಲ್ಲ, ಬಿಜೆಪಿಯವರ ಆಪರೇಷನ್ ಕಮಲ ಈ ಬಾರಿ ಯಶಸ್ವಿ ಆಗಲ್ಲ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದ್ದಾರೆ.

ಶಾಸಕ ಗೋಪಾಲಕೃಷ್ಣ ಬೇಳೂರು
ಶಾಸಕ ಗೋಪಾಲಕೃಷ್ಣ ಬೇಳೂರು

ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿಕೆ

ಶಿವಮೊಗ್ಗ: ಕೇವಲ ಮಾಜಿ ಮುಖ್ಯಮಂತ್ರಿ ಮಕ್ಕಳಿಗೆ ಅಧಿಕಾರ ಕೊಟ್ಬಿಟ್ಟರೆ ನಾವು ಏನು ಮಾಡಬೇಕು ಎಂದು ಸಾಗರ ಶಾಸಕ ಗೋಪಾಲಕೃಷ್ಣ ಬೇಳೂರು ಅವರು ಅಸಮಾಧಾನ ಹೊರಹಾಕಿದರು. ಶಿವಮೊಗ್ಗದಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಅವರು, ಕೇವಲ ಮಾಜಿ ಮುಖ್ಯಮಂತ್ರಿ ಮಕ್ಕಳಿಗೆ, ಮಂತ್ರಿ ಮಕ್ಕಳಿಗೆ ಯಾಕೆ ಅಧಿಕಾರ ಕೊಡಬೇಕು ಎಂದು ಪ್ರಶ್ನಿಸಿದ ಅವರು ನಮ್ಮಂತಹ ಸಾಮಾನ್ಯರಿಗೂ ಅಧಿಕಾರ ಕೊಡಿ ಎಂದು ಆಗ್ರಹಿಸಿದರು.

ನಾನು ಮೂರು ಸಲ ಶಾಸಕನಾಗಿದ್ದೇನೆ. ಕೇವಲ ಮುಖ್ಯಮಂತ್ರಿಗಳ ಮಕ್ಕಳಿಗೆ ಯಾಕೆ ಅಧಿಕಾರ ಕೊಡಬೇಕು ಎಂದರು. ಬಳಿಕ ಮಾಧ್ಯಮದವರ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿ, ಮಧು ಬಂಗಾರಪ್ಪ ಚೆನ್ನಾಗಿ ಕೆಲಸ ಮಾಡುತ್ತಿದ್ದಾರೋ ಇಲ್ವೋ ನನಗೆ ಗೊತ್ತಿಲ್ಲ. ನನಗೆ ಜಿಲ್ಲಾ ಉಸ್ತುವಾರಿಗಳು ಎಲ್ಲೂ ಕರೆಯುತ್ತಿಲ್ಲ. ನಾನು ಎಲ್ಲಿಗೂ ಹೋಗಲ್ಲ. ಅವರು ನನ್ನನ್ನು ಕೇವಲ ತಾಲೂಕಿಗೆ ಸೀಮಿತ ಮಾಡಿದ್ದಾರೆ ಅನಿಸುತ್ತೆ. ಜಿಲ್ಲಾ ಉಸ್ತುವಾರಿ ಸಚಿವರಿದ್ದಾರೋ ಇಲ್ವೋ ಗೊತ್ತಿಲ್ಲ. ಅವರು ಬಂದ್ರೆ ಭೀಮಣ್ಣ ನಾಯ್ಕರನ್ನ ಕರ್ಕೊಂಡು ಬರ್ತಾರೆ. ಅವರು ನಮಗೆ ಕರೆಯಲ್ಲ ನಾವು ಹೋಗಲ್ಲ. ನಾನು ಸಾಮಾನ್ಯ ವ್ಯಕ್ತಿ. ನನ್ನ ಸಾಮರ್ಥ್ಯ ಕಸಿದುಕೊಳ್ಳಲು ಯಾರಿಂದಲೂ ಸಾಧ್ಯ ಇಲ್ಲ. ಕ್ಷೇತ್ರದ ಜನರು ನನ್ನನ್ನು ಗೆಲ್ಲಿಸಿದ್ದಾರೆ. ನನ್ನ ಜತೆ ಸಿದ್ದರಾಮಯ್ಯ ಮತ್ತು ಡಿ. ಕೆ ಶಿವಕುಮಾರ್ ಇದ್ದಾರೆ. ನಾನು ಕೇವಲ ಕ್ಷೇತ್ರಕ್ಕೆ ಸೀಮಿತವಾಗಿಲ್ಲ. ನಾನು ಕೂಡ ನಾಯಕನಿದ್ದೇನೆ. ನನಗೆ ಸರ್ಕಾರ ಮತ್ತು ಯಾವುದೇ ಮಂತ್ರಿಗಳ ಮೇಲೆ ಅಸಮಾಧಾನ ಇಲ್ಲ ಎಂದು ಹೇಳಿದರು.

