ETV Bharat / state

'ಮಳೆಯಿಂದ ಹಾನಿಗೊಳಗಾದ ಕುಟುಂಬಗಳಿಗೆ ಕೂಡಲೇ 10 ಸಾವಿರ ಪರಿಹಾರ ನೀಡಿ'

author img

By

Published : Aug 7, 2020, 11:19 PM IST

ಶಿವಮೊಗ್ಗದಲ್ಲಿ ಮಳೆಯಿಂದ ಹಾನಿಗೊಳಗಾದ ಸಂತ್ರಸ್ತ ಕುಟುಂಬಗಳಿಗೆ ತುರ್ತು ಕ್ರಮವಾಗಿ 10 ಸಾವಿರ ಪರಿಹಾರ ಧನ ನೀಡಬೇಕು ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.

minister-kse-announce-compensation
ಸಚಿವ ಕೆ.ಎಸ್.ಈಶ್ವರಪ್ಪ ಸಭೆ

ಶಿವಮೊಗ್ಗ: ಮಳೆಯಿಂದ ಹಾನಿಗೊಳಗಾದ ಸಂತ್ರಸ್ತ ಕುಟುಂಬಗಳಿಗೆ ತುರ್ತು ಕ್ರಮವಾಗಿ 10 ಸಾವಿರ ಪರಿಹಾರ ಧನ ಕೂಡಲೇ ನೀಡುವಂತೆ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಸೂಚನೆ ನೀಡಿದರು.

ಸಚಿವ ಕೆ.ಎಸ್.ಈಶ್ವರಪ್ಪ

ಇಲ್ಲಿನ ಜಿಲ್ಲಾಡಳಿತ ಸಭಾಂಗಣದಲ್ಲಿ ಮಳೆ ಹಾನಿ ಹಾಗೂ ತುರ್ತು ಪರಿಹಾರ ಕ್ರಮಗಳ ಕುರಿತು ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಅಧಿಕಾರಿಗಳ ಜೊತೆಗಿನ ಸಭೆ ಉದ್ದೇಶಿಸಿ ಅವರು ಮಾತನಾಡಿದರು.

ಇನ್ನೂ ಭಾಗಶಃ ಹಾಗೂ ಪೂರ್ಣ ಪ್ರಮಾಣದಲ್ಲಿ ಹಾನಿಯಾದ ಮನೆಗಳನ್ನು ಪುನರ್ ನಿರ್ಮಿಸಿಕೊಳ್ಳಲು, ಸರ್ಕಾರ ನೀಡುವ 5 ಲಕ್ಷ ರೂಪಾಯಿ ನೀಡಲಾಗುತ್ತಿದ್ದು, ಅದರಲ್ಲಿ ಒಂದು ಲಕ್ಷ ರೂಪಾಯಿಯನ್ನು ಅಂದೇ ಬಿಡುಗಡೆಗೊಳಿಸುವಂತೆ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಅಧಿಕಾರಿಗಳಿಗೆ ಸೂಚಿಸಿದರು.

ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಹಾಗೂ ಸೂಕ್ತ ವಸತಿ ಕಲ್ಪಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು. ಕಳೆದ ಸಾಲಿನಲ್ಲಿ ಇಂತಹ ಸಂದಿಗ್ಧ ಸಂದರ್ಭದಲ್ಲಿ ಆರಂಭಿಸಲಾಗಿದ್ದ, ನೆರೆ ಪರಿಹಾರ ಕೇಂದ್ರಗಳನ್ನು ಅಲ್ಲಿಯೇ ಹಾಗೂ ಅಗತ್ಯವಿರುವಲ್ಲಿ ಸ್ಥಾಪಿಸಲು ಸಿದ್ಧತೆ ನಡೆಸುವಂತೆ ಸಂಬಂಧಿಸಿದ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಅವರು ಸೂಚಿಸಿದರು.

ಪರಿಹಾರ ವಿಳಂಬ ಆಗದಂತೆ ಕ್ರಮ: ಸಂತ್ರಸ್ತರಿಗೆ ನೀಡುವ ಪರಿಹಾರ ಧನ ವಿಳಂಬ ಆಗದಂತೆ ಹಾಗೂ ಯಾರೊಬ್ಬ ಸಂತ್ರಸ್ತರು ಸೌಲಭ್ಯದಿಂದ ವಂಚಿತರಾಗದಂತೆ ನೋಡಿಕೊಳ್ಳಬೇಕು. ತೀರ್ಥಹಳ್ಳಿ ತಾಲೂಕಿನ ಹೆಗಲತ್ತಿಯಲ್ಲಿ ಗುಡ್ಡ ಕುಸಿತದಿಂದ ಹಾನಿಗೊಳಗಾಗಿದ್ದ ಪ್ರದೇಶಕ್ಕೆ ಭೇಟಿ ನೀಡಿ, ಸಂತ್ರಸ್ತರೊಂದಿಗೆ ಚರ್ಚಿಸಿ, ಅವರ ನಿರೀಕ್ಷೆಯಂತೆ ಪರಿಹಾರ ಕಾರ್ಯ ಕೈಗೊಳ್ಳಬಹುದಾದ ಸಾಧ್ಯತೆಗಳ ಬಗ್ಗೆ ಪರಿಶೀಲಿಸುವಂತೆ ಸೂಚಿಸಿದರು.

