ETV Bharat / state

ಜನವರಿಯಿಂದ ನಿರುದ್ಯೋಗಿ ಯುವಕರಿಗೆ ಭತ್ಯೆ ಗ್ಯಾರಂಟಿ ಯೋಜನೆ ಜಾರಿ: ಸಚಿವ ಮಧು ಬಂಗಾರಪ್ಪ

author img

By ETV Bharat Karnataka Team

Published : Nov 8, 2023, 6:23 PM IST

ನಿರುದ್ಯೋಗಿ ಭತ್ಯೆ ಕುರಿತು ಸಚಿವ ಮಧು ಬಂಗಾರಪ್ಪ ಅವರಿಂದು ಉದ್ಯೋಗ ಮೇಳದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

job fair
ಉದ್ಯೋಗ ಮೇಳಕ್ಕೆ ಚಾಲನೆ

ಉದ್ಯೋಗ ಮೇಳಕ್ಕೆ ಚಾಲನೆ ಕೊಟ್ಟ ಮಧು ಬಂಗಾರಪ್ಪ

ಶಿವಮೊಗ್ಗ: ಜನವರಿ 1 ರಿಂದ ನಮ್ಮ ಸರ್ಕಾರದ ಐದನೇ ಗ್ಯಾರಂಟಿಯಾದ ನಿರುದ್ಯೋಗ ಭತ್ಯೆ ನೀಡುವ ಕಾರ್ಯಕ್ರಮ ಜಾರಿಗೆ ಬರಲಿದೆ ಎಂದು ಶಿಕ್ಷಣ ಹಾಗೂ ಸಾಕ್ಷರತಾ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.

ಶಿವಮೊಗ್ಗ ಸೈನ್ಸ್ ಮೈದಾನದಲ್ಲಿ ಬೃಹತ್ ಉದ್ಯೋಗ ಮೇಳಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ನಾಲ್ಕು ಗ್ಯಾರಂಟಿಗಳನ್ನು ನೀಡಿದ್ದೇವೆ. ಕೊನೆಯ ಗ್ಯಾರಂಟಿಯನ್ನು ಜನವರಿ ತಿಂಗಳಿನಿಂದ ಪ್ರಾರಂಭ ಮಾಡಲಿದ್ದೇವೆ. ಇಂದಿನ ಉದ್ಯೋಗ ಮೇಳಕ್ಕೆ ಸುಮಾರು 79 ವಿವಿಧ ಕಂಪನಿಗಳು ಬಂದಿವೆ. ಈ ಉದ್ಯೋಗ ಮೇಳವನ್ನು ನಿರುದ್ಯೋಗ ಯುವಕ - ಯುವತಿಯರು ಬಳಸಿಕೊಳ್ಳಬೇಕೆಂದು ಕರೆ ನೀಡಿದರು.

Madhu bangarappa
ಉದ್ಯೋಗ ಮೇಳ

ಯುವಜನತೆಗೆ ಅವಕಾಶಗಳನ್ನು ನೀಡಿದರೆ ಉತ್ತಮ ಸಾಧನೆ ಮಾಡುತ್ತಾರೆ. ಈ ನಿಟ್ಟಿನಲ್ಲಿ ಬೃಹತ್ ಉದ್ಯೋಗ ಮೇಳವನ್ನು ಆಯೋಜಿಸಿದ್ದು, ಇದರ ಸದುಪಯೋಗವನ್ನು ಉದ್ಯೋಗಾಕಾಂಕ್ಷಿಗಳು ಮಾಡಿಕೊಳ್ಳಬೇಕಿದೆ. ವಿದ್ಯಾರ್ಥಿಗಳು ಕಷ್ಟುಪಟ್ಟು ಓದುತ್ತಾರೆ. ಆದರೆ ವಿದ್ಯಾಭ್ಯಾಸದ ಬಳಿಕ ಏನು ಕೆಲಸ ಮಾಡಬೇಕೆಂಬುದು ತಿಳಿಯದೇ ತೊಂದರೆ ಅನುಭವಿಸುತ್ತಾರೆ. ಅದರಲ್ಲೂ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಅವಕಾಶಗಳು ಸಿಗದೇ ಕಷ್ಟಪಡುತ್ತಾರೆ. ಹಾಗಾಗಿ ಒಂದೇ ವೇದಿಕೆಯಲ್ಲಿ ಸಾಕಷ್ಟು ಅವಕಾಶಗಳನ್ನು ನೀಡುವ ಇಂತಹ ಬೃಹತ್ ಉದ್ಯೋಗ ಮೇಳಗಳು ಯುವಜನತೆಗೆ ಕೆಲಸ ಪಡೆಯಲು ಸಹಕಾರಿ ಎಂದರು.