ಲೋಕಸಭೆ ಟಿಕೆಟ್​ಗೆ ಡಿಮ್ಯಾಂಡ್​: ನನಗೆ ಲೋಕಸಭೆ ಚುನಾವಣೆಗೆ ಟಿಕೆಟ್ ಕೊಡಬೇಕು. ನಾನು ಸಂಸತ್ ಚುನಾವಣೆಗೆ ಆಕಾಂಕ್ಷಿಯಾಗಿದ್ದೇನೆ. ನಾನ್ಯಾಕೆ ಎಂಪಿ ಆಗಬಾರದು. ಯಡಿಯೂರಪ್ಪ ಅವರ ಮಗ ರಾಘವೇಂದ್ರ ಅವರನ್ನು ಎದುರಿಸುವ ಶಕ್ತಿ ನನಗೆ ಇದೆ. ಈಗಾಗಲೇ ಗೀತಾ ಶಿವರಾಜ್ ಕುಮಾರ್ ಸಂಸತ್ ಚುನಾವಣೆಗೆ ಆಸಕ್ತಿ ತೋರಿದ ವಿಚಾರಕ್ಕೆ ಪ್ರತಿಕ್ರಿಯಿಸಿ, ಈ ಬಗ್ಗೆ ನನಗೆ ಗೊತ್ತಿಲ್ಲ. ಅವರೇನು ನನಗೆ ಬಂದು ಹೇಳಿಲ್ಲ. ಅವರು ಜಿಲ್ಲೆಯಲ್ಲಿ ಬಂದು ಎಲ್ಲೂ ಓಡಾಡಿದ್ದು ಕಂಡಿಲ್ಲ ಎಂದರು.

ಆಪರೇಷನ್​ ಕಮಲ ಹುಚ್ಚು ಕನಸು: ಆಪರೇಷನ್ ಕಮಲ ಮಾಡುವುದು ಬಿಜೆಪಿ ಅವರ ಹುಚ್ಚು ಕನಸು. ಕರ್ನಾಟಕದ ಜನತೆ ನಮಗೆ 136 ಸೀಟು ಕೊಟ್ಟು ಬಹುಮತ ನೀಡಿದ್ದಾರೆ‌. ಬಿಜೆಪಿ ಹಾಗೆ ನಮಗೆ ಕಡಿಮೆ ಸೀಟಗಳು ಬಂದಿಲ್ಲ. ಬಿಜೆಪಿ ಅವರ ಯೋಗ್ಯತೆಗೆ ಯಡಿಯೂರಪ್ಪ ನಾಯಕತ್ವದಲ್ಲಿದ್ದಾಗ 104-110 ಸೀಟು ಮಾತ್ರ ಬಂದಿದ್ದವು. ಅದಕ್ಕಿಂತ ಮೇಲೆ ಇವರು ಏಳಲಿಲ್ಲ. ಕರ್ನಾಟಕ ಜನ ಕಾಂಗ್ರೆಸ್​ಗೆ ಬಹುಮತ ನೀಡಿದ್ದಾರೆ. ಆಪರೇಷನ್ ಕಮಲ ಬಿಜೆಪಿ ಕೈಯಲ್ಲಿ ಆಗಲ್ಲ. ಆಪರೇಷನ್ ಕಮಲ ಮಾಡುವ ನಾಯಕರು ಬಿಜೆಪಿಯಲ್ಲಿ ಇಲ್ಲ. ಇವರಿಗೆ ಇನ್ನೂ ವಿರೋಧ ಪಕ್ಷದ ನಾಯಕನನ್ನು ನೇಮಕ ಮಾಡಿಕೊಳ್ಳಲು ಆಗಿಲ್ಲ. ಇನ್ನು ಅಪರೇಷನ್ ಕಮಲ ಮಾಡುತ್ತಾರೆಯೇ ಎಂದು ಕಿಡಿಕಾರಿದರು.