ಶಾಲೆ ದುರಸ್ತಿ: ಕಳೆದ ಸಾಲಿನಲ್ಲಿ ಮಳೆಯಿಂದ ಹಾನಿಗೊಳಗಾದ ಶಾಲೆಗಳ ದುರಸ್ತಿಗೆ ಬಿಡುಗಡೆಯಾಗಿದ್ದ 20 ಲಕ್ಷ ರೂಪಾಯಿಗಳ ಅನುದಾನ ಬಳಕೆಯಾಗಿರುವ ಬಗ್ಗೆ ಖಚಿತಪಡಿಸಿಕೊಳ್ಳಬೇಕು. ಅಲ್ಲದೇ ಪೂರ್ಣಗೊಳಿಸಿದ ಕಾಮಗಾರಿ ಸರಿಯಾಗಿರುವ ಬಗ್ಗೆಯೂ ಪರಿಶೀಲಿಸುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೆಶಕರಿಗೆ ಸೂಚಿಸಿದರು.

ಇದೇ ಸಂದರ್ಭದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಅಂಗನವಾಡಿ ಕೇಂದ್ರಗಳ ನಿರ್ಮಾಣಕ್ಕೆ ಬಿಡುಗಡೆಯಾಗಿರುವ ಅನುದಾನ ಹಾಗೂ ಕಟ್ಟಡ ನಿರ್ಮಾಣಗೊಂಡಿರುವ ಕುರಿತು 3-4 ದಿನಗಳಲ್ಲಿ ವಿವರವಾದ ಮಾಹಿತಿ ನೀಡುವಂತೆ ಮಹಿಳಾ ಕಲ್ಯಾಣ ಇಲಾಖೆಯ ಉಪನಿರ್ದೇಶಕರಿಗೆ ಹಾಗೂ ಲೋಕೋಪಯೋಗಿ ಇಲಾಖೆಯ ಅಭಿಯಂತರರಿಗೆ ಕೇಳಿದರು.

ಜಿಲ್ಲೆಯಲ್ಲಿ ಹಲವೆಡೆ ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳು ಮಳೆಯಿಂದ ಹಾನಿಗೊಳಗಾಗಿದ್ದು, ಅವುಗಳ ದುರಸ್ತಿ ಬಗ್ಗೆಯೂ ಗಮನಹರಿಸಬೇಕು. ಶಿವಮೊಗ್ಗ-ಆಗುಂಬೆ ಮಾರ್ಗದಲ್ಲಿ ಅಲ್ಲಲ್ಲಿ ಭೂಕುಸಿತ ಉಂಟಾಗಿದ್ದು, ರಸ್ತೆ ಸಂಚಾರಕ್ಕೆ ಅಡಚಣೆ ಉಂಟಾಗಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಈ ಮಾರ್ಗದಲ್ಲಿ ಭಾರೀ ವಾಹನಗಳ ಸಂಚಾರವನ್ನು ನಿಷೇಧಿಸುವಂತೆ ಜಿಲ್ಲಾಧಿಕಾರಿಗಳಿಗೆ ಹೇಳಿದರು.

ಮಳೆಯಿಂದ ಧರೆಗುರುಳಿದ ಮರಗಳಿಂದಾಗಿ ವಿದ್ಯುತ್ ಸಂಪರ್ಕ ಕಡಿತಗೊಂಡಿರುವ ಹಾಗೂ ಪುನರ್ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ಹಾಗೂ ಹಾಳಾಗಿರುವ ಟ್ರಾನ್ಸಫರ್ಮರ್​ಗಳ ಬದಲಾವಣೆ ಮಾಡುವಲ್ಲಿ ಕೈಗೊಂಡ ಕ್ರಮಗಳ ಕುರಿತು ಮೆಸ್ಕಾಂನ ಕಾರ್ಯಪಾಲಕ ಅಭಿಯಂತರರಿಂದ ಸಚಿವರು ಮಾಹಿತಿ ಪಡೆದರು.

ಅರಣ್ಯ ಇಲಾಖೆ ಹಾಗೂ ಮೆಸ್ಕಾಂನ ಅಧಿಕಾರಿಗಳೊಂದಿಗೆ ಭಾನುವಾರ ಬೆಳಿಗ್ಗೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸಭೆ ಕರೆದು ಚರ್ಚಿಸುವುದಾಗಿ ತಿಳಿಸಿದರು.

ಸಭೆಯಲ್ಲಿ ಶಾಸಕ ಆರಗ ಜ್ಞಾನೇಂದ್ರ, ಮೇಯರ್ ಸುವರ್ಣಶಂಕರ್, ಉಪಮೇಯರ್ ಸುರೇಖಾ ಮುರಳೀಧರ್, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಕೆ.ಎಂ.ಶಾಂತರಾಜು, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಂ.ಎಲ್.ವೈಶಾಲಿ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.