Madhu bangarappa
ಉದ್ಯೋಗ ಮೇಳದಲ್ಲಿ ಸಚಿವ ಮಧು ಬಂಗಾರಪ್ಪ

ಇಂದು ಆಗಮಿಸಿರುವ ಕಂಪನಿಗಳು ವಿವಿಧ ರೀತಿಯ ಹುದ್ದೆಗಳನ್ನು ನೀಡಲಿವೆ. ಸುಮಾರು 12 ಸಾವಿರ ಉದ್ಯೋಗ ಸಿಗುವ ಅವಕಾಶವಿದೆ. ಉದ್ಯೋಗಾಕಾಂಕ್ಷಿಗಳು ನೋಂದಣಿ ಮಾಡಿಕೊಂಡು ಇದರ ಉಪಯೋಗ ಪಡೆಯಬೇಕು. ನಮ್ಮ ಭಾಗದ ಮಕ್ಕಳು ಚೆನ್ನಾಗಿ ಕೆಲಸ ಮಾಡುತ್ತಾರೆ. ಅವರಿಗೆ ಉತ್ತಮ ಅವಕಾಶಗಳು ಸಿಗಬೇಕು. ಸರ್ಕಾರ ಉದ್ಯೋಗ ಸೃಷ್ಟಿ ಮತ್ತು ಅವಕಾಶಗಳನ್ನು ನೀಡುವ ವಿಚಾರಗಳಿಗೆ ಮಹತ್ವ ನೀಡುತ್ತಿದ್ದು, ಕೆಲಸ ಪಡೆದು ಆರ್ಥಿಕವಾಗಿ ಸದೃಢರಾಗಬೇಕು ಎಂದು ತಿಳಿಸಿದರು. ಈ ವೇಳೆ ಸಚಿವರು ಉದ್ಯೋಗ ಮೇಳಕ್ಕೆ ಆಗಮಿಸಿದ್ದ ವಿವಿಧ ಕಂಪನಿಗಳ ಮಳಿಗೆ ಬಳಿ ಹೋಗಿ ಮಾಹಿತಿ ಪಡೆದುಕೊಂಡರು.

Madhu bangarappa
ಉದ್ಯೋಗ ಮೇಳಕ್ಕೆ ಚಾಲನೆ

ಇದನ್ನೂ ಓದಿ: ಷಡಕ್ಷರಿ ವರ್ಗಾವಣೆ ಸರ್ಕಾರದ ತೀರ್ಮಾನ: ಮಧು ಬಂಗಾರಪ್ಪ ಸ್ಪಷ್ಟನೆ

ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಆಯುಕ್ತಾಲಯ, ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ(ಕೆಎಸ್‍ಡಿಸಿ), ಜಿಲ್ಲಾಡಳಿತ, ಜಿ.ಪಂ, ಮಹಾನಗರಪಾಲಿಕೆ ಇವರ ಸಂಯುಕ್ತಾಶ್ರಯದಲ್ಲಿ ಬೃಹತ್ ಉದ್ಯೋಗ ಮೇಳ ಆಯೋಜಿಸಲಾಗಿದೆ. ಕಾರ್ಯಕ್ರಮದಲ್ಲಿ ಶಾಸಕರಾದ ಚನ್ನಬಸಪ್ಪ, ಪರಿಷತ್ ಸದಸ್ಯ ಡಿ.ಎಸ್ ಅರುಣ್, ಪಾಲಿಕೆ ಸದಸ್ಯ ಹೆಚ್.ಸಿ ಯೋಗೀಶ್, ಜಿಲ್ಲಾಧಿಕಾರಿ ಡಾ. ಸೆಲ್ವಮಣಿ ಆರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್, ಕೌಶಲ್ಯಾಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಸುರೇಶ್ ಸೇರಿದಂತೆ ಇತರೆ ಅಧಿಕಾರಿಗಳು ಹಾಜರಿದ್ದರು.

ಇದನ್ನೂ ಓದಿ: ತಲೆಹರಟೆ ಮಾಡೋರನ್ನ ಯಾವಾಗ ತೆಗೆಯಬೇಕು ಅಂತಾ ಗೊತ್ತು, ತೆಗೆಯುತ್ತೇವೆ: ಕೆ ಎಸ್​ ಈಶ್ವರಪ್ಪ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.