ಅಸ್ಥಿತ್ವವೇ ಇಲ್ಲ: ರಮೇಶ್ ಜಾರಕಿಹೊಳಿ, ಯೋಗೇಶ್ವರ್ ಇವರಿಗೆಲ್ಲ ಅಸ್ಥಿತ್ವನೇ ಇಲ್ಲ. ಇನ್ನೂ ಕೆಲವರು ಇದ್ದಾರೆ. ಇವರು ಹೊರಗೆ ಬರೋದಿಲ್ಲ. ಇವರೆಲ್ಲ ಸೇರಿ ಏನಾದ್ರೂ ಪಿತೂರಿ ಮಾಡಬೇಕೆಂದು ಹೊರಟಿದ್ದಾರೆ. ಇವರುಗಳು ತಮ್ಮ ಅಸ್ಥಿತ್ವ ಹಾಗೂ ಪಕ್ಷದಲ್ಲಿ ನಾಯಕತ್ವ ಉಳಿಸಿಕೊಳ್ಳುವುದಕ್ಕಾಗಿ ಇಷ್ಟೆಲ್ಲ ಪಿತೂರಿ ನಡೆಸುತ್ತಿದ್ದಾರೆ. ಬಿಜೆಪಿಯಲ್ಲಿ ಆಪರೇಷನ್ ಕಮಲದ ಬಗ್ಗೆ ಯಾವುದೇ ಚಿಂತನೆ ಇಲ್ಲ. ಆದರೆ ಕುಮಾರಸ್ವಾಮಿಗೆ ಇದೆ. ಅವರು ಮೋದಿ ಹಾಗೂ ಅಮಿತ್ ಶಾರನ್ನು ಭೇಟಿ ಮಾಡಿ ಏನಾದ್ರೂ ಕರ್ನಾಟಕದಲ್ಲಿ ಚೆಂಚ್ ಮಾಡೋಣ ಸಾರ್ ಅಂತ ಹೇಳಿ ಬಂದಿದ್ದಾರೆ. ಕುಮಾರಸ್ವಾಮಿ ಅವರು ಒಂದೂವರೆ ವರ್ಷ ಕಾಂಗ್ರೆಸ್​ನಿಂದ ಡಿ ಕೆ ಶಿವಕುಮಾರ್​ ಅವರಿಂದ ಅಧಿಕಾರ ಪಡೆದುಕೊಂಡಿದ್ದರು. ಈಗ ಅವರು ತಮ್ಮ ಅಸ್ಥಿತ್ವ ಉಳಿಸಿಕೊಳ್ಳಲು ಬಿಜೆಪಿ ಜೊತೆ ಸೇರಿಕೊಂಡಿದ್ದಾರೆ ಎಂದು ಹೇಳಿದರು.

ಕಾಂಗ್ರೆಸ್ ವಿರುದ್ದ ಒಂದು ಸಣ್ಣ ಷಡ್ಯಂತ್ರ ನಡೆಯುತ್ತಿದೆ. ಈಗ ಕೆಲವು ಶಾಸಕರ ಜೊತೆ ಮಾತನಾಡುತ್ತಿದ್ದಾರೆ. ನಮ್ಮ ಶಾಸಕರು ಯಾರೂ ಪಕ್ಷ ತೊರೆಯಲ್ಲ. ಈಗಾಗಲೇ 17 ಜನ ಪಕ್ಷ ಬಿಟ್ಟು ಬಿಜೆಪಿಗೆ ಹೋದವರು ಅನುಭವಿಸಿದ್ದಾರೆ. ಈಗ ಅವರೆಲ್ಲಾ ನಮ್ಮ ಪಕ್ಷಕ್ಕೆ ಬರ್ತಾರಂತೆ , ಆದರೆ ಅವರನ್ನು ಸೇರಿಸಲ್ಲ ಅಂತ ಹೇಳುತ್ತಿದ್ದಾರೆ. ಅವರಲ್ಲಿ ಅರ್ಧ ಜನರನ್ನು ಸೇರಿಸಿಕೊಳ್ಳಬಹುದು. ಕರ್ನಾಟಕ ರಾಜ್ಯದಲ್ಲಿ ಸಿದ್ದರಾಮಯ್ಯ ಹಾಗೂ ಡಿ. ಕೆ ಶಿವಕುಮಾರ್ ನೇತೃತ್ವದಲ್ಲಿ ಕಾಂಗ್ರೆಸ್​ ಉತ್ತಮ ಆಡಳಿತ ನೀಡುತ್ತಿದೆ. ರಕ್ತದಲ್ಲಿ ಬರೆದುಕೊಡುತ್ತೇನೆ ನಮ್ಮ ಸರ್ಕಾರ ಬೀಳಲ್ಲ ಬಿಜೆಪಿಯವರ ಆಪರೇಷನ್ ಕಮಲ ಈ ಬಾರಿ ಯಶಸ್ವಿ ಆಗಲ್ಲ ಎಂದು ಹೇಳಿದರು.

ಇದನ್ನೂ ಓದಿ: ಉತ್ತರಕನ್ನಡದಲ್ಲಿ ಕೈ ನಾಯಕರಿಂದ ಲೋಕಸಭಾ ಪೂರ್ವಭಾವಿ ಸಭೆ : ಜಿಲ್ಲಾ ಉಸ್ತುವಾರಿ ಸಚಿವರೇ ಸಭೆಗೆ ಗೈರು!

Last Updated : Oct 30, 2023, 11:05 